ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದಿಗಂಬರದ ದಿವ್ಯಾಂಬರೆ
೭೫


"ಅದು ಹಾಗಿರಲಿ ವಸಂತಕ, ನೀನು ಎಲ್ಲವನ್ನೂ ನೋಡಿದೆಯಲ್ಲವೇ ? ಅಲ್ಲಿ ನಿಂತಿದ್ದು ಥಟ್ಟನೆ ಒಳಗೆ ಹೋದಳಲ್ಲ ಆ ಸುಂದರಿ ಯಾರು ಗೊತ್ತೇ ?" ಕಾತುರದಿಂದ ಕೇಳಿದ ಕೌಶಿಕ.

``ಗೊತ್ತು, ಆಕೆ ಓಂಕಾರಶೆಟ್ಟರ ಮಗಳು.

``ಓ! ಅದು ಓಂಕಾರಶೆಟ್ಟರ ಮನೆಯೋ? ಕೌಶಿಕನ ಉದ್ಗಾರ.

``ನೋಡು, ಸಾವಿರಾರು ಕಣ್ಣುಗಳು ನಿನ್ನತ್ತಲೇ ತಿರುಗಿ, ನಿನ್ನ ದರ್ಶನಕ್ಕಾಗಿ ಹಾರೈಸುತ್ತಿವೆ. ಮೊದಲು ಅದನ್ನು ಮುಗಿಸು. ಆಮೇಲೆ ಮಾತನಾಡೋಣ ವಸಂತಕನು ಕರ್ತವ್ಯವನ್ನು ಎಚ್ಚರಿಸಿದ.

ಕೌಶಿಕ ಎಚ್ಚತ್ತು ಕರ್ತವ್ಯಮುಖನಾದ. ಪ್ರಜೆಗಳತ್ತ ದೃಷ್ಟಿಯನ್ನು ಹರಿಸಿದ. ಆದರೆ ಅಲ್ಲಿ ಕಾಣುತ್ತಿದ್ದುದು ಜನಸಮೂಹವಲ್ಲ ; ಮಹಾದೇವಿಯ ನೂರಾರು ಪ್ರತಿಬಿಂಬಗಳು. ಕಾಂತಿಯುಕ್ತವಾದ ಅವಳ ಕಣ್ಣುಗಳು, ಸರಕ್ಕನೆ ಅವಳು ತಲೆ ತಗ್ಗಿಸಿದುದು, ತನ್ನತ್ತ ಬೆನ್ನು ತಿರುಗಿಸಿ ನಡೆದ ಅವಳ ನಡಿಗೆಯ ಮೋಹಕತೆ - ಒಂದೊಂದೂ ಅವನ ಮುಂದೆ ಸುಳಿಯುತ್ತಿದ್ದವು. ಅವುಗಳನ್ನೇ ಚಿತ್ರಿಸಿಕೊಳ್ಳುತ್ತಾ ಯಾಂತ್ರಿಕವಾಗಿ ಕೈಮುಗಿಯುತ್ತಿದ್ದ.

ಚಂಚಲಗೊಂಡ ಮನಸ್ಸು, ಪ್ರಕ್ಷುಬ್ಧ ಸಾಗರದಂತೆ ತಳಮಳಿಸುತ್ತಿತ್ತು. ಮಧ್ಯದಲ್ಲಿ ನಿಲ್ಲಿಸಬೇಕಾಗಿದ್ದ ಸ್ಥಳಗಳನ್ನೆಲ್ಲಾ ರದ್ದುಗೊಳಿಸಿ ನೇರವಾಗಿ ಹೊರಟಿತು ಉತ್ಸವ ಅರಮನೆಯನ್ನು ಸೇರುವ ಆತುರದಿಂದ.

2


ಆನೆಯಿಂದ ಇಳಿದ ಕೂಡಲೇ ರಾಜ, ಅರಮನೆಯನ್ನು ಪ್ರವೇಶಿಸಿ ದರ್ಬಾರು ಮಂದಿರದ ಪಕ್ಕದಲ್ಲಿದ್ದ ವಿಲಾಸಗೃಹದತ್ತ ನಡೆದ. ಸೇವಕರು ಬಂದು ಉಡಿಗೆ ತೊಡಿಗೆಗಳನ್ನು ಬಿಚ್ಚ ತೊಡಗಿದರು. ತಲೆಯ ಮೇಲಿನ ಕಿರೀಟವನ್ನು ತಾನೇ ತೆಗೆದುಕೊಟ್ಟ. ರತ್ನಹಾರಗಳನ್ನೊಳಗೊಂಡ ಅಲಂಕಾರದ ಹೊರೆಯನ್ನು ಇಳುಹಿದರು ಸೇವಕರು.

ಸರಳವಾದ ಪೋಷಾಕನ್ನು ಧರಿಸಿಕೊಳ್ಳುತ್ತಾ ವಸಂತಕನನ್ನು ಕರೆಯ ಕಳುಹಿಸಿದ. ವಸಂತಕ ಬರುವ ವೇಳೆಗೆ ರಾಜ ಸಿದ್ಧನಾಗಿ ಹೊರಗೆ ಹೊರಟಿದ್ದ.

ಇಬ್ಬರೂ ಅರಮನೆಯ ತೊಟ್ಟಿಗಳನ್ನು ದಾಟಿಕೊಂಡು ಬಂದು ಉದ್ಯಾನವನವನ್ನು ಪ್ರವೇಶಿಸಿದರು. ಉದ್ಯಾನವನದ ಪ್ರಾರಂಭದಲ್ಲಿಯೇ, ಅರಮನೆಗೆ ಸೇರಿದಂತೆ, ಒಂದು ಸುಂದರವಾದ ಮಂಟಪ. ದಟ್ಟವಾಗಿ ಬೆಳೆದ ಬಳ್ಳಿಗಳೇ