ಪುಟ:ಹಳ್ಳಿಯ ಚಿತ್ರಗಳು.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಊರ ಬಸ್ಸು

೧೨೩

“ಅದೆಲ್ಲಾ ಸರಿಯೆ; ತಿರುಗುವುದು ಬರಿಯ ಮೆದುಳೊ ಅಥವ ತಲೆಯೂ ತಿರುಗುತ್ತದೆಯೊ? ಇಲ್ಲದಿದ್ದರೆ ಈ ಕೊಳವನ್ನು ಬಿಟ್ಟು ಕೆಸರು ಕೊಳದಲ್ಲಿ ಯಾಕೆ ಹಂದಿಯಂತೆ ಮುಳುಗಿಕೊಳ್ಳುತ್ತಿದ್ದೆ?”

ವೇಗವಾಗಿ ಹೋಗುತ್ತಿದ್ದ ಅವನ ನಾಲಗೆಯನ್ನು ಈ ರೀತಿಯಾಗಿ ತಡೆದುದರಿಂದ ಭಟ್ಟನಿಗೆ ಅಷ್ಟೇನೂ ಸಂತೋಷವಾಗಲಿಲ್ಲ. ಆದರ ಹೇಳಿದ,

"ಆ ಕೊಳದ ಕಡೆಗೆ ಹೋಗುತ್ತಿರುವಾಗ ಏನೋ ಯೋಚಿಸುತ್ತಿದ್ದೆ. ದಾರಿಯಲ್ಲಿ ಕಣ್ಣಿಗೆ ಕಂಡರೂ ಕಾಣದಂತೆ ಆ ಕೊಳವಿತ್ತು. ಹಾಳಾದ್ದರ ಪಾಚಿ ಬೆಳೆದು ನೆಲಕ್ಕೂ ಕೊಳಕ್ಕೂ ವ್ಯತ್ಯಾಸವೇ ತಿಳಿಯಲಿಲ್ಲ. ಈ ಮೀರಿಹೋದದ್ದೇನು?

"ಏನೂ ಇಲ್ಲ. ಅದರಲ್ಲಿ ಇನ್ನೂ ಸ್ವಲ್ಪ ಹೆಚ್ಚಾಗಿ ಕೆಸರಿದ್ದಿದ್ದರೆ ಅಲ್ಲೆ ನಿನ್ನ ಗೋರಿ ಆಗೋದು."

ಭಟ್ಟನು ಈ ಮಾತನ್ನು ತಿರಸ್ಕಾರದಿಂದ ಅಲಕ್ಷ್ಯಮಾಡಿಬಿಟ್ಟನು. ಅನಂತರ ನನ್ನ ಬುದ್ದಿ ಹೀನತೆಗೋ ಎಂಬಂತೆ ಕನಿಕರದಿಂದ,

"ಎಲೋ ನಾನು ನಿನ್ನ ಹಾಗೆ ಅಂತ ತಿಳಿದುಬಿಟ್ಟಿಯೇನೊ? ಯಾವ ಕೆಲಸ ಮಾಡಬೇಕಾದರೂ ಎಂಟು ದಿವಸ ಅನ್ನ ಆಹಾರ ನಿದ್ರೆ ಇಲ್ಲದೆ-'

"ಬಟ್ಟೆಯೂ ಇಲ್ಲದೆ.”

"ಅನ್ನ ಆಹಾರ ನಿದ್ರೆ ಇಲ್ಲದೆ ಯೋಚಿಸಿ ಯೋಚಿಸಿ ಹೀಗೆಯೇ? ಎಂದು ನಿಶ್ಚಯಿಸಿ ಮಾಡುತ್ತೇನೆ. ಈಗ ನೋಡು, ಎಂಟು ರೂಪಾಯಿ ರುಮಾಲು ಹೋಯ್ತು ಅಂದುಬಿಟ್ಟೆ. ನೀನು ಮೂರು ದಿವಸ ಮೂಗು ಹಿಡಿದುಕೊಂಡು ಕೂತಿದ್ದರೂ ಅದರ ಕಾರಣ ನಿನಗೆ ಗೊತ್ತಾಗುತ್ಯೆ?"

"ಇಲ್ಲ"

“ಆಗಲಿ ಹೇಳುತ್ತೇನೆ ಕೇಳು. ವ್ಯಾಸ್ಕೊಡಗಾಮ ಬಸ್ಸಿನ ಏಜೆನ್ಸಿ ಬಿಟ್ಟ.”

"ಹೊ!"

"ಸುಮ್ಮನೆ ಹೊ ಅಂದರೆ ಪ್ರಯೋಜನವಾಗಲಿಲ್ಲ. ಮುಂದಿನ ವಿಚಾರ ಗೊತ್ತಾಯಿತು ತಾನೆ?"