ಪುಟ:ಉಮರನ ಒಸಗೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೨

ಸರಸತೆಯಂತೆಯೇ ತತ್ತ್ವಜಿಜ್ಞಾಸೆಯೂ ಆ ದೇಶದವರಿಗೆ ಪೂರ್ವದಿ೦ದ ಬಂದಿತ್ತು. ಉಮರನ ವೇಳೆಗೆ ಮಹಮ್ಮದೀಯ ಮತವು ಅಲ್ಲಿ "ಸೂಫಿ" ಎಂಬ ಏಕಾಂತೋಪಾಸನೆಯ ರೂಪವನ್ನು ತಾಳಿತ್ತು. ಮಹಮ್ಮದ ಗುರುವು ಬೋಧಿಸಿದ್ದ ಧರ್ಮದ ಜೊತೆಗೆ ಕ್ರೈಸ್ತರ ವಿರಕ್ತಿಭಾವವನ್ನೂ, ಬೌದ್ದರ ಆತ್ಮ ನಿಗ್ರಹ ತತ್ತ್ವವನ್ನೂ ಸೇರಿಸಿಕೊಂಡು, ಜೀವ ಸ್ವರೂಪ ವಿಚಾರದಲ್ಲಿ ಬೌದ್ಧರ ಮತ್ತು ಗ್ರೀಕರ ಮತಗಳನ್ನು ಮಹಮ್ಮದೀಯ ಮತದೊಡನೆ ಸಮನ್ವಯಪಡಿಸಿಕೊಳ್ಳುವ ಪ್ರಯತ್ನದ ಫಲಿತಾಂಶವೇ ಈ "ಸೂಫಿ" ಮತವೆಂದು ಕೆಲವರು ಹೇಳುತ್ತಾರೆ. "ಸೂಫಿ" ಸಿದ್ಧಾಂತವು ವೇದಾಂತಕ್ಕೆ ಸರಿಹೋಗುತ್ತದೆ ಎಂದು ಇನ್ನು ಕೆಲವರ ಅಭಿಪ್ರಾಯ. ಏವಂ ಚ, ಉಮರನ ದಿವಸದ ಹಿಂದೆಯೇ ಇಂಡಿಯಾ, ಪ್ಯಾಲೆಸ್ಟೈನ್, ಗ್ರೀಸ್ ಮೊದಲಾದ ದೇಶಗಳ ಮತ ಮತಾಂತರಗಳ ಜ್ಞಾನವು ಪರ್‍ಸಿಸಯಕ್ಕೆ ಸಂಚಾರ ಮಾಡಿ, ಅಲ್ಲಿಯ ವಿಚಾರಪರ ಜನರ ಮಸ್ಸಿನಲ್ಲಿ ನೂತನ ಭಾವನೆಗಳನ್ನು ಹುಟ್ಟಿಸಲು ಮೊದಲು ಮಾಡಿತ್ತೆಂಬುದು ಸ್ಪಷ್ಟವಾಗಿದೆ. ಇದರ ಪರಿಣಾಮವಾದ "ಸೂಫಿ" ದರ್ಶನವು ಪ್ರಬಲಿಸುತ್ತಿದ್ದ ಕಾಲದವನು ಉಮರ್. ಆತನು "ಸೂಫಿ" ಮತದವನೇ ಎಂದು ಬಹುಮಂದಿ ಬರೆದಿದ್ದಾರೆ. ಈ ನೂತನ ಮಾರ್ಗದವರಿಗೂ ಕೇವಲ ಮಹಮ್ಮದ ಸಂಪ್ರದಾಯವೊಂದನ್ನೇ ಹಿಡಿದಿದ್ದ ಪುರಾತನ ಮಾರ್ಗದವರಿಗೂ ಆ ಕಾಲದಲ್ಲಿ ವಾದ ವಿವಾದಗಳು ಬೆಳೆದು, ದೇಶದಲ್ಲಿ ಆಧ್ಯಾತ್ಮಿಕ ಪ್ರಶ್ನೆಗಳೂ ಸಂದೇಹಗಳೂ ಹೆಚ್ಚಾಗಿರಬೇಕು.

ಆಗಿನ ರಾಜಕೀಯ ಸಂದರ್ಭಗಳೂ ಸಮಾಧಾನಕರವಾದವುಗಳೇನೂ ಆಗಿರಲಿಲ್ಲ. ಅರಬ್ಬಿ ದೇಶದವರು ಪರ್‍ಸಿಯದೊಡನೆ ಯುದ್ಧ ಮಾಡಿ ಅದನ್ನು ಒಡೆದು ದುರ್ಬಲಪಡಿಸಿದ್ದರು. ಪರ್ಸಿಯ