ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೫೨
ಕನ್ನಡಿಗರ ಕರ್ಮಕಥೆ

ನಾಶಕಾಲವೇ ಒದಗಿದಂತೆ ಕಾಣುತ್ತದೆ. ಹಿಂದಕ್ಕೆ ಪರಶುರಾಮನು ಇಪ್ಪತ್ತೊಂದು ಸಾರೆ ಕ್ಷತ್ರಿಯ ಸಂಹಾರಮಾಡಿ ಪೃಥ್ವಿಯನ್ನು ನಿಃಕ್ಷತ್ರಿಯವಾಗಿ ಮಾಡಿದಂತೆ ಈಗ ನಾವು ಪೃಥ್ವಿಯನ್ನು ನಿರ್ಮುಸಲ್ಮಾನವಾಗಿ ಮಾಡೋಣ ! ಹೋಗು, ವೈರಿಗಳ ಸೈನ್ಯಗಳು ಎಲ್ಲಿಯವರೆಗೆ ಬಂದಿವೆಯೆಂಬದನ್ನು ನೋಡಿ ಬಂದು ಹೇಳು. ಅಂಥ ಮಹತ್ವದ ಸುದ್ದಿಗಳೇನಾದರೂ ಇದ್ದರೆ, ನನ್ನ ತನಕ ಹೇಳಲಿಕ್ಕೆ ಬಾ, ಹಾಗೆಮಾಡದೆ, ಇಂಥ ಕ್ಷುಲ್ಲಕ ಸುದ್ದಿಗಳನ್ನು ಹೇಳಲಿಕ್ಕೆ ಬಂದು ತೊಂದರೆಯನ್ನು ಕೊಡಬೇಡ, ಎಂದು ನುಡಿದನು. ಈ ಮಾತುಗಳನ್ನು ಕೇಳಿ ಸೇವಕನು ಆಶ್ಚರ್ಯಪಡುತ್ತ ಹೊರಟು ಹೋದನು. ರಾಮರಾಜನೂ ಅಸಮಾಧಾನದಿಂದ ಕುಂಜವನವನ್ನು ಬಿಟ್ಟು ವಿಜಯನಗರಕ್ಕೆ ಬಂದು ಮುಟ್ಟಿದನು.

ವಿಜಯನಗರಕ್ಕೆ ಬಂದಬಳಿಕ ಎಷ್ಟೋ ಮಹತ್ವದ ಸುದ್ದಿಗಳನ್ನು ರಾಮರಾಜನು ಕೇಳಿದನು. ಶತ್ರುಗಳ ಸೈನ್ಯಗಳು ಬೇಗನೆ ವಿಜಯನಗರದ ಗಡಿಯನ್ನು ಬಂದು ಮುಟ್ಟುವವೆಂಬದನ್ನೂ, ತುಂಗಭದ್ರೆಯ ಕಾಳಹೊಳೆಯ ಸ್ಥಳವನ್ನು ಹುಡುಕುವದಕ್ಕಾಗಿ ಶತ್ರುಗಳ ಗುಪ್ತಚಾರರು ತಿರುಗಾಡುತ್ತಿರುವರೆಂಬದನ್ನೂ, ಆ ಸ್ಥಳವು ಗೊತ್ತಾಗುವವರೆಗೆ ಶತ್ರುಗಳು ಪತ್ರಗಳನ್ನು ಕಳಿಸುತ್ತ, ಉತ್ತರಗಳನ್ನು ಬರಮಾಡಿಕೊಳ್ಳುತ್ತ ಕಾಲಹರಣ ಮಾಡುವಂತೆ ತೋರುತ್ತದೆಂಬದನ್ನೂ, ರಾಮರಾಜನು ಕೇಳಿದನು. ತಾನಾದರೂ ಶತ್ರುಗಳ ಗುಪ್ತಚಾರರನ್ನು ಶೋಧಿಸುವದಕ್ಕಾಗಿಯೂ, ಶತ್ರುಗಳ ದಂಡಿನ ಚಲನವಲನಗಳನ್ನು ನೋಡಿಕೊಂಡು ಬರುವದಕ್ಕಾಗಿಯೂ ಗುಪ್ತಚಾರರನ್ನು ನಿಯಮಿಸಿರುವನೆಂಬ ಬಗ್ಗೆ ರಾಮರಾಜನಿಗೆ ಸಮಾಧಾನವಾಯಿತು. ತಾನು ಶತ್ರುಗಳನ್ನು ತುಂಗಭದ್ರೆಯನ್ನು ದಾಟಗೊಡದೆ, ತುಂಗಭದ್ರೆಯಲ್ಲಿಯೇ ಅವರ ನಾಶಮಾಡಿದರಾಯಿತೆಂದು ಆತನು ತಿಳಕೊಂಡನು. ಮೊದಲ ಉಸಲಿಗೇ ಶತ್ರುಗಳಿಗೆ ಚೆನ್ನಾಗಿ ಕೈ ತೋರಿಸಿದರೆ, ಅವರು ಚಿವುಗುಟ್ಟುತ್ತ ಕುಳಿತುಕೊಳ್ಳುವರು. ಆಮೇಲೆ ತಾವು ಮುಂದಕ್ಕೆ ಸಾಗಿಹೋಗಬೇಕು. ಅಂದರೆ ಪೂರ್ಣವಾಗಿ ಶತ್ರುಗಳ ನಿಃಪಾತವಾಗುವದು ಪರಮೇಶ್ವರನ ಮನಸ್ಸಿನಲ್ಲಿ ಭರತಖಂಡದ ತುಂಬೆಲ್ಲ ಹಿಂದೂ ರಾಜ್ಯವಾಗುವದು, ಇದ್ದದ್ದರಿಂದಲೇ ಈ ಎಲ್ಲ ಮುಸಲ್ಮಾನ ಬಾದಶಹರಿಗೆ ಈ ಬುದ್ದಿಯು ಹುಟ್ಟಿರುತ್ತದೆ, ಇಲ್ಲದಿದ್ದರೆ ಎಂದೂ ಹುಟ್ಟುತ್ತಿದ್ದಿಲ್ಲ, ಎಂದು ಆತನು ನಂಬಿಬಿಟ್ಟಿದ್ದನು. ಈ ವಿಚಾರದ ಹೊರತು, ಸೋಲಿನ ವಿಚಾರವು ರಾಮರಾಜನ ಮನಸ್ಸಿನಲ್ಲಿ ಬರುತ್ತಿರಲಿಲ್ಲವೆಂತಲೇ ಹೇಳಬಹುದು. ತಾನು ಸ್ವತಃ ಸೈನ್ಯಾಧಿಪತ್ಯವನ್ನು ಕೈಕೊಂಡು ತನ್ನ ಇಬ್ಬರು ಶೂರ ಬಂಧುಗಳನ್ನು ಎಡಬಲಗಳಲ್ಲಿ ಸೈನ್ಯವಾಗಿ ಇರಿಸಿಕೊಂಡು