ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೦೬
ಭಾರತ ದರ್ಶನ

ಶಿಲ್ಪ ಕಲೆಯ ಕೇಂದ್ರಗಳಾದವು; ಪ್ರಾಚೀನ ಅರಬ್ಬಿ-ಪಾರಸಿ ನಾಗರಿಕತೆಯ ಸಂಪ್ರದಾಯಗಳು ಪುನರುಜ್ಜಿವಿತವಾದುವು. ಆದರೆ ಅರಬ್ಬಿ ರಾಷ್ಟ್ರೀಯ ಭಾವನೆಯಾಗಲಿ ವಿಜ್ಞಾನವಾಗಲಿ ಪುನರುಜ್ಜೀವನಗೊಳ್ಳಲಿಲ್ಲ. ಮನೋರಾಜ್ಯದ ವಿಚಾರಕ್ಕಿಂತ ರಣರಂಗದಲ್ಲಿ ವಿಜಯ ಪಡೆಯಲು ಅನುಕೂಲವಾಗುವಂತೆ ಇಸ್ಲಾಂ ಧರ್ಮವು ತುಂಬ ಕಟ್ಟು ನಿಟ್ಟಾಯಿತು. ಏಷ್ಯದಲ್ಲಿ ಅದರ ಮುಖ್ಯ ಪ್ರತಿ ನಿಧಿಗಳು ಅರಬ್ಬಿ ಜನವಾಗಲಿಲ್ಲ. ತುರ್ಕಿಯವರು, ಮಂಗೋಲಿಯನರು (ಭಾರತದಲ್ಲಿ ಮೊಗಲರು), ಸ್ವಲ್ಪ ಮಟ್ಟಿಗೆ ಅಪ್ಘ್ನರು ಅದರ ಮುಖ್ಯ ಪ್ರಚಾರಕರಾದರು. ಪಶ್ಚಿಮ ಏಷ್ಯದಲ್ಲಿ ಮಂಗೋಲರು ಮುಸ್ಲಿಮರಾಗಿದ್ದರು. ದೂರ ಪ್ರಾಚ್ಯದಲ್ಲಿ ಮತ್ತು ಮಧ್ಯ ಪ್ರದೇಶಗಳಲ್ಲಿ ಅನೇಕರು ಇನ್ನೂ ಬೌದ್ಧರಾಗಿದ್ದರು.

೩. ಘಜ್ನಿ ಮಹಮ್ಮದ್ ಮತ್ತು ಆಫ್ಘನರು

ಎಂಟನೆಯ ಶತಮಾನದ ಆರಂಭದಲ್ಲಿ ಕ್ರಿ. ಶ. ೨೧೨ ರಲ್ಲಿ ಅರಬ್ಬಿ ಜನರು ಸಿಂಧು ದೇಶದವರೆಗೆ ಬಂದು ಅದನ್ನು ಆಕ್ರಮಿಸಿದರು. ಸುಮಾರು ಅರ್ಧ ಶತಮಾನದ ಒಳಗೆ ಸಿಂಧು ದೇಶವು ಅರಬ್ಬಿ ಸಾಮ್ರಾಜ್ಯದಿಂದ ದೂರವಾಗಿ ಒಂದು ಸಣ್ಣ ಸ್ವತಂತ್ರ ಮುಸ್ಲಿಂ ರಾಷ್ಟ್ರವಾಯಿತು, ಅನಂತರ ಸುಮಾರು ಮೂರುನೂರು ವರ್ಷಗಳವರೆಗೆ ಯಾವ ಮುತ್ತಿಗೆಯೂ ಆಗಲಿಲ್ಲ. ಕ್ರಿ. ಶ. ೧೦೦೦ದ ಸುಮಾರಿನಲ್ಲಿ ಮಧ್ಯ ಏಷ್ಯದಲ್ಲಿ ಪ್ರಾಬಲ್ಯಕ್ಕೆ ಬಂದ ತುರ್ಕಿ ಆಫ್ಘಾನಿಸ್ತಾನದ ಸುಲ್ತಾನ್ ಘಜ್ಜಿ ಮಹಮ್ಮದ್ ಎಂಬ ತುರ್ಕಿಯವರು ಭಾರತದ ಮೇಲೆ ದಂಡಯಾತ್ರೆಗಳನ್ನು ಆರಂಭಿಸಿದನು. ಅನೇಕ ದಂಡಯಾತ್ರೆಗಳನ್ನು ಮಾಡಿದನು. ನಿಷ್ಕರುಣೆಯಿಂದ ರಕ್ತಪಾತಮಾಡಿ ಪ್ರತಿಸಲವೂ ಅಪಾರ ಐಶ್ವರ್ಯವನ್ನು ಕೊಳ್ಳೆ ಹೊಡೆದುಕೊಂಡು ಹೋದನು. ಆಗಿನ ಕಾಲದ ವಿದ್ವಾಂಸನಾದ ಖೈವ್ ನಗರದ ಅಲ್ಬೆರುನಿ “ ಹಿಂದು ಗಳು ಧೂಳಿಕಣದಂತೆ ಚಲ್ಲಾಪಿಲ್ಲಿಯಾಗಿ ದಿಕ್ಕು ಪಾಲಾಗಿ ಓಡಿ ಹೋದರು. ಅವರ ಕಥೆಯು ದಂತ ಕಥೆಯಾಯಿತು. ಚೆದುರಿ ಉಳಿದವರು ಮುಸ್ಲಿಮರನ್ನು ಕಂಡರೆ ವಿಷಕಾರುತ್ತಾರೆ” ಎಂದು ಬರೆದಿದ್ದಾನೆ. ಈ ಕಾವ್ಯಮಯ ವರ್ಣನೆಯಿಂದ ಮಹಮ್ಮದನು ಎಷ್ಟು ಅನರ್ಥಮಾಡಿದನೆಂಬುದು ಗೊತ್ತಾಗುತ್ತದೆ. ಆದರೂ ಮಹಮ್ಮದ್ ತನ್ನ ದಾರಿಯಲ್ಲಿ ದೊರೆತ ಉತ್ತರ ಹಿಂದೂಸ್ಥಾನದ ಅಲ್ಪ ಭಾಗವನ್ನು ಮಾತ್ರ ಕೊಳ್ಳೆ ಹೊಡೆದು ನಾಶಮಾಡಿದನೆಂಬುದನ್ನು ಮರೆಯಲಾಗದು. ಮಧ್ಯ ಇಂಡಿಯ, ಪೂರ್ವ ಮತ್ತು ದಕ್ಷಿಣ ಇಂಡಿಯದ ಭಾಗಗಳಿಗೆ ಆತನಿಂದ ಯಾವ ಹಾನಿಯೂ ಆಗಲಿಲ್ಲ.

ದಕ್ಷಿಣ ಇಂಡಿಯದಲ್ಲಿ ಆಗಲೂ ಮತ್ತು ಅನೇಕ ದಿನಗಳ ಅನಂತರವೂ ಬಲಯುತವಾದ ಚೋಳ ಚಕ್ರಾಧಿಪತ್ಯದ ಅಧಿಕಾರ ನಡೆಯುತ್ತಲಿತ್ತು. ಅದು ಸಮುದ್ರ ಮಾರ್ಗಗಳನ್ನೆಲ್ಲ ತನ್ನ ಕೈವಶಮಾಡಿಕೊಂಡು ಜಾವ ಮತ್ತು ಸುಮಾತ್ರಾಗಳವರೆಗೂ ಹಬ್ಬಿ ಅಲ್ಲಿನ ದೊರೆಯಾದ ಶ್ರೀವಿಜಯ ನನ್ನು ತನ್ನ ಅಧೀನಮಾಡಿಕೊಂಡಿತ್ತು. ಆದರೆ ಇದರಿಂದ ಉತ್ತರ ಹಿಂದೂಸ್ಥಾನವು ಮುತ್ತಿಗೆಗೆ ಗುರಿಯಾಗುವುದು ತಪ್ಪಲಿಲ್ಲ.

ಮಹಮ್ಮದನು ಪಂಜಾಬ್ ಮತ್ತು ಸಿಂಧು ದೇಶಗಳನ್ನು ಗೆದ್ದು ತನ್ನ ರಾಜ್ಯದೊಳಗೆ ಸೇರಿಸಿ ಕೊಂಡು ಪ್ರತಿಯೊಂದು ದಂಡಯಾತ್ರೆಯಾದೊಡನೆ ಘಸ್ನಿಗೆ ಹಿಂದಿರುಗುತ್ತಿದ್ದನು. ಕಾಶ್ಮೀರವನ್ನು ಗೆಲ್ಲಲು ಆತನಿಂದ ಸಾಧ್ಯವಾಗಲಿಲ್ಲ, ಗುಡ್ಡಗಾಡಿನ ದೇಶವಾದ್ದರಿಂದ ಆತನನ್ನು ತಡೆದು ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಕಾಥೇವಾಡದ ಸೋಮನಾಥದಿಂದ ಹಿಂತಿರುಗುವಾಗ ರಾಜಪುತಾನದಲ್ಲಿ ಆತನಿಗೆ ದೊಡ್ಡ ಸೋಲಾಯಿತು. ಅದೇ ಅವನ ಕೊನೆಯ ದಂಡಯಾತ್ರೆಯಾಗಿ ಪುನಃ ಅವನು ಬರಲಿಲ್ಲ.

ಮಹಮ್ಮದ್ ಮತ ಪ್ರಚಾರಕನಿಗಿಂತ ಹೆಚ್ಚಾಗಿ ಯೋಧನಾಗಿದ್ದನು. ಇತರ ಎಲ್ಲ ಯೋಧ

ಪಾರಸಿಭಾಷೆಯ ತರೀಖ್-ಇ-ಸೋರತ್ ಎಂಬ ಪ್ರಾಚೀನ ಗ್ರಂಥದಲ್ಲಿ ಮಹಮ್ಮದನು ದಿಕ್ಕು ಕಾಣದೆ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡನು, ಅವನನ್ನು ಹಿಂಬಾಲಿಸಿದ್ದ ಸ್ತ್ರೀಪುರುಷರೆಲ್ಲರೂ ಸೆರೆಬಿದ್ದರು, ತುರ್ಕಿ, ಆಫ್ಘನ್, ಮೊಗಲ್ ಸ್ತ್ರೀಯರಲ್ಲಿ ಕನ್ನೆಯರಾಗಿದ್ದವರನ್ನು ಭಾರತೀಯ ಸೈನಿಕರು ಮದುವೆ ಮಾಡಿಕೊಂಡರು.