ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೧೧೬
ಭಾರತ ದರ್ಶನ

ಯಾಯಿತು. ಉತ್ತರ ಭಾರತವು ವಿದೇಶೀಯರ ದಂಡಯಾತ್ರೆಗಳ ಸುಳಿಗೆ ಸಿಕ್ಕಿತು. ಬರುಬರುತ್ತ ಈ ಪರಿವರ್ತನೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರೆತು ದಕ್ಷಿಣ ಭಾರತವು ಹಿಂದೂ ಧರ್ಮನಿಷ್ಠೆಗೆ ತವರುಮನೆಯಾಯಿತು.

೩. ಶಾಂತಿಯುತ ಪ್ರಗತಿ ಮತ್ತು ಯುದ್ಧ ರೀತಿ

ಮೇಲಿಂದ ಮೇಲೆ ಒದಗಿದ ದಂಡಯಾತ್ರೆಗಳ, ಸಾಮ್ರಾಜ್ಯಗಳ ಮೇಲೆ ಸಾಮ್ರಾಜ್ಯಗಳು ಬಂದ ಸಂಕ್ಷೇಪ ಇತಿಹಾಸದಿಂದ ಭಾರತದಲ್ಲಿ ಆಗ ಏನು ನಡೆಯುತ್ತಿತ್ತು ಎಂಬುದರ ಕಲ್ಪನೆ ಸಹ ಆಗುವುದಿಲ್ಲ ; ತಪ್ಪು ಅಭಿಪ್ರಾಯವೂ ಹುಟ್ಟುತ್ತದೆ. ಈ ಕಾಲವು ಸುಮಾರು ಒಂದು ಸಾವಿರ ವರ್ಷಗಳ ಕಾಲದ್ದು. ಮಧ್ಯೆ ಮಧ್ಯೆ ಬಹು ಕಾಲ ಶಾಂತಿಯುತ ವ್ಯವಸ್ಥಿತ ರಾಜ್ಯಭಾರವಿತ್ತು. ಮೌರ್ಯರು, ಕುಶಾನರು, ಮತ್ತು ಗುಪ್ತರು, ದಕ್ಷಿಣದಲ್ಲಿ ಆಂಧ್ರರು, ಚಾಳುಕ್ಯರು, ರಾಷ್ಟ್ರಕೂಟರು ಮತ್ತು ಇತರರು ಈ ರೀತಿ ಪ್ರತಿಯೊಂದು ರಾಜ್ಯವೂ ೨೦೦-೩೦೦ ವರ್ಷ ಅಥವ ಇನ್ನೂ ಹೆಚ್ಚು ಕಾಲ ಭಾರತದಲ್ಲಿನ ಬ್ರಿಟಿಷ್ ಸಾಮ್ರಾಜ್ಯದ ಕಾಲಕ್ಕಿಂತ ಹೆಚ್ಚು ಕಾಲ ಅಧಿಕಾರ ನಡೆಸಿದವು. ಇವರೆಲ್ಲ ದೇಶೀಯ ರಾಜ ಮನೆತನಗಳವರು. ಉತ್ತರದ ಗಡಿಯಿಂದ ಬಂದ ಕುಶಾನರಂಥವರು ಸಹ ಈ ದೇಶ ಮತ್ತು ಅದರ ಸಂಸ್ಕೃತಿ ಯನ್ನವಲಂಬಿಸಿ ದೇಶೀಯ ರಾಜಮನೆತನಗಳ೦ತೆಯೇ ವರ್ತಿಸಿದರು. ಗಡಿನಾಡಿನಲ್ಲಿ, ಆಗಾಗ ಅಕ್ಕ ಪಕ್ಕದ ರಾಜ್ಯಗಳಲ್ಲಿ ಘರ್ಷಣೆ ಮತ್ತು ಯುದ್ದಗಳಾಗುತ್ತಿದ್ದವು. ಆದರೆ ಸಾಮಾನ್ಯವಾಗಿ ದೇಶದಲ್ಲಿ ಶಾಂತಿ ನೆಲೆಸಿತು. ರಾಜರುಗಳು ಕಲೆ ಮತ್ತು ಸಂಸ್ಕೃತಿಯ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತಿದ್ದರು. ಈ ಚಟುವಟಿಕೆಗಳು ರಾಜ್ಯದಿಂದ ರಾಜ್ಯಕ್ಕೆ ಸೀಮೋಲ್ಲಂಘನ ಮಾಡುತ್ತಿದ್ದವು. ಕಾರಣ ಸಾಹಿತ್ಯ ಮತ್ತು ಸಂಸ್ಕೃತಿಯ ಹಿನ್ನೆಲೆಯು ಭಾರತಕ್ಕೆಲ್ಲ ಒಂದೇ ಆಗಿತ್ತು. ಪ್ರತಿಯೊಂದು ತಾತ್ವಿಕ, ಧಾರ್ಮಿಕ ಜಿಜ್ಞಾಸೆಯೂ ಮರುಗಳಿಗೆಯಲ್ಲಿ ದೇಶಾದ್ಯಂತವೂ ಹರಡಿ ಉತ್ತರ ದಕ್ಷಿಣದೆರಡೂ ಕಡೆಯಲ್ಲ ವಾದ ವಿವಾದಗಳು ಜರುಗುತ್ತಿದ್ದವು.

ಎರಡು ರಾಜ್ಯಗಳಿಗೆ ಯುದ್ದವಾದಾಗ, ಅಥವ ದೇಶದಲ್ಲಿ ರಾಜಕೀಯ ಕ್ಷೋಭೆ ಎದ್ದಾಗ ಸಹ ಜನಸಮುದಾಯದ ಚಟುವಟಿಕೆಗಳಿಗೆ ಯಾವ ಆತಂಕವೂ ಬರುತ್ತಿರಲಿಲ್ಲ. ಯುದ್ದದಲ್ಲಿ ನಿರತರಾದ ರಾಜರುಗಳು ಗ್ರಾಮಗಳ ಸ್ಥಳೀಯ ಸ್ವಾತಂತ್ರಕ್ಕೆ ಯಾವ ಧಕ್ಕೆ ಯನ್ನೂ ತರುತ್ತಿರಲಿಲ್ಲ. ಯಾವ ರೀತಿಯಲ್ಲೂ ಬೆಳೆದ ಫಸಲನ್ನು ನಷ್ಟ ಪಡಿಸುವುದಿಲ್ಲ, ಅಚಾತುರ್ಯದಿಂದ ನಷ್ಟ ಪಡಿಸಿದರೆ ಪರಿಹಾರ ಕೊಡುತ್ತೇವೆ ಎಂದು ರಾಜರುಗಳು ಗ್ರಾಮಸ್ಥರೊಡನೆ ಒಪ್ಪಂದ ಮಾಡಿಕೊಂಡ ಬಗ್ಗೆ ಸಾಕ್ಷ ದೊರೆ ತಿದೆ, ಆದರೆ ಹೊರಗಿನಿಂದ ದಂಡೆತ್ತಿ ಬಂದ ಪರಕೀಯರಿಗಾಗಲಿ ಅಥವ ಪ್ರಾಯಶಃ ಅಧಿಕಾರಕ್ಕಾಗಿ ನಡೆಯುತ್ತಿದ್ದ ಅಂತರ್ಯುದ್ದಗಳಿಗಾಗಲಿ ಇದು ಅನ್ವಯಿಸುತ್ತಿದ್ದಿಲ್ಲ.

ಪ್ರಾಚೀನ ಹಿಂದೂ ಆರ್ಯರ ಯುದ್ದ ನೀತಿಯಲ್ಲಿ, ಯಾವ ಅಧರ್ಮ ಯುದ್ಧವನ್ನೂ ಮಾಡ ಕೂಡದು. ಧರ್ಮ ರಕ್ಷಣೆಗಾಗಿ ಧರ್ಮ ಯುದ್ಧ ನಡೆಯಬೇಕು ಎನ್ನುವದು ಮುಖ್ಯ ವಿಧಿ. ತತ್ವಕ್ಕೂ ಅನುಷ್ಟಾನಕ್ಕೂ ಎಷ್ಟರ ಸಾಮ್ಯವಿತ್ತೆಂಬುದು ಬೇರೆ ವಿಚಾರ. ವಿಷ ಪೂರಿತವಾದ ಬಾಣಗಳು, ಗುಪ್ರಾಸ್ತ್ರಗಳು, ನಿದ್ರಾವಶರಾದವರನ್ನು ಕೊಲ್ಲುವುದು, ಬಂದಿಗಳಾಗಿ ಅಥವ ಶರಣು ಬಂದವರನ್ನು ಕೊಲ್ಲುವುದು ನಿಷಿದ್ದವಿತ್ತು. ಒಳ್ಳೆಯ ಕಟ್ಟಡಗಳನ್ನು ನಾಶ ಮಾಡಬಾರದೆಂದೂ ವಿಧಿ ಸಲಾಗಿತ್ತು. ಆದರೆ ಇದೆಲ್ಲ ಚಾಣಕ್ಯನ ಕಾಲದ ಹೊತ್ತಿಗೆ ವ್ಯತ್ಯಾಸವಾಗುತ್ತ ಇತ್ತು. ಅವನು ಶತ್ರುವಿನ ನಾಶಕ್ಕೆ ಇನ್ನೂ ನಾಶಕಾರಕ ಮತ್ತು ಮೋಸದ ಮಾರ್ಗಗಳು ಅವಶ್ಯವೆಂದರೆ ಅನುಮೋದಿಸುತ್ತಾನೆ.

ಚಾಣಕ್ಯನು ತನ್ನ ಅರ್ಥ ಶಾಸ್ತ್ರದಲ್ಲಿ ನೂರಾರು ಜನರನ್ನು ಒಟ್ಟಿಗೆ ನಾಶಮಾಡತಕ್ಕ ಯಂತ್ರ ಗಳು ಮತ್ತೂ ಯಾವುದೋ ಸ್ಫೋಟಕ ವಸ್ತುಗಳ ವಿಷಯವನ್ನು ತಿಳಿಸುವುದು ಅತಿ ಮಹತ್ವದ ವಿಷಯ. ಕಂದಕ ಯುದ್ದದ ವಿಷಯವನ್ನು ಸಹ ತಿಳಿಸುತ್ತಾನೆ. ಅವೆಲ್ಲ ಏನು-ಎಂದು ಈಗ ಹೇಳಲು ನಿಜವಾಗಿಯೂ ಸಾಧ್ಯವಿಲ್ಲ. ಪ್ರಾಯಶಃ ರೂಢಿಯಲ್ಲಿದ್ದ ಕೆಲವು ಇಂದ್ರಜಾಲ ಶಕ್ತಿಯ