ಎರಡೂ ಶತಕಗಳು ಒಂದಕ್ಕೊಂದು ಪೂರಕವಾಗಿವೆ ; ಒಂದರ ಮುಂದುವರಿಕೆ
ಇನ್ನೊಂದಾಗಿ ತೋರುತ್ತದೆ. ರಕ್ಷಾಶತಕದಲ್ಲಿ ಸಂಸಾರದ ಅಸಾರತೆ ತಿಳಿಸಿ, ಜೀವಿಯ
ಮನಸ್ಸನ್ನು ವೈರಾಗ್ಯದತ್ತ, ಶಿವನತ್ತ ಒಯ್ಯಲು ಪ್ರಯತ್ನಿಸಿದರೆ, ಪಂಪಾಶತಕದಲ್ಲಿ
ಶಿವಕೃಪೆಗೊಳಗಾದ ಜೀವಿಯು ಮಾನವಜನ್ಮದ ಮಹತಿಯನ್ನು ಅರಿತು, ಅದನ್ನು
ಸಾರ್ಥಕಪಡಿಸಿಕೊಳ್ಳಲು ಅನುಸರಿಸಬೇಕಾದ ಮಾರ್ಗೋಪಾಯಗಳನ್ನು
ತಿಳಿಸಿಕೊಡಲಾಗಿದೆ. ಒಂದರಲ್ಲಿ ಜೀವಿಯ ತೊಳಲಾಟದ ಚಿತ್ರವಿದ್ದರೆ, ಮತ್ತೊಂದರಲ್ಲಿ
ಅವನ ಶಿವಸುಖಸಂಭ್ರಮದ ಬಿಂಬವಿದೆ. " ಅನೇಕ ಉಪಾಧಿಗಳಿಂದ ಕೂಡಿ,
ಭಯಾನಕವಾಗಿರುವ ಈ ಘೋರಸಂಸಾರವೆಂಬ ಅರಣ್ಯವನ್ನು ಸುರಕ್ಷಿತವಾಗಿ
ದಾಟಿ, ತನ್ನ ಗಮ್ಯಸ್ಥಾನವನ್ನು ಸೇರಲು ಹೊರಟಿರುವ ಜೀವಿ ಎಂಬ ಪಥಿಕನಿಗೆ
ಶಿವನ ಕಾರುಣ್ಯವೆಂಬ ರಕ್ಷೆಯು ಅವಶ್ಯವಾಗಿದೆ " ಎಂಬುದೇ ರಕ್ಷಾಶತಕದ
ಉದ್ದೇಶವಾದರೆ, " ಹಂಪೆಯ ವಿರೂಪಾಕ್ಷನೇ ತನ್ನ ಜೀವಿತದ ಉಸಿರು, ಸೇವೆಯವಸ್ತು,
ಮುಟ್ಟುವ ತಾಣ " ಎಂಬುದೇ ಪಂಪಾಶತಕದ ಉದ್ದೇಶವಾಗಿದೆ.
' ಭಕ್ತಿಯೊಂದೇ ದುಃಖನಿವಾರಕ ' ವೆಂದು ಅರಿತ ಭಕ್ತಕವಿ ಹರಿಹರ ಎರಡೂ
ಶತಕಗಳಲ್ಲಿ ವಿರೂಪಾಕ್ಷನನ್ನು ಅನನ್ಯ ಭಕ್ತಿಯಿಂದ ಸ್ತುತಿಸುತ್ತಾನೆ. ಇತರರೂ ಸ್ತುತಿಸಿ
ಭವಬಂಧನದಿಂದ ಬಿಡುಗಡೆಹೊಂದಿ ಶಿವಸುಖವನ್ನು ಪಡೆಯಬೇಕೆಂದು
ಪರ್ಯಾಯವಾಗಿ ಸೂಚಿಸುತ್ತಾನೆ.
ಎರಡೂ ಶತಕಗಳು ವಿಷಯನಿರೂಪಣೆ, ಜೀವನದರ್ಶನ ಮತ್ತು ಕಾವ್ಯ
ಸತ್ವಗಳ ದೃಷ್ಟಿಯಿಂದ ಅತ್ಯಂತ ಪ್ರಭಾವಶಾಲಿಯಾಗಿವೆ ; ತುಂಬ
ಪರಿಣಾಮಕಾರಿಯೆನಿಸಿವೆ ; ಹೀಗಾಗಿ ಜನಪ್ರಿಯತೆಯನ್ನೂ ಗಳಿಸಿವೆ. ' ಜನ
ಬದುಕಬೇಕೆಂದು ' ಕಾವ್ಯ ರಚಿಸಹೊರಟ ಹರಿಹರ ತನ್ನ ಎಲ್ಲ ಕೃತಿಗಳನ್ನು ಸಹಜ-
ಸರಸ-ಸರಳ ಶೈಲಿಯಲ್ಲಿ ರಚಿಸಲು ಮುಂದಾಗಿದ್ದಾನೆ. ಆತನ ' ಗಿರಿಜಾಕಲ್ಯಾಣ '
ಚಂಪೂರೂಪದಲ್ಲಿದ್ದರೂ ಪಂಪಾದಿಗಳ ಸಂಸ್ಕೃತ ಭೂಯಿಷ್ಠತೆ ಮತ್ತು ಪಾಂಡಿತ್ಯ
ಪ್ರದರ್ಶನಗಳಿಗೆ ಅಲ್ಲಿ ಎಡೆಯಿಲ್ಲ. ರಗಳೆಗಳಂತೂ ನಿರರ್ಗಳ - ಸುಲಭ - ಸುಭಗ
ಶೈಲಿಯಲ್ಲಿ ಪಂಡಿತ - ಪಾಮರರೀರ್ವರಿಗೂ ವೇದ್ಯವಾಗುವಂತಿವೆ. ಹಾಗೆಯೇ
ಶತಕಗಳನ್ನು ಆತ ಸಂಸ್ಕೃತ ಅಕ್ಷರವೃತ್ತಗಳಲ್ಲಿ ರಚಿಸಿದ್ದರೂ ಅವುಗಳಲ್ಲಿ ಕಾಠಿಣ್ಯ
ಕ್ಲಿಷ್ಟತೆಗಳಿಲ್ಲ. ಬದಲಾಗಿ ಸರಳತೆ, ಸಂವಹನಶೀಲತೆ, ದೇಶೀಯತೆ ಸಾಮರಸ್ಯಗೊಂಡು
ವಿಶಿಷ್ಟ ಪರಿಣಾಮರಮ್ಯತೆ ಮೈವೆತ್ತಿದೆ. ಆತ ಬಳಸುವ ಭಾಷೆ ಜನರ ಬಾಯಿಂದೆತ್ತಿ
ತಂದ ಆಡುನುಡಿ ; ಅದಕ್ಕೆ ಆತ ಭಕ್ತಿಭಾವದ ಸಂಸ್ಕಾರವಿತ್ತು ಪ್ರಾಸಾದಿಕಗೊಳಿಸುತ್ತಾನೆ.
ಭಕ್ತಿಯ ಆವೇಗ - ಆವೇಶಕ್ಕನುಗುಣವಾಗಿ ಅದು ಭಾವರಮ್ಯತೆಯನ್ನು ಪಡೆಯುತ್ತದೆ.
xviii