ಈ ಪುಟವನ್ನು ಪ್ರಕಟಿಸಲಾಗಿದೆ
೧೦೮
ಹೊಡೆದಟ್ಟುತ, ಕೋಲ್ ಮಿಂಚನು ಮಿರುಗಿಸಿ,
ಗುಡುಗನು ಗುಡುಗಿಸಿ, ನೆಲವನು ನಡುಗಿಸಿ,
ಸಿಡಿಲನು ತಾಳೆಗೆ ಬಾಳೆಗೆ ಎರಗಿಸಿ,
ಜಡಿಮಳೆ ಸುರಿವೋಲ್, ಬಿರುಮಳೆ ಬರುವೋಲ್,
ಕುಡಿ ನೀರನು ಒಣಗಿದ ನೆಲ ಕೆರೆವೋಲ್
ಬಂತೈ ಬೀಸುತ! ಬೀಸುತ ಬಂತೈ!
ತೆಂಕಣ ಗಾಳಿಯು ಕೊಂಕಣ ಸೀಮೆಗೆ
ಬಂತೈ! ಬಂತೈ! ಬಂತೈ! ಬಂತೈ!
ಕವಿಶಿಷ್ಯ
(ಪಂಜೆ ಮಂಗೇಶರಾವ್)
೨೨. ಹಾವಿನ ಹಾಡು
ನಾಗರಹಾವೆ! ಹಾವೊಳು ಹೂವೆ!
ಬಾಗಿಲ ಬಿಲದಲಿ ನಿನ್ನಯ ಠಾವೆ?
ಕೈಗಳ ಮುಗಿವೆ, ಹಾಲನ್ನೀವೆ
ಬಾ ಬಾ ಬಾ ಬಾ ಬಾ ಬಾ ಬಾ ಬಾ
ಹಳದಿಯ ಹೆಡೆಯನು ಬಿಚ್ಚೋ ಬೇಗಾ
ಹೊಳಹಿನ ಹೊಂದಲೆ ತೂಗೋ, ನಾಗಾ!
ಕೊಳಲನ್ನೂ ಮನೆ ಲಾಲಿಸು ರಾಗಾ
ನೀ ನೀ ನೀ ನೀ ನೀ ನೀ ನೀ ನೀ
ಎಲೆ ನಾಗಣ್ಣ, ಹೇಳೆಲೊ ನಿನ್ನಾ
ತಲೆಯಲಿ ರನ್ನ ವಿಹ ನಿಜವನ್ನಾ
ಬಲು ಬಡವಗೆ ಕೊಪ್ಪರಿಗೆಯ ಚಿನ್ನಾ
ತಾ ತಾ ತಾ ತಾ ತಾ ತಾ ತಾ ತಾ
ಬರಿಮೈ ತಣ್ಣಗೆ, ಮನದಲಿ ಬಿಸಿ ಹಗೆ,
ಎರಡೆಳೆ ನಾಲಗೆ ಇದ್ದರು ಸುಮ್ಮಗೆ
ಎರಗುವೆ ನಿನಗೆ, ಈಗಲೆ ಹೊರಗೆ
ಪೋ ಪೋ ಪೋ ಪೋ ಪೋ ಪೋ ಪೋ ಪೋ
ಕವಿಶಿಷ್ಯ
( ಪಂಜೆ ಮಂಗೇಶರಾವ್)