ವಿಷಯಕ್ಕೆ ಹೋಗು

ಪುಟ:ಚಂದ್ರಮತಿ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮
ಚಂದ್ರಮತಿ

ಪರಿಪೂರ್ಣನೆಂದೂ ಕರತಲಾಮಲಕದಂತೆ ವಿಶದವಾಗುವುದು. ನಮ್ಮ ಸಮಸ್ತಾಂಗಗಳೂ ಅವುಗಳ ವ್ಯಾಪಾರವೂ, ನಮ್ಮ ಸುತ್ತಲಿರುವ ಸಕಲ ವಸ್ತುಗಳೂ ನಮ್ಮ ಸೌಖ್ಯಕ್ಕೆ ಸಹಾಯಕಗಳಾಗಿರುವುವು. ಈಶ್ವರನು ನಮಗಿಷ್ಟು ಮೇಲ್ಕೆಯನ್ನುಂಟುಮಾಡುವುದಕ್ಕೆ ಆತನಿಗೆ ನಮ್ಮ ಮೇಲಿರುವ ಪ್ರೇಮವೇ ಕಾರಣವಲ್ಲದೆ ಮತ್ತೆ ಬೇರೆಯಲ್ಲವೆಂದು ಸ್ಪಷ್ಟವಾಗಿ ತೋರುವುದು. ಹೀಗೆ ನಮ್ಮಮೇಲೆ ಅವ್ಯಾಜವಾಗಿರುವ ಪ್ರೀತಿಯಿಂದಲೇ ನಮಗಿಷ್ಟು ಮಹೋಪಕಾರಗಳನ್ನು ಮಾಡುತ್ತಿರುವ ಆ ಪರಮೇಶ್ವರನನ್ನು ನಾವು ಯಾವಾಗಲೂ ನಿರ್ಮಲಹೃದಯದಿಂದ ಆರಾಧಿಸುತ್ತಿರಬೇಕು.

ಚಂದ್ರ-ಸಾಧಾರಣವಾಗಿ ಸಮಸ್ತ ಜೀವರಾಶಿಗಳೂ ಸೌಖ್ಯವನ್ನೇ ಹೊಂದುತ್ತಿರುವುವೆಂದು ಈಗ ತಾವು ಹೇಳಿದಿರಲ್ಲವೆ? ಕೆಲವರು ಸಾಧಾರಣವಾಗಿ ನಿರಂತರವೂ ರೋಗಕ್ಕೆಡೆಯಾಗಿ ದುಃಖವನ್ನೇ ಹೊಂದುತ್ತಿಲ್ಲವೆ?

ಗುರು-ರೋಗಗಳೂ ಸ್ವಾಭಾವಿಕವಾಗಿ ಬರತಕ್ಕುವುಗಳಲ್ಲ. ನಾವು ತಿನ್ನುವ ಆಹಾರಪದಾರ್ಥಗಳು ಒಳ್ಳೆಯವಾಗಿಲ್ಲದುದರಿಂದಲೋ, ಬಚ್ಚಲು ಮೊದಲಾದುವುಗಳ ದುರ್ಗ೦ಧದಿಂದ ಗಾಳಿಯು ಕೆಟ್ಟು ಹೋಗಿರು ವದರಿಂದಲೋ ಇಂತಹ ಮತ್ತೆ ಬೇರೆ ಕಾರಣಗಳಿಂದಲೋ ರೋಗಗಳು ಸಾಧಾರಣವಾಗಿ ಸಂಭವಿಸುವುವು. ಅವು ಯಾವಾಗಲೂ ಸ್ವದೋಷದಿಂದಲೆಯೋ, ಅನ್ಯರ ದೋಷದಿಂದಲೆಯೋ ನಮ್ಮನ್ನು ಆಶ್ರಯಿಸುವವು. ಈ ವಿಷಯದಲ್ಲಿ ಮುಂದೆ ಸ್ವಲ್ಪ ಸ್ವಲ್ಪವಾಗಿ ನಿನಗೆ ವಿವರಿಸಿ ತಿಳಿಸುವೆನು.

ಚ೦ದ್ರ-ತಮ್ಮ ಅನುಗ್ರಹದಿಂದ ಭಗವಂತನ ದಿವ್ಯ ಚರಿತ್ರೆಯನ್ನು ಸ್ವಲ್ಪ ಮಾತ್ರ ತಿಳಿದುಕೊಂಡರೂ ನನ್ನ ಮನಸ್ಸಿಗಿನ್ನೂ ತೃಪ್ತಿಯುಂಟಾಗದಿರುವುದು, ಆತನ ವಿಷಯದಲ್ಲಿ ನಾವು ಹೇಗೆ ನಡೆದುಕೊಳ್ಳಬೇಕೋ ಆ ಕ್ರಮವನ್ನೂ ತಿಳಿಸಿ ನನ್ನನ್ನು ಕೃತಾರ್ಥೆಯನ್ನಾಗಿ ಮಾಡಬೇಕು.

ಗುರು-ಈಗ ನಾನು ಹೇಳಿದುದೆಲ್ಲವೂ ನಿನ್ನ ಮನಸ್ಸಿನಲ್ಲಿ ಚೆನ್ನಾಗಿ ನಾಟಿದ್ದರೆ ಇಂದಿಗೆ ಇಷ್ಟೇ ಸಾಕು. ಮತ್ತೊಂದು ಬಾರಿ ಈಗ ಕೇಳಿದ ಪ್ರಶ್ನೆಗೆ ಉತ್ತರವನ್ನು ಕೊಡುವುದಕ್ಕೆ ಪ್ರಯತ್ನಿಸುವೆನು.