ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿನ್ನ ನಾಮಾಮೃತವ ನುತಿಸಿಯಡಿಗಡಿಗೆ ನಲಿವಂತೆ
ನಿಮ್ಮ ನಾಮವ ನೆನೆದು ಹರುಷಾಬ್ಧಿಯೊಳು ಬಿದ್ದು ಮುಳುಗಿ ನಲಿದಾಡುವಂತೆ
ನಿಮ್ಮ ನಾಮವ ನುತಿಸಿಯೆನ್ನ ಮೈಮರೆವಂತೆ
ನಿಮ್ಮ ನಾಮವು ಸತತ ಮರೆಯದೊಲಿರುವಂತೆ
ನಿನ್ನ ನಾಮದೊಳಿರಿಸು ನಿಜಲಿಂಗಭವಭಂಗ ಶರಣಜನವರದ ಜಯತು "
"ಸ್ಥಿರಪದವು ಬರುತಿರ್ಪ ಚರಿತವನು ಪಿಡಿವಂತೆ
ಮರಮರಳಿ ಭವಕೆ ಬಹ ಚರಿತವನು ತೊರೆವಂತೆ
ನರಲೋಕದಾಟದೊಳಗಿದ್ದುದಕೆ ಮನವ ತೊಡಕಿಸದೆ ಹೊರಗಾಗುವಂತೆ
ನಿರುತದಿಂದಾತ್ಮದೊಳು ಶಿವನಿಮ್ಮ ರೂಪವನು
ಅರಿವಂತೆ ಮರೆವಂತೆ ಕರೆವಂತೆ ಬೆರೆವಂತೆ
ವರವಿತ್ತು ಸಲಹುದು ನಿಜಲಿಂಗ ಭವಭಂಗ ಶರಣಜನವರದ ಜಯತು"
"ನಿನ್ನಿಂದ ನಡೆವುದನು ನಿನ್ನಿಂದ ನುಡಿವುದನು ನಿನ್ನಿಂದ ಸಕಲ ಸುಖ -
ದುಃಖಗಳನನುಭವಿಸಿಕೊಂಡಿಪ್ಪ ಬಡವ ನಾನು. ಪನ್ನಂಗಭೂಷಣನೆ ನಿನ್ನ ನಾಮವ
ಮರೆಯದಂತೆ ಸದ್ಗುಣವಿತ್ತು ಎನ್ನ ಸಲಹುದಯ್ಯ"
"ತೆಂಗಿನೊಳು ವಿಮಲೋದಕವ ಹಾಕಿದವರಾರು? ಭೃಂಗವೈರಿಗೆ
ಪರಿಮಳವನು ಕೊಟ್ಟವರಾರು? ಕಂಗೊಳಿಪ ನವಿಲಿಂಗೆ ಬಗೆಬಗೆಯ ಬಣ್ಣವನು
ನಿರ್ಮಿಸಿದವರಾರು? ರಂಗುಬಣ್ಣವನು ಪವಳಕೆ ಸಾರ್ಚಿದವರಾರು? ಮಂಗಳಾತ್ಮಕನೆ
ನೀನಲ್ಲದಿನ್ನಾರುಂಟು? ಹಿಂಗದೆನ್ನನುಸಲಹು"
- ಇದು ನಿಜಲಿಂಗಾರಾಧ್ಯನ ಶಿವಭಕ್ತಿಯ ಸ್ವರೂಪ.
ಪ್ರಪಂಚದಲ್ಲಿ ಮೂರ್ಖರೂ ಇದ್ದಾರೆ, ಜಾಣರೂ ಇದ್ದಾರೆ. ಅದನ್ನು
ಅವರವರ ನಡವಳಿಕೆಯ ಮೇಲಿಂದ ಅರಿಯಬೇಕು. ನಿಜಲಿಂಗಾರಾಧ್ಯ ಲೋಕದ
ಜನರ ಗುಣಸ್ವಭಾವಗಳನ್ನು ತೆರೆದ ಕಣ್ಣಿನಿಂದ ನೋಡಿ ಇಲ್ಲಿ ಓದುಗರ ಕಣ್ಣಿಗೆ
ಕಟ್ಟುವಂತೆ ಸುಂದರವಾಗಿ ಚಿತ್ರಿಸಿದ್ದಾನೆ.
ಮೂರ್ಖರ ಪದ್ಧತಿ ಹೀಗಿದೆ:
- ಕೊಟ್ಟು ಮನದೊಳಗೆ ಕುದಿವವನು ಮೂರ್ಖ
- ನಿಷ್ಠೆವಂತರ ಹಳಿದು ನಿಂದಿಸುವನತಿ ಮೂರ್ಖ
- ಗುರುಹಿರಿಯರ ವಾಕ್ಯವ ಮೀರುವವ ಮೂರ್ಖ
- ಅಂತರಂಗವ ಕಪಟಮನುಜಗುಸುರುವವ ಮೂರ್ಖ
- ಸಂತೆಯೊಳು ಶಾಸ್ತ್ರವನು ಹೇಳುವವ ಕಡುಮೂರ್ಖ

xxxiv