ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೨
ಹಳ್ಳಿಯ ಚಿತ್ರಗಳು

ಪದದಲ್ಲಿ ಪ್ರಕೃತಿಯ ಸಮಸ್ತ ಸೌಂದಯ್ಯವೂ ಅಡಕವಾಗಿದೆ ಎಂಬುದನ್ನು ನೀವು ತಿಳಿಯಬೇಕು. ನಾವು ಹೋಗುತ್ತಿದ್ದ ರಸ್ತೆಯ ಉದ್ದಕ್ಕೂ ಹಸುರಾದ ಮರಗಳು ಸಾಲಿಟ್ಟಿದ್ದುವು. ಭೂದೇವಿಯ ಕಾಂತಿಯು ಹೊರಕ್ಕೆ ಚೆಲ್ಲಿ ತೋರುವಂತೆ ನೋಡಿದೆಡೆಯೆಲ್ಲಾ ಇಳೆಯು ಹಸುರಾಗಿದ್ದಿತು. ನೀರು ತುಂಬಿದ ಚಿಕ್ಕ ಕೊಳಗಳು ಮುತ್ತಿನ ಮಣಿಗಳಂತೆ ತೋರುತ್ತಿದ್ದುವು. ಅಲ್ಲಲ್ಲಿ ಚಿಕ್ಕ ದೊಡ್ಡ ಬೆಟ್ಟಗುಡ್ಡಗಳು ಎದ್ದು ಕಾಣುತ್ತಿದ್ದುವು. ಮಳೆಯ ನೀರು ಅವುಗಳ ಮೇಲಿನಿಂದ ಕೆಳಕ್ಕೆ ಉರುಳಿ, ಕಲ್ಲುಗಳೊಡನೆ ಆಟವಾಡುತ್ತಾ ಜುಳು ಜುಳು ರವದಿಂದ ಹರಿಯುತ್ತಿದ್ದಿತು. ನಾವು ಹೊರಟ ದಿವಸ ಮಳೆ ಇರಲಿಲ್ಲ. ಸೂರ್ಯನು ಚೆನ್ನಾಗಿಯೇ ಪ್ರಕಾಶಿಸುತ್ತಿದ್ದನು. ಅವನ ಕಿರಣಗಳು ಬೆಟ್ಟದ ತುದಿಯನ್ನು ಮುತ್ತಿಡುತ್ತಿದ್ದುವು, ಮರದ ಎಲೆಗಳೊಡನೆ ಮಾತನಾಡುತ್ತಿದ್ದುವು. ತುಂಬಿದ ಕೊಳದ ಅಲೆಗಳೊಂದಿಗೆ ಕುಣಿದಾಡುತ್ತಿದ್ದುವು. ಮೊದಲ ದಿವಸ ಮಳೆಯ ಮೋಡದ ದೆಸೆಯಿಂದ ಸೂರ್‍ಯನು ಕಣ್ಣಿಗೇ ಕಂಡಿರಲಿಲ್ಲ. ಈ ದಿವಸ ಬಿಸಿಲು ಸುಖವಾಗಿ ಭೂಮಿಯ ಮೇಲೆ ಒರಗಿದುದನ್ನು ಕಂಡು ಹಕ್ಕಿಗಳು ಆನಂದದಿಂದ ಗಾನಮಾಡುತ್ತಿದ್ದುವು.

ಸಂಧ್ಯಾಕಾಲ ೪ ಗಂಟೆಗೆ ಬೇಲೂರನ್ನು ತಲಪಿದೆವು. ದೇವಸ್ಥಾನವು ಎದುರಿಗೇ ಕಾಣುತ್ತಿದ್ದಿತು. ಹೆಸರನ್ನು ಕೇಳಿದೊಡನೆಯೇ ಮೈ ಪುಳಕಿತವಾಗುವಾಗ, ಎದುರಿಗೆ ಇದ್ದರೆ ಕೇಳಬೇಕೆ, ನಾವು ಆತುರದಿಂದ ದೇವಾಲಯದ ಪ್ರಾಕಾರದೊಳಕ್ಕೆ ನುಗ್ಗಿದೆವು. ಆ ಕಲೆಯ ದಿವ್ಯ ರಾಶಿಯನ್ನು ನೋಡಿ ಮುಗ್ಧರಾದೆವು, ಮಂಕರಾದೆವು, ಮೂಕರಾದೆವು. ಯಾವ ಕಡೆ ಮೊದಲು ನೋಡಬೇಕು, ಯಾವ ಕಡೆ ಆಮೇಲೆ ನೋಡಬೇಕೆಂಬುದೇ ನಮಗೆ ತಿಳಿಯಲಿಲ್ಲ-ಬಗೆ ಬಗೆಯ ತಿಂಡಿಗಳು ಎದುರಿಗೆ ಇರುವಾಗ ಯಾವುದನ್ನು ಮೊದಲು ತಿನ್ನಬೇಕೆಂದು ತಿಳಿಯದಿರುವ ಹುಡುಗನಂತೆ. ಅಂತೂ ದೇವಸ್ಥಾನವನ್ನು ಮೊದಲು ಒಂದು ಸುತ್ತು ತಿರುಗಿದೆವು. ಅದರಿಂದ ತೃಪ್ತರಾಗದೆ ಎರಡನೆಯ ಸಲ ಮತ್ತೆ ಯಾತ್ರೆಯನ್ನು ಪ್ರಾರಂಭಿಸಿದೆವು. ದೇವಸ್ಥಾನದ ಎರಡು ಕಡೆಯೂ ಸುಂದರವಾಗಿ ಚಿತ್ರಿತವಾದ. ಹೊಯ್ಸಳ ವಿಗ್ರಹಗಳು; ಒಳಗಡೆ ನವರಂಗ, ಅದರ ಸುತ್ತಲೂ ಗದ್ದುಗೆ;