ಭೀಷ್ಮಪರ್ವ: ೦೪. ನಾಲ್ಕನೆಯ ಸಂಧಿ

ವಿಕಿಸೋರ್ಸ್ದಿಂದ

<ಕುಮಾರವ್ಯಾಸ ಭಾರತ

ಭೀಷ್ಮ ಪರ್ವ-ನಾಲ್ಕನೆಯ ಸಂಧಿ[ಸಂಪಾದಿಸಿ]

ಸೂ. ಕವಿದು ಹಳಚಿದುದುಭಯಬಲ ಶಿವ
ಶಿವ ಮಹಾದೇವಮಮ ಪದರಜ
ರವಿಯ ತಿವಿದುದು ದಿವವನಳಿದುದು ನಳಿದನಹಿರಾಯ||

ಅವಧರಿಸು ಧೃತರಾಷ್ಟ ಗಂಗಾ
ಭವನ ಸುಯಿಧಾನದಲಿ ಕುರುಬಲ
ನಿವಹ ಧೃಷ್ಟ ದ್ಯುಮ್ನನಾರೈಕೆಯಲಿ ರಿಪುಸೇನೆ
ತವಕ ಮಿಗೆ ಮೋಹರಿಸಿ ಕೈವೀ
ಸುವ ಮಹೀಶರನೀಕ್ಷಿಸುತಲಾ
ಹವ ಮಹೋದ್ಯೋಗಕ್ಕೆ ಬೆರಗಾಯಿತ್ತು ಸುರಕಟಕ ೧

ಎರಡು ಬಲ ಕೈಲಾಗನೀಕ್ಷಿಸು
ತಿರೆ ಕೃತಾಂತಾಲಯಕೆ ವಾಹಿನಿ
ಸರಿವುದೆಂಬಂದದಲಿ ಕೈವೀಸಿದರು ಭೂಭುಜರು
ಅರರೆ ಮೂಡಣ ಶರಧಿ ಪಡುವಣ
ಶರಧಿಗಾಂತುದೊ ರಣಚಮತ್ಕೃತಿ
ಸುರರ ನಯನಾಂಗಣಕೆ ಕವಿಸಿತು ಕೌತುಕಾಂಬುಧಿಯ ೨

ಎಲೆಲೆ ಕವಿಕವಿ ಬೆರಸುಬೆರಸಿ
ಟ್ಟಳಿಸು ತಿವಿತಿವಿ ಭಲರೆ ಭಲರತಿ
ಬಲರೆ ಹಿಂಚದಿರಿನ್ನು ಹೊಯ್ ಹೊಯ್ ಚೂಣೆಗರನೆನುತ
ಬಲಜಲಧಿ ಮುಕ್ಕುಳಿಸಿ ಮಿಗೆ ಹೆ
ಕ್ಕಳಿಸಿ ಕವಿದುದು ಗಿರಿಯ ಬೆಸುಗೆಯು
ಕಳಚಿತಹಿಪನ ಕೊರಳು ಕುಸಿದವು ಕಮಠನೆದೆ ಬಿರಿದ ೩

ಒದರಿ ಬಲನೊಡನೊಡನೆ ಹಳಚಿದೊ
ಡದಿರೆ ನೆಲನವ್ವಳಿಸಿ ದಿಕ್ಕರಿ
ಮದವಡಗಿದವು ಕುಣಿದು ಮೆಟ್ಟಿದರಹಿಪನೊಡಲೊಳಗೆ
ಹೊದರುದಲೆ ಹೊಕ್ಕಾಳೆ ಬೆರಳಿನ
ತುದಿಯ ತುಟಿಯಲಿ ಬೊಬ್ಬಿರಿದಡಿನ
ನದಿರೆ ದಳವುಳಿಸಿದುದು ಕೌರವಪಾಂಡವರ ಸೇನೆ ೪

ರಣದೊಳಾದುದು ಬೋನವಾರೋ
ಗಣೆಗೆ ಬಿಜಯಂಗೈವುದನುಚರ
ಗಣಸಹಿತವೆಂದತಿಬಲರು ಕಾಲಂಗೆ ದೂತರನು
ಅಣಿಯೊಳಟ್ಟಿದರೆನಲು ಪಡೆಯುರ
ವಣೆಯ ಪದಹತಧೂಳಿ ಗಗನಾಂ
ಗಣಕೆ ಕವಿದುದು ಬಳಿಕಲಬುಜಭವಾಂಡಮಂಡಲವ ೫

ಚಲನದಿಂದುದಯಿಸಿದ ಶೂದ್ರತೆ
ಗಲಸಿ ಸುರಗಂಗೆಯಲಿ ಮಿಂದು
ಚ್ಚಳಿಸಿ ರಜತಾದ್ರಿಯಲಿ ಶೂಲಿಯ ಪದಯುಗವ ಭಜಿಸಿ
ಬಳಿಕ ನಾಕವನೈದಿ ಸುಮನೋ
ಲಲನೆಯರ ಕುಂತಳಕೆ ಹಾಯ್ದುದು
ಬಲದ ಪದಹತಧೂಳಿ ಗೆಲಿದುದು ವಾಜಪೇಯಿಗಳ ೬

ಹರಿಗೆ ಕೆಂಪಿನ ಝಗೆ ಸುರಾಂಗನೆ
ಯರಿಗೆ ಸುಭಟವ್ರಜಕೆ ಕುಂಟಣಿ
ವರ ದಿಗಂಗನೆಯರಿಗೆ ಬೈತಲೆಗೆಸೆವ ಸಿಂಧೂರ
ಸುರಪನನಿಮಿಷತನಕೆ ರಿಪುವೆನ
ಲುರವಣಿಸಿಕೆಂದೂಳಿ ನಭಕು
ಪ್ಪರಿಸೆ ಹೊಯ್ದಾಡಿದರುಭಯ ಚತುರಂಗಬಲ ಹಳಚಿ ೭

ಝಡಿವ ಕೈದುಗಳುರಿಯ ಕೆಚ್ಚುವ
ನಡಸಿ ಕಾರಿದವಲಗು ಖಣಿಖಟೆ
ವಿಡುವ ದನಿ ಮಿಗೆ ತುಂಬಿತಂಬುಜಬಂಧುವಾಲಯದ
ಕಡುಗಿ ಹೊಯಿದಾಡಿದರು ಡಾವಣೆ
ವಿಡಿದು ಜೋಲುವ ಕರುಳ ಹಿಣಿನೊಳು
ತೊಡಕಿ ತೋಟಿಯ ಭಟರು ತರುಬಿದರಂತಕನ ಪುರಿಗೆ (ಜಿ)

ಬಿಡದೆ ಕಡಿದಾಡಿದರು ಸೇನಾ
ಗಡಲು ರಕುತದ ಕಡಲನುಗುಳಿತು
ಬಿಡದೆ ಸುಂಟರುಗಾಳಿ ವಿಲಯದ ಮಳೆಯ ಪಡೆದಂತೆ
ಒಡೆದು ನಾನಾ ಥಟ್ಟುಗಳ ಮೈ
ವಿಡಿದು ವಾರಿಡುವರುಣಜಲದಲಿ
ಕಡಿಕುಗಳು ಬೆಂಡೇಳೆ ದಂತಿಗಳಟ್ಟೆ ಕೊಡೆನೆಗೆಯೆ ೮

ಲಗ್ಗೆ ಮಸಗಿತು ಸೂಳುಮೊಯಿಲಿನ
ಬೊಗ್ಗಿನಲಿ ಮುಂಕೊಂಡು ಮೋಹರ
ವೊಗ್ಗೊಡೆದು ಹೆಣಗಿದುದು ಕೇಶಾಕೇಶಿ ಯುದ್ಧದಲಿ
ಮೊಗ್ಗರವ ಕೆದರಿದರು ಹೊಯ್ದುರೆ
ಮಗ್ಗಿದರು ಕಡಲಿಡುವ ಕರುತದ
ಸುಗ್ಗಿ ಶಾಕಿನಿಯರಿಗೆ ಸೇರಿತು ಭೂಪ ಕೇಳೆಂದ ೯

ತೆಗೆದುದುಬ್ಬಿದ ಧೂಳಿ ಹೆಣಸಾ
ಲುಗಳು ಹರೆದವು ರಕುತದರೆವೊನ
ಲುಗಳು ಹರಿದವು ಹೊರೆದನಂತಕನುರುಪರಿಗ್ರಹವ
ಅಗಿದು ಮಗ್ಗಿತು ಚೂಣಿ ಬಲುಕಾ
ಳೆಗವನೊಯ್ಯಾರಿಸುತ ರಾಯರು
ತೆಗೆಸಿದರು ಸೇನೆಯನು ನೂಕಿದರಂದು ಬಿಲ್ಲವರ ೧೦

ಪುಲಿದೊಗಲ ಸೀಸಕದ ಕಿಗ್ಗ
ಟ್ಟೊಲೆವ ಸುರಗಿಯ ಕಾಂಚದೊಳರೆ
ಬಲಿದ ಬಿಲ್ಲಿಂ ಬಿಗಿದ ತಿರುವಿನ ಬೆರಳ ಕೋಲುಗಳ
ಬಲಿದ ಮುಂಗೈಹೊದೆಯ ಬಿರುದಿನೊ
ಳುಲಿವ ಘಂಟೆಯ ಬೆನ್ನಲೆವ ಬ
ತ್ತಳಿಕೆಗಳಲೈದಿತ್ತು ಬಿಲ್ಲಾಳುಭಯಸೇನೆಯಲಿ ೧೧

ಬೊಬ್ಬಿರಿದು ಮೊಳಕಾಲನೂರಿದ
ರುಬ್ಬಟೆಯಲಿದಿರಾಂತು ಕಾಲನ
ಹೆಬ್ಬೆಳಸು ಹುಲಿಸಾಯ್ತು ಬರಹೇಳೆಂಬವೋಲೊದರಿ
ಹಬ್ಬುಗೆಯ ಜೇವೊಡೆಯ ಝಾಡಿಯ
ತೆಬ್ಬುಗಳ ತೆಗೆವೆರಳುಗೋಲಿನ
ಕೊಬ್ಬಿನಾಳೆಚ್ಚಾಡಿತಿಕ್ಕಿದ ಮಂಡಿ ಚಂಡಿಸದೆ ೧೨

ಬೆರಳ ಶರಸಂಧಾನ ದೃಷ್ಟಿಯ
ಮುರಿದ ಮುಷ್ಟಿಯ ಕುಂಡಲಿತ ಕಿವಿ
ವರೆಯ ತೆಗಹಿನ ತೋಳ ವೀರರು ತೂಳಿದರು ಕಣೆಯ
ಅರರೆ ಕವಿಕವಿದಂಬು ಕಡಿದವು
ಕೊರಳನುಗಿದವು ಜೋಡನೊಡಲೊಳು
ಹೊರಳಿದವು ಹೊಡೆಗೆಡಹಿದವು ಹೊಕ್ಕೆಸೆವ ಹೂಣಿಗರ ೧೩

ಕಣೆ ಕಣೆಯ ಹಳಚಿದವು ಮಾರ್ಗಣೆ
ಕಣೆಯ ಕಡಿದವು ಕವಿಯ ಕಣೆ ಕಿರು
ಗಣೆಯ ಮುಕ್ಕುಳಿಸಿದವು ಹೆಕ್ಕಳಿಸಿದವು ಹಂದೆಗರ
ಖಣಿಖಟಿಲು ದೊಪ್ಪನೆ ಕೊಯ್ವ ಸೀಳುವ
ಹೆಣಗೆಡಹುವಬ್ಬರಕೆ ಮಿಗಿಲೊದಗಿದರು ಬಿಲ್ಲವರು ೧೪

ಉರಗಬಲದುರವಣೆಯೊ ವಾರಿದ
ತರುಗಳುಪಶಾಖೆಗಳೊ ಕಾಲನ
ಹರವರಿಯೊ ಹೆಬ್ಬೆಳೆಸ ಮುತ್ತುವ ವಿಹಗಸಂತತಿಯೊ
ತರಣಿ ತಲ್ಲಣಿಸಿದನು ಹೊಗರಲ
ಗುರವಣಿಸಿ ಹೊದರೆದ್ದು ಹಿಳುಕ
ಬ್ಬರಿಸಿ ಗಬ್ಬರಿಸಿದುವು ದಿಗುತಟವನು ಶರವ್ರಾತ ೧೫

ಹೆಣಗಿ ಹಿಣಿಲಿರಿದಭ್ರದಲಿ ಸಂ
ದಣಿಸಿ ಕಣೆ ಕೈಕೊಂಡವಂಬರ
ಮಣಿಗೆ ನಡೆದುದೊ ತಿಮಿರರಾಜನ ದಂಡು ಮಂಡಳಿಸಿ
ಮಣಿಮಕುಟದಿಳೆಗೊಯ್ಲನೆಲದಾ
ವಣಿಯೊ ಗಗನಾರ್ಣವದ ವಾಡಬ
ಗಣವೊ ಕೌತುಕವೆನಿಸಲೆಚ್ಚಾಡಿದರು ಬಿಲ್ಲವರು ೧೬

ರೇಣು ಹತ್ತಿದ ರವಿಯ ಮಸೆಯಲು
ಸಾಣೆಗಿಕ್ಕಿತೊ ಭಗಣರತ್ನವ
ನಾಣಿಗಳೆಯಲು ಕಮಲಭವ ಸೃಜಿಸಿದ ಸಲಾಕೆಗಳೊ
ಕಾಣೆನಭ್ರವನಮಮ ದಿಕ್ಕುಗ
ಳೇಣು ಮುರಿಯಲು ಹೊಕ್ಕೆಸುವ ಬಿಲು
ಜಾಣರುರವಣೆ ಲಜ್ಜಿಸಿತು ಲೋಕದ ಧನುರ್ಧರರ ೧೭

ವೀರ ಧಣುಧಣು ಪೂತುರೇ ಬಿಲು
ಗಾರ ಮಝರೇ ಚಾಪತಂತ್ರವಿ
ಶಾರದಾ ಎನುತೊಬ್ಬರೊಬ್ಬರ ಬಿರುದ ಮೂದಲಿಸಿ
ಓರಣದ ಕಣೆಗಳಲಿ ತಲೆಗಳ
ತೋರಣವ ಕಟ್ಟಿದರು ಸೇನಾ
ಮಾರನಾಧ್ವರವೆಸೆದುದರುಣಜಲಾಜ್ಯಧಾರೆಯಲಿ ೧೮

ಪ್ರಳಯದಿವಸದ ಪಟುಪವನನೀ
ಹಿಳುಕುಗಾಳಿಯೊಳುದಿಸಿದುದೊ ಮಿಗೆ
ಮೊಳಗಿ ಮೋದುವ ಸಿಡಿಲ್ಗಳಂಬಿನ ಮೊನೆಯೊಳುದಿಸಿದುದೊ
ಜಲಧಿಯಲಿ ಜಂಗುಳಿಸಿ ಕುಧರಕೆ
ಕುಲಿಶಭೀತಿಯ ಬೀರಿ ಕಣೆ ಬಳಿ
ಸಲಿಸಿ ಹರಿದಾಡಿದವು ಸುಭಟರ ಗೋಣ ಗುರಿಮಾಡಿ ೧೯

ಕುಣಿದೆಸುವ ಕುಕಿಲಿರಿವ ಬಿರುದರ
ನಣಕಿಸುವ ಬಲುಬಿಲ್ಲನೊದರಿಸಿ
ಹಣುಗಿ ಕಣು ನಟ್ಟಾಲಿಗೊಳೆ ತಳಮಂಡಿ ಮರನಾಗೆ
ಹೊಣಕಿಗರು ರಣದವಕಿಗರು ಬಿರು
ಗಣೆ ಸವೆಯಲೆಚ್ಚಾಡಿದರು ಮಿಗೆ
ಮಣಿಯದದಟರು ಸುರಗಿಗಳನುಗಿದೊಡನೆ ಹಳಚಿದರು ೨೦

ಅಹಿಯ ನಾಲಗೆ ಮೃತ್ಯುವಿನ ಹಲು
ಗುಹೆಗಳನು ಕಳೆದಂತೆ ಸಿಡಿಲಿನ
ಬಹಳ ಧೃತಿಗೆಡೆದಂತೆ ಕುಲಿಶದ ತಿರುಳ ಮಸೆದಂತೆ
ಮಹಿಯದಿರಲಿದಿರಾಂತು ಸುರಗಿಯೊ
ಳಹಮಿನದಟರು ಬಿರುದುಗೆದರು
ತ್ತಹಿತರಿರಿದಾಡಿದರು ಪಡೆದರು ರೌದ್ರರಂಜನೆಯ ೨೧

ಮೀರಿ ತಳಸಂಚದೊಳು ಮೊನೆಯನು
ತೋರಿ ತಿರುಪಿನೊಳಣೆದು ಕಳಚುವ
ರೇರುಗಾಣದೆ ಮಧ್ಯಸಂಚಕೆ ಸಿಲುಕಿ ಕೈಮಾಡಿ
ಜಾರಿ ಸುರಗಿಯೊಳಣೆವರಳುಕದೆ
ಮೀರಿದುಪ್ಪರಸಂಚದಲಿ ಕೈ
ದೋರಿ ದಂಡೆಯನೆತ್ತಿ ಕಾದಿತು ಸುರಗಿಯತಿಬಲರು ೨೨

ಅಣೆದರೌಕುವ ಸೋಂಕಿ ತಿವಿದರೆ
ಹೆಣನ ತೋರುವ ಹಜ್ಜೆದೆಗೆದರೆ
ಜುಣಗಲೀಯದೆ ಮೇಲೆ ಕವಿಸುವ ಮೀರಿ ಕೈಮಾಡಿ
ಕೆಣಕಿದರೆ ಝಂಕಿಸುವ ನಿಟ್ಟಿಸಿ
ಹಣುಗಿ ಮೊನೆಗೊಡೆ ದಂಡೆಯೊಳು ಖಣಿ
ಖಣಿಲು ರವವೆಸೆಯಲ್ಕೆ ಕಾದಿತು ಸುರಗಿಯತಿಬಲರು ೨೩

ಬೀಯವಾದರು ಬಿಲ್ಲವರು ಖ
ಳ್ಗಾಯುಧರು ಕೈಕೊಳಲಿ ದಿವಿಜ
ಶ್ರೀಯು ತಪ್ಪದು ಸಮರಮುಖದಲಿ ಮಡಿದ ವೀರರಿಗೆ
ರಾಯ ಮೆಚ್ಚಲು ರಣದೊಳೊದಗುವ
ರಾಯತಿಕೆಯಂತೆನುತ ಸೇನಾ
ನಾಯಕರು ನೂಕಿದರು ಖಂಡೆಯಕಾರ ಮೋಹರವ ೨೪
ತಾಟಿಸಿದರೊಡನೊಡನೆ ಕುಲಗಿರಿ
ದೂಟಿ ಬಿದ್ದವು ಚಿತ್ರದಲಿ ನಡೆ
ಗೋಟೆಯೆನೆ ಮಂಡಳಿಸಿ ಬಲಿದರು ತೆಕ್ಕೆವರಿಗೆಗಳ
ನೋಟದಮರರ ನಯನಗಳಿಗ
ಲ್ಲಾಟವೆನೆ ಪಯಚಕ್ರಗತಿಗಳ
ತೋಟಿಕಾರರು ಹೊಕ್ಕು ತಾಗಿದರುಭಯ ಸೇನೆಯಲಿ ೨೫

ಬಲಸಮುದ್ರದ ಬುದ್ಬುದಂಗಳೊ
ತಿಳಿಯಲರಿದೆನೆ ಹರಿಗೆ ಮುಸುಕಿತು
ಬಿಳಿಯ ಚೌರಿಗಳುಲಿವ ಘಂಟೆಯ ಬಿರುದಿನುಬ್ಬಟೆಯ
ತಲಪಟದೊಳೌಕಿದರು ತೊಡೆಸಂ
ಕಲೆಯ ತೊಲಗದ ಕಂಭದಪ್ರತಿ
ಬಲರು ಹಾಣಾಹಾಣಿಯಲಿ ಹೊಯಿದಾಡಿದರು ಕಡುಗಿ ೨೬

ಸಿಡಿಲ ಹೆತ್ತುದೊ ಜಡಿವ ನಿಸ್ವನ
ಕಡುಹೊಗರು ಬೆಸಲಾಯ್ತೊ ನಭವನು
ಹೊಡೆಗೊಳಿಸಲುಚ್ಚಳಿಪ ಕಿಡಿ ವಡಬಂಗೆ ಪಿತನೆನಲು
ಕುಡಿಮೊನೆಯೊಳಹಿಪತಿಯ ನಾಲಗೆ
ಗಡಣವುದಿಸಿದವೆನೆ ಕೃಪಾಣದ
ಕಡುಹು ಕೌತುಕವಾಯ್ತು ಖಂಡೆಯಕಾರ ಮೋಹರದ೨೭

ಕರೆಕರೆದು ಮೂದಲಿಸಿ ಕಡುಹಿನ
ದುರುಳರುಬ್ಬಿನ ಮೇಲೆ ಹೊಕ್ಕ
ಬ್ಬರಿಸಿ ಹೊಯಿದರು ಕಾದಿ ಕೊಂಡರು ಕಾಲನರಮನೆಯ
ಕರುಳುಗಿಯೆ ತಲೆ ಸಿಡಿಯೆ ನಿಟ್ಟೆಲು
ಮುರಿಯೆ ಮೂಳೆಗಳುದಿರೆ ಶೋಣಿತ
ಸುರಿಯೆ ಕಾಳಿಜ ಕೆದರೆ ತುಂಡಿಸಿ ಖಂಡ ಬೆಂಡೇಳೆ ೨೮

ಅಡಸಿ ಕಿಡಿಗಳ ಕಾರೆ ಲೋಹದ
ಕಡಿಕು ಸಿಡಿಲುಗ್ಗಡದಲಡ್ಡಣ
ವೊಡೆದು ಕೈಬಂದಿಗೆಯನೆತ್ತಿದಡಿಕ್ಕಲಿಸಿ ಬೀಳೆ
ಫಡ ಸುಖಾಯವ ಬಿಡದಿರಿಮ್ಮೊನೆ
ಗೊಡದಿರುಪ್ಪರದಲ್ಲಿ ಕೈಯನು
ಕೊಡದಿರಾ ಮಿಡುಕದಿರು ಮಂಡಿಯನೆನುತ ಹಳಚಿದರು ೨೯

ಕಾಲು ಖಂಡಿಸಿ ಬೀಳೆ ಕರುಳಿನ
ಮಾಲೆಯೊಳು ತೊಡಕಿದವು ಹಣಿದವ
ಬಾಳೆಯಂದದೊಳುಡಿಯೆ ತೊಡೆ ನಡು ಮುರಿಯೆ ಕಟಿ ಕೆದರೆ
ತೋಳ ಕೊರೆದರು ನೆಲಕೆ ತಲೆಯನು
ಬೀಳಿಕಿದರೆರಡಾಗಿ ತನುವನು
ಸೀಳುಹೊಯಿದರು ಬೈದು ತಾಗಿತು ಹರಿಗೆಯತಿಬಲರು ೩೦

ನಿಲುಕಲಿಟ್ಟೆಡೆಯಾದ ಹೆಣನನು
ತುಳಿದು ರಣದಲಿ ಕುಣಿವ ಮುಂಡವ
ನೆಳದು ರುಧಿರದೊಳೌಕಿ ಮೆಟ್ಟುವ ಮುಂದೆ ನಡೆನಡೆದು
ತಲೆಮಿದುಳ ಜೊಂಡಿನಲಿ ಜಾರುವ
ಕಲಹಕಲಾತರರಿಪುಭಟರನ
ಪ್ಪಳಿಸಿ ಘಾಯಂಬಡೆದು ಮಗ್ಗಿದರುಭಯಸೇನೆಯಲಿ ೩೧

ಉರುಳಿ ಬೀಳುವ ತಮ್ಮ ತಲೆಗಳ
ತಿರುಹಿ ರಿಪುಗಳ ನಿಡುವ ಸಡಿಲಿದ
ಶಿರವನರಿಯದೆ ಮುಂಡದಿದಿರಲಿ ಬೀದಿವರಿವರಿವ
ಹರಿಗೆ ಹೊಳ್ಳಿಸೆ ಖಡುಗ ಖಂಡಿಸೆ
ಕೊರಳರಿಯೆ ದೆಸೆದೆಸೆಯ ಸೇನೆಯೊ
ಳುರವಣಿಸಿ ತಿವಿದರು ಕಬಂಧದೊಳತುಳಭುಜಬಲರು ೩೨

ನೆಲಕೆ ನಿಗುರುವ ಗಂಗೆವಾಳದ
ಬಿಳಿಯ ಚೌರಿಗಳುಲಿವ ಗಂಟೆಯ
ತೊಳಪ ಬದ್ದುಗೆ ದಾರ ಕಾಂಚನಮಯದ ಗೊಂಡೆಯದ
ಉಲಿವ ಗೆಜ್ಜೆಯ ಚೆಲ್ಲಣದ ಹೊಂ
ಬಳಿದ ಹರಿಗೆಯ ಹೊಳೆವ ಕಡಿತಲೆ
ಗಳ ವಿಲಾಸದೊಳಂದು ಹೊಕ್ಕುದು ತುಳುವ ಪಡೆ ಕಡುಗಿ ೩೩

ಉರುಬಿದರೆ ವಡಬಾನಲನ ಮುಖ
ದಿರವು ಮೊನೆದೋರಿದರೆ ಭುಜಗನ
ಬಿರುಬು ಸಾಲಗೆ ಹಲಗೆಯಣೆದರೆ ಸಿಡಿಲ ಸಡಗರಣೆ
ಮೆರೆವ ಹಜ್ಜೆಯ ದಂಡೆವಲಗೆಯ
ಮರೆಯ ಕೈದಂಡೆಗಳ ಜುಣುಗಿಸಿ
ತರುಬಿ ನಿಂದರು ಸಂದ ಕಡಿತಲೆಗಾರರುಭಯದಲಿ ೩೪

ಹಳಚಿದರು ತಗರಂತೆ ಗಜದವೊ
ಲೊಲೆದು ನಿಂದರು ಹಾವಿನಂತಿರೆ
ನಿಲುಕಿದರು ಸೂಕರನವೊಲು ಕೋಡೆತ್ತಿ ಹಾಯ್ಕಿದರು
ಬಲಿದ ಚರಣಾಯುಧದವೊಲು ಪರ
ರಳವನೀಕ್ಷಿಸಿ ಕಪಿಯವೊಲು ಮೈ
ವಳಿಯ ಹತ್ತಿದರಂದು ಕಡಿತಲೆಗಾರರುಭಯದಲಿ ೩೫

ಕಡಿತಲೆಯ ಮಿಂಚುಗಳ ಹೊಯ್ಲಿನ
ಸಿಡಿಲುಗಳ ರಕ್ತಪ್ರವಾಹದ
ಕಡುವಳೆಯ ನೃತ್ಯತ್ಕಬಂಧದ ಸೋಗೆನವಿಲುಗಳ
ಬಿಡುಮಿದುಳ ಹೊರಳಿಗಳ ಹಂಸೆಯ
ನಡಹುಗಳ ನವಖಂಡದೊಳು ಹೆಣ
ನಡವಿ ತಳಿತಿರೆ ಮೆರೆದುದೈ ಸಂಗ್ರಾಮಕಾರ್ಗಾಲ ೩೬

ಪಡಿತಳವ ಬೀಸಿದರೆ ಕಾಲಿ
ಕ್ಕಡಿ ನಡುವ ತಾಗಿದರೆ ಮಂಡಲ
ವುಡಿದು ಬಿದ್ದುದು ನಿಲುಕಿನುಪ್ಪರ ಶಿರವ ಮನ್ನಿಸದು
ಮಡವ ಮೀರುವ ಕಚ್ಚಿಮಂಡಿಯ
ಪಡಿದೊಡೆಯ ತಲೆಮರೆಯ ಹರಿಗೆಯ
ಕಡಿತಲೆಯ ಕಲಿತುಳುವಪಡೆ ಹೊಯ್ದಾಡಿತಿಳೆ ಹಿಳಿಯೆ ೩೭

ಖಡುಗ ತೋಮರ ಪರಶುಗಳ ಕ
ಕ್ಕಡೆಯ ಕುಂತದ ಪಿಂಡಿವಾಳದ
ಕಡುಗಲಿಗಳುರೆ ಮಗ್ಗಿದರು ತಗ್ಗಿದುದು ಯಮಲೋಕ
ಬಿಡದೆ ನಾಯಕವಾಡಿ ಚೂಣಿಯ
ಹಿಡಿದು ಕಾದಿತ್ತುಭಯರಾಯರು
ದಡಿಯಕೈಯವರಿಂದ ಕವಿಸಿದರಂದು ಸಬಳಿಗರ ೩೮

ಕುಣಿವ ತೊಡರಿನ ಪೆಂಡೆಯದ ಡೊಂ
ಕಣಿಯ ಬಿರುದರ ನೂಕುನೂಕೆನೆ
ಹಿಣಿಲ ಬಾವುಲಿಗಾರರಾವೆಡೆ ಭಾಷೆಯತಿಬಳರು
ಹೊಣಕೆಯಿದಲೇ ಹಿಂದ ಹಾರದಿ
ರಣಕಿಸುವ ಮಾತಿಲ್ಲ ದಿವಿಜರ
ಗಣಿಕೆಯರು ಬಯಸುವರು ನೂಕುವದೆಂದು ಸಾರಿದರು ೩೯

ತಲೆಯ ಖಡ್ಡಣಿಗೆಯ ಸುರಂಗದ
ಪಳಿಯ ಸೀರೆಯ ಭಾಳಭೂತಿಯ
ಬಿಳಿಯ ಚೌರಿಯ ಝಗೆಯ ಸಬಳದ ಕಾಲ ತೊಡರುಗಳ
ಉಲಿವ ಬಿರುದಿನ ಕಹಳೆಗಳ ಕಳ
ಕಳಿಕೆ ಮಿಗೆ ನಿಶ್ಶಂಕಮಲ್ಲರು
ಕಳನೊಳಗೆ ತಲೆದೋರಿದರು ಡೊಂಕಣಿಯ ಪಟುಭಟರು ೪೦

ನಡೆವಡವಿಯೋ ಬಲುಭುಜರ ಪಂ
ಗಡವೊ ಸಬಳವೊ ನಭದ ಕಾಲ್ಗಳೊ
ಬಡಬವಹ್ನಿಜ್ವಾಲೆಯೋ ಸೇನಾಮಹಾಂಬುಧಿಯೊ
ಪಡೆಯ ಪದಹತಧೂಳಿ ಸವೆಯಲು
ಪೊಡವಿಪಾತಾಳದ ಫಣಿವ್ರಜ
ವಡರಿದವೊ ರವಿಬಿಂಬಕೆನಲಾದುದು ಕುತೂಹಲಿಕೆ ೪೧

ಮಿಕ್ಕು ಚೂರಿಸಲಹಿಯ ನಾಲಗೆ
ಜಕ್ಕುಲಿಸಿದಂತಾಯ್ತು ಮೊನೆಗಳ
ತೆಕ್ಕೆಯಲಿ ಕುದಿಗೊಂಡು ಸುರಿದವು ರಕ್ತಧಾರೆಗಳು
ಹೊಕ್ಕವರು ಹೆಣಗಿದರೆ ನಿರಿಗರು
ಳೊಕ್ಕವಡಗುದಿರಿದವು ಮೋಹರ
ಹಕ್ಕಲಾಗಲು ಹರಿದು ಸಬಳಿಗರಿರಿದು ತೋರಿದರು ೪೨

ನೆಲನ ಗೆಲಿದಬ್ಬರಿಸಿ ಚಾಚಿದ
ತಲೆವರಿಗೆ ತೆರಳದೆ ಸುಘಾಯದ
ಬಲದ ಬೆಳೆಸಿರಿವಂತರನು ಕರೆಕರೆದು ಮೂದಲಿಸಿ
ಥಳಥಳಿಲು ಛಟಛಟಿಲು ಖಣಿಕಟೆ
ಲುಲುಹು ಮಿಗೆ ಧನಿ ಮೆರೆಯೆ ರಿಪುಗಳ
ಗೆಲುವೆವೆಂದುರವಣಿಸಿ ಹೊಯ್ದಾಡಿದರು ರಣದೊಳಗೆ (ಜಿ)

ಹಲಗೆ ಸೀಸಕ ಸಹಿತಲಿಖ್ಖಡಿ
ಗಳೆದರೊಡಲುಪ್ಪರದ ಘಾಯವ
ಕಳಚಿ ಕೈಮಾಡಿದರು ಕೊಂದು ಮುಂದುವರಿವರಿದು
ಹೊಳೆದು ಹೊಯ್ದರು ಮಿಂಚಿನಂತಿರೆ
ಬಲುಹು ಮಿಗೆ ಜವನಂತೆ ಬವರಿಯ
ಲುಳಿಯ ಚೌಪಟ ಮಲ್ಲರೊದಗಿದರುಭಯಸೇನೆಯಲಿ (ಜಿ)

ಬವರಿಯಲಿ ಪೈಸರಿಸಿ ಪರಘಾ
ಯವನು ವಂಚಿಸಿ ಭಟರ ಕೊರೆದೆ
ತ್ತುವರು ಕೈಮಾಡಿದರೆ ತಿವಿವರು ಕೋಡಕೈಯವರು
ಕವಿಯಲೌಕುವರೌಕಿದರೆ ತ
ಗ್ಗುವರು ತಗ್ಗಿದರೊಡನೊಡನೆ ಜಾ
ರುವರು ಜುಣುಗುವರೈದೆ ತಿವಿದಾಡಿದರು ಸಬಳಿಗರು ೪೩

ಹೆಣನ ಹೋಳಿನ ಸಿಡಿದಡಗು ಡೊಂ
ಕಣಿಯೊಳೆಸೆದುವು ಕಾಲನಾರೋ
ಗಣೆಗೆ ಮಿಗೆ ಪಡಿಸಣವ ನೋಡದೆ ಮಾಣವೆಂಬಂತೆ
ಕುಣಿವ ಕುಂತಾಗ್ರದಲಿ ಜೋಲುವ
ಹಿಣಿಲುಗರುಳೊಪ್ಪಿದವು ಜವನೀ
ರಣಕೆ ಬರೆ ಕಟ್ಟಿದವು ಗುಡಿ ತೋರಣವನೆಂಬಂತೆ ೪೪

ದೆಸೆದೆಸೆಗೆ ಹರಿಹರಿದು ಮಾಮಸ
ಮಸಗಿ ಬಾದಣಗೊರೆದು ಕೆಡಹುವ
ವಿಷಮವೀರರು ಘಾಡಿಸಿತು ಡೊಂಕಣಿಯ ತುದಿಗಳಲಿ
ಬಸಿವ ಹೊಸ ರುಧಿರಕ್ಕೆ ಜೋಲುವ
ಕುಸುರಿಗರುಳಿಂದುದಿರುವಡಗಿನ
ಬಸೆಗೆ ಬಂದೆರಗಿದವುಲೂಕಧ್ವಾಂಕ್ಷಸಂದೋಹ ೪೫

ಧುರದೊಳಗೆ ಬಿಲುಗಾರರೊಗ್ಗಿನ
ಹರಿಗೆಕಾರರು ಹಲಗೆಯವರು
ಬ್ಬರದ ಡೊಂಕಣಿಕಾರರಾಂತು ಕೃತಾಂತನಾಲಯವ
ಥರಥರದಿ ತೀವಿದರು ರುಧಿರದ
ಹರಹು ಹೇರಾಳಿಸಿತು ಚೂಣಿಯೊ
ಳೆರಡು ಬಲದ ಪದಾತಿ ಸವೆದುದು ಕೇಳು ಧೃತರಾಷ್ಟ್ರ ೪೬

ಧುರವನವ ಸಾಗಿಸದಿರೇರಲಿ
ತುರಗವಾವೆಡೆ ಪಟ್ಟಸಹಣದ
ಹಿರಿಯ ಸಹಣದ ವಿಮಲಸಹಣಿಗಳವರ ಕರೆಯೆನುತ
ಧುರಧುರಂಧರರೊರಲಿದರು ಮೋ
ಹರಮಹಾಂಭೋನಿಧಿಯ ತೆರೆಯವೊ
ಲುರವಣಿಸಿದವು ಕುದುರೆ ತಾರೆಗಳುದಿರೆ ನೆಲನದಿರೆ ೪೭

ಬರಿಗಡಗ ಕೀಳ್ಕಂಬಿ ದುಕ್ಕುಡಿ
ಯುರುಗುಗಡಿಯಣ ಮೊಗವಡಂಗಳು
ತುರುಗವದನದಲೊಪ್ಪಿರಲು ತಾ ಪಣೆಯನಳವಡಿಸಿ
ಕೊರಳ ಕೊಡಕೆಯ ಪಾರ್ಶ್ವಪೇಚಕ
ದೆರಡು ಕಡೆಯಲಿ ಸುತ್ತು ಝಲ್ಲಿಯ
ಪರಿಪರಿಯ ಹಕ್ಕರಿಕೆಯಲಿ ಬೀಸಿದರು ಚೌರಿಗಳ ೪೮

ಹಳದಿ ಪಾರಿಯ ಪಚ್ಚೆ ಜೋನೆಗ
ಪಳಿ ಸುವರ್ಣಾವಳಿಯ ಸಂಧ್ಯಾ
ವಳಿಯುದಯರಾಗದಲಿ ರಚಿಸಿದ ಹಕ್ಕರಿಕ್ಕೆಗಳ
ಕೆಲಬಲದ ಕುಣಿಕೆಗಳ ರಚಿಸಿದ
ರುಲಿವ ಘಂಟೆಯ ಮೊಗದ ಕನ್ನಡಿ
ಗಳ ವಿಲಾಸದಲಂದಲಂಕರಿಸಿದರು ತೇಜಿಗಳ ೪೯

ಸವಗ ಮೊಚ್ಚೆಯ ಬಾಹುರಕ್ಕೆಯ
ವಿವಿಧವಜ್ರಾಂಗಿಗಳ ಸೀಸಕ
ಕವಚಗಳ ತೊಟ್ಟತುಳಬಲರೇರಿದರು ತೇಜಿಗಳ
ಹವಣಿಸಿದ ವಾಘೆಗಳ ರಾಘೆಯ
ಸವಸರಿಯ ಭಾರಾಂಕಲವುಡಿಯ
ಗವಿಯ ಗರುವರು ನೂಕಿದರು ತೇಜಿಗಳನೋಜೆಯಲಿ ೫೦
ತರುಣಿಯರ ನೊಸಲಂತೆ ತಿಲಕದ
ಸರಿಸವದು ವೈವಾಹಗೇಹದ
ಸಿರಿಯವೊಲು ಮಂಗಳಮಯವು ಮಲೆಯಾಳ ಜನಪದದ
ಅರಸಿನಂತಿರೆ ಚೇರಮಯವೆನ
ಲುರವಣಿಸಿ ನೂಕಿದರು ನಿಡುವ
ಕ್ಕರಿಕೆಗಳ ಗುರವಾಯಿಗಳ ಘನಮದದ ತೇಜಿಗಳ ೫೧

ನಿಲುಕಿ ಹೊಳೆದವು ನೇಣ ಸಡಿಲಿಸೆ
ಕುಲಗಿರಿಯ ಹೆಡತಲೆಯನಡರಿದ
ವಳುಕಿ ಪಯಸನ್ನೆಗಳೊಳಭ್ರದ ಕುಡಿಯನಡರಿಸುತ
ದಳವುಳಿಸಿದವು ತಾಟಿಸಿದರೊಡೆ
ದುಳಿದವಖಿಳಾವನಿಯನೆನೆ ಮೈ
ಲುಳಿಯ ಮನವೇಗಾಯ್ಲ ವಾಜಿಯ ಥಟ್ಟ ನೂಕಿದರು ೫೨

ಖುರಪುಟದ ಕೆಂಧೂಳಿ ಬಂಧಿಸೆ
ತರಣಿಯನು ಪವಮಾನಮಾರ್ಗವ
ನರರೆ ಕಟ್ಟಿತು ತುಳಿದುದಿಂದ್ರನ ಸಾವಿರಾಲಿಗಳ
ಹರಿಸಬುದ ತನಗಿಲ್ಲದಿನ್ನೀ
ತರಣಿವಾಯುಸುರೇಂದ್ರರಿಗೆ ಸಂ
ಚರಿಸಲೇಕೆಂಬಂತೆ ನಡೆದವು ಘೋಟಕವ್ರಾತ ೫೩

ಖುರದ ಹೊಯಿಲಲಿ ನಡುಗಿತಿಳೆ ಫಣಿ
ವರನ ಹೆಡೆಗಳು ನೊಂದವಂಬುಧಿ
ಹೊರಳಿದವು ಹೋಗಾಡಿದವು ಕುಲಗಿರಿಗಳಚಲತೆಯ
ಅರರೆ ಸೂಟಿಯೊಳಟ್ಟಿದರೆ ದಿ
ಕ್ಕರಿಯ ಸೊಕ್ಕಡಗಿದವು ನಿಗುರುವ
ತುರಗದಳವೊಡವೆರಸಿದವು ಕುರುಪಾಂಡುಸೈನ್ಯದಲಿ ೫೪

ಹಿಡಿಯೆ ಜವನಿಕೆ ಸಮರ ಮೋನದ
ಬಿಡುದಲೆಯ ಬಿರುದಾವಳಿಯಲು
ಗ್ಗಡಣೆಗಳ ಸೋಲಿಸುವ ತಮ್ಮನ್ವಯವ ಪಾಲಿಸುತ
ಝಡಿವ ದೂಹತ್ತಿಗಳ ಹಾಯಿಕಿ
ಹಿಡಿವ ಲೌಡಿಯ ಹತ್ತಳದ ತನಿ
ಗಡಣಿಗರು ಮೂದಲಿಸಿ ಕವಿದುದು ರಾಯರಾವುತರು ೫೫

ನೂಲ ಹರಿಗೆಯ ಹೆಗಲ ಬಾರಿಯ
ತೋಳ ತೋರಿಯ ಲೌಡಿಗಳ ಕರ
ವಾಳತಳಪದ ಮಿಂಚುಗಳ ತನುಮನದ ಕೆಚ್ಚುಗಳ
ಸಾಲದಾವಣಿದಲೆಯ ಗಂಟಲ
ಗಾಳಗತ್ತರಿಗರಗಸದ ಬಿರು
ದಾಳಿಗಳ ಛಲದಂಕರಾವುತರೊತ್ತಿ ನೂಕಿದರು ೫೬

ಹೊಡೆದು ಚಮ್ಮಟಿಗೆಯೊಳು ದೊರೆಗಳ
ಹಿಡಿವ ಸಮ್ಮುಖದಲಿ ಕಠಾರಿಯ
ನಡಸಿ ತಿವಿವ ಕೃಪಾಣದಲಿ ಕಡಿನಾಲ್ಕ ತೋರಿಸುವ
ಅಡತರದಲವನಿಪರ ಹಯಮುಂ
ಗುಡಿಯ ಮುರಿದು ವಿಘಾತಿಯಲಿ ಥ
ಟ್ಟೊಡೆದು ಹಾಯ್ವತಿಭಾಷೆಗಳ ಬಿರುದಂಕರೇರಿದರು ೫೭

ಉಲಿವ ಕೈವಾರಿಗಳ ಲಗ್ಗೆಯ
ಬಲಿವ ತಂಬಟ ಕೋಟಿಗಳ ಭುಜ
ಬಲದ ಬಿರುದರ ಹೊಯ್ಲುಗಳ ನಿಸ್ಸಾಳನಿಸ್ವನದ
ಘುಳುಘುಳಿಪ ಬೊಗ್ಗುಗಳ ರಿಪುಗಳ
ಮುಳಿಯಿಸುವ ಕಹಳೆಗಳ ತುರಗಾ
ವಳಿಯ ಗಜರಬ್ಬರಣೆ ಮಿಗೆ ಕೈಕೊಂಡರತಿಬಳರು ೫೮

ಹೊಡೆವ ದೂಹತ್ತಿಗಳ ಘಾಯದ
ಲೊಡೆದು ಸಿಡಿದುವು ಲೋಹ ಸೀಸಕ
ವಡಸಿ ಬಲ್ಲೆಹ ಬಗಿದು ನಟ್ಟುದು ಸರಪಣಿಯ ಝಗೆಯ
ಹೊಡೆವ ಲೌಡಿಗಳೊತ್ತಿ ನೆತ್ತಿಯ
ಬಿಡುಮಿದುಳ ಕೆದರಿದವು ರಕುತದ
ಕಡಲು ಕಡಲನು ಕೂಡೆ ಹೊಯ್ದಾಡಿದರು ರಾವುತರು ೫೯

ಜರೆದು ಸರಿಸದಲೇರಿದರೆ ಸಿಡಿ
ಲುರುಬಿದಂತಾಯಿತ್ತು ಘಾಯವ
ನರುಹಿದರೆ ದೂಹತ್ತಿ ರಾವ್ತರ ಮಸ್ತಕದೊಳಿಳಿದು
ಕೊರೆದುದಿಳೆಯನು ಹಯವ ನೂಕಿದ
ಡೊರಲಿದರು ತಳಕಮಠನೆನೆ ತ
ತ್ತರದರಿದು ಹೊಯ್ದಾಡಿದರು ಗುಜ್ಜರದ ರಾವುತರು ೬೦

ಎಡನ ಹೊಯಿದರು ಬಲದವರನಡ
ಗೆಡಹಿದರು ಸಮ್ಮುಖದ ನೃಪರನು
ಸಿಡಿಲ ಹರೆಯವೊಲೆರಗಿದರು ಸೂಟಿಯಲಿ ಸೈವರಿದು
ಅಡಗುದುಳಿದರು ಮೋಹರವನೊ
ಗ್ಗೊಡೆದು ಚೂಣಿಯ ಗೋಣ ಬನದಲಿ
ಖಡುಗ ನರ್ತಿಸಲೊದಗಿದರು ಮಾಳವದ ರಾವುತರು ೬೧

ಬೀಸುನೇಣಿನ ಸೆಳೆವ ನೇಗಿಲ
ಸೂಸುಗಣೆಗಳ ಕಡಿವ ಕೊಡಲಿಯ
ಕೈಸುರಗಿ ಸೂನಗೆಯ ನಾನಾಯುಧದ ಗಡಣೆಗಳ
ಓಸರಣೆಗೊಡದತಿಬಳರು ದಿವ
ದಾಸೆಗಾರರು ವೈರಿಬಲವನು
ಘಾಸಿಮಾಡಿದರೊಗ್ಗಿನಲಿ ಹಮ್ಮೀರರಾವುತರು ೬೨

ಅರರೆ ಕವಿದರು ಕದಳಿಯನು ಮದ
ಕರಿಯು ತೊತ್ತಳದುಳಿದವೊಲು ದಿಂ
ಡುರುಳಿಚಿದರಗಕೋಟಿಯನು ಶತಮನ್ಯುವಂದದಲಿ
ಶಿರವೊಡೆಯೆ ತೊಡೆಯುಡಿಯೆ ಕೈ ಕ
ತ್ತರಿಸೆ ಕೋಳಾಹಳ ಮಹಾಸಂ
ಗರದೊಳಗೆ ಹೊಯ್ದಾಡಿದರು ಕಾಶ್ಮೀರರಾವುತರು ೬೩

ಕವಿದು ಮುಂದಲೆವಿಡಿದು ರಾವ್ತರ
ತಿವಿದು ಜೀವವ ಕಳಚಿ ಕೆಲಬಲ
ದವರ ಕೆಡೆಹೊಯ್ದಹಿತಘಾಯವ ನೋಟದೊಡೆಹೊಯ್ದು
ಸವಗ ತುಂಡಿಸೆ ಜೋಡು ಖಂಡಿಸೆ
ನವರುಧಿರದೊರವೇಳೆ ಮಹದಾ
ಹವದೊಳೋರಂತೊದಗಿದರು ಗೌಳವದ ರಾವುತರು ೬೪

ಅಳವನರಿಯದೆ ಕೆಣಕಿತಹ ಮುಂ
ಕೊಳಿಸಿ ಕದನವ ಕೋಡ ಕೈಯವ
ರಳವಿಗೊಟ್ಟರೆ ನೋಡಿ ಸಿಡಿಮಿಡಿಗೊಂಡು ಕೆಲಸಿಡಿವ
ಗೆಲಿದರುತ್ಸಾಹಿಸುವ ಸಿಲುಕಿದ
ರಳುವ ಕೆಟ್ಟೋಡಿದರೆ ಪುರದಲಿ
ನಿಲುವ ನಿರುಪಮವೀರರೊದಗಿತು ತಿಗುಳರಾವುತರು ೬೫

ಬವರ ಸವೆಯದೆ ತೇಜಿಗಳ ಬಲು
ಜವವು ಜಾರದೆ ಬಿಡುವ ತಿವಿದರೆ
ಸವಗವುಚ್ಚಳಿಸುವವು ಕವಿದರೆ ಕಾಲಯಮನಂತೆ
ಕವಿವರವಗಡಿಸಿದರೆ ಹಿಮ್ಮೆ
ಟ್ಟುವರು ಭೂಮಾನದೊಳುಪಾಯದ
ಬವರದೋಜೆಯಲೊದಗಿದರು ಕರ್ಣಾಟರಾವುತರು ೬೬

ಉರುಬಿ ಹೊಯಿದರು ಕೈದಣಿಯೆ ಹೊ
ಕ್ಕೆರಗಿದರು ನಿಪ್ಪಸರದಲಿ ಮು
ಕ್ಕುರಿಕಿದರು ತಲೆಮಿದುಳ ಜೊಂಡಿನ ಜುರಿತ ಜೋಡುಗಳ
ತರಿದು ಬಿಸುಟರು ಖಗನಿಕರಕಾ
ರ್ದಿರಿದು ಕಾಲನ ಬನಕೆ ರಕುತದ
ಕೆರೆಯ ತೂಬೆತ್ತಿದರು ಸೇವಣ ರಾಯ ರಾವುತರು ೬೭

ರಾವುತೋ ಮಝ ಭಾಪು ರಾವುತು
ದೇವು ರಾವುತು ಭಲರೆ ರಾವುತು
ರಾವುತೋ ನಿಶ್ಶಂಕರಾವುತು ರಾವುತೆಂದೆನುತ
ರಾವು ರಾವುತು ಪೂತುರಾವುತು
ಭಾಪು ರಾವುತು ರಾವುತೋ ಎಂ
ದೋವಿ ಹೊಯಿದಾಡಿದರು ರಣದಲಿ ಲಾಳ ರಾವುತರು ೬೮

ಗಾಳ ಕೊಂಕ ಕಳಿಂಗ ವರನೇ
ಪಾಳಕದ ರಾವುತರು ರಣಭೇ
ತಾಳರಣಲೊಳಗಡಗಿದರು ಕುರುಪಾಂಡುಸೈನ್ಯದೊಳು
ಹೇಳಲಳವಲ್ಲುಭಯದಲಿ ಹೇ
ರಾಳಕಾಳೆಗ ಹಿರಿದು ಕಿರಿದೆನೆ
ಹೇಳುವೆನು ಬವರಕ್ಕೆ ಬಂದುದು ಮತ್ತಗಜಸೇನೆ ೬೯

ಕನಕಗಿರಿಯಲಿ ವಿಂಧ್ಯಗಿರಿಯಂ
ಜನಗಿರಿಯ ಮಲಯಾದ್ರಿಯಲಿ ಸಂ
ಜನಿಸಿದಾನೆಯ ಸೇನೆಯಲಿ ಬೀಸಿದರು ಚೌರಿಗಳ
ಕನಕಘಂಟೆಗಳುಲಿಯೆ ಹೊರಜೆಯ
ತನತನಗೆ ಹಿಡಿದಡರಿ ಪೂರ‍್ವಾ
ಸನವ ವೆಂಠಣಿಸಿದರು ರಾಜಾರೋಹಕವ್ರಾತ ೭೦

ಬಾರ ಸಂಕಲೆ ಪಕ್ಕ ಘಂಟೆಯ
ಚಾರು ಚಮರದ ಕೊಡತಿಗಳ ಕೈ
ಹಾರೆ ಕೂರಂಕುಶದ ಬಿರುದರು ಹೊದ್ದಿದರು ಗಜವ
ಬಾರ ದೂಹತ್ತಿಗಳ ಗುಂಡನು
ತೋರ ಲೌಡಿಯ ತೊಟ್ಟು ಕೈಯಲಿ
ವಾರಣದ ದೋಹರವ ನೂಕಿದರುಭಯಸೇನೆಯಲಿ ೭೧

ಕಾಲನುಬ್ಬೆಗೆ ಶೀತಳಂಗೊಡು
ವಾಲವಟ್ಟವೊ ವಿಲಯಕಾಲದ
ಗಾಳಿಯೋ ಮೇಣ್ ಕರ್ಣತಾಳವೊ ಕಿವಿಗೆ ಕೌತುಕವೊ
ಕಾಲುವೆರಸಿದ ನೀಲಗಿರಿಗಳ
ಧಾಳಿಯೋ ಮೇಣಂಜನಾದ್ರಿಯ
ಬೀಳಲೋ ಬರಿಕೈಗಳೋ ನಾವರಿಯೆವಿದನೆಂದ ೭೨
ಪಡೆಯೊ ಹೀನೇಂದುವಿನಿರುಳ ಮುಂ
ಗುಡಿಯೊ ಮುಗಿಲೋ ಮದದ ತುಂಬಿಯೊ
ಬಿಡುಮದದ ವಾರಿಗಳೊ ಹೊಸ ವಾರಾಶಿಯೋ ಮೇಣು
ಅಡಸಿ ಪದಹತಧೂಳಿ ಮದವನು
ಕುಡಿದುದಾ ಮದಧಾರೆ ರೇಣುವ
ನಡಗಿಸಲು ಮದಧೂಳಿಗಳು ಹೆಣಗಿದುವು ತಮ್ಮೊಳಗೆ ೭೩

ಕುಲಗಿರಿಗಳಗ್ರದೊಳು ಕೈಗಳ
ನಿಳುಹಿದನೊ ರವಿಯೆನಲು ಮಿಗೆ ಹೊಳೆ
ಹೊಳೆವ ಕೂರಂಕುಶವನಿಕ್ಕಿದರಿಭದ ಮಸ್ತಕಕೆ
ಉಲಿದವಿದಿರೊಳು ಡೌಡೆ ಬಿರುದಾ
ವಳಿಯ ಕಹಳೆಗಳೂದಿದವು ನೆಲ
ಮೊಳಗಿದಂತಿರಲೊದರಿದವು ನಿಸ್ಸಾಳಕೋಟಿಗಳು ೭೪

ಹೊಕ್ಕವಾನೆಗಳೆರಡು ಸೇನೆಯೊ
ಳೊಕ್ಕಲಿಕ್ಕಿದವೆಸುವ ಜೋದರ
ತೆಕ್ಕೆಗೋಲಿನ ಮಾಲೆ ಮುಕ್ಕುಳಿಸಿದವು ದಿಗುತಟವ
ಉಕ್ಕಿನುರುಳಿಯೊಳಿಡುವ ಖಂಡೆಯ
ದಿಕ್ಕಡಿಯ ಘಾಯಗಳ ಪಟ್ಟೆಯ
ದಕ್ಕಜದ ಹೊಯಿಲೆಸೆಯೆ ಕಾದಿದವಾನೆಯಾನೆಯೊಳು ೭೫

ತಿವಿಯೆ ಕಳಚುವ ಕಳಚಲೊತ್ತುವ
ಕವಿದಡಾನುವ ನಿಂದಡೆತ್ತು ವ
ಸವೆಯೆ ತುಡುಕುವ ತುಡುಕಿ ಮಿಗೆ ಕೈಕೈಯ ಜೋಡಿಸುವ
ಭುವನ ಭಯಗೊಳಲೊದರುತುರವಣಿ
ಸುವ ವಿಘಾತಿಸಿ ತುಳಿವ ಸೀಳುವ
ನವಮದೇಭದ ಸಮರ ಸೋಲಿಸಿತಮರರಾಲಿಗಳ ೭೬

ತಿರುಹಿ ಬಿಸುಟುವು ಕಾಲುಗಾಹಿನ
ತುರಗವನು ಮುಂಬಾರೆಕಾರರ
ಶಿರವನೈದಾರೇಳನಡಸಿದವಣಲ ಹೊಳಲಿನೊಳು
ಅರರೆ ಪಟ್ಟೆಯ ಲೌಡಿ ಖಂಡೆಯ
ದುರವಣೆಯ ಹೊಯಿಲಿನೊಳು ರಿಪುಗಜ
ವುರುಳಿದವು ತೆರಳಿದವು ಜೋದರ ಜೀವವಂಬರಕೆ ೭೭

ಮೆಟ್ಟಿ ಸೀಳಿದುಹಾಯ್ಕಿ ದಾಡೆಯ
ಕೊಟ್ಟು ಮೋರೆಯನೊಲೆದು ಹರಿದರೆ
ಯಟ್ಟಿ ಹಿಡಿದಪ್ಪಳಿಸಿ ಜೋದರನಂಘ್ರಿಯಿಂದರೆದು
ಇಟ್ಟು ಕೆಡಹಲು ಹೆಣನ ಲೊಟ್ಟಾ
ಲೊಟ್ಟಿ ಮಸಗಿತು ತುರಗ ನರ ರಥ
ವಿಟ್ಟಣಿಸೆ ಸವರಿದವು ದಂತಿವ್ರಾತವುಭಯದೊಳು ೭೮

ಕುತ್ತಿ ಹಿಂಗುವ ಭಟರ ದಾಡೆಯೊ
ಳೊತ್ತಿ ನೆಗಹಿದಡೊಗುವ ರಕುತಕೆ
ಮುತ್ತಿ ಬಾಯ್ಗಳನೊಡ್ಡಿ ಕುಡಿದುದು ಶಾಕಿನೀನಿವಹ
ಮಿತ್ತುವಿನ ಗಣವಿಭದ ದಾಡೆಯ
ಸುತ್ತಿ ಜೋಲುವ ಕರುಳ ಹಿಣಿಲನು
ಕುತ್ತಿದವು ತಮ್ಮೊಳಗೆ ಹೆಣಗಿದವಸಮಸಮರದಲಿ ೭೯

ಅರರೆ ಮೃತ್ಯುವಿನರಕೆಗೌಷಧ
ವರೆವವೊಲು ರಿಪುಬಲವನಸಿಯಿ
ಟ್ಟಿರೆದವಿಭ ಬರಿಕೈಯ ಭಾರಿಯ ಲಾಳವುಂಡಿಗೆಯೆ
ಸರಿಸಗುಂಡಿನೊಳೊಂದನೊಂದಿ
ಟ್ಟೊರಸಿದವು ಕೊಡಹಿದವು ಸೀಳಿದು
ಹೊರಳಿಚಿದವೆರಗಿದವು ನಾನಾವಿಧದ ಕೊಲೆಗಳಲಿ ೮೦

ವ್ರಣದ ಬಂಧದ ಜಗಿಯ ದಾಡೆಗೆ
ಕುಣಿದು ಕವಿವ ವಿಹಂಗ ತತಿಗಳಿ
ನಣಲೊಳಡಸಿದ ತಲೆಗೆ ಕೈಗುತ್ತುವ ನಿಶಾಟರಲಿ
ಹೆಣನ ಬೀಸುವ ಕೈಗಳಲಿ ಸಂ
ದಣಿಸುವಸುರರಿನುರು ಕಪಾಲವ
ಕೆಣಕುವಳಿಯಿಂ ಚಂಡಿಯಾದುವು ಸೊಕ್ಕಿದಾನೆಗಳು ೮೧

ಅಡಸಿ ತಲೆಗಳ ಕಿತ್ತು ಸೇನೆಯ
ನಿಡುವ ಬಸುರನು ಬಗಿದು ಕರುಳನು
ಕೊಡಹಿ ಸೂಸುವ ಮಿದುಳ ಮೊಗೆದೆಣ್ದೆಸೆಗೆ ಸಾಲಿಡುವ
ಅಡಗನಾಯಿದು ಕೆದರಿ ರಕುತವ
ತುಡುಕಿ ಚೆಲ್ಲುವ ಕಿರಿಯ ಬರಿಕೈ
ಬಿಡಿಸಿದವು ಹುಟ್ಟಾಗಿ ಯಮರಾಜನ ಪರಿಗ್ರಹಕೆ ೮೨
ಕಾಲುಗಳಲೊಡೆತುಳಿವ ಮೋರೆಯ
ತೋಳಿನೊಳು ಬೀಸಿಡುವ ರದನದಿ
ಹೋಳಿಸುವ ಖಾತಿಯಲಿ ನಾನಾವಿಧದ ಕೊಲೆಗಳಲಿ
ಕಾಲನೊಗಡಿಸೆ ಕೊಲುವ ಮದಗಜ
ಜಾಲಗಳೊಳಾರೋಹಕರು ಕೆಂ
ಗೋಲ ಮಳೆಗರೆದಾರಿದರು ನೃಪಸೇನೆಯೆರಡರಲಿ ೮೩

ನೀಲಗಿರಿಗಳ ನೆಮ್ಮಿ ಘನಮೇ
ಘಾಳಿ ಸುರಿದವೊ ಮಳೆಯನೆನೆ ಬಿರು
ಗೋಲ ಸೈವಳೆಗರೆದರುಭಯದ ಜೋದರವಗಡಿಸಿ
ಮೇಲೆ ತೊಳಲುವ ಖಚರ ನಿಚಯಗ
ಳಾಲಿಯೊಲೆದವು ಧರೆಗೆ ಗಗನಕೆ
ಕಾಳಿಕೆಯ ಪಸರಿಸಿತು ಜೋದರ ಕೋದ ಶರಜಾಲ ೮೪

ಎಲೆಲೆ ವಿಂಧ್ಯಾಚಲದ ಹರಿಬಕೆ
ಕಳನ ಹೊಕ್ಕವೊ ಕಣೆಗಳೆನುತಾ
ನಳಿನಸಖನಂಜಿದನು ಕೋಪಾಟೋಪಕಭ್ರದಲಿ
ಅಲಗುಗಣೆಗಳೊ ಮೇಘತರುವಿನ
ತಳಿತ ತುದಿಗೊಂಬುಗಳೊ ಬೀಳುವ
ತಲೆಗಳೋ ತತ್ಫಲಸಮೂಹವೊ ಚಿತ್ರವಾಯ್ತೆಂದ ೮೫

ಸರಳ ಸರಳೊಳು ಕಡಿವ ಕರಿಗಳ
ಕೊರಳ ಮುರಿಯೆಸುವೋರಣದ ಮೊಗ
ವರಿಗೆಗಳ ಖಂಡಿಸುವ ಮೋರೆಯ ಕರವ ತುಂಡಿಸುವ
ಸರಳು ವದನವ ತಾಗಿ ಪೇಚಕ
ಕುರವಣಿಸೆ ತೆಗದೆಸುವ ಜೋದರ
ಧುರಚಮತ್ಕೃತಿ ಬೆರಗನಿತ್ತುದು ದೇವಸಂತತಿಗೆ ೮೬

ಶೂರ ಜೋದರ ಮೇಲುವಾಯಿದು
ವೀರಸಿರಿ ಬಿಗಿಯಪ್ಪೆ ಮುತ್ತಿನ
ಹಾರ ಹರಿಯಲು ಕೆದರಿದವು ದೆಸೆದೆಸೆಗೆ ಮುತ್ತುಗಳು
ವಾರಣದ ಕುಂಭಸ್ಥಳಂಗಳ
ಚಾರುಮೌಕ್ತಿಕನಿಕರವೋ ಮೇಣ್
ಭಾರತಾಹವ ಕೌತುಕೋದಯರಸಕೆ ನೆಲೆಯಾಯ್ತೊ ೮೭

ಅರರೆ ಶರಸಾಗರದ ಜೋದರ
ಸರಳಹತಿಯಲಿ ಮಂದರಾಚಲ
ಕರಿಯ ಮಸ್ತಕವೊಡೆದು ಕೆದರಿತು ಮೌಕ್ತಿಕವ್ರಾತ
ಹರೆದು ತಾರೆಗೆಯಾದವಭ್ರದೊ
ಳುರುಳೆ ರತ್ನಾಕರನೆನಿಪ್ಪಾ
ಬಿರುದು ಸಂದುದು ಶರನಿಧಿಗೆ ಭೂಪಾಲ ಕೇಳೆಂದ ೮೮

ಧುರದ ಜಯಸಿರಿ ವೀರಭಟರಿಗೆ
ಸುರಿವ ಲಾಜಾವರುಷದಂತಿರೆ
ಸುರಿದ ಮುತ್ತುಗಳೆಸೆದವಭ್ರವಿಮಾನ ಭಾಗದಲಿ
ಕರಿಶಿರದ ಮುಕ್ತಾಳಿಯೊಪ್ಪಿದ
ವರ ವಿಜಯರೊಡಗೂಡಿ ಜಯವಧು
ವಿರದೆ ಪುಳಕಿತೆಯಾದಳೆನೆ ಚೆಲುವಾಯ್ತು ನಿಮಿಷದಲಿ ೮೯

ವಿಗ್ರಹದೊಳಿದಿರಾಂತ ಕರಿಗಳ
ವಿಗ್ರಹಂಗಳು ಕೆಡೆಯೆ ಕಾದಿ ಸ
ಮಗ್ರಬಲ ಜೋದಾಳಿ ಕೊಂಡುದು ಸುರರ ಕೋಟೆಗಳ
ಉಗ್ರದಾಹವಭೂತಗಣಕೆ ಸ
ಮಗ್ರಭೋಜನವಾಯ್ತು ಸಂಗರ
ದಗ್ರಿಯರು ಕೈವೀಸಿದರು ತೇರುಗಳ ತಿಂತಿಣಿಯ ೯೦

ನೊಗನ ಬಿಗುಹಿನ ಕಂಧದುರು ವಾ
ಜಿಗಳು ಕುಣಿದವು ಪಲ್ಲವದ ಸೆರ
ಗಗಿಯೆ ಟೆಕ್ಕೆಯವೆತ್ತಿದವು ಮುಮ್ಮೊನೆಯ ಸೂನಗೆಯ
ಹೊಗರುಗಳ ತೀಡಿದರು ಕೀಲ
ಚ್ಚುಗಳ ಮೇಳೈಸಿದರು ಬಲು ನಂ
ಬುಗೆಯ ಬದ್ಧರದೊಳಗೆ ತುಂಬಿದರಸ್ತ್ರ ಶಸ್ತ್ರಗಳ ೯೧

ಹಯನಿಕರ ಖುರಕಡಿಯ ವಜ್ರಾಂ
ಗಿಯನು ಹೊತ್ತುವು ಝಡಿವ ಹೊಂಗಂ
ಟೆಯ ವಿಡಾಯ ವರೂಥವನು ಕರೆಸಿದವು ಚೀತ್ಕೃತಿಯ
ಜಯನಿನದವಳ್ಳಿರಿಯೆ ಸೂತಾ
ಶ್ರಯದಲತಿರಥನಿಕರ ರಥ ಸಂ
ಚಯವ ವೆಂಠಣಿಸಿದರು ತುಳುಕಿದರತುಳ ತೋಮರವ ೯೨

ಪೂತು ಸಾರಥಿ ಭಾಪು ಮಝರೇ
ಸೂತ ಧಿರುಧಿರು ಎನುತ ರಥಿಕ
ವ್ರಾತ ಮಿಗೆ ಬೋಳೈಸಿ ಕೊಂಡರು ಹಯದ ವಾಘೆಗಳ
ಆ ತುರಂಗದ ಖುರಪುಟದ ನವ
ಶಾತಕುಂಭದ ಗಾಲಿಯುರುಬೆಯ
ನಾ ತತುಕ್ಷಣವಾಂಪರಾರೆನೆ ಕವಿದುದುಭಯದೊಳು ೯೩

ಹರಿವ ರಥದುರವಣೆಗೆ ನೆರೆಯದು
ಧರಣಿಯೆಂದಂಭೋಜಭವನೀ
ಧರೆಯನಿಮ್ಮಡಿಸಿದನೊ ಎನಲಾ ಬಹಳ ಸಮರದೊಳು
ಹರಿವ ರಥಪದಧೂಳಿ ಮಕರಾ
ಕರವ ಕುಡಿದುದು ಚೀತ್ಕೃತಿಯ ಚ
ಪ್ಪರಣೆ ಮಿಗಲುರುಬಿದರು ರಥಿಕರು ಸರಿಸ ವಾಘೆಯಲಿ ೯೪

ಘನರಥದ ಚೀತ್ಕಾರ ಗಜರುವ
ಧನುವಿನಬ್ಬರ ಹಯದ ಹೇಷಾ
ನಿನದ ರಥಿಕರ ಬೊಬ್ಬೆ ಸೂತರ ಬಹಳ ಚಪ್ಪರಣೆ
ಅನುವರದೊಳೊದಗಿತ್ತು ವಿಲಯದ
ವಿನುತ ಮೇಘಧ್ವಾನವನು ಸಂ
ಜನಿಸಿತೆನೆ ಹಳಚಿದವು ರಥರಥವೆರಡು ಸೇನೆಯಲಿ ೯೫
ತೆಗೆತೆಗೆದು ತಲೆಮಟ್ಟು ಕರೆದರು
ಬಿಗಿದ ಬಿಲುಗಳಲತಿರಥರು ಕಂ
ಬುಗೆಯ ಮುರಿದರು ಹಯವ ತರಿದರು ಸಾರಥಿಯ ಕೆಡಹಿ
ಹಗಲ ಹೂಳಿದರಮಮ ಬಾಣಾ
ಳಿಗಳಲಸಮ ಮಹಾರಥರು ಕಾ
ಳೆಗದೊಳಹುದೆನಿಸಿದರು ರಣದೊಳು ಸುಳಿವ ಯಮನವರ ೯೬

ತಿರುಗೆ ತಿರುಗಿದರೆಚ್ಚರೆಚ್ಚರು
ಮರಳೆ ಮರಳಿದರೌಕಲೌಕಿದ
ರುರವಣಿಸಲುರವಣಿಸಿದರು ಮಾರ್ತಾಗೆ ತಾಗಿದರು
ಸರಳಿಗಂಬನು ಸೂತ ವಾಜಿಯ
ಶಿರಕೆ ಶಿರವನು ರಥಕೆ ರಥವನು
ಸರಿಗಡಿದು ಕಾದಿದರು ಸಮರಥರಾಹವಾಗ್ರದಲಿ ೯೭

ರಥವದೊಂದೆಸೆ ಹಯವದೊಂದೆಸೆ
ರಥಿಕರೊಂದೆಸೆಯಾಗೆ ಕೊಂದರು ಬಲದೊಳತಿರಥರು
ರಥಿಕರುರವಣೆಯುಭಯ ಬಲದಲಿ
ಕಥೆಯ ಕಡೆಯಾಯಿತ್ತು ಬಳಿಕತಿ
ರಥರು ಹೊಕ್ಕರು ಕೇಳು ಧೃತರಾಷ್ಟ್ರಾವನೀಪಾಲ ೯೮

ನೋಡಿ[ಸಂಪಾದಿಸಿ]

ಸಂಧಿಗಳು[ಸಂಪಾದಿಸಿ]

ಪರ್ವಗಳು[ಸಂಪಾದಿಸಿ]

ಕುಮಾರವ್ಯಾಸ ಭಾರತ ಆದಿಪರ್ವ ಸಭಾಪರ್ವ ಅರಣ್ಯಪರ್ವ ವಿರಾಟಪರ್ವ ಉದ್ಯೋಗಪರ್ವ ಭೀಷ್ಮಪರ್ವ ದ್ರೋಣಪರ್ವ ಕರ್ಣಪರ್ವ ಶಲ್ಯಪರ್ವ ಗದಾಪರ್ವ

ಪರಿವಿಡಿ[ಸಂಪಾದಿಸಿ]

ಕನ್ನಡ ವಿಕಿಸೋರ್ಸ್[ಸಂಪಾದಿಸಿ]

ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ | ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ