ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೦ ವೈಶಾಖ ತಲೆಚಿಟ್ಟು, ಅಕ್ಕಪಕ್ಕದ ಮನೆಗಳಿಂದ ಅಥವಾ ಎದುರು ಸಾಲಿನ ಮನೆಗಳಿಂದ ಯಾರಾದರೂ ಹಾಡುವ ಧ್ವನಿಯಾಗಲಿ, ನುಡಿಸುವ ವೀಣೆಯ ಇಂಚರವಾಗಲಿ ತೇಲಿ ಬಂದರೆ ಒಡನೆಯೆ ತಮ್ಮ ಮನೆಯ ಕಿಟಕಿ ಬಾಗಿಲುಗಳನ್ನು ಮುಚ್ಚವಳು!... ಒಮ್ಮೆ ಅವಳೆದುರಿಗೆ ಯಾರೋ ಅಂದರು: “ಕಾವೇರಿ ನದಿಯ ದಡದಾಚೆಗೆ ಇರುವ ಬಸವಾಪಟ್ಟಣ ವೇದಾಧ್ಯಯನಕ್ಕೆ ಘನಪಾಠಿಗಳಿಗೆ ವಿಖ್ಯಾತವಾಗಿದ್ದರೆ, ನಮ್ಮ ರುದ್ರಪಟ್ಟಣ ಸಂಗೀತಕ್ಕೆ ಅದರಲ್ಲೂ ವೈಣಿಕರಿಗೆ ಮತ್ತು ಗಾಯಕರಿಗೆಹೆಸರುಗಳಿಸಿದೆ. ಸಾವಿತ್ರಿಗೆ ಈ ಹೊಗಳಿಕೆ ಪ್ರಿಯವೆನಿಸಲಿಲ್ಲ. “ಏನು ಮಾತು ತೆಗೀರಿ, ಈ ಊರಿನಲ್ಲಿ ಬಾಯಿ ಅಗಲಿಸಿ ಕಿರುಚೋರೆಲ್ಲ ಗಾಯಕರು! ಬೆರಳು ಬಗ್ಗಿಸಿ ತಂತಿ ಮೀಟೋರೆಲ್ಲ ವೈಣಿಕರು!... ನನಗೇನೋ ನಮ್ಮ ಮನೆಗೆಲಸ ಮಾಡಿಕೊಂಡು ಹೋಗೋದೇ ವೇದಾಧ್ಯಯನ, ನನ್ನ ಮಕ್ಕಳ ಮಾತು ಕೇಳ್ತಾ ಇರೋದೇ ಸಂಗೀತ!” ಇವರ ಮನೆಯಲ್ಲಿ ಎಲ್ಲ ವಿಷಯಗಳಲ್ಲೂ ಸಾವಿತ್ರಿಯದೇ ಮೇಲುಗೈ ಆಗಿದ್ದರೂ ಭೋಜನದಲ್ಲಿ ಮಾತ್ರ ಅಶ್ವತ್ಥ ನಿಸ್ಲಿಮನಾಗಿದ್ದ. ಅಚ್ಚರಿಯ ಮಾತೆಂದರೆ ಅವನು ಊಟ ಮಾಡುವಷ್ಟು ಗ್ರಾಸವನ್ನು ಇಡೀ ರುದ್ರಪಟ್ಟಣದಲ್ಲಿ ಬೇರೆ ಯಾರೂ ಮಾಡಲಾರರೆಂದೇ ಊರಿನಲ್ಲೆಲ್ಲ ಪ್ರತೀತಿಯಾಗಿತ್ತು. ಒಂದು ಮದುವೆ ಭೋಜನಕೂಟದಲ್ಲಿ ಬಾಳೆಲೆ ತುಂಬ ಬಡಿಸಿದ ಬಿಳಿ ಅನ್ನವನ್ನು ತೊಟ್ಟೆಯಲ್ಲಿ ಕಲೆಸಿ ಊಟ ಮಾಡಿ, ಅನಂತರ ಮಜ್ಜಿಗೆಹುಳಿಯಲ್ಲಿ ಮತ್ತೆ ಎಲೆ ತುಂಬ ಅನ್ನವನ್ನು ಹೊಟ್ಟೆಗೆ ಸೇರಿಸಿ, ಬಳಿಕ ಗೋಪುರಾಕಾರದಲ್ಲಿ ಇಟ್ಟ ಚಿತ್ರಾನ್ನವನ್ನು ಕಬಳಿಸಿ, ಸುಮಾರು ಇಪ್ಪತ್ತೈದು ಅಂಬೊಡೆಗಳು, ಹೆಸರು ಬೇಳೆ ಕಡಲೆಬೇಳೆ ಕೋಸಂಬರಿಗಳು, ಎರಡು ಬಗೆಯ ಪಲ್ಯಗಳು, ಗೊಜ್ಜು, ಕೇಳಿ ಕೇಳಿ ಹಾಕಿಸಿಕೊಂಡ ಹಪ್ಪಳ ಸಂಡಿಗೆಗಳು ಇತ್ಯಾದಿಗಳನ್ನು ಹೊಟ್ಟೆಗೆ ತುಂಬುತ್ತ ಆರು ದೊಡ್ಡ ದೊನ್ನೆಗಳ ಭರ್ತಿ ಶ್ಯಾವಿಗೆ ಖೀರು ಸುರಿದು ಕೊಳ್ಳುತ್ತ, ಇಪ್ಪತ್ತ ಲಾಡುಗಳನ್ನು ತಿಂದು ಮುಗಿಸುತ್ತಿದ್ದಂತೆ, ಇನ್ನೂ ಇಪ್ಪತ್ತು ಲಾಡು ತಿಂತೀಯೆನೋ ಎಂದು ಚೆಷ್ಟೆಯಿಂದ ಯಾರೋ ಆಹ್ವಾನಿಸಿದಾಗ, “ತಿಂದರೆ ಏನು ಕೊಡ್ತೀಯೆ?ನೂರು ರೂಪಾಯಿ ಬಾಜಿ ಕಟೀಯಾ?” ಎಂದು ಕೆದಕಿ, ಆತ ಆ ಪಂಥಕ್ಕೆ ಒಪ್ಪಿ ಆಗಬಹುದು ಎಂದಾಗ, ಮತ್ತೆ ಇಪ್ಪತ್ತು ಲಾಡುಗಳನ್ನು ಸಲೀಸಾಗಿ ತಿಂದು ತೇಗಿ, ಒಂದು ಚೆಂಬು ನೀರು ಕುಡಿದು, ಪಂಥದ ಒಂದು ನೂರು ರೂಪಾಯಿಗಳನ್ನು ಗಿಟ್ಟಿಸಿದ್ದನಂತೆ!- ಅದರಿಂದ ರಾತ್ರಿಯ ಭೋಜನಕ್ಕೇನೂ ತೊಂದರೆಯಾಗಲಿಲ್ಲವಂತೆ!... ಹೀಗೆ ಅದೆಷ್ಟೇ ಊಟಮಾಡಿದರೂ, ಅಶ್ವತ್ಥನ