ಜನಪದ ಸಾಹಿತ್ಯ
ಜನಪದ ಸಾಹಿತ್ಯವೂ ಆಕಾಶದಷ್ಟು ವಿಶಾಲ, ಸಾಗರದಷ್ಟು ಆಳ. ಅದರಲ್ಲಿ ಹಲವು ಪ್ರಕಾರಗಳಿವೆ-ಗಾದೆ, ಒಗಟು, ಒಡಪು, ಕಥೆ, ಗೀತೆ, ಕಥನಗೀತೆ ಪ್ರಮುಖವಾಗಿವೆ. ಇಡೀ ಜಗತ್ತಿನ ಸಾಹಿತ್ಯದ ಮೂಲವನ್ನೇಲ್ಲ ಜನಪದಸಾಹಿತ್ಯದಲ್ಲಿ ಕಾಣಬಹುದು. ಅದಕ್ಕೆ ಬಿ.ಎಂ. ಶ್ರೀ ಅವರು ಜನಪದಸಾಹಿತ್ಯವನ್ನು 'ಜನವಾಣಿ ಬೇರು; ಕವಿವಾಣಿ ಹೂವು' ಎಂದು ಕರೆದಿದ್ದಾರೆ.
ಗಾದೆಗಳು
[ಸಂಪಾದಿಸಿ]- ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ
- ಅಜ್ಞಾತವಾಸದಲ್ಲಿಯೂ ಅಜ್ಞಾನಿಗಳ ಕಾಟ ತಪ್ಪಲಿಲ್ಲ
- ಅನ್ನ ಹಾಕಿದ ಮನೆಗೆ ಕನ್ನ ಹಾಕಬೇಡ
- ಆಗೋದೆಲ್ಲಾ ಒಳ್ಳೇದಕ್ಕೆ
- ಅಲ್ಪರ ಸಂಗ ಅಭಿಮಾನ ಭಂಗ
- ಆಡಿ ಬಂದ ಕತ್ತೆ ಅಡಿಕೆ ತಂದ ಕತ್ತೆಯನ್ನು ಓ ಎಂದ ಹಾಗೇ
- ಆನೆ ಮೇಲೆ ಹೋಗುವವನು ಸುಣ್ಣ ಕೇಳಿದ ಹಾಗೆ
- ಇರುಳು ನೋಡಿ ಮರುಳುಗೊಂಡ
- ಹಾಡ್ತ ಹಾಡ್ತ ರಾಗ; ನರಳ್ತ ನರಳ್ತ ರೋಗ
- ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು
- ಕಳ್ಳನ ನಂಬಿದರೂ ಕುಳ್ಳನ್ನ ನಂಬಬೇಡ
- ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು
- ಕೈ ಕೆಸರಾದರೆ ಬಾಯಿ ವೊಸರು
- ಪಾಲಿಗೆ ಬಂದದ್ದು ಪಂಚಾಮೃತ
- ಬೀದೀಲಿ ಹೋಗೋ ಮಾರೀನ ಮನೆಗೆ ಕರೆದಂತೆ
- ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ
- ಮಾಡಿದ್ದುಣ್ಣೋ ಮಹರಾಯ
- ಮಾರಿ ಕಣ್ಣು ಹೋರಿ ಮ್ಯಾಲೆ, ಕಟುಕನ ಕಣ್ಣು ಕುರಿ ಮ್ಯಾಲೆ
- ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ
- ಸಾವಿರ ಸುಳ್ಳು ಹೇಳಿ ಮದುವೆ ಮಾಡು
- ಹಾಸಿಗೆ ಇದ್ದಷ್ಟು ಕಾಲು ಚಾಚು
- ತುಂಬಿದ ಕೊಳ ತುಳುಕುವುದಿಲ್ಲ
- ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಮುಚ್ಚಿದರು
- ಕುಣಿಯಲಾರದವಳು ನೆಲ ಡೊಂಕು ಎಂದಳು
- ಹಾಳೂರಿಗೆ ಉಳಿದವನೇ ಗೌಡ
- ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ
- ಕಲಿಯುವವರೆಗೂ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ
- ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಸಿಗುವುದಿಲ್ಲ
- ಕುಂಬಳಕಾಯಿ ಕಳ್ಳ ಎಂದರೆ ಹೆಗಲುಮುಟ್ಟಿಕೊಂಡು ನೋಡಿಕೊಂಡ
- ಬೊಗಳುವ ನಾಯಿ ಕಚ್ಚೋದಿಲ್ಲ ಕಚ್ಚೋ ನಾಯಿ ಬೊಗುಳೊದಿಲ್ಲ
- ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು
- ಇರಳು ಕಂಡ ಭಾವಿಗೆ ಹಗಲು ಬಿದ್ದಂಗೆ
- ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ
- ಆಚಾರ ಹೇಳೊದಿಕ್ಕೆ ಬದನೆಕಾಯಿ ತಿನ್ನೊದಿಕ್ಕೆ
- ಹೇಳುವುದು ಒಂದು ಮಾಡುವುದು ಮತ್ತೊಂದು
- ಊರಿಗೆ ಬಂದವಳು ನೀರಿಗೆ ಬಾರದೇ ಹೋದಾಳೆ?
- ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ
- ಬಡವನ ಕೋಪ ದವಡೆಗೆ ಮೂಲ
- ವಿನಾಯಕನ ಪೂಜೆಗೆ ನೂರೆಂಟು ವಿಘ್ನಗಳು
- ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ
- ಅಲ್ಪ ವಿದ್ಯೆ ಮಹಾಗರ್ವಿ
- ಯುದ್ಧ ಕಾಲದಲ್ಲೇ ಶಸ್ತ್ರಭ್ಯಾಸ.
- ಕೀತ ಬೆರಳಿಗೆ ಉಚ್ಚೆ ಹೊಯ್ಯಿ ಅಂದ್ರೆ ಜಲ ಮಲ ಕಟ್ಟಿ ಆರು ತಿಂಗ್ಳು ಆಯ್ತು ಅಂದನಂತೆ.
ಒಗಟುಗಳು
[ಸಂಪಾದಿಸಿ]- ಒಂದು ತೇಲುತ್ತದೆ, ಒಂದು ಮುಳುಗುತ್ತದೆ, ಒಂದು ಕರಗುತ್ತದೆ. ಇವು ಯಾವು ? -ಎಲೆ, ಅಡಿಕೆ ,ಸುಣ್ಣ...
- ಅಟ್ಟದ ಮೇಲೆ ಪುಟ್ಟಲಕ್ಷ್ಮಿ.-ಕುಂಕುಮ, ಬೊಟ್ಟು
- ಜಂಬದ ರಾಣಿ ಕುಣಿದು ಕುಣಿದು ಸುಸ್ತಾದಳು.-ಪಟಾಕಿ
- ಅಟ್ಟದ ಮೇಲೆ ಮುಳ್ಳಂದಿ ಉಳ್ಳುಳ್ಳಿಸ್ಕೆಂಡು ಕೊಯ್ತವ್ರೆ.-ಹಲಸಿನ ಹಣ್ಣು
- ಮರದೊಳಗೆ ಮರ ಹುಟ್ಟಿ | ಮರ ಚಕ್ರ ಕಾಯಾಗಿ |ತಿನ್ನ ಬಾರದ ಹಣ್ಣು ಬಲು ರುಚಿ -ಮಗು
- ಆಹಾರ ಹಾಕಿದಷ್ಟು ಎತ್ತರೆತ್ತರಕ್ಕೆ ಬೆಳೆಯುತ್ತದೆ: ನೀರು ಹಾಕಿದ್ರೆ ಸತ್ತುತ್ತದೆ - ಬೆಂಕಿ
- ಮೂಡಣದ ಮೇಲಿನ ಬೆಂಕಿ ಚಂಡು - ಸೂರ್ಯ
- ವಿಶ್ರಾಂತಿ ಇಲ್ಲದೆ ನಿರಂತರ ಓಡಾಟವಾಡುವವನು - ಗಾಳಿ
- ಅಮ್ಮನ ಸೀರೆ ಮಡಿಸೊಕ್ಕಾಗಲ್ಲ; ಅಪ್ಪನ ದುಡ್ಡು ಎಣಿಸೋಕಾಗಲ್ಲ -ಆಕಾಶ, ನಕ್ಷತ್ರ
- ಚೋಟುದ್ದ ಹುಡ್ಗಿಗೆ ಮಾರುದ್ದ ಜಡೆ -ಸೂಜಿ, ದಾರ
- ಕೆಂಪು ಬೆಟ್ಟದ ಮೇಲೆ ಮುವತ್ತೆರಡು ಬಿಳಿ ಕುದುರೆ -ಬಾಯಿ, ಹಲ್ಲು
- ಬಂಗಾರದ ಗಿಣಿ ಬಾಲದಿಂದ ನೀರು ಕುಡಿಯುತ್ತದೆ - ದೀಪ
- ಬಾಗಿಲೇ ಇಲ್ಲದ ಬಿಳಿ ಗುಡಿಸಲು - ವೊಟ್ಟೆ
- ಅತೀ ಮಧುರವಾದದ್ದು ಯಾವುದು? - ನಿದ್ದೆ, ನೆಮ್ಮದಿ. ಅಮ್ಮನ ಮಡಿಲು
- ಬೆಳಗ್ಗೆ ನಾಲ್ಕು ಕಾಲಿನ ಮೇಲೆ, ಮಧ್ನಾನ ಎರಡು ಕಾಲಿನ ಮೇಲೆ, ಸಂಜೆ ಮೂರು ಕಾಲಿನ ಮೇಲೆ ನಡೆಯೋದು ಯಾವುದು ?-ಮನುಷ್ಯನ ಬಾಲ್ಯ, ಯೌವನ, ಮುಪ್ಪು
- ಜೇನಿಗಿಂತ ಮಧುರ ಸಿಂಹಕ್ಕಿಂತ ಬಲಶಾಲಿ ಯಾವುದು ?- ಪ್ರೀತಿ
- ಊರೆಲ್ಲಾ ಸುತ್ತಾಡುತ್ತೆ, ಮನೆಗೆ ಬಂದೊಡನೆ ಮೂಲೇಲಿ ನಿಲ್ಲುತ್ತೆ - ಚಪ್ಪಲಿ
- ಕಿರುಮನೆಗೆ ಚಿನ್ನದ ಬೀಗ - ನತ್ತು
- ಮೋಟ್ ಹುಣಸೇ ಮರದ್ಮೇಲೆ ಮೋಟ್ ದೀಪ ಉರಿತದೆ - ವಜ್ರದ ಮೊಗುತಿ
- ಆಲೆ ಮೇಲೆ ಉರಿಯೋದೇನು - ಓಲೆ
- ಅಂತಕ್ಕನ ಮಗ್ಳು ಅಂತರದಲ್ಲಿ ಓಲಾಡ್ತಳೆ - ಓಲೆ, ಜುಮುಕಿ/ಲೋಲಾಕು
- ಬಗ್ಗಿದರೆ ಬಾಯಿಗೆ ಬರುತ್ತೆ; ಎದ್ರೆ ಎದೆಗೆ ಹಪಡೆಯುತ್ತೆ - ತಾಳಿ
- ಮುಂಗೈಲಿ ಫಳಫಳ - ಬಂಗಾರದ ಬಳೆ
- ಡೊಂಕು ಮರಕ್ಕೆ ಸಂಕೋಲೆ ಹಾಕಿದೆ - ಕೈಬಂದಿ
- ತಲೆಮೇಲೆ ಹರಳು ಬಾಯಲ್ಲಿ ಬೆರಳು - ಉಂಗುರ
ಜನಪದ ನಂಬಿಕೆಗಳು
[ಸಂಪಾದಿಸಿ]- ಓಲೆ ಮುತ್ರೈದೆಯ ಆಸ್ತಿ ಶುಭಕಾರಿ.
- ನಾಸಿಕಾಭರಣದಿಂದ ಸ್ತ್ರೀಯರಿಗೆ ಶುಭ,ಶ್ರೇಷ್ಠತ್ವ,ಗಂಡನ ಪ್ರೀತಿ ಅನುರಾಗ ಸದಾ ಲಭ್ಯ.
- ಮಾಂಗಲ್ಯಕ್ಕೆ ಬೆಲೆ ಕೊಟ್ಟವಳು ಗಂಡನಿಗೂ ಮರ್ಯಾದೆ ಕೊಡುತ್ತಾಳೆ.
- ತಾಳಿ ಸಿಕ್ಕಿದರೆ ತುಂಬಾ ಅದೃಷ್ಟ.
- ಮದುವೆಗೆ ಮುಂಚೆ ಹೆಣ್ಣು ಮಕ್ಕಳು ಕರಿ ಬಳೆ ತೊಡಬಾರದು.
- ಮುಖದ ಮೇಲೆ ಮೊಡವೆಗಳಿದ್ದರೆ ಅವುಗಳ ನಿವಾರಣೆಗೆ ಬಲಗೈ ಮಧ್ಯದ ಬೆರಳಲ್ಲಿ ತಾಮ್ರದ ಉಂಗುರ ಧರಿಸಬೇಕು.
- ಹುಚ್ಚು ಹಿಡಿದವರ ಕೈಗೆ ಮಂತ್ರಿಸಿದ ಕಬ್ಬಿಣದ ಬಳೆಯನ್ನ ಹಾಕುತ್ತಾರೆ.
- ಉಡುದಾರವನ್ನು ಚಾಕುವಿನಿಂದ ಕೊಯ್ಯಬಾರದು.
- ಮದುವೆ ಮನೆಯಲ್ಲಿ ಬಾಸಿಂಗ ಮುರಿದರೆ ಅಪಶಕುನ.
- ಕಿವಿ ಮೂಗನ್ನು ಚುಚ್ಚಿಸುವಾಗ ಕೊಬ್ಬರಿ ಮುರಿಯ ಬೇಕು.
- ಕರ್ಣಾಭರಣಗಳು ವಾತ-ಪಿತ್ತ, ಶ್ಲೇಷಗಳಿದ ಉಂಟಾಗುವ ದೋಷವನ್ನು ನಾಶ ಮಾಡುತ್ತವೆ.
- ಮೂಗುತಿಯನ್ನ ತೌರಿನವರೆ ಮಾಡಿಸಿಕೊಡುವುದು ಪದ್ದತಿ.
- ತಾಳಿ ಸಿಕ್ಕಿದರೆ ತುಂಬಾ ಅದೃಷ್ಟ.
- ಮದುವೆಗಂಡು ಕೆಲವೆಡೆ ದೇವರ ತಾಳಿ ಧರಿಸುತ್ತಾನೆ.
- ಮಾಂಗಲ್ಯಕ್ಕೆ ಬೆಲೆಕೊಟ್ಟವಳು ಗಂಡನಿಗೂ ಬೆಲೆಕೊಡುತ್ತಾಳೆ.
- ಎಳೆಮಕ್ಕಳಿಗೆ ರಚ್ಚೆತಾಳಿ ಕಟ್ಟಿದರೆ ರಗಳೆ ಮಾಡುವುದಿಲ್ಲ.
- ಮದುವೆಗೆ ಮುಂಚೆ ಹೆಣ್ಣುಮಕ್ಕಳು ಕರಿಬಳೆ ಹಾಕಬಾರದು,ಕರಿಸರ ತೊಡಬಾರದು.
- ಕಂಕಣದ ಬಳೆಯನ್ನು ಒಂದು ವರ್ಷದವರೆಗೆ ಮಡಗಿರಬೇಕು.
- ಹುಚ್ಚು ಹಿಡಿದವರ ಕೈಗೆ ಮಂತ್ರಿಸಿದ ಕಬ್ಬಿಣದ ಬಳೆಯನ್ನ ಹಾಕುತ್ತಾರೆ.
- ತಾಮ್ರದ ಬಳೆ ನರವ್ಯಾಧಿಗೆ ಒಳ್ಳೆಯದು.
- ಹಬ್ಬದ ದಿನ ಕೈಬಳೆ ಒಡೆಯಬಾರದು.
- ಮಂಡೆ ಉದ್ದವಿದ್ರೆ ಗಂಡ ಉಳಿಯೊಲ್ಲ.
- ರಾತ್ರಿಹೊತ್ತಿನಲ್ಲಿ ಕೂದಲನ್ನು ಕತ್ತರಿಸ ಬಾರದು.
- ತಲೆಬಾಚಿದ ಕೈಲಿ ಅಡುಗೆ ಮನೆಗೆ ಹೋಗಬಾರದು.
ಜನಪದ ಗೀತೆಗಳು
[ಸಂಪಾದಿಸಿ]೧.ಅಚ್ಚ ಕೆಂಪಿನ ಬಳೆ ಪಚ್ಚೆ ಹಸುರಿನ ಬಳೆ
ಎನ್ನ ಹಡೆದವ್ವಗೆ ಬಲು ಆಸೆ/ಭಾಗ್ಯದ
ಬಳೆಗಾರ ಹೋಗಿ ಬಾ ನನ್ನ ತವರೀಗೆ
೨.ಆರುಸೇರಿನ ಸರಗಿ ಅರಗಿಲ್ಲದ ಕಟ್ಟಾಣಿ
ನತ್ತು ಬೇಡಿದರೆ ನಗುವಂಥ/ ರಾಯರನು
ನಿಂತು ಬೇಡೇನಿ ಶಿವನಲ್ಲಿ
೩.ಓಲೆ ಒಳ್ಳೇದು ಒಳಗೆ ಚಿನ್ನವಿಲ್ಲ
ಸೀರೆ ಒಳ್ಳೇದು ಸೆರಗಿಲ್ಲ/ತಾಯಮ್ಮ
ರಾಯರೊಳ್ಳೆವ್ರು ಗುಣವಿಲ್ಲ
೪.ಹೋಗಿ ಬಾರೆ ಹೊನ್ನೋಲೆ ಕಿವಿಯೋಳೆ
ಕೆನ್ನೇಲಿ ಸೂರ್ಯ ಹೊಳೆಯೋಳೆ/ ಸೊಸೆಮುದ್ದಿ
ತೌರು ಒಳ್ಳೇದೆಂದು ಇರಬೇಡ
೫.ಕನ್ನೇಯ ಬಡಿಬ್ಯಾಡ ಕೈಬಳಿ ಒಡೆದಾವು
ಸಣ್ಣಂಚಿನೋಲೆ ಮುರಿದಾವು/ನನ ಮಗನೆ
ನನ್ನಾಣೆ ಮಡದಿ ಬಡಿಬ್ಯಾಡ
೬.ಮತ್ತಿನ ಮೊಗುತಿ ನನ್ನಪ್ಪ ಮಾಡಿಸಿಕೊಟ್ಟ
ಮುತ್ತೈದೆತನವ ಶಿವಕೊಟ್ಟ ಮೇಲೆ/ಬಹು
ಭಾಗ್ಯವನು ಕೊಟ್ಟ ಶ್ರೀಹರಿಯು
೭.ಕಟ್ಟಾಣಿ ಗುಂದಿಗೆ ಕಲ್ಲು ಹಾಕಿದ ಉಂಗುರ
ಸಿಟ್ಟು ಮಾಡಿದರೆ ನಗುವಂಥ/ರಾಯರನು
ಬಿಟ್ಟ್ಹೆಂಗೆ ಬರಲೆ ಹಡೆದವ್ವ
೮.ಬಂಗಾರದ ಬಳಿ ಸಾಕು ನನ್ನ ಬಲಗೈಗೆ
ನಾಲ್ಕೇವರಹದ ವಾಲಿ ಹೂ ಬುಗುಡಿ/ಗೆಜ್ಜೆಟೀಕಿ
ಸಾಕು ತವರವರು ಬಡವರು
೯.ಹಡೆದವ್ವನಿದ್ದಾಗ ನಡುಮನಿ ನನಗಿತ್ತ
ಕಡಗದ ಸೊಸಿ ಬಂದು/ನಡೆದಾಗ
ತವರು ಮನೆ ನನಗೆ ಎರವಾಯ್ತು
೧೦.ಬಂಗಾರ ಬಳಿಯಿಟ್ಟು ಬೈಬ್ಯಾಡ ಬಡವರಿಗೆ
ಬಂಗಾರ ನಿನಗೆ ಸ್ಥಿರವಲ್ಲ/ಮಧ್ಯ್ನಾನದ
ಬಿಸಿಲು ಹೊಳ್ಳೋದು ತಡವಲ್ಲ
೧೧.ಕಾಲುಂಗ್ರದ ತಂಗೀಯ ಕರೆಯಾಕೆ ಬಂದವ್ರೆ
ಕಾರೋಡ್ಡಿ ಹುಯ್ಯೋ ಮಳೆರಾಯ/ತಂಗಿಯ
ಇಂದಿನ ಪಯಣ ಉಳಿಯಲಿ
ಚಾಮುಂಡಿ ಜನಪದ ಗೀತೆಗಳು
[ಸಂಪಾದಿಸಿ]೧.ಪಟ್ಟಣಕ್ಮುಂಚಾಗಿ ಹುಟ್ಟಿತು ಮೈಸೂರು
ಬೆಟ್ಟದ ಚಾಮುಂಡಿ ದಯದಿಂದ/ದೊರೆಗೊಳು
ಪಟ್ಟಣವಾಳ್ಯಾರು ಅನುಗಾಲ
೨.ಬೆಟ್ಟದ ಮೇಲವ್ಳೆ ಬಿಡುಮುಡಿ ಚಾಮುಂಡಿ
ತೊಟ್ಟವ್ಳೆ ಹುಲಿಚರ್ಮವ/ಚಾಮುಂಡಿ
ಮೆಟ್ಟಿ ನಿಂತವ್ಳೆ ರಣದಲ್ಲಿ
೩.ತಾಯಿ ಚಾಮುಂಡಿ ಜಾಲ ತುರುಬಿನ ಮೇಲೆ
ಜಾಗರವಾಡವನೆ ಎಳೆನಾಗ/ ಏಳೆಡೆ ಸರ್ಪ
ತಾಯಿ ಚಾಮುಂಡಿಗೆ ಬಿಸಿಲೆಂದು
೪.ಒಲಿದು ಬಾರಮ್ಮಯ್ಯಾ ಒಲಿದು ಬಾರೆ
ಮೈಸಾಸುರನನ್ನು ಕೊಂದು/ಮೈಸೂರಿನಲಿ
ನೆಲೆನಿಂತ ಬೆಟ್ಟದ ಚಾಮುಂಡಿ ಒಲಿದು ಬಾರೆ
೫.ವಿಷ್ಣು ಬ್ರಮ್ಮ ರುದ್ರ ದೇವಾಧಿದೇವತೆಗಳು
ಹೂಮಳೆ ಕರೆದು ಬಾಯ್ತುಂಬ ಹೊಗಳಿದರಂತೆ
ಬೆಟ್ಟವ ಅವಳ ಹೆಸರಿಗೆ ಪಟ್ಟಾವ ಮಾಡಿದರಂತೆ
ಚಾಮಾಯಿ ನಿಂತ ಬೆಟ್ಟ ಚಾಮುಂಡಿ ಬೆಟ್ಟವಾಯ್ತು
೬.ಬೆಟ್ಟ ಬಿಟ್ಟಿಳಿಯುತ ಬಿಟ್ಟವ್ಳೆ ಮಂಡೆಯ
ಉಟ್ಟಿರೋ ಸೀರೆ ಹುಲಿ ಚರ್ಮ/ಚಾಮುಂಡಿ
ತೊಟ್ಟಿರೋ ಒಡವೆ ನವರತುನ
೭.ಅಕ್ಕ ಹೊಂಟ್ಯಾಳೆ ಅಕ್ಕಯ್ಯ ಹೊರಟ್ಯಾಳೆ
ಅಡಿಕೆ ಹೊಂಬಾಳೆ ಮುಡಕೊಂಡು/ಚಾಮುಂಡಿ
ಅಕ್ಕ ಹೊಂಟ್ಯಾಳೆ ಜಳಕಕ್ಕೆ
೮.ಉಂಗುರದ ಕಾಲ ಊರೂತ ಜಾರೂತ
ಬಂಗಾರದ ನಡುವ ಬಳುಕೂತ/ಚಾಮುಂಡಿ
ಸಿಂಗಾರದ ಕೊಳಕೆ ನಡೆದಾಳು
೯.ಕಾರಂಜಿಕೆರೆ ಮೇಲ್ಭಂದು ಚಾಮುಂಡಿ
ತನ್ನ ನವರತ್ನ ಸೀರೆ ಅಳಿದಿಟ್ಟು/ಚಾಮುಂಡಿ
ಮನಸ್ಸಿಗೆ ಬಂದಂಗೆ ಜಳಕವ ಮಾಡ್ಯಾಳೆ
೧೦.ಸಪ್ಪಟ್ ಸರೊತ್ತಲ್ ನನ್ನಟ್ಟಿಗ್ ಬಂದೋರ್ಯಾರು
ಹೆಸರೇಳಿ ನಿಮ್ಮ ಕುಲವೇಳಿ /ಮಾಸ್ವಾಮಿ
ನಿಮ್ಗೆ ಮಡ್ಡಿಲ್ಲವೇನೊ ಮನೆಯಾಗೆ
೧೧.ನಾನು ಕುರಿ ಕೋಳಿ ತಿನ್ನೋ ಕರಿಜಾತಿ ಚಾಮುಂಡಿ
ನೀವು ಲಿಂಗ ಜಂಗಮರು ಬರಬವುದೇ/ಮಾಸ್ವಾಮಿ
ನಾನೆಂಗೆ ಕದವ ತೆಗೆಯಾಲಿ
೧೨.ಆಯ ಉಳ್ಳೋಳು ನೀನು ಚಾಯ ಬಳ್ಳೋಳು ನೀನು
ನಿನದಂಡೆಗೊಬ್ಬ ಬರುವೆನು/ಚಾಮುಂಡಿ
ನೀ ಬೇಗೆದ್ದು ಕದವ ತಗಿಬಾರೆ
೧೩.ಚಾಮುಂಡಿ ಮನೆಯ ಸೂರೆಲ್ಲಾ ಮಲ್ಲಿಗೆ
ಜಾಜಿ ಹೂವಿನ ತಲೆದಿಂಬು/ ಹಾಕೊಂಡು
ಜಾಣ ನಂಜಯ್ಯ ಒರಗವನೆ
೧೪.ನಂಜನಗೂಡ ಮರ್ತೆ ನೌಲು ಮಂಟಪವ
ಮರ್ತೆ ಇಬ್ಬರು ಹೆಂಡಿರ ಮರ್ತೆ/ಬೆಟ್ಟದ
ಚಾಮುಂಡಿಗೊಲುಮೆ ಕರ್ತು ಮಾತನ್ನಾಡೋ
೧೫.ಚಾಮುಂಡಿ ಎಂಬೋಳು ಸೀಮೆಗೆ ದೊಡ್ಡೋಳು
ಮಾಯದ ಬೂದಿ ಸೆರಗಲ್ಲಿ /ಕಟ್ಕೋಂಡು
ನ್ಯಾಯಕೆ ಮುಂದಾಗಿ ಹೊಂಟ್ಯಾಳು
ಜನಪದ ವೈದ್ಯ
[ಸಂಪಾದಿಸಿ]- ಮಕ್ಕಳಿಗೆ ಇಸುಬು ಆಗದಿರಲೆಂದು ತಾಮ್ರದ ಕಡಗಗಳನ್ನು ಕಾಲಿಗೆ ಹಾಕುತ್ತಾರೆ.
- ಮಕ್ಕಳಲ್ಲಿ ಮಂಗನ ಬಾವು ಕಾಣಿಸಿಕೊಂಡಾಗ ಚಿನ್ನದ ಸ್ಪರ್ಶ ಗ್ರಂಥಿಗಳ ಊತವನ್ನು ಕಡಿಮೆ ಮಾಡುತ್ತದೆ.
- ಊಟದ ಸಮಯದಲ್ಲಿ ಅತಿ ಸೂಕ್ಷ್ಮವಾದ ಚಿನ್ನದ ತಗಡನ್ನು ಸೇವಿಸುತ್ತಿದ್ದರೆ, ರೋಗ ನಿರೋಧಕ ಶಕ್ತಿ, ಬಾಹ್ಯಬಲ ದ್ವಿಗುಣಗೊಳ್ಳುತ್ತದೆ.
- ಬೆಳ್ಳಿತಟ್ಟೆಯಲ್ಲಿ ದಿನವೂ ಊಟ ಮಾಡಿದರೆ ಆರೋಗ್ಯ ವೃದ್ದಿಸುತ್ತದೆ.
- ಸುವರ್ಣ ಭಸ್ಮವನ್ನು ನಿತ್ಯವೂ ಸೇವಿಸಿದೆ,ಅದು ಶರೀರದ ಮುಪ್ಪನ್ನು ತಡೆಯುತ್ತದೆ.
- ಹೊಟ್ಟೆ ನೋವಿಗೆ ಉಪ್ಪು ನೀರನ್ನು ಕುಡಿಯಬೇಕು.
- ಜ್ವರಕ್ಕೆ ಜೀರಿಗೆ ಕಷಾಯ ಒಳ್ಳೆಯದು
- ಭೇದಿಯಾದಾಗ ಮೆಂತ್ಯೆಕಾಳನ್ನು ಮಜ್ಜಿಗೆಯನ್ನಲ್ಲಿ ಅರ್ಧದಿನ ನೆನೆಸಿ ತಿನ್ನಬೇಕು. ತಕ್ಷಣದ ಉಪಶಮನಕ್ಕೆ ಮಜಗಜಿಗೆ ಅನ್ನ ಒಳ್ಳೆಯದು
- ನೆಗಡಿಯಾದಾಗ ಮೆಣಸು-ಬೆಳ್ಳುಳ್ಳಿ ಕಾರದಲ್ಲಿ ಬಿಸಿಬಿಸಿ ಅನ್ನವನ್ನು ತಿನ್ನಬೇಕು
- ಚರ್ಮರೋಗದವರು ದಿನವೂ ಬೇವಿನ ಸೊಪ್ಪಿನ ಸ್ನಾನದೊಂದಿಗೆ, ಬೇವಿನ ಎಲೆಗಳನ್ನು ಸೇವಿಸ ಬೇಕು.
- ಕೆಮ್ಮಿದ್ದವರು ಒಂದು ವಿಳ್ಳೆದೆಲೆ ಒಂದುಕಾಳು ಉಪ್ಪು, ಒಂದು ಲವಂಗದೊಂದಿಗೆ ಸೇರಿಸಿಕೊಂಡು ನಿಧಾನಕ್ಕೆ ಆ ಎಲೆಯ ರಸ ಹೀರುತ್ತಾ ಕಡಿದರೆ ಬೇಗನೆ ವಾಸಿಯಾಗುತ್ತದೆ.
- ಜೇನುತುಪ್ಪವನ್ನು ಅರ್ಧ ಗಂಟೆ ಮುಖಕ್ಕೆ ಲೇಪಿಸಿಕೊಂಡು ನಂತರ ಮುಖ ತೊಳೆದರೆ ಮುಖದ ಸೌಂದರ್ಯ ವರ್ಧಿಸುತ್ತದೆ.
- ಪಪ್ಪಾಯಿ,ಕಬ್ಬನ್ನು ಖಾಲಿ ಹೊಟ್ಟೆಗೆ ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತುಹುಳ ನಿರ್ನಾಮವಾಗುತ್ತವೆ.
- ಬಾಯಿರುಚಿ ಕೆಟ್ಟಾಗ ಉಪ್ಪುಸಾರಿನ ಕಾರವನ್ನು ಮಾಡಿಕೊಂಡು ಊಟ ಮಾಡಿದರೆ ನಾಲಿಗೆ ರುಚಿ ಮೊದಲಿನಂತಾಗುತ್ತದೆ
- ಸಸ್ಯಹಾರ ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು.
- ಬೆಳ್ಳುಳ್ಳಿ-ಈರುಳ್ಳಿ ಸೇವನೆ ಶರೀರದ ಕಾಂತಿಯನ್ನು ಹೆಚ್ಚಿಸುತ್ತದೆ
- ಹಾಗಲಕಾಯಿಯನ್ನು ವಾರಕ್ಕೆ ಒಮ್ಮೆಯಾದರೂ ಊಟದಲ್ಲಿ ಬಳಸಿದರೆ ಮಧುಮೇಹ ಬರುವುದಿಲ್ಲ
ಮಳೆಯ ಹಾಡುಗಳು
[ಸಂಪಾದಿಸಿ]೧.ಮಾದಯ್ಯ ಬರುವಾಗ ಮಾಳೆಲ್ಲ ಘಮ್ಮೆಂದೊ
ಮಾಳದಲಿ ಗರಿಕೆ ಚಿಗುರ್ಯಾವು /ಮಾದೇವ
ಮೂಡ್ಲಲ್ಲಿ ಮಳೆಯು ಸುರಿದಾವು
೨.ಉತ್ತು ಬಂದಣ್ಣ ಮುತ್ತಿನ್ಕಂಭ ಸೇರಿ
ಉತ್ತು ಬಂದೆ ಶಿವನೆ ಮಳೆಯಿಲ್ಲ /ಎಂದರೆ
ಮುತ್ತೀನ ಮಂಜು ಹರಿದಾವು
೩.ಊರಿಗೆ ಮಳೆ ಹೋದೊ ಏರು ಕಟ್ಟೋ ಕಂದಯ್ಯ
ಊರ ಮುಂದಿನ ಬಸವಣ್ಣೆ /ಕೈ ಮುಗಿದು
ಏರು ಕಟ್ಟೋ ಮುದ್ದು ಮುಖದವನೇ
೪.ಅಂಬು ಕೊಡುವವನೆ ಗೊಂಬೆ ಹಚ್ಚಡದವನೆ
ರಂಭೆ ತೊಡೆಯ ಮೇಲಿರುವ /ಮಳೆದೇವ
ಅಂಬರದಿಂದ ಮಳೆಯ ಕರುಣಿಸು
೧.ಹೆಣ್ಣೀನ ಜನುಮಕೆ ಅಣ್ಣ ತಮ್ಮರು ಬೇಕು
ಬೆನ್ನು ಕಟ್ಟುವರು ಸಭೆಯೊಳಗೆ/ಸಾವಿರ
ಹೊನ್ನ ಕಟ್ಟುವರು ಹುಡಿಯೊಳಗೆ||
೨. ಎನಗೆ ಯಾರಿಲ್ಲಾಂತ ಮನದಾಗ ಮರುಗಿದರೆ
ಪರನಾಡಲೊಬ್ಬ ಪ್ರತಿಸೂರ್ಯ/ ನನ ಅಣ್ಣ
ಬಿದಿಗೆ ಚಂದ್ರಾಮ ಬಂದಾಗ||
೩.ಕಾಲುಂಗ್ರದ ತಂಗೀಯ ಕರಿಯಾಕೆ ಬಂದವರೆ
ಕಾರೊಡ್ಡಿ ಹುಯ್ಯೋ ಮಳೆರಾಯ/ತಂಗಿಯ
ಇಂದಿನ ಪಯಣ ಉಳಿಯಲಿ||
೪.ಸರದಾರ ಬರುವಾಗ ಸುರಿದಾವು ಮಲ್ಲಿಗೆ
ದೊರೆ ನನ ತಮ್ಮ/ಬರುವಾಗ
ಬಾಳೆ ಗೊನೆಬಾಗಿ ಸ್ವಾಗತಕೊರ್ಯಾವೆ||
ಜನಪದಗೀತೆಗಳಲ್ಲಿ ಸೀತೆ ಮತ್ತು ದ್ರೌಪದಿ
[ಸಂಪಾದಿಸಿ]೧.ರಾಮ ಬಿಟ್ಟ ಬಾಣ ರಾಜ್ಯಕ ಮುಟ್ಟಾವ
ರಾಮಸೀತೆಯರ ವನವಾಸ/ಹೊಂಟಾರ
ಹುಡುಕೂತ ಹೊಂಟ ಹನುಮಂತ
೨.ಸೀತಾನ ಒಯ್ದಾಗ ಶ್ರೀರಾಮ ಸಣ್ಣವ
ಆಗ ಹನುಮಂತ ಹಸುಗೂಸು/ಇದ್ದರು
ಅವರು ಸೀತಾನ ಸೆರೆಯ ಬಿಡಿಸ್ಯಾರು
೩.ರಾವಣನ ರಥದಾಗ ಅಡ್ಡ ಹಾರುವನ್ಯಾರ
ಅಂಜನಾದೇವಿ ಮಗ ಹನುಮ/ಬಿಟ್ಟಬಾಣ
ದಂಡು ಸುತ್ತಾಕಿ ಬಡಿದಾವ
೪.ಅಡವಿಯ್ತಾಗ ಹಡೆದಾಳ ಸೀತಮ್ಮ
ತೊಡಿಯ ತೊಳಿಯಾಕ ನೀರಿಲ್ಲ/ಹನುಮಂತ
ಸೇತುವೆ ಕಟ್ಯಾನೆ ಸಮುದರಕ
೫.ಜನಕರಾಯನ ಮಗಳು ಬನಕ ತೊಟ್ಟಿಲ ಕಟ್ಟಿ
ಲವಕುಶರನ್ನು ತೂಗ್ಯಾಳೊ/ಸೀತಾದೇವಿ
ನಗುತ ವನವಾಸ ಕಳದಾಳ
೬.ಅಣ್ಣ ಬಾರರ್ಜುನ ತಮ್ಮ ಬಾ ಸಹದೇವ
ಹೊನ್ನ ಬಿಲ್ತಡೆದ ಕಲಿಭೀಮ/ಬಾರೆಂದು
ಬಣ್ಣೀಸಿ ಕುಂತಿ ಕರೆದಾಳು
೭.ದ್ರೌಪದಿಯ ಸೀರಿ ದುಸುವಾಸ ಸೆಳೆವಾಗ
ವಿಸವಾಸದಣ್ಣಗ ನೆನೆದಾಳ/ಶ್ರೀಕೃಷ್ಣ
ಮಾಯದ ಸೀರಿ ಮರಿಮಾಡೋ
೮.ಆರು ಕಾಲಿನ ರಥವ ಏರಿ ಹೊರಟವನ್ಯಾರ
ಸೂರ್ಯನಂಥವ ಅರ್ಜುನ/ಕೈಯಾನ
ಸಾರತ್ಯಾಗ್ಯಾನ ಶ್ರೀಕೃಷ್ಣ
೯.ಸೀತಾದೇವಿಯಷ್ಟು ಸಿರಿಯನುಂಡವರಿಲ್ಲ
ದ್ರೌಪದಿಯಷ್ಟು ಹರಲಿಯ/ಹೊತ್ತವರು
ಈ ಲೋಕದಾಗ ಯಾರಿಲ್ಲ
೧೦.ಸೀತಾನ ಅಭಿಮಾನ ಬಾಲ ಹನುಮ ಕಾಯ್ದ
ದ್ರೌಪದಿಯ ಮಾನ ಹರಿ ಕಾಯ್ದ/ಪದ್ಮಾವತಿ
ನೀ ಕಾಯೆ ನನ್ನ ಅಭಿಮಾನ
ಆಕಳು ಕೊಡು ಕೃಷ್ಣಾ
[ಸಂಪಾದಿಸಿ]ಮುಂಜಾನೆದ್ದು ನಾವೆಲ್ಲಾ
ಆಕಳನೆಲ್ಲಾ ಹುಡುಕುತ ಬಂದು
ಅಸ್ತಮಾನವಾಯಿತು
ಆಕಳು ಕರೆಯುವ ಹೊತ್ತಾಯಿತು,
ಆಕಳು ಕೊಡು ಕೃಷ್ಣಾ ನಮ್ಮ್ ಆಕಳು ಕೊಡು ಕೃಷ್ಣಾ ||೧||
ಹಳ್ಳ ದಂಡೆಲಿ ಮೇಯುತ್ತಿತ್ತು,
ಕಳ್ಳಿ ಮರದಡಿ ನಿಂತಿತ್ತು
ಕರುವಿಗೆ ಹಾಲನುಣಿಸುತ್ತಿತ್ತು
ಮನೆಯ ದಾರಿ ಹಿಡಿಯುತಿತ್ತು,
ಆಕಳು ಕೊಡು ಕೃಷ್ಣಾ ನಮ್ಮ್ ಆಕಳು ಕೊಡು ಕೃಷ್ಣಾ||೨||
ಹಳ್ಳ ದಂಡೆಲಿ ಮೇಯುದು ಕಾಣೆ
ಕಳ್ಳಿ ಮರದಡಿ ನಿಂತಿದು ಕಾಣೆ
ಕರುವಿಗೆ ಹಾಲನುಣಿಸುದು ಕಾಣೆ
ಮನೆಯ ದಾರಿ ಹಿಡಿದುದು ಕಾಣೆ |
ಆಕಳು ಕಾಣೆ ನಾ ನಿಮ್ಮ್ ಆಕಳು ಕಾಣೆನಾ, ||೩ ||
ಸಣ್ಣ ರೋಮದ ಆಕಳು ಕೃಷ್ಣ
ಸರದ ಮುತ್ತಿನ ಮಲುಕು ಕೃಷ್ಣ,
ಬೆನ್ನಲ್ಲಿ ಬೆಳುಪಿರುವುದು ಕೃಷ್ಣ,
ಮನೆಯ ದಾರಿ ಹಿಡಿವುದು ಕೃಷ್ಣ || ಆಕಳು ಕೊಡು ಕೃಷ್ಣಾ||೪||
ಅರಸಿಗಾದರು ಹೇಳುತ್ತೇವೆ
ಅಲ್ಲಿಗೆ ನಿನ್ನನು ಕರೆಸುತ್ತೇವೆ
ಮಾಯಾಗಾರ ಕೃಷ್ಣ ನಿನ್ನ
ಮಾಯಾ ಮಾಡಿ ಹೊಡೆಸುತ್ತೇವೆ|| ಆಕಳು ಕೊಡು ಕೃಷ್ಣಾ||೫||
ಯಾವ ಅರಸಿಗೆ ಹೇಳುತ್ತೀರ
ಎಲ್ಲಿಗೆ ನನ್ನನು ಕರೆಸುತ್ತೀರ
ಮಾಯಾಗಾರ್ತೀ ಹೆಣ್ಣುಗಳೇ
ಮಾಯಾ ಮಾಡಿ ಹೊಡೆಸುತ್ತೀರಾ? || ಆಕಳು ಕಾಣೆನಾ ನಮ್ ಆಕಳು ಕಾಣೆನಾ||೬||
ಆಕಳನೆಲ್ಲ ತಂದು ಕೊಟ್ರೆ
ಬೇಕಾದ್‍ಹಚ್ಚಡವನ್ನು ಕೊಡುವೆ
ತುಪ್ಪದ ದೀಪಾ ಹಚ್ಚುವೆ
ಕಲ್ಲು ಸಕ್ಕರೆ ಹಂಚುವೆ || ಆಕಳು ಕೊಡು ಕೃಷ್ಣಾ ನಮ್ಮ್ ಆಕಳು ಕೊಡು ಕೃಷ್ಣಾ||೭||
ಹೇಳಿದ ಮಾತಿಗೆ ತಪ್ಪದಿದ್ರೆ
ಕೇಳಿದುದೆಲ್ಲ ಕೊಟ್ಟೇ ಬಿಟ್ರೆ
ಬಿಟ್ಟೇ ನಿಮ್ಮಾ ಆಕಳ ಕೊಳ್ಳೀರಿ| ನಿಮ್ಮ ಆಕಳ ಕೊಳ್ಳೀರಿ ---||೮||
ಆಕಳು ಬಂದಿತ್ತು-- ಮನೆಗೆ ಆಕಳು ಬಂದಿತ್ತು--.
ಆಕಳು ಬಂದಿತ್ತು --- ಮನೆಗೆ ಆಕಳು ಬಂದಿತ್ತು --||೯||
(ಜಾನಪದ)
ಈ ಲಾವಣಿಯ ಸಂಗ್ರಹಕಾರರು ಅಥವಾ ಜನಪದ ಸಾಹಿತ್ಯ ರಚಿಸಿದವರು ಕೆ .ಆರ್.ಲಿಂಗಪ್ಪ (ಬಿ.ಎ.ಎಲ್‌ಎಲ್ ಬಿ ಅಡ್ವೊಕೇಟ್, ತರೀಕೆರೆ) ಇದು ಶಿಷ್ಟ ಜನಪದ ಗೀತೆ. ಇದನ್ನು ನಟಸಾರ್ವಭೌಮ ಡಾ.ರಾಜಕುಮಾರ್ ಅವರು ತಮ್ಮ ಸಿನಿಮಾವೊಂದರಲ್ಲಿ ಬಳಸಿಕೊಂಡು, ತಾವೇ ಹಾಡಿದ್ದಾರೆ.
ಮಾನವನಾಗಿ ಹುಟ್ಟಿದ ಮ್ಯಾಲೆ ಏನೇನ್ ಕಂಡಿ *
ಸಾಯೋತನಕ ಸಂಸಾರದೊಳಗೆ ಗಂಡಾಗುಂಡಿ
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ
ಇರೋದರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ ||೧||
-
ತಾಳಗುಪ್ಪಿ ತಾರಕವೆಂಬ ಬೊಂಬಾಯ್ ಮಠ
ಸಾಲುಗುಡ್ಡದ ಮ್ಯಾಲೆ ಮೋಟಾರ್ ಭಟ್ಕಳ್ ಮಠ#(ಮಟP =ತನಕ)
ದಾರಿ ಕಡಿದು ಮಾಡಿದಾರೆ ಗುಡ್ಡಾ ಬೆಟ್ಟ
ಪಶ್ಚಿಮ ಘಟ್ಟದ ಮ್ಯಾಲೆ ನೋಡು ಮೈಸೂರ್ ಬಾವುಟ ||೨||
-
ನಾಡಿನೊಳಗೆ ನಾಡು ಚೆಲುವು ಕನ್ನಡ್ ನಾಡು
ಬೆಳ್ಳಿ ಬಂಗಾರ ಬೆಳೆಯುತಾವೆ ಬೆಟ್ಟ ಕಾಡು
ಭೂಮಿತಾಯಿ ಮುಡಿದು ನಿಂತಾಳ್ ಬಾಸಿಂಗ ನೋಡು(*ಜೋಡು =೨ಶಿಖರ)
ಬಾಣಾವತಿ ಬೆಡಗಿನಿಂದ ಬರ‍್ತಾಳ್ ನೋಡು ||೩||
-
ಅಂಕು ಡೊಂಕು ವಂಕಿಮುರಿ ರಸ್ತೆ ದಾರಿ
ಹತ್ತಿ ಇಳಿದು ಸುತ್ತಿದಂಗೆ ಹಾವಿನ್ ಮರಿ
ತೊಟ್ಟಿಲು ಜೀಕಿ ಆಡಿದಂಗೆ ಮನಸಿನ್ ಲಹರಿ
ನಡೆಯುತದೆ ಮೈಸೂರಿನೊಳಗೆ ಧರಂದುರಿ ₨ ||೪||
-
ಹೆಸರು ಮರತಿ ಶರಾವತಿ ಅದೇನ್ ಕಷ್ಟ
ಕಡೆದ ಕಲ್ಲ ಕಂಬದ ಮ್ಯಾಲೆ ಪೋಲಿನ ಕಟ್ಟ
ಎಷ್ಟು ಮಂದಿ ಎದೆಯ ಮುರಿದು ಪಡುತಾರ್ ಕಷ್ಟ
ಸಣ್ಣದ್ರಿಂದ ದೊಡ್ಡುದಾಗಿ ಕಾಣೋದ್ ಬೆಟ್ಟ ||೫||
-
ಬುತ್ತಿ ಉಣುತಿದ್ದರುಣ್ಣು ಇಲ್ಲಿ ಸೊಂಪಾಗಿದೆ
ಸೊಂಪು ಇಂಪು ಸೇರಿ ಮನಸು ಕಂಪಾಗ್ತದೆ
ಕಂಪಿನಿಂದ ಜೀವಕ್ಕೊಂದು ತಂಪಾಗ್ತದೆ
ತಂಪಿನೊಳಗೆ ಮತ್ತೊಂದೇನೊ ಕಾಣಿಸ್ತದೆ ||೬||
-
ಅಡ್ಡ ಬಿದಿ?(ಲಾಗಿ) ಒಡ್ಡು ನಿಲಿಸಿ ನೀರಿನ್ ಮಿತಿ
ಇದರ ವೊಳಗೆ ಇನ್ನು ಒಂದು ಹುನ್ನಾರೈತಿ (ವೊ=ಒ)
ನೀರ ಕೆಡವಿ ರಾಟೆ ತಿರಿವಿ ಮಿಂಚನಶಕ್ತಿ !
ನಾಡಿಗೆಲ್ಲಾ ಕೊಡ್ತಾರಂತೆ ದೀಪದ ತಂತಿ ||೭||
-
ಊಟ ಮುಗಿದಿದ್ರೇಳು ಮುಂದೆ ನೋಡೋದದೆ
ನೋಡುತಿದ್ರೆ ಬುದ್ದಿ ಕೆಟ್ಟು ಹುಚ್ಚಾಗ್ತದೆ
ಬೇಕಾದ್ರಲ್ಲಿ ಉಡುಪಿ ಮಾವನ ಮನೆಯೊಂದದೆ
ಉಳಿಯೋದಾದ್ರೆ ಮಹಾರಾಜ್ರ ಬಂಗ್ಲೆ ಅದೆ ||೮||
-
ನೋಡು ಗೆಳೆಯ ಜೋಕೆ ಮಾತ್ರ ಪಾತಾಳಗುಂಡಿ
ಹಿಂದಕೆ ಸರಿದು ನಿಲ್ಲು ತುಸು ಕೈ ತಪ್ಪಿಸಕೊಂಡಿ
ಕೈಗಳಳ್ತೆ ಕಾಣಸ್ತದೆ ಬೊಂಬಾಯ್ ದಂಡಿ
ನಮ್ಮದಂದ್ರೆ ಹೆಮ್ಮೆಯಲ್ವೆ ಜೋಗಾದ್ ಗುಂಡಿ ||೯|
-
ಶಿಸ್ತುಗಾರ ಶಿವಪ್ಪನಾಯಕ ಕೆಳದಿ ನಗರ
ಚಿಕ್ಕದೇವ ದೊಡ್ಡದೇವ ಮೈಸೂರ್ ನವರ
ಹಿಂದಕ್ಕಿಲ್ಲಿ ಬಂದಿದ್ರಂತೆ ಶ್ರೀ ರಾಮರ
ಎಲ್ಲಾ ಕತೆ ಹೇಳುತದೆ ಕಲ್ಪಾಂತರ (ಹೇಳುತಾರೆ) ||೧೦||
-
ರಾಜಾ ರೋರರ್ ರಾಕಟ್ ಲೇಡಿ ಚತುರ್ಮುಖ
ಜೋಡುಗೂಡಿ ಹಾಡುತಾವೆ ಹಿಂದಿನ್ ಸುಖ
ತಾನು ಬಿದ್ರೆ ಆದಿತೇಳು ತಾಯೀಗ ಬೆಳಕ
ಮುಂದಿನವರು ಕಂಡ್ರೆ ಸಾಕು ಸ್ವಂತ ಸುಖ ||೧೧||
-
ಒಂದು ಎರಡು ಮೂರು ನಾಲ್ಕು ಆದಾವು ಮತ
ಹಿಂದಿನಿಂದ ಹರಿದು ಬಂದದ್ದೊಂದೇ ಮತ
ಗುಂಡಿ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ
ಮುಂದೆ ಹೋಗಿ ಸೇರೋವಲ್ಲಿ ಒಂದೇ ಮತ ||೧೨||(ಸೇರೋವಲ್ಲಿಗೊಂದೇಮತ)
-
ಷಹಜಹಾನ ತಾಜಮಹಲು, ಕೊಹಿನೂರು ಮಣಿ
ಸಾವರಿದ್ರು ಸಲ್ಲವಿದಕೆ ಚಲುವಿನ ಕಣಿ
ಜೀವವಂತ ಶರಾವತಿಗಿನ್ನಾವುದೆಣಿ (ಶರಾವತಿಗೆ ಇನ್ನು ಯಾವುದು ಎಣಿ =ಸರಿಸಾಟಿ)
ಹೊಟ್ಟೆಕಿಚ್ಚಿಗಾಡಿಕೊಂಡ್ರೆ ಅದಕಾರ್ ಹೊಣಿ ||೧೩||
-
ಶರಾವತಿ ಕನ್ನಡನಾಡ ಭಾಗೀರತಿ
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತಿ
ಸಾವು ನೋವು ಸುಳಿಯದಿಲ್ಲಿಯ ಕರಾಮತಿ
ಮಲ್ಲೇಶನ್ನ ನೆನೆಯುತಿದ್ರೆ ಜೀವನ್ಮುಕ್ತಿ ||೧೪||
-
- ಕನಸನಲ್ಲಿ ತಾಳಿಕಟ್ಟಿ ಬೆಳಕಾದ್ಮೇಲೆ ಹೆಂಡತಿ ಹುಡುಕಿದಂಗೆ
- ಕಂಡವರ ಒಡವೆ ಇಕ್ಕೊಂಡು, ಕನಸಲ್ಲಿ ಕಳ್ಳ ಬಂದು ಹೊತ್ಕಂಡೋದ ಎಂದ್ಲಂತೆ
- ಹಾಸಿಗೆ ಇದ್ದಷ್ಟು ಕಾಲುಚಾಚು: ಬದುಕುವಷ್ಟು ಕನಸ ಕಾಣು
- ಕನಸು ಬಾಳಲ್ಲ, ನನಸು ಮಾಡಿಕೊ ಬದುಕೆಲ್ಲ
- ಕಂಡ ಕನಸು, ಕನ್ನಡಿಲಿ ಕಂಡ ಪ್ರತಿಬಿಂಬದಂಗೆ ಮುಟ್ಟಬೊದು ತೆಗೆಯೊಕೆ ಆಗಲ್ಲ
- ಕನಸಿನಲ್ಲಿ ಚಿನ್ನ ಕಾಣಬಾರದು ಕಂಡರೆ ಕೆಡುಕಾಗುತ್ತೆ
ಪರಿವಿಡಿ
[ಸಂಪಾದಿಸಿ]ಹಳಗನ್ನಡ ಸಾಹಿತ್ಯ| ಪಂಪಭಾರತ |ಜೈಮಿನಿ ಭಾರತ |ಕುಮಾರವ್ಯಾಸ ಭಾರತ | ನಾಡಗೀತೆಗಳು | ಜನಪದ ಸಾಹಿತ್ಯ | ಚಲನಚಿತ್ರ ಸಾಹಿತ್ಯ | ಚಲನಚಿತ್ರೇತರ ಸಾಹಿತ್ಯ |ಭಾವಗೀತೆಗಳು | ಭಕ್ತಿಗೀತೆಗಳು | ದಾಸ ಸಾಹಿತ್ಯ | ವಚನ ಸಾಹಿತ್ಯ | ತಾತ್ವಿಕ ಸಾಹಿತ್ಯ | ಭಗವದ್ಗೀತೆ |
ಮಂಕುತಿಮ್ಮನ ಕಗ್ಗ | ಶಿಶು ಸಾಹಿತ್ಯ | ಕವನ ಸಂಕಲನಗಳು | ಸಂಪ್ರದಾಯ ಗೀತೆಗಳು |ಮಂಕುತಿಮ್ಮನ ಕಗ್ಗ| |ಸರ್ವಜ್ಞ |
ಜೀವನ ಚರಿತ್ರೆ|ಸ್ತೋತ್ರಗಳು|ಸಂಸ್ಕೃತ ಸಾಹಿತ್ಯ