ಅದಕ್ಕಾಗಿ ನಿನ್ನನ್ನು ಬರಮಾಡಿಕೊಂಡೆವು” ಎಂದನು.
ಯಮಧರ್ಮನು ನಕ್ಕು. “ದೇವರಾಜ. ನಿನ್ನನ್ನು ಇಂದ್ರಸಿಂಹಾಸನದಲ್ಲಿ ಕುಳ್ಳಿರಿಸಿ, ಇಂದ್ರಾಭಿಷೇಕ ಮಾಡಿದಾಗಲೇ, ನಾವೆಲ್ಲರೂ ಕಾಣಿಕೆಯಾಗಿ ನಮ್ಮ ನಮ್ಮಲ್ಲಿರುವ ವಿದ್ಯೆಗಳನ್ನು ಸಮರ್ಪಿಸಿರುವೆವು. ಅವೆಲ್ಲವೂ ನಿನ್ನಲ್ಲಿ ಸುಪ್ತವಾಗಿರುವುವು. ಅದು ಪ್ರಕಟವಾಗುವ ಕಾಲವು ಶಿಬಿಕೋತ್ಸವವು. ಅದರಿಂದಲೇ ದೇವಚಾರ್ಯನು ನಿನಗೆ ನೆನಪು ಕೊಟ್ಟನು. ನಾನು ಇಲ್ಲಿಗೆ ಹೊರಡುವಾಗಲೇ ನೀನು ಇದಕ್ಕಾಗಿಯೇ ನನ್ನನ್ನು ಕರೆಯುವೆಯೆಂದೂ ನನಗೆ ಗೊತ್ತಿತ್ತು. ಆಗಬಹುದು, ಯಾವಾಗ ಆರಂಭಿಸುವೆ ?” ಎಂದನು.
ದೇವೇಂದ್ರನು “ಯಾವಾಗಲೇಕೆ ? ಈಗಲೇ ಆಗಲಿ ? ಎಂದನು.
ಯಮನು ‘ಆಗಬಹುದು’ ಎಂದು ಆತನನ್ನು ಅಲ್ಲಿಯೇ ಕುಳ್ಳಿರಿಸಿ, ಆಚಾರ್ಯದ್ವಯಕ್ಕೆ ನಮಸ್ಕರಿಸಿ ಆರಂಭಿಸಿದನು : “ಅಯ್ಯಾ ಅನೇಕವನ್ನು ಕಂಡಾಗ ಇದರಲ್ಲಿ ಯಾವುದು ಹೆಚ್ಚು ಎಂದು ಹುಡುಕುತ್ತಾ ಎಲ್ಲದಕ್ಕಿಂತ ಹೆಚ್ಚಾಗಿ ಇನ್ನು ಅದಕ್ಕಿಂತ ಹೆಚ್ಚಾದುದು ಇಲ್ಲದುದು ಯಾವುದೋ ಅದನ್ನು ಹಿಡಿಯುವುದೇ ಬ್ರಹ್ಮವಿದ್ಯೆ. ಇಲ್ಲಿ ಗುರುಶಿಷ್ಯರೆಂಬ ಒಂದು ಭೇದವನ್ನಲ್ಲದೆ ಇನ್ನು ಯಾವ ಭೇದವನ್ನೂ ಹಿಡಿಯಬೇಡ. ಮುಂದೆ ಹೋಗುವವನು ಗುರು, ಹಿಂದೆ ಹೋಗುವವನು ಶಿಷ್ಯ. ಎಲ್ಲಿ ಕೊನೆಯಾಗುವುದೋ ಅಲ್ಲಿ ಗುರು-ಶಿಷ್ಯರು ಪರಸ್ಪರ ಐಕ್ಯರಾಗುವರು” ಎಂದು ಆರಂಭಿಸಿ ಹೇಳಿದನು.
“ದೇಹದಲ್ಲಿ ಕ್ಷರ ಅಕ್ಷರ ಎಂದು ಎರಡು ಇವೆ. ವಿಕಾರವಾಗುವುದೆಲ್ಲವೂ ಕ್ಷರ. ಅದೆಲ್ಲಾ ಪಂಚಭೂತಗಳ ಸಂಘಾತ. ಅವೆಲ್ಲರಲ್ಲೂ ಇದ್ದು ಅವೆಲ್ಲವನ್ನೂ ಆಡಿಸುವವನು ಅಕ್ಷರದಲ್ಲಿಯೂ ಅಂತಶ್ಚೇತನನಾಗಿರುವವನು ಪರಮ.ಈ ದೇಹವಿರುವವರೆಗೂ ಅಕ್ಷರನುಂಟು, ಪರಮನುಂಟು. ಈ ದೇಹವು ಪ್ರತ್ಯೇಕವಾಗಿದೆಯೆನ್ನುವುದೇ ಹೃದಯ ಗ್ರಂಥಿ. ಪರಮನನ್ನು ದರ್ಶನಮಾಡಿದ ಭಾಗ್ಯವಂತನಿಗೆ ಆ ಗ್ರಂಥಿಯಳಿಯುವುದು. ಅದು ಆಗಬೇಕಾದರೆ ಆ ಪರಮನು ಒಲಿಯಬೇಕು. ನಾವು ಏನು ಮಾಡಿದರೂ ಅದು ಸಾಧ್ಯವಿಲ್ಲ. ನಾವು ಧರ್ಮದಲ್ಲಿದ್ದರೆ ಎಂದಾದರೊಂದು ದಿನ ಆತನ ಕೃಪೆಯಾಗುವುದು. ಅದನ್ನು ಕಾದು ಕುಳಿತಿರುವುದೇ ಬ್ರಹ್ಮಾನುಸಂಧಾನ. ಅದು ಲಭಿಸಿದಾಗ ಅದೇ ತನ್ನನ್ನು ಪಡೆಯುವ ಮಾರ್ಗವನ್ನು ಹೇಳಿಕೊಡುವುದು. ಅದಕ್ಕಾಗಿ ನೀನು ಮಹಾವಿಷ್ಣುವನ್ನು ಆರಾಧಿಸು, ಕೃತಾರ್ಥನಾಗುವೆ. ನಿನಗೆ ನಂಬಿಕೆಯಾಗಲೆಂದು ನಾನು ನನಗೆ ಲಭಿಸಿರುವ ಸಿದ್ಧಿಯನ್ನು ಅಷ್ಟೂ ಕೊಡುವೆನು” ಎಂದು ಆತನ ತಲೆಯ ಮೇಲೆ ಕೈಯಿಟ್ಟನು.