________________
೨೪೪ ನಡೆದದ್ದೇ ದಾರಿ “ಹೌದೌದು, ಆಿಗೆ ಸೆಡೇಶನ್ ಕೊಡೋದು ಛಲೋ”, “ಅಯ್ಯೋ ಅಮ್ಮಾ...." ಸರೋಜಾಗೆ ಇದೆಲ್ಲ ಕೇಳಿದ ನೆನಪಿದೆ. ಮುಂದೆ ಮುಂದೆ ಆಕೆ ನಿಧಾನವಾಗಿ ಕನಸಿನ ಲೋಕ ಸೇರಿದಳು. ಕನಸಿನ ಲೋಕವೆ ? ಹೌದು. ಅಂದರೆ ಇಷ್ಟು ಹೊತ್ತು ನಡೆದದ್ದೆಲ್ಲ ಕನಸೆ ? ಹೌದು. ಆಕೆ ಮಲಗಿದ್ದಾಗ ಆತ ಚಹಾ ಮಾಡಿದ್ದು ? ಸಂಬಳದ ಹಣವನ್ನೆಲ್ಲ ಆತ ಆಕೆಯ ಕೈಯಲ್ಲಿರಿಸಿದ್ದು ? ಮಗುವನ್ನು ತಾನೇ ರಾತ್ರಿಯೆಲ್ಲ ನೋಡಿಕೊಳ್ಳುವೆನೆಂದು ಆತ ಹೇಳಿದ್ದು ? ಸಿನೆಮಾಗೆ-ಕಾಮತ್ ಹೋಟೆಲ್ಗೆ ಹೋಗೋಣವೆಂದು ಆತ ಹೇಳಿದ್ದು ? ಕೆಲಸವನ್ನು ಹಂಚಿಕೊಳ್ಳೋಣ ಅಂತ ರಮಿಸಿದ್ದು ? ಬೆಳದಿಂಗಳಲ್ಲಿ ಪ್ರೀತಿಯ ಮಾತುಗಳನ್ನಾಡಿದ್ದು ? ಜೀವನ ಸಾರ್ಥಕವಾಯಿತೆಂದು ಹೇಳಿದ್ದು ? ಇದೆಲ್ಲ ಕನಸೆ ? ಹೌದು. ಎಂತಹ ಸುಂದರ ಕನಸುಗಳು ! ಆಕೆ ಹುಡುಗಿಯಾಗಿದ್ದಾಗಿನಿಂದ ಕಂಡಿದ್ದ ಕನಸುಗಳು ! ಇವೆಲ್ಲಾ ಬರಿ ಕನಸುಗಳೇ ಆಗಿದ್ದರೆ ಈ ಕನಸುಗಳಿಂದ ಎಚ್ಚರಾಗುವುದು ಯಾರಿಗೆ ಬೇಕಿತ್ತು ? ....ಹಾಗಿದ್ದರೆ ತನಗೀಗ ಎಚ್ಚರಾಗಿದೆ. ಕನಸು ಬೇರೆ, ವಾಸ್ತವ ಬೇರೆ ಅಂತ ಗೊತ್ತಾಗುತ್ತಿದೆ. ಇಷ್ಟು ಹೊತ್ತು, ಆದೆಷ್ಟೋ ಹೊತ್ತು, ಕಂಡಿದ್ದು -ಅನುಭವಿಸಿದ್ದು ಎಲ್ಲಾ ಬರೀ ಕನಸುಗಳೆಂದು ತಿಳಿಯುತ್ತಿದೆ. ಬರೀ ಕನಸುಗಳು.... ಆತ ಸತ್ತು ಹೋಗಿದ್ದಾನೆ. ತನ್ನನ್ನು ಲಗ್ನವಾದಾತ, ಮೂರು ಮಕ್ಕಳನ್ನು ಹುಟ್ಟಿಸಿದಾತ್ರ, ಜೊತೆಗೆ ಮೂವತ್ತೈದು ವರ್ಷ ಬಾಳಿದಾತ, ಮೂವತ್ತೈದು ವರ್ಷಗಳ ಕಾಲ ತನ್ನ ಕನಸುಗಳನ್ನೆಲ್ಲ ಕನಸುಗಳಾಗಿಯೇ ಉಳಿಸಿದಾತ ಈಗ ಸತ್ತಿದ್ದಾನೆ ; ಇದು ವಾಸ್ತವ. ಇದಷ್ಟೇ ವಾಸ್ತವವೆ ? ಅಲ್ಲ. ವಾಸ್ತವದ ವ್ಯಾಪ್ತಿ ಕನಸುಗಳ ವ್ಯಾಪ್ತಿಗಿಂತ ಅದೆಷ್ಟೋ ಪಾಲು ಹೆಚ್ಚಿನದು ;