ತ್ತಿರುವ ವೃಕ್ಷಗಳು, ಸಸ್ಯಗಳು ಮೊದಲಾದುವೆಲ್ಲವೂ ಹೀಗೆಯೇ ಅತ್ಯದ್ಭುತಜನಕಗಳಾಗಿರುವುವು. ಈಗ ನಮ್ಮಿಂದ ಧನವನ್ನು ತೆಗೆದುಕೊಂಡು ಹೋದ ಐಂದ್ರಜಾಲಿಕನಂತೆ ಧನಲಾಭವನ್ನಪೇಕ್ಷಿಸದೆಯೇ ಭಗವಂತನೆಂಬ ಐಂದ್ರಜಾಲಿಕನು ತಾನು ಮಾಡಿರುವ ವಸ್ತುಗಳನ್ನೆಲ್ಲ ಸ್ಟೇಚ್ಛೆಯಾಗಿ ಅನುಭವಿಸಲೆಂಬ ಅಭಿಪ್ರಾಯದಿಂದ ನಮಗೆ ಕೊಟ್ಟು ಬಿಟ್ಟಿರುವನು. ಇಂತಹ ದಯಾಪರನ ವಿಷಯದಲ್ಲಿ ನಾವು ಎಷ್ಟು ಕೃತಜ್ಞತೆಯೂ ಭಕ್ತಿಯೂ ಉಳ್ಳವರಾಗಿರಬೇಕು!
ಚಂದ್ರ-ತಾವು ಭಗವಂತನ ದಿವ್ಯ ಮಹಿಮೆಯನ್ನು ವಿವರಿಸಿ ಹೇಳಿದ ಹಾಗೆಲ್ಲ ನನ್ನ ಮನಸ್ಸಿಗೆ ಆಶ್ಚರ್ಯವುಂಟಾಗಿ ಸಂತೋಷವನ್ನು ತಡೆಯಲಾರದವಳಾಗಿರುವೆನು. ನಾನು ಪ್ರತಿದಿನವೂ ನಿದ್ರೆಯಿಂದೆಚ್ಚೆತ್ತುದು ಮೊದಲ್ಗೊಂಡು ನಿದ್ರಿಸುವವರೆಗೂ ಭಗವಂತನ ಸೃಷ್ಟಿಯನ್ನೇ ನೋಡುತ್ತಿದ್ದರೂ ಕುರುಡಿಯಂತೆ ಅವುಗಳಲ್ಲಿರುವ ವಿಚಿತ್ರವನ್ನು ಕಂಡುಹಿಡಿಯಲಾರದವಳಾಗಿರುವೆನು. ನಿಮ್ಮ ಮಾತುಗಳನ್ನು ಕೇಳಿದುದರಿಂದ ಪರಮೇಶ್ವರನ ದಿವ್ಯಗುಣಾದಿಗಳನ್ನು ತಿಳಿದು ಸಂತೋಷಪಡಬೇಕೆಂಬ ಕುತೂಹಲವು ಅಷ್ಟಷ್ಟಕ್ಕೆ ಹೆಚ್ಚುತ್ತಿರುವುದು. ತಾವು ನನ್ನಲ್ಲಿ ಅನುಗ್ರಹವಿಟ್ಟು ನನ್ನ ಬಯಕೆಯನ್ನು ಸಫಲಮಾಡಿ ನನ್ನನ್ನು ಧನ್ಯಳನ್ನಾಗಿ ಮಾಡಬೇಕು.
ಗುರು-ಆತನ ಗುಣಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವುದಕ್ಕೆ ಮನುಷ್ಯಮಾತ್ರನಾದವನಿಗಾವನಿಗೂ ಸಾಧ್ಯವಲ್ಲ. ಆದರೆ ಕೆಲವು ಮಂದಿ ಮಹನೀಯರಿಗೆ ಮಾತ್ರ ಹೆಚ್ಚಾಗಿ ತಿಳಿದಿರುವುದು. ನೀನು ನನ್ನನ್ನು ಬಹಳವಾಗಿ ಬೇಡಿಕೊಳ್ಳುವೆಯಾದುದರಿಂದ, ನನಗೆ ತಿಳಿದಿರುವಷ್ಟರಲ್ಲಿ ಸ್ವಲ್ಪ ಭಾಗವನ್ನು ನಿನ್ನ ಮನಸ್ಸಿಗೆ ಹಿಡಿಯುವಂತೆ ವಿವರಿಸುವೆನು. ಆತನ ದಿವ್ಯಗುಣಗಳಲ್ಲಿ ನಾವು ತಿಳಿದುಕೊಳ್ಳಬಹುದಾಗಿರುವ ಸ್ವಲ್ಪ ಭಾಗದಿಂದಲೇ ನಮಗುಂಟಾಗುವ ಆನಂದವು ಅಪರಿಮಿತವಾಗಿರುವುದು. ಭೂಮಿಯನ್ನೊಂದನ್ನೇ ಅಲ್ಲದೆ ಸೂರ್ಯಚಂದ್ರಾದ್ಯನೇಕಗಳಾದ ಗೋಳಗಳನ್ನೂ ನಿರ್ಮಿಸಿರುವ ಆ ಮಹಾಪುರುಷನಿಗೆ ಶರೀರವೇ ಇದ್ದಪಕ್ಷದಲ್ಲಿ ಆ ರೂಪವು ಬ್ರಹ್ಮಾಂಡವಾಗಿ ನಮ್ಮ ಕಣ್ಣುಗಳಿಗೆ ಕಾಣಿಸುತ್ತಲೇ ಇದ್ದಿತು.