ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦೮ ವೈಶಾಖ ಪೂಜೆಪುನಸ್ಕಾರ, ಜಪತಪಾದಿಗಳಲ್ಲಿ ಹೆಚ್ಚು ಸಮಯವನ್ನು ವ್ಯಯ ಮಾಡುವರು. ಅನಂತರ ಒಂದೇ ಊಟದ ಉಗ್ರ ವ್ರತದ ಕಟ್ಟುನಿಟ್ಟಾದ ಆಚರಣೆ. ರುಕ್ಕಿಣಿಯು ಯಾಂತ್ರಿಕವಾಗಿ ಮನೆಗೆಲಸ ಮಾಡುವಳು. ಹಗಲು ಹೇಗೊ ಕಳೆಯುವುದು. ಅನೇಕ ರಾತ್ರಿ ಕಾಲಿಟೊಡನೆಯ ಅವಳ ಒಳಗಿನ ತಳಮಳ ಆರಂಭವಾಗುವುದು. ಅನೇಕ ದಿನಗಳಿಂದ ಉಪಯೋಗಿಸದೆ ಮೂಲೆಗೊರಗಿಸಿದ ತಂಬುರಿಯನ್ನು ಯಾರೋ ಕೈಗೆತ್ತಿ ಶ್ರುತಿ ಮಾಡಿ, ಬಿಗಿದ ತಂತಿಯನ್ನೊಮ್ಮೆ ಮೀಟಿ ಹೋದಂತಾಗಿತ್ತು, ರುಕ್ಕಿಣಿಯ ಸ್ಥಿತಿ! ಮೀಟಿಹೋದಮೇಲೂ ತುಂಬೂರಿಯಿಂದ ಝೇಂಕಾರನಾದ ಬಹುಕಾಲ ಹೊರಹೊಮ್ಮುತ್ತಲೇ ಇರುವಂತೆ, ಶಾಸ್ತಿಗಳು ಎಲ್ಲೋ ಅವಳ ಅಳದಲ್ಲಿ ಅಡಗಿ ಸೊರಗಿ ಮಲಗಿದ್ದ ಬಯಕೆಗಳನ್ನು ಒಮ್ಮೆ ಮಾತ್ರ ಕೆದಕಿ, ಆ ಬಳಿಕ ವಿಶ್ವಾಮಿತ್ರನಂತೆ ತಮ್ಮ ಸಂಯಮದ ಚಿಪ್ಪಿನೊಳಗೆ ಮುದುಡಿದ್ದರು. ಎಂಟೊಂಬತ್ತು ದಿನಗಳು, ಮಳೆ ಸುರಿಸುವಂತೆ ತೋರಿ ಚರಿಹೋಗುವ ಮೊಡಗಳಂತೆ, ಕಳೆದುಹೋಗಿದ್ದವು. ಅವಳಿಗೆ ಅರಿವಿಲ್ಲದಂತೆಯೆ ಅವಳೊಳಗೆ ಪಲ್ಲವಿಸಿದ ಬಯಕೆ ಅದಮ್ಯವಾಗಿ ಬೆಳೆದು ಹೆಮ್ಮರವಾಗಿತ್ತು. ಗಂಡನೊಡನೆ ಸುಖಿಸಿದ ಹಳೆಯ ದಿನಗಳು ಅಂತರಂಗವನ್ನು ಮುತ್ತಿ ಜೇನು ಹುಳಗಳಂತೆ ಕಾಡಲುಪಕ್ರಮಿಸಿದ್ದವು. ಹೀಗಿರುವಾಗ ಒಮ್ಮೆ ಭೀಮನಹಳ್ಳಿಯ ಅಕ್ಕ ಪಾರ್ವತಿಯು ಒಂದು ಪತ್ರ ಕಳಿಸಿ, ಎರಡು ವರ್ಷಗಳ ಹಿಂದೆಯೇ ಲಗ್ನವಾಗಿದ್ದ ತನ್ನ ಮೊದಲನೆಯ ಮಗಳು ಪದ್ಮ ಋತುವಾಗಿರುವುದರಿಂದ ಮುಂದಿನ ಬುಧವಾರ ಆರತಕ್ಷತೆ ಇಟ್ಟಿದ್ದೇವೆ, ಆ ಶುಭಸಮಾರಂಭಕ್ಕೆ ತಪ್ಪದೆ ಬರಬೇಕೆಂದು ಆಹ್ವಾನಿಸಿದ್ದಳು. ಉಬ್ಬಸ ಹಿಡಿಸುತ್ತಿದ್ದ ತಮ್ಮ ಮನೆಯ ವಾತಾವರಣದಿಂದ ಕೆಲವು ದಿನಗಳವರೆಗಾದರೂ ಮುಕ್ತಳಾಗಬೇಕಂದು ರುಕ್ಕಿಣಿಗೆ ಆಪೇಕ್ಷೆಯೇನೊ ಉಂಟಾಯಿತು. ಆದರೆ ಶಾಸ್ತಿಗಳ ಊಟೋಪಚಾರಕ್ಕೆ - ಅದು ಕೇವಲ ಒಂದು ಹೊತ್ತಿನ ಭೋಜನವಾದರೂ ಸಹ – ತೊಂದರೆಯಾಗುವುದೆಂದು ಎಣಿಸಿದಳು. ಸುದ್ದಿ ತಿಳಿದಾಗ ಶಾಸ್ತಿಗಳಿಗೆ, “ಒಂದು ಹೊತ್ತಗೆ ಅಡಿಗೆ ಮಾಡಿಕಳ್ಳಲಿಕ್ಕೆ ನನಗೇನೂ ಬಾಧಕವಿಲ್ಲ. ಪದ್ಧಿ ಆರಕ್ಷತೆಗೆ ತಪ್ಪಿಸಿಕೊಬೇಡ- ಹೋಗು. ನಿನಗೆ ಇಚ್ಛೆ ಬಂದಷ್ಟು ದಿನ ಇದ್ದು ಬಾ” ಎಂದು ಒತ್ತಾಯ ಮಾಡಿದಾಗ, ರುಕ್ಕಿಣಿಯು ಭೀಮನಳ್ಳಿಯ ಪಯಣಕ್ಕೆ ಸನ್ನದ್ಧಳಾದಳು. ಗಾಡಿ ಹೊಡೆಯಲು ಶಾಸ್ತ್ರಿಗಳು ಯಥಾಪ್ರಕಾರ ಲಕ್ಕನನ್ನು ಗೊತ್ತು ಮಾಡಿದರು.