ವೀಣಾ ನಡೆದ ದಾರಿ....
ಡಾ. ವೀಣಾ ಶಾಂತೇಶ್ವರ ಅವರ ಇದುವರೆಗಿನ ಕಥನ ಸಾಹಿತ್ಯ ಒಂದು
'ಹೊತ್ತಿಗೆ'ಯಾಗಿ ಪ್ರಕಟವಾಗುತ್ತಿರುವ ಈ ಸಂದರ್ಭದಲ್ಲಿ ಈ ಕೃತಿಯ ಕುರಿತು ನನ್ನ
ಎರಡು ಮಾತುಗಳನ್ನು ದಾಖಲಿಸಲು ಅವರು ನನಗೆ ಅವಕಾಶ ನೀಡಿರುವುದು
ಅಪೂರ್ವ ಸಂತೋಷವನ್ನುಂಟು ಮಾಡಿದೆ. ಇಪ್ಪತ್ತನೆಯ ಶತಮಾನದ ಆಧುನಿಕ
ಕಥಾಸಾಹಿತ್ಯದಲ್ಲಿ ನವ್ಯದ ಅಲೆ ಬಂದಾಗ ವೀಣಾ 'ಮುಳ್ಳುಗಳು' ಕಥಾ ಸಂಕಲನದ
ಮೂಲಕ ಹೆಜ್ಜೆ ಗುರುತು ಮೂಡಿಸಿದರು.
ದೀಪಾವಳಿ ವಿಶೇಷಾಂಕದಲ್ಲಿ ಅವರ ಸುಂದರವಾದ ಫೋಟೋ ನೋಡಿದಾಗ,
'ಗಂಡಸರು' ಕಾದಂಬರಿ ೧೯೭೫ ರ ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ
ಪ್ರಕಟವಾದಾಗ ಅವರನ್ನು ನೋಡಬೇಕು ಎಂದು ಸಹಜವಾಗಿಯೇ ಅನ್ನಿಸಿತ್ತು.
೧೯೭೫ ರ ಆ ಪ್ರಜಾವಾಣಿ ವಿಶೇಷಾಂಕದಲ್ಲಿ 'ವೀಣಾ' ಎಂಬ ಹೆಸರಿನಲ್ಲಿ ಮೊದಲ
ಬಹುಮಾನ ಪಡೆದ ಕಿರು ಕಾದಂಬರಿ ಪ್ರಕಟವಾಗಿತ್ತು. ಕಲಾವಿದ ರಮೇಶ್ ರಚಿಸಿದ
ಹಲವು ಚಿತ್ರಗಳು ಕಾದಂಬರಿ ಜೊತೆಗೆ 'ಗಂಡಸರು' ಎಂಬ ಅಕ್ಷರಗಳು ಒಂದೊಂದೂ
ಒಂದೊಂದು ಬಣ್ಣದಲ್ಲಿ ಆಚ್ಚಾಗಿದ್ದವು. ಕೈಗೆ ಸರಪಳಿ ತೊಡಿಸಿದ, ಕಣ್ಣಿನಲ್ಲಿ ಕ್ರೋಧ,
ಆಕ್ರೋಶ ಹೊಮ್ಮಿಸುತ್ತಿದ್ದ ಹೆಣ್ಣಿನ ಮುಖ, ಆ ಸಂಚಿಕೆ ಈಗಲೂ ನನ್ನ ಬಳಿ ಇದೆ.
ಮೊದಲು ಓದಿದ ಅನುಭವ ಆ ಪುಟಗಳನ್ನು ನೋಡಿದಾಗ ಮತ್ತೆ ಮರುಕಳಿಸುತ್ತದೆ.
ಆಗ ಈ ಕಾದಂಬರಿ ಅನೇಕ ಗಂಡಸರಿಗೆ ಒಂದು ಬಗೆಯ ಶಾಕ್ ನೀಡಿತ್ತು ಎಂಬುದನ್ನು
ಇಲ್ಲಿ ನೆನಪಿಸಿಕೊಳ್ಳಬಹುದು.
ಮೈಸೂರಿನಲ್ಲಿ ಮಾನಸ ಗಂಗೋತ್ರಿಯಲ್ಲಿ ನಾನು ಎಂ. ಎ. ಓದುತ್ತಿದ್ದಾಗ,
ಪ್ರೊ. ಹಾ. ಮಾ. ನಾಯಕರು ನಡೆಸಿದ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನಕ್ಕೆ
ವೀಣಾ ಶಾಂತೇಶ್ವರ ಬಂದಿದ್ದರು. ಅವರು 'ಎಲಬುರ್ಗಿ' ಎಂಬುದನ್ನು ಬದಲಾಯಿಸಿ
'ಶಾಂತೇಶ್ವರ' ಎಂದು ಮಾಡಿಕೊಂಡಿದ್ದು ಸರಿಯೋ ತಪ್ಪೋ ಎಂದು ನಾವು ಗೆಳತಿಯರು
ಚರ್ಚಿಸಿದ್ದೆವು. ನಮ್ಮ ಮೇಡಂ ಡಾ. ವಿಜಯಾ ಆಗ ಲೇಖಕಿಯರಿಗೇ ಪ್ರತ್ಯೇಕ
ಸಮ್ಮೇಳನ ಮಾಡಿ ನಮ್ಮನ್ನು ಪ್ರತ್ಯೇಕಗೊಳಿಸಬಾರದು ಎಂದು ಸಮ್ಮೇಳನದಿಂದ
ದೂರ ಉಳಿದಿದ್ದರು. ಚಿಕ್ಕ ಮಗುವನ್ನೆತ್ತಿಕೊಂಡು ಬಂದಿದ್ದ ವೀಣಾ ನಮ್ಮ ಗಮನ
ಸೆಳೆದರು.