ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಬೆಳೆಯುವ ಬೆಳಕು
೧೭

"ಕದಳಿಯ ವನ ಎಂದರೆ ಬಾಳೆಯ ವನ. ಅಲ್ಲಿ ಬಾಳೆಯ ಗಿಡಗಳು ಇರುವುದಂತೂ ನಿಶ್ಚಯ. ಅರ್ಕೆಶ್ವರನ ಹಿಂದೆ ಕಲ್ಲಿನಿಂದ ನೀರು ಚಿಮ್ಮಿ ಹರಿಯುವಂತೆ ಅಲ್ಲಿಯೂ ನೀರು ಜಿನುಗಿ ಬಾಳೆಯ ಗಿಡಗಳನ್ನು ಪೋಷಿಸುತ್ತಿದೆಯಂತೆ. ಧ್ಯಾನಕ್ಕೆ ಬಹಳ ಪ್ರಶಸ್ತವಾದ ಗುಹೆಯಂತೆ! ತುಂಬಾ ಪ್ರಶಾಂತವಾದ ವಾತಾವರಣವಂತೆ. ಮಹಾಮಹಾ ಯೋಗಿಗಳೆಲ್ಲಾ ತಪಸ್ಸುಮಾಡಿದ ಸ್ಥಳ ಎನ್ನುತ್ತಾರೆ. ಇದು ಪರಂಪರೆಯಾಗಿ ಬಂದ ಅವರ ವರ್ಣನೆ."

'ಕದಳಿಯ ಬನ' ಎಂಬ ಮಾತು ಮಹಾದೇವಿಯ ಎಳೆಯ ಹೃದಯದ ಮೇಲೆ ಅಚ್ಚೊತ್ತಿದಂತೆ ಮೂಡಿತು. ಶ್ರೀಶೈಲದ ವರ್ಣನೆಯನ್ನೆಲ್ಲಾ ತಲ್ಲೀನತೆಯಿಂದ ಕೇಳಿದಳು. ಆ ವರ್ಣನೆಯ ಮಹಾಮನೆಗೆ ಕದಳಿಯ ವನ, ಕಳಶವನ್ನಿಟ್ಟಂತಾಯಿತು. ಆ ಕಳಶ ಅಸ್ಪಷ್ಟ ನಿಜ; ಗುರುಗಳೇ ಅದನ್ನು ನೋಡಿಲ್ಲ. ಆದರೆ ಆ ಅಸ್ಪಷ್ಟತೆಯೇ ಅದರ ಹೊಳಪನ್ನು ಹೆಚ್ಚಿಸುವುದಕ್ಕೆ ಕಾರಣವಾಯಿತು.

ಗುರುಗಳನ್ನು ಮಧ್ಯಾಹ್ನದ ವಿಶ್ರಾಂತಿಗೆ ಬಿಟ್ಟು ಓಂಕಾರ ಮತ್ತು ಇತರ ಶಿಷ್ಯರು, ಅವರ ಬಳಿಯಿಂದ ಎದ್ದರು. ಲಿಂಗಮ್ಮ ರಾತ್ರಿಯ ಮಂಗಳ ಕಾರ್ಯದ ಸಿದ್ಧತೆಯನ್ನು ಮಾಡತೊಡಗಿದಳು. ಅಕ್ಕಪಕ್ಕದ ಮನೆಯ ಐದು ಜನ ಮುತ್ತೈದೆಯರಿಗೆ ಹೇಳಿಬಂದಳು. ಬೇಕಾದ ಸಾಮಗ್ರಿಗಳನ್ನು ಸಿದ್ಧಗೊಳಿಸತೊಡಗಿದಳು.

"ಮಹಾದೇವಿ ಇನ್ನೂ ಶ್ರೀಶೈಲ ಕ್ಷೇತ್ರದಲ್ಲಿಯೇ ಸಂಚರಿಸುತ್ತಾ, ಗುರುಗಳಿಗೂ ದುರ್ಗಮವಾದ ಕದಳಿಯ ಬನವನ್ನು ಊಹಿಸಿಕೊಳ್ಳಿತ್ತಾ ತಾಯಿಯ ಬಳಿಯಲ್ಲಿ ಕುಳಿತಿದ್ದಳು.

3

ಸಾಯಂಕಾಲವಾಗುತ್ತಿದ್ದ ಹಾಗೆ ಓಂಕಾರ ಶೆಟ್ಟಿಯ ಮನೆಯಲ್ಲಿ ಗುರುಲಿಂಗಸ್ವಾಮಿಗಳ ಭಕ್ತಜನ ಸೇರತೊಡಗಿತು. ಗುರುಗಳು ಶ್ರೀಶೈಲದಿಂದ ಹಿಂದಿರುಗಿರುವರೆಂಬುದನ್ನು ತಿಳಿದು ಮಠಕ್ಕೆ ಅವರನ್ನು ಕಾಣಲು ಹೋದವರು, ಅವರು ಓಂಕಾರನ ಮನೆಯಲ್ಲಿರುವುದನ್ನು ತಿಳಿದು ಅಲ್ಲಿಗೇ ಬರುತ್ತಿದ್ದರು.

ಬಂದವರೆಲ್ಲರೊಡನೆ ಗುರುಗಳು ಪ್ರೀತಿಯಿಂದ ಮಾತನಾಡಿದರು. ಎಲ್ಲರೂ ಅವರ ಯಾತ್ರೆಯ ವಿಷಯವನ್ನು ಕೇಳುವವರೇ. ಅವರೆಲ್ಲರಿಗೂ ಸೂಕ್ತವಾದ