ಅಷ್ಟರಲ್ಲಿ ಗುಹೆಯ ಒಳಗೆ ಏನೋ ಶಬ್ದವಾದಂತಾಯಿತು. ತಿರುಗಿ ನೋಡಿದರೆ, ಗುಹೆಯೊಳಗಿನಿಂದ ಒಂದು ಹುಲಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬರುತ್ತಿದೆ, ಮಹಾದೇವಿಯ ಕಡೆಗೆ. ಭೀಮಕಾಯದ ಆ ಹುಲಿಯನ್ನು ಕಂಡೊಡನೆಯೇ ಕ್ಷಣಕಾಲ ಸ್ತಬ್ಧಳಾದಳು. ಆದರೆ ಮರುಕ್ಷಣದಲ್ಲಿಯೇ ಅವಳ ಸುಪ್ತ ದೈವಿಕ ತೇಜಸ್ಸು ಮೇಲೆದ್ದು ಅವಳ ಸುತ್ತ ಪರಿವೇಷವನ್ನು ರಚಿಸಿತು. ಹುಲಿಯನ್ನೇ ದಿಟ್ಟಿಸಿ ನೋಡತೊಡಗಿದಳು.
ನರಾಕೃತಿಯನ್ನು ಕಂಡು ಕ್ರೌರ್ಯದಿಂದ ಹಲ್ಲುಮಸೆಯುತ್ತಾ ಬರುತ್ತಿದ್ದ ಹುಲಿ, ಮಹಾದೇವಿಯ ದೃಷ್ಟಿಯನ್ನು ಸಂಧಿಸಿದೊಡನೆಯೇ ಗುಂಡಿನ ಏಟನ್ನು ಕಂಡಂತೆ ಹಿಂದೆ ಸರಿಯಿತು. ಬಾಲವನ್ನು ಮುದುರಿಕೊಂಡು ನಾಯಿಯಂತೆ ನಡೆಯುತ್ತಾ ಬಂದು, ಸ್ವಲ್ಪ ದೂರದವರೆಗೂ ಮಹಾದೇವಿಯನ್ನು ನೋಡುತ್ತಾ ಹಿಂದೆ ಹಿಂದೆ ಸರಿದು ಅನಂತರ ನೆಗೆದು ಓಡಿ ಮಾಯವಾಯಿತು. ಅವಳ ಯೋಗದೃಷ್ಟಿಯ ಮಹಿಮೆಯಿಂದ ಹುಲಿಯ ಕ್ರೌರ್ಯ ಅಡಗಿ ಹೋಗಿತ್ತು.
ಅದು ಹೋದ ದಿಕ್ಕನ್ನೇ ಕುರಿತು ನೋಡುತ್ತಿದ್ದ ಮಹಾದೇವಿ ಮನಃಪಟಲದ ಮೇಲೆ ತನ್ನಲ್ಲಿ ಈ ಅಸದೃಶವಾದ ಶಕ್ತಿಯನ್ನು ತುಂಬಿದ ಕಲ್ಯಾಣದ ಚಿತ್ರ ತಿರುಗುತ್ತಿತ್ತು.
ಅಷ್ಟರಲ್ಲಿ ಗವಿಯ ಕಡೆಗೆ ಯಾರೋ ಓಡುತ್ತಾ ಬರುತ್ತಿರುವುದನ್ನು ಕಂಡಳು ಮಹಾದೇವಿ. ಬಳಿಗೆ ಬರುತ್ತದ್ದಂತೆಯೇ ಗುರುತಿಸಿದಳು. ಅಂದು ಶ್ರೀಶೈಲದಿಂದ ಅವಳನ್ನು ಇಲ್ಲಿಗೆ ಕರೆದುಕೊಂಡು ಬಂದ ಚುಂಚರಲ್ಲಿ ಈತನೂ ಒಬ್ಬನಾಗಿದ್ದ. ಇಲ್ಲಿ ತನ್ನನ್ನು ಬಿಟ್ಟು ಶ್ರೀಶೈಲಕ್ಕೆ ಹೋದವನು ಮತ್ತೇಕೆ ಹೀಗೆ ಓಡಿಬರುತ್ತಿದ್ದಾನೆಂದು ಆಶ್ಚರ್ಯಪಡುತ್ತಿರುವ ವೇಳೆಗೆ ಆತ ಬಳಿಗೆ ಬಂದು ನಮಸ್ಕರಿಸಿದ :
ಅವನು ಹೇಳಿದುದರಲ್ಲಿ ಒಟ್ಟು ಅರ್ಥ ಸ್ವಲ್ಪಮಟ್ಟಿಗಾಯಿತು. “ಶ್ರೀಶೈಲದಿಂದ ನಿಮ್ಮನ್ನು ನೋಡಲು ಯಾರೋ ಬಂದಿದ್ದಾರೆ. ನೆನ್ನೆ ಶ್ರೀಶೈಲಕ್ಕೆ ಬಂದರು. ನಿಮ್ಮನ್ನು ನೋಡಬೇಕೆಂದು ಆತುರಪಡಿಸಿದರು. ಕರೆದುಕೊಂಡು ಬಂದಿದ್ದೇನೆ. ಹಳ್ಳದ ಬಳಿ ಇದ್ದಾರೆ, ತಮ್ಮನ್ನು ನೋಡಲು ಚಡಪಡಿಸುತ್ತಿದ್ದಾರೆ. ಬರಬೇಕು.”
ಇಷ್ಟನ್ನು ಅವನ ಮಾತು, ಮುಖಭಾವ ಮೊದಲಾದವುಗಳಿಂದ ಅರ್ಥಮಾಡಿಕೊಂಡಳು ಮಹಾದೇವಿ.
ತನ್ನನ್ನು ನೋಡಲು ಯಾರು ಬಂದಿರಬಹುದೆಂಬುದನ್ನು ಊಹಿಸಲಾರದವಳಾಗಿ ಮೇಲೆದ್ದು ನಡೆಯತೊಡಗಿದಳು.