ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಕಿರುಕಾದಂಬರಿಗಳು/ಶೋಷಣೆ,ಬಂಡಾಯ ಇತ್ಯಾದಿ...
೪೦೭

ಆಕ್ರಮಿಸಬಲ್ಲ ಯೋಗ್ಯತೆಯಿರುವ ಒಬ್ಬನೇ ಒಬ್ಬ ಗಂಡಸು ಶಿವಮೂರ್ತಿ
ಮಾತ್ರ : ನಾನು ಕಲಾವಿದೆ ಹೌದು, ರಾಜು-ನೀಲಾರ ಜವಾಬ್ದಾರಿ ಹೊತ್ತ
ಹಿರಿಯಳು ಹೌದು, ಹಲವಾರು ಆದರ್ಶ ಹೊತ್ತಿರುವ ಕನಸುಗಾರ್ತಿ ಹೌದು,
ಬಾಳಿಗೊಂದು ಗುರಿಯಿರಿಸಿಕೊಂಡು ಅದಕ್ಕಾಗಿ ಹೋರಾಡುವ ಕೆಚ್ಚನ್ನು -
ಸ್ಥ್ಯೆರ್ಯವನ್ನು ಹೊಂದಿರುವ ಹೋರಾಟಗಾರ್ತಿ ಹೌದು. ಆದರೆ ಈ
ಎಲ್ಲಕ್ಕಿಂತ ಹೆಚ್ಚಾಗಿ, ಎಲ್ಲಕ್ಕಿಂತ ಮುಖ್ಯವಾಗಿ ನಾನೊಬ್ಬ ಹೆಂಗಸು. ಈ
ಅರಿವನ್ನು ನನಗೆ ತಂದುಕೊಟ್ಟವನು ಶಿವಮೂರ್ತಿ, ಈತನೇ ನಾನು
ಯುಗಾಂತರಗಳಿಂದ ಅರಸುತ್ತಲಿದ್ದ ನನ್ನ ಬಾಳಸಂಗಾತಿ. ಈತನೇ ನನ್ನೆಲ್ಲ
ಕನಸುಗಳನ್ನು ಸಾಕಾರಗೊಳಿಸಬಲ್ಲ ಆದರ್ಶ ಪ್ರಿಯತಮ. ಈತ ನನ್ನ ಜನ್ಮಾಂ
ತರಗಳ ಪ್ರೇಮಿ. ಈತ ನನ್ನ ಜೀವ.... ನನ್ನ ಸರ್ವಸ್ವ...."
ಆ ದಿನಗಳಲ್ಲಿ ಶಿವಮೂರ್ತಿ ದಿನಾ ಕಮಲಾಳ ಮನೆಗೆ ಬರುತ್ತಿದ್ದ.
ರಜಾದಿನಗಳಲ್ಲಿ ಇಬ್ಬರೂ ಒಟ್ಟಾಗಿ ಹೊರಗಡೆ ಹೋಗುತ್ತಿದ್ದರು. ಅನೇಕ ಸಲ
ಆತನನ್ನು ಕಮಲಾ ಶಶಿಯ ಮನೆಗೂ ಕರೆದುಕೊಂಡು ಬಂದಿದ್ದಳು. ಆತನನ್ನು
ನೋಡಿದರೆ ಕಮಲಾನ ಹಾಗೆಯೇ ಆತನೂ ಆಕೆಯ ಬಗ್ಗೆ ಹುಚ್ಚಾಗಿದ್ದು ಶಶಿಗೆ
ಸ್ಪಷ್ಟವಾಗಿ ಗೊತ್ತಾಗುವಂತಿತ್ತು. ಕಮಲಾಗಂತೂ ತನ್ನ ಬಗೆಗಿನ ಆತನ ಪ್ರೀತಿಯ
ಬಗ್ಗೆ ಸಂಶಯವೇ ಇರಲಿಲ್ಲ :
“ನಾನೆಷ್ಟು ಭಾಗ್ಯವಂತೆ ! ಶಿವಮೂರ್ತಿ ನನ್ನನ್ನೆಷ್ಟು ಪ್ರೀತಿಸುತ್ತಾನೆ !
ಇವತ್ತು ಸಂಜೆ ಪಾರ್ಕಿನಲ್ಲಿ ಕೂತಿದ್ದಾಗ ಆತ ಹೇಳಿದ, 'ಕಮಲಾ, ಇಷ್ಟು
ದಿನಾ ನಾ ಎಲ್ಲೆಲ್ಲೋ ತಿರುಗಾಡಿದೆ, ಯಾರ್ಯರನ್ನು ಭೆಟ್ಟಿ ಆದೆ, ಏನೇನೋ
ಮಾಡಿದೆ, ಒಂದು ಥರಾ ನೆಲೀ ಇಲ್ಲದ ಜಿಪ್ಸೀ ಹಾಂಗ ಇದ್ದೆ. ನನ್ನ ಜೀವಕ್ಕ
ಒಂದು ಅರ್ಥ ಕೊಟ್ಟಾಕಿ ನೀನು. ನನ್ನ ಕತ್ತಲು ತುಂಬಿದ ಬಾಳಿಗೆ ಬೆಳಕು
ತೋರಿಸಿದಾಕಿ ನೀನು. ಎಲ್ಲಾ ಇದ್ದರೂ ಏನೋ ಒಂದು ಇಲ್ಲಾ ಅಂತ ನನಗ
ಯಾವಾಗ್ಲೂ ಅನಿಸ್ತಿತ್ತು. ಆ ಕೊರತೆ ನಿನ್ನ ಸಹವಾಸದಿಂದ, ನಿನ್ನ
ಪ್ರೀತಿಯಿಂದ ತುಂಬಿ ಬಂತು. ಈಗ ಜೀವನ ಪರಿಪೂರ್ಣ ಆತು ಅನಸ್ತದ
ನನಗ, ಈ ನಿನ್ನ ಋಣಾ ನಾ ಹ್ಯಾಂಗ ತೀರಸ್ಲಿ ?'... ಮೂರ್ತಿ, ನಿಜವಾಗಿ
ನೋಡಿದರೆ ನಾನು ನಿನಗೆ ಋಣಿಯಾಗಿರಬೇಕು. ನಿನ್ನಿಂದ ನಾನು ಪಡೆದದ್ದು
ಎಷ್ಟು ಅಮೂಲ್ಯವಾಗಿದೆಯೆಂದರೆ ಈ ಜೀವನದಲ್ಲಿ ನಾನಿನ್ನು
ಪಡೆಯಬೇಕಾಗಿರುವುದು ಏನೂ ಇಲ್ಲ ಅನಿಸುತ್ತದೆ...."
- ಅದೆಲ್ಲ ಸರಿ : ಶಶಿಯೂ ಕಮಲಾನ ಅಭಿಪ್ರಾಯ ಒಪ್ಪಿದ್ದಳು. ಆದರೆ