ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮಾತೃದ್ರೋಹೋಪಕ್ರಮ
೧೭೯

ಹೇಳಲಿಕ್ಕೆ ಬರುತ್ತಿದ್ದಿಲ್ಲ. ಆಗ ನೀನು ಅಳುವದನ್ನು ನೋಡಿ ತರ್ಕದಿಂದ ನಿನಗಾದ ಬೇನೆ ಬೇಸರಿಕೆಗಳನ್ನೂ, ಹಸಿವೆ ನೀರಡಿಕೆಗಳನ್ನು, ತಿಳಕೊಂಡು ನಾನು ತಕ್ಕ ಉಪಾಯ ಮಾಡಿ ನಿನ್ನನ್ನು ದೊಡ್ಡವನಾಗಿ ಮಾಡಿದೆನು. ಈಗ ನಿನಗೆ ಮಾತಾಡಲಿಕ್ಕೆ ಬರುತ್ತದೆ, ಹೇಳಲಿಕ್ಕೆ ಬರುತ್ತದೆ. ಹೀಗಿದ್ದು ನೀನು- 'ನನಗೆ ತಿಳಿಯುವದಿಲ್ಲೆಂದು ಉತ್ತರ ಕೊಟ್ಟರೆ, ನನಗೆ ಹ್ಯಾಗೆ ಸಮಾಧಾನವಾಗಬೇಕು? ನಿನ್ನ ಮನಸ್ಸಿನೊಳಗಿರುವದನ್ನು ನನಗೆ ಹೇಳಬಾರದೆಂದು ನೀನು ಬುದ್ಧಿಪೂರ್ವಕವಾಗಿ ಬಚ್ಚಿಡುವದೇನು ನನಗೆ ಗೊತ್ತಾಗುವುದಿಲ್ಲವೇ? ಛೇ, ಛೇ ಹೀಗೆ ಮಾಡಬೇಡ, ನಿನ್ನ ಸಲುವಾಗಿಯೇ ನಾನು ಪ್ರಾಣಧಾರಣ ಮಾಡಿರುವೆನು, ನಿನ್ನ ಸಲುವಾಗಿಯೇ ಸೋಸಬಾರದ ಕಷ್ಟಗಳನ್ನು ನಾನು ಸೋಸಿದೆನು, ನಿನ್ನ ಸಲುವಾಗಿಯೇ ನಾನು ಆತ್ಮಹತ್ಯೆಯನ್ನು ಮಾಡಿಕೊಂಡಿರುವದಿಲ್ಲ. ನನ್ನ ಪ್ರಾಣದ ವಿಶ್ರಾಂತಿ ಸ್ಥಾನವು ನೀನು, ಅಂಥ ನೀನು ನನಗೆ ಇಂದು ಎರವಾಗುತ್ತಿಯಾ? ಈವರೆಗೆ ನಮ್ಮಿಬ್ಬರಲ್ಲಿ ಭೇದವಿಲ್ಲ, ಈಗ ಆ ಭೇದವು ಉಂಟಾಗಿದೆ, ನನ್ನ ಮುಂದೆ ನೀನು ಏನೂ ಮುಚ್ಚಿಕೊಳ್ಳತಕ್ಕವನಲ್ಲ, ಇಂದೇ ಯಾಕೆ ಹೀಗೆ ಮಾಡುತ್ತೀ ?”

ರಣಮಸ್ತಖಾನ-ನಾನೇನು ಮಾಡುತ್ತೇನೆ? ಏನೂ ಮಾಡುವದಿಲ್ಲ.

ಮಾಸಾಹೇಬ-ಛೇ, ಛೇ, ಛೇ ನೀನು ಏನೂ ಮಾಡುವದಿಲ್ಲೆಂಬ ಮಾತು ಸುಳ್ಳು, ನೀನು ಈಗ ಏನೋ ಒಳಸಂಚು ನಡಿಸಿರುತ್ತೀ, ನನ್ನ ಮುಂದೆ ಮಾತ್ರ ಅನ್ನು ಹೇಳುವದಿಲ್ಲ. ಬೇಡ, ಬೇಡ; ನೀನು ಈಗ ಏನು ಒಳಸಂಚು ನಡಿಸಿರುತ್ತೀಯೆಂಬದನ್ನು ನನ್ನ ಮುಂದೆ ಹೇಳು.

ರಣಮಸ್ತಖಾನ-ಒಳಸಂಚು ಯಾತರದು ? ನಾನು ಒಳಸಂಚು ನಡೆಸಿರುವೆನೇ ? ಯಾರ ಸಂಗಡ ? ನಾನು ಯಾರವನೆಂಬದನ್ನೇ ನನಗೆ ಹೇಳಲಿಕ್ಕೆ ಬಾರದಿರುವಾಗ ನನ್ನ ಒಳಸಂಚುನ್ನು ಯಾರು ಕೇಳುವರು ? ನನ್ನನ್ನು ಒಳಸಂಚಿನಲ್ಲಿ ಕೂಡಿಸಿಕೊಳ್ಳುವವರಾದರೂ ಯಾರು ? ಮಾಸಾಹೇಬರೇ, ಸುಮ್ಮನೆ ಇಲ್ಲದ್ದೊಂದು ಕಲ್ಪಿಸಿ ನನಗೆ ಪ್ರಶ್ನೆ ಮಾಡಬೇಡಿರಿ. ಯಃಕಶ್ಚಿತವಾದ ನಾನು ಎಲ್ಲಿಯಾದರೂ ಹ್ಯಾಗಾದರೂ ಹುಟ್ಟಿದಂತಂತೆ, ಯಃಕಶ್ಚಿತನಾದ ನಾನು ಎಲ್ಲಿಯಾದರೂ ಹ್ಯಾಗಾದರೂ ಸಾಯುವೆನು ! ನೆರೆಯವರಂತೆ ಮಹತ್ಕೃತ್ಯಗಳನ್ನು ಮಾಡಿ ದೊಡ್ಡಸ್ತನವನ್ನು ಪಡೆಯುವದು ನನಗೆ ಶಕ್ಯವಿಲ್ಲ. ನಾನು ಏನಾದರೂ ಮಾಡುತ್ತಿದ್ದರಷ್ಟೇ ನಿಮ್ಮ ಮುಂದೆ ಅದನ್ನು ಮುಚ್ಚುವದು ! ನನ್ನಿಂದ ಇಂಥ ಮಹತ್ಕೃತ್ಯವಾದೀತು ಎಂಬ ಆಶಯವನ್ನೇ ನೀವು ಬಿಟ್ಟುಬಿಡಿರಿ. ನನಗೆ ಬೇಕಾಗಿರುವ