ನಾಸ್ತಿಕ ಕೊಟ್ಟ ದೇವರು/ಡಿ ಲಕ್ಸ್
ಕಥೆ : ಹನ್ನೆರಡು
ಡಿ ಲಕ್ಸ್
ಏನೋ ಧೊಪ್ಪನೆ ಕುಸಿದು ಬಿದ್ದು ಟಣ್ ಟಣಾರೆಂದು ಸಪ್ಪಳವಾಯಿತು.
ರಾಮನ್ ತಿರುಗಿ ನೋಡಿದ. ಆತ ನಿಂತಿದ್ದ ಭೋಜನದ ಡಬ್ಬಿಯ
ಬಾಗಿಲ ಮಗ್ಗುಲಲ್ಲೆ, ನಿಲ್ದಾಣದ ಪ್ಲಾಟ್ ಫಾರ್ಮಿನ ಮೇಲೆ, ಅರಿವೆಯ
ಗಂಟು ಹರಿದು, ಚೆಲ್ಲಾಪಿಲ್ಲಿಯಾಗಿ ಅಡ್ಡಾದಿಡ್ಡಿಯಾಗಿ ನಾಲ್ಕಾರು ಡಬ್ಬ
ಗಳು ಹೊರಳಾಡುತ್ತಿದ್ದುವು. ಸಾಕಷ್ಟು ಹಳೆಯದಾಗಿದ್ದ ಉಕ್ಕಿನ
ಟ್ರಂಕನ್ನೂ ಹರಿದ ಹೋಲ್ಡಾಲನ್ನೂ ತಲೆಯ ಮೇಲೆ ಹೊತ್ತಿದ್ದ ಹಮಾಲ,
ಕಕ್ಕಾವಿಕ್ಕಿಯಾಗಿ ಆ ಡಬ್ಬಿಗಳ ಮಧ್ಯೆ ನಿಂತಿದ್ದ. ಎತ್ತರದ ಗಾತ್ರದೇಹದ
ಹೆಣ್ಣು ಮಗಳೊಬ್ಬಳು, ಕೆರಳಿ, ಕೀರಲು ದನಿಯಲ್ಲಿ ಗದರುತ್ತಿದ್ದಳು:
"ಕಣ್ಣಿಲ್ಲ ನಿನಗೆ ? ಬುದ್ಧಿ ಇಲ್ಲ? ಕತ್ತೆ ! ಕತ್ತೆ ! "
ಹಿಂದೀ ಭಾಷೆ. ದಕ್ಷಿಣ ಭಾರತದ ಪದೋಚ್ಚಾರ. ['ಮದರಾಸಿ
ನವರೇ ಇರಬೇಕು.'] ನುಸುಳಿ ಹೋಗುತ್ತಿದ್ದ ಯೌವನವನ್ನು ಶರೀರದ
ಆಯಕಟ್ಟುಗಳಲ್ಲಿ ಬಿಗಿದು ಕಟ್ಟಿದ್ದಳು ಆಕೆ. ಅವಳ ಅಬ್ಬರಕ್ಕೆ ಆ ಕಟ್ಟು
ಗಳಿಗೂ ಅರಿವೆಯ ಗಂಟುಗಳಿಗೆ ಒದಗಿದ ಗತಿಯೇ ಆಗುವುದೇನೋ
ಎನಿಸುತ್ತಿತ್ತು.
ಅವಳಿಗಿಂತ ತುಸು ದೂರದಲ್ಲಿ ಗಂಡಸೊಬ್ಬ ನಿಂತಿದ್ದ—ತೆಳ್ಳಗಿನ
ವ್ಯಕ್ತಿ. ಒಂದು ಕೈಯಲ್ಲಿ ಟಿಫಿನ್ ಕ್ಯಾರಿಯರ್ ಮತ್ತು ಚೀಲಗಳು
ಮೂರು. ಎರಡು ದಿಂಬುಗಳು ಕಂಕುಳಲ್ಲಿ. ಸೊರಗಿದ ಮುಖ ಸಾರು
ತ್ತಿತ್ತು, ಬದುಕಿನ ಅಕಾಲ ಬೇಸಗೆಯಲ್ಲಿ ಆತ ಹಣ್ಣಾದವನೆಂಬುದನ್ನು.
ಅವನ ಇನ್ನೊಂದು ಕೈಯ ತೋರುಬೆರಳನ್ನು ಹಿಡಿದು, ಯಾವುದರ ಪರಿ
ವೆಯೂ ಇಲ್ಲದೆ, ಗಾಡಿಯೊಂದನ್ನೆ ದಿಟ್ಟಿಸುತ್ತ ನಿಂತಿದ್ದಳು, ಹತ್ತು ವರ್ಷದ
ಒಬ್ಬಳು ಹುಡುಗಿ. ['ಸಂಸಾರವೇ. ಸಂದೇಹವಿಲ್ಲ. ಸೆಕೆಗಾಲದ
ಬೆಂಕಿಯಿಂದ ಪಾರಾಗಲು ದೆಹಲಿ ಬಿಟ್ಟು ಮದರಾಸಿಗೆ ಓಡುತ್ತಿರಬೇಕು
ಈ ಜನ. ']
ಪ್ಲಾಟ್ ಫಾರ್ಮಿನ ಮೇಲೆ ವಿಶೇಷ ಗದ್ದಲವೇನೂ ಇರಲಿಲ್ಲ. ಹೊಸ
ದಾಗಿ ಆರಂಭವಾಗಿದ್ದ ಡಿ ಲಕ್ಸ್ ಎಕ್ಸ್ ಪ್ರೆಸ್ ಜನಕ್ಕಿನ್ನೂ ರೂಢಿಯಾಗಿರ
ಲಿಲ್ಲ. ಆದರೂ ಗಾಡಿಯೇರುವ ಅವಸರ. [' ಅಗೋ, ಸಮಯವೂ
ಆಯಿತು. ಇನ್ನಿರುವುದು ಐದೇ ನಿಮಿಷ.']
ಆ ಮಹಿಳೆಯ ಅಟಾಟೋಪ ನಡದೇ ಇತ್ತು:
"ನೋಡ್ತಾ ನಿಂತಿದೀಯಲ್ಲೊ, ಬೇಕೂಫ! ಎತ್ತು ಅವನೆಲ್ಲ!
ಬಿಗಿದು ಕಟ್ಟು!"
ಕೆಲಸವಿಲ್ಲದ ಜನ ಸುತ್ತುವರಿದು ನಿಂತರು, ಕಣ್ಣಗಲಿಸಿ ಆಕೆಯನ್ನೇ
ನೋಡುತ್ತ. ಸಮಾಧಾನದ ವಿಷಯ ಅವಳ ಪಾಲಿಗೆ. ['ತನ್ನ ಒದರಾಟದ
ನಡುವೆಯೂ ತೇಲುಗಣ್ಣುಗಳಿಂದ ಸುತ್ತೆಲ್ಲ ನೋಟ ಬೀರಿ, ಕೆಂಪು ಮೆತ್ತಿದ್ದ
ತುಟಿಗಳನ್ನು ಮಿಸುಕಾಡಿಸಿದಳಲ್ಲ!' ]
ಚೇತರಿಸಿಕೊಂಡೆದ್ದ ಹಮಾಲನೆಂದ:
"ಎಲ್ಲಾ ಮಾಡತೇನ್ರಿ ; ಮೊದಲು ತಲೆ ಮ್ಯಾಗಿಂದೀಟು ಬ್ರೆಕ್
ವಾನ್ ದಾಗ ಇಡಸ್ರಿ."
ಹೆಂಡತಿಯ ಹುಬ್ಬುಗಳ ಕುಣಿತ ಆರಂಭವಾದುದಕ್ಕೂ ಮುಂಚೆ,
ಗಂಡನೆಂದ:
"ಯಾಕೆ?"
"ಏರ್ಕಂಡೀಸನ್ ಗಾಡಿ ಐತ್ರಿ ಇದು !"
ಅವಮಾನಿತಳಾದ ಲಲನೆ ಅಂದಳು:
"ಏರ್-ಕಂಡೀಶನ್ಡ್ ಗಾಡಿ ಅಂತಲೇ ಇದರಾಗ ಹೊಂಟೇವಿ! ಒಳ
ಗಿಡು ಸಾಮಾನು!"
ಈ ತಾಯಿಗೆ ತಿಳಿಯ ಹೇಳುವುದರಲ್ಲಿ ಅರ್ಥವಿಲ್ಲವೆಂದು, ತಲೆಯ
ಮೇಲಿದ್ದ ಹೇರಿನೊಡನೆ ಹಮಾಲ ಡಬ್ಬಿಯನ್ನೇರಿದ.
ಗಂಡನ ಕಡೆ ನೋಡಿದ ಮೆಮ್ ಸಾಹೇಬರಿಂದ ಇಂಗ್ಲಿಷಿನಲ್ಲಿ ಮಾತು
"ಶಿಲಾಪ್ರತಿಮೆಯ ಹಾಗೆ ನಿಂತರಾಯ್ತೇನು? ಜೋಡಿಸಿ ಇಡ
ಬಾರ್ದ ಇವನ್ನ? "
"ನಾನು — ಹೆಂಗ್ಮಾಡ್ಲಿ— ಕೈಯಾಗ— "
ಹಿಂದಿದ್ದವರು ಯಾರೊ ಫಕಪಕನೆ ನಕ್ಕರು.
ಇದನ್ನೆಲ್ಲ ನೋಡುತ್ತ ನಿಂತಿದ್ದ ರಾಮನ್ ಗೆ ಬಲು ಮೋಜೆನಿಸಿತು.
ಅವನ ತುಟಿಗಳ ಮೇಲೆ ಮುಗುಳುನಗೆ ಮೂಡಿತು
"ಏಯ್ ! ಯಾಕ್ನಿಂತಿದೀಯೊ ಅಲ್ಲಿ? ಒಳಗ್ನಡಿ !"
—ಗುಡುಗಿದವನು ಭೋಜನದ ಡಬ್ಬಿಯ ಮೇಲ್ವಿಚಾರಕ.
ಆ ಅಧಿಕಾರವಾಣಿಯನ್ನು ಕೇಳಿ ರಾಮನ್ ನಡುಗಿದ. ಪಾದ ಕದಲಿಸಿ
ತೆಪ್ಪನೆ ಒಳಕ್ಕೆ ಸಾಗಿದ.
ರಾಮನ್ ನಿಂತಿದ್ದ ಜಾಗದಲ್ಲಿ ಈಗ ಆತನ ಒಡೆಯ ನಿಂತು, ಮಂದ
ಹಾಸ ಸೂಸುತ್ತ ಆ ದೃಶ್ಯವನ್ನು ನೋಡಿದ . ಆ ಸ್ತ್ರೀರತ್ನ ತನ್ನನ್ನು ಗಮ
ನಿಸಿದಾಗ, ಅರೆಚಣ ಎವೆ ಮುಚ್ಚಿ ತೆರೆದು, ಪ್ರಯತ್ನಪೂರ್ವಕವಾಗಿ ಧ್ವನಿ
ಯನ್ನು ಮಿದುಗೊಳಿಸುತ್ತ, ಅವನೆಂದ:
"ಹೊತ್ತಾಯ್ತು. ನೀವು ಹತ್ತಿರಿ!"
ಒಳಸೇರಿದ ರಾಮನ್, ತನ್ನಂತೆಯೇ ಸ್ವಚ್ಛವಾದ ಬಿಳಿಯ ಸಮ
ವಸ್ತ್ರ ಧರಿಸಿದ್ದ ಸಂಗಡಿಗರನ್ನು ನೋಡಿದ. ಬೇರೆ ರೈಲುಗಾಡಿಯಲ್ಲಾದರೆ
ಒಂದು ಪ್ರವಾಸ ಮುಗಿಸುವ ವೇಳೆಗೆ ಬಿಳಿದು ಕರಿದಾಗಲೇಬೇಕು. ಇದರಲ್ಲಿ
ಹಾಗಲ್ಲ. ಹೊರಗಿನ ಧೂಳು ಒಳ ಸೇರದು. ಉಗಿಯಂತ್ರದ ಧೂಮ ಬಳಿ
ಸಾರದು. ಎಲ್ಲವೂ ಸ್ವಚ್ಛ— ಎಲ್ಲವೂ. ಭೋಜನದ ಉಪಾಹಾರದ ಆ
ಕೊಠಡಿಯಲ್ಲಿ, ಮೇಜು ಕುರ್ಚಿಗಳು ಅಣಿಯಾಗಿದ್ದುವು. ಪ್ರತಿಯೊಂದು
ಮೇಜಿನ ಮೇಲೆಯೂ ಶ್ವೇತವಸ್ತ್ರ. ಹೂದಾನಿ-ಕಾಗದದ ಹೂಗಳು. ಧೂಮ
ಕರಂಡ. ಕಿಟಿಕಿಗೆ -ಪದರ ಪದರಗಳ ದಪ್ಪನೆಯ ಗಾಜಿನ ಕಿಟಿಕಿಗೆ - ಪರದೆ.
ಕೈಮಗ್ಗದ ಬಣ್ಣ ಬಣ್ಣದ ಅರಿವೆಯನ್ನು ಹೋಲುತ್ತಿತ್ತು, ಪರದೆಗೆ ಬಳಸಿದ
ಕ್ಯಾಲಿಕೋ. ಜಗ್ಗಿದರೆ ಕೆಳಕ್ಕೆ ಸರಿಯುತ್ತಿತ್ತು . ಮೇಲಕ್ಕೆ ತಳ್ಳಿದರೆ
ಮೇಲ್ಮೊಗವಾಗಿ. ಫ್ಯಾನುಗಳಿಲ್ಲ. ಕೊಠಡಿಯ ತುಂಬೆಲ್ಲ ನಿಯಂತ್ರಿತ
ಹವೆ. ಬಹು ಜನ ಪ್ರಯಾಣಿಕರಿಗಾಗಿ ಎರಡು ಡಬ್ಬಿಗಳು; ಮತ್ತೊಂದು.
ಮೊದಲ ತರಗತಿಯವರಿಗಾಗಿ ಸಿದ್ಧವಾಗುತ್ತಲಿದ್ದ ತಿಂಡಿಯ ಹಾಗೆ
ಗಾಡಿಯೂ ತಾಜಾ ಮಾಲು. ಪ್ರಯಾಣಿಕರು ಮಾತ್ರ ಹಳಬರೇ.
ಮುಖಗಳು ಬೇರೆ ಬೇರೆ. ಆದರೆ, ಒಟ್ಟಿನಲ್ಲಿ ಅವರೆಲ್ಲ ಒಂದೇ.
ಇಪ್ಪತ್ತು ವರ್ಷಗಳ ತನ್ನ ಒಟ್ಟು ಬದುಕಿನಲ್ಲಿ , ಅದರಲ್ಲೂ ತಿಳಿವಳಿಕೆ
ಮೂಡಿದ ಬಳಿಕ ತಾನು ಜೀವಿಸಿದ್ದ ಸುಮಾರು ಹದಿನೈದು ವರ್ಷಗಳ
ದೀರ್ಘ ಕಾಲ, ರಾಮನ್ ಗಾಗಿದ್ದ ಅನುಭವಗಳ ಮೊತ್ತ ಒಂದೇ ತತ್ತ್ವವನ್ನು
ಸಾರಿತ್ತು:
"ಜನ ಎಲ್ಲಿದ್ದರೂ ಒಂದೇ; ಒಟ್ಟಿನಲ್ಲಿ ಒಂದೇ."
ಘಂಟೆ. ನೀಳವಾಗಿ ಹೊರಟ ಶಿಳ್ಳು.
ಸದ್ದಿಲ್ಲದೆ ಗಾಡಿ ಚಲಿಸತೊಡಗಿತು.
ಹೃದಯದ ಹೊರೆ ಇಳಿದಂತಾಯಿತು ರಾಮನ್ ಗೆ. ನವದೆಹಲಿ
ಯನ್ನು ಬಿಟ್ಟು ಮುಂದಕ್ಕಿನ್ನು ಪ್ರಯಾಣ, ಮದರಾಸಿಗೆ. ಎತ್ತ ಹೋದರೂ
ಸರಿಯೆ, ಆ ಬಗೆಯ ಚಲನೆಯೇ ಅಪೂರ್ವವಾದ ಸುಖ ಅವನ ಪಾಲಿಗೆ .
ಗಾಡಿ ಚಲಿಸುತ್ತಿತ್ತು. ನಿಲ್ದಾಣವನ್ನು ಹಿಂದಿಕ್ಕಬೇಕು ಇನ್ನು .
"ಹಾ ! ಅಗೋ !"
ಸಹೋದ್ಯೋಗಿಗಳಲ್ಲಿ ಒಬ್ಬ ತೆಗೆದ ಉದ್ಗಾರ ಅದು.
ಎಲ್ಲರೂ ಕಿಟಕಿಯ ಗಾಜಿನಾಚೆಗೆ ದೃಷ್ಟಿ ಹರಿಸಿದರು.
ಪ್ಲಾಟ್ ಫಾರ್ಮಿನ ಮೇಲೆ ಅಲ್ಲಿ ಇಲ್ಲಿ ನಿಂತಿದ್ದ ಜನರ ಗುಂಪುಗಳನ್ನು
ಸೀಳಿ ಹಾದು, ಯುವಕನೊಬ್ಬ ಗಾಡಿಯ ಕಡೆಗೆ ಧಾವಿಸಿದ್ದ. ಕೈಯಲ್ಲೊಂದು
ಸೂಟ್ ಕೇಸ್ . ಗಾಡಿಯ ಕದಗಳೋ ಬಲು ದಪ್ಪ, ಬಲು ಭದ್ರ. ಹಿಡಿ
ಸಡಲಿದರೆ, ಅಡಿ ತಪ್ಪಿದರೆ, ಸಾವನ್ನು ಅಪ್ಪಿದಂತೆಯೇ.
ರಾಮನ್ ತಾನೂ ಉದ್ಗಾರವೆತ್ತಿದ:
"ಹಾ !"
ಬಾಗಿಲನ್ನು ತಳ್ಳಿದವನೆ ಮಗ್ಗುಲ ಡಬ್ಬಿಯೊಳಕ್ಕೆ ಬಂದೇ ಬಿಟ್ಟಿದ್ದ
ಗಟ್ಟಿಮುಟ್ಟಾದ ಆ ಮನುಷ್ಯ.
ಕೊಠಡಿಯ ಮ್ಯಾನೇಜರು ನುಡಿದ :
"ಚಾರ್ ಸೌಬೀಸೇ ಸರಿ. ಕೊಲೆಮಡಿಯೋ ಕಳವು ಮಾಡಿಯೋ
ಬಂದಿರಬೇಕು. ಹುಂ !"
ಆದರೂ—
ಸುಮಾರು ಹನ್ನೆರಡು ವರ್ಷಗಳಿಗೆ ಹಿಂದೆ, ಬಲು ಚಿಕ್ಕ ಹುಡುಗನಾಗಿ
ದ್ದಾಗ, ಪಶ್ಚಿಮ ತೀರದ ತೆಂಗು ಕಂಗಿನ ತನ್ನ ಹಳ್ಳಿಯನ್ನು ಬಿಟ್ಟುಬಂದಿದ್ದ,
ರಾಮನ್ . ಹೆತ್ತವರನ್ನು, ಆರೆಂಟು ಜನ ಒಡಹುಟ್ಟಿದವರನ್ನು, ಬಿಟ್ಟು
ಓಡಿ ಬಂದಿದ್ದ . ನಿತ್ಯ ಉಪವಾಸದ ಬಡ ಗುಡಿಸಲಿಗಿಂತ , ಅಪರಿಚಿತ
ಊರುಗಳಲ್ಲಿ ಅಂಡಲೆಯುವುದೇ ಮೇಲೆಂದು ಅವನಿಗೆ ಕಂಡಿತ್ತು. ಕಾಲು
ಬಳಲಿದವರೆಗೂ ದಾರಿ ನಡೆದು, ದಯೆತೋರಿದವರ ಎತ್ತಿನ ಗಾಡಿಯಲ್ಲಿ
ಕುಳಿತು, ಹೇರು ತುಂಬಿದ್ದ ಲಾರಿಯಲ್ಲೂ ಬಂದಷ್ಟು ದೂರ ಸಾಗಿ, ರಾಮನ್
ನಗರ ತಲಪಿದ್ದ. ಚಲಿಸತೊಡಗಿದ್ದ ರೈಲಿನೆಡೆಗೆ ತಾನು ಧಾವಿಸಿದ್ದುದು
ಮುಂದೆ ಆ ಊರಲ್ಲೇ. ಯಾರೋ ಕೈನೀಡಿದ್ದರು. ಅದನ್ನು ಹಿಡಿದು
ಹತ್ತಿದ್ದ. ಹಳೆಯ ಗಾಡಿ. ನೂಕುನುಗ್ಗಲಿನ ಡಬ್ಬಿ. ಯುದ್ಧ ಕಾಲದ
ಗದ್ದಲ. [ಕೊಲೆಯೂ ಮಾಡಿರಲಿಲ್ಲ ತಾನು. ಕಳವೂ ಮಾಡಿರಲಿಲ್ಲ.]
"ಸಪ್ಪೆ ಮೋರೆ ಹಾಕಿ ನಿಂತುಬಿಟ್ಟೆಯಲ್ಲೋ ತತ್ತ್ವಜ್ಞಾನಿ? ಗಿರಾಕಿ
ಗಳು ಬಂದರೂ ಕಣಿಸೋದಿಲ್ವೇನು?"
ರಮನ್ ಬೆಚ್ಚಿಬಿದ್ದ. ಅದು ಆತನನ್ನು ಕುರಿತು ಮ್ಯಾನೇಜರನಿಂದ
ಬಂದ ಗದರಿಕೆ.
ಪ್ರಯಾಣಿಕರು ಬರತೊಡಗಿದ್ದರು ಭೋಜನದ ಉಪಾಹಾರದ ಆ
ಡಬ್ಬಿಗೆ. ಧೂಮ್ರಪಾನಕ್ಕೆ ನಿಷೇಧವಿಲ್ಲದಿದ್ದುದು ಗಾಡಿಯಲ್ಲಿ ಇದೊಂದೇ ಕಡೆ.
—"ಲೆಮನ್ ಕ್ರಶ್."
—"ಐಸ್ ಕ್ರೀಮ್ ಇಲ್ಲ, ಅಂದಿಯೇನು?"
—"ಏಕ್ ಪಾಟ್ ಕಾಫಿ."
ಏನಾದರೂ ಮಾತು, ತಮ್ಮ ತಮ್ಮಲ್ಲೇ ಹರಟೆ. ನಿಮಿಷ ಗಟ್ಟಲೆ.
ತಾಸುಗಟ್ಟಲೆ.
—"ಬ್ರೆಡ್ ಬಟರ್ ಔರ್ ಚಾಯ್..."
ಜುಬ್ಬ, ಕಚ್ಚೆಪಂಚೆ, ಶಾಲು. ಭಾರೀ ಮೀಸೆಯ ಧಡೂತಿ ಇಸಮು
ಗಳು ಮೂವರು. ಆಂಧ್ರ ದೇಶದ ಜನ. ತೆಲುಗಿನಲ್ಲಿ ಮಾತುಕತೆ. ತೆಲುಗಿ
ನಲ್ಲೇ. ಹಿಂದೆ ರಾಮನ್, ಮೊದಲಲ್ಲಿ ಕಲಿತ ತೆಲುಗು ಪದಗಳು ಎರಡೇ:
"ದೊಂಗಲುನ್ನಾರು ಜಾಗ್ರತ!" ["ಕಳ್ಳರಿದ್ದಾರೆ ಎಚ್ಚರಿಕೆ!"] ಈಗ, ಆಡ
ಲಾಗದಿದ್ದರೂ ಎಷ್ಟನ್ನೋ ಅರ್ಥಮಾಡಿಕೊಳ್ಳುತ್ತಿದ್ದ. ಹಿಂದಿ ಬರುತ್ತಿತ್ತು,
ಹರುಕು ಮುರುಕು ಹಿಂದಿ. ಮದರಾಸಿನ ಬೀದಿಗಳಲ್ಲಿ ತಿಪ್ಪೆತೊಟ್ಟಿಯ
ಶಿಶುವಾಗಿ ಬೆಳೆದಾಗ ತಮಿಳೂ ಅಂಟಿಕೊಂಡಿತ್ತು. ಹಿಂದೆ ಬಹು ಭಾಷಾ
ರಾಜಧಾನಿಯಾಗಿತ್ತು ಆ ಊರು . ಹೀಗಾಗಿ ಕನ್ನಡವೂ ಬರುತ್ತಿತ್ತು,
ಅಲ್ಪ ಸ್ವಲ್ಪ. ಇಷ್ಟು ಸಾಲದೆಂದು ಬಟ್ಲರ್ ಇಂಗ್ಲಿಷ್ ಬೇರೆ. ಆರ್ಡರಿತ್ತವರು
"Understand?" ಎಂದರೆ, ಈತ ಅನ್ನುತ್ತಿದ್ದ: " Yes " ...
ಇಲ್ಲಿ ಮೇಜುಗಳನ್ನು ಮೂವರು ಹಂಚಿಕೊಂಡಿದ್ದರು. ಮುಕ್ಕಾಲಂಶ
ಸೀಟುಗಳು ಖಾಲಿಯಾಗಿಯೇ ಹೋಗುತ್ತಿದ್ದ ಗಾಡಿ. ಹೆಚ್ಚಿನ ಕೆಲಸವಿರಲಿಲ್ಲ.
. . . ಹುಡುಗಿಯನ್ನು ಕರೆದುಕೊಂಡು ಆ ಮಹಿಳೆ ಬಂದಳು. ರಾಮನ್
ಮೇಜಿನ ಬಳಿ ಸಾರಿದ.
ಹತ್ತಿರ ನಿಂತ 'ಬೇರರ್' ನನ್ನ ದಿಟ್ಟಿಸಿ ಆಕೆ ತಮಿಳಿನಲ್ಲಿ ಅಂದಳು:
"ಗಾಡಿ ಕುಲುಕ್ತದೆ. ನರ್ತನ ಮಾಡ್ಕೊಂಡೇ ಬರಬೇಕಾಗ್ತದೆ ಇಲ್ಲಿಗೆ!"
ರಾಮನ್ ನಗಲಿಲ್ಲ.
ಗಾಂಭೀರ್ಯ ತಳೆದು ಅವಳು ಕೇಳಿದಳು:
"ಏನೇನಿದೆ ?"
ಆಗ ಅಷ್ಟು. ರಾತ್ರೆಗೆ ಏನಿತ್ತು? ಮಾರನೆಯ ಬೆಳಗ್ಗೆ?
"ಆರು ಘಂಟೆಗೆ ಕಾಫಿ ಬೇಕೇ ಬೇಕು."
ಅದು ಬೆಡ್ ಕಾಫಿ. [ಮಲಗಲಾಗದೆ ಕುಳಿತೇ ಇದ್ದರೂ ಕೂಡಾ !]
ಆಮೇಲೆ break-fast. ಮಧ್ಯಾಹ್ನ ಎಷ್ಟು ಹೊತ್ತಿಗೆ ಸಿಗಬಹುದು ಊಟ?
ಮಾತು, ಮಾತು, ಮಾತು.
"ಅಬ್ಬ !"ಎಂದುಕೊಂಡ ರಾಮನ್.
ಕಿವಿ, ಕತ್ತು, ಕೈಗಳ ತುಂಬ ಬಂಗಾರ. ಮಾತಿಗಷ್ಟೇ ಬೆಲೆ ಇರಲಿಲ್ಲ .
"ಬಿಲ್ ಮದರಾಸಿನಲ್ಲೇ ಒಟ್ಟಾಗಿ ಕೊಡ್ತೀಯೋ, ಅಲ್ಲ"
ಉತ್ತರ ಥಟ್ಟನೆ ಬಂತು:
"ಇಲ್ಲ. ಲೆಕ್ಕ ಇಡೋದು ತೊಂದರೆ..."
"ಸರಿ, ಸರಿ..."
ಒಂದು ರೂಪಾಯಿ ಚಿಲ್ಲರೆಯ ಅಲ್ಪೋಪಹಾರ ಮುಗಿಸಿ ಆಕೆ
ಭಕ್ಷೀಸೇನೋ ಸಿಗಬಹುದು. ಆದರೆ ಈ ಮಹಾರಾಯಿತಿಯೊಡನೆ, ಲೆಕ್ಕ
ಸರಿ ತಪ್ಪು ಎಂದು ವಾದಿಸುವವರು ಯಾರು ? ನಡುವೆ ಕಣ್ಣು ತಪ್ಪಿಸಿ
ಇಳಿದು ಹೋದರಂತೂ ತನಗೆ ಕ್ಷೌರವೇ ! ಒಮ್ಮೆ ಕೆನ್ನೆ ಕೆತ್ತಿಸಿಕೊಂಡಿದ್ದ
ರಾಮನ್ ಗೆ ಅಂತಹ ಕ್ಷೌರದ ಸವಿ ಚೆನ್ನಾಗಿ ಗೊತ್ತಿತ್ತು.
ಹೊಸ ಹೊಸ ಗಿರಾಕಿಗಳು. ಸಿಗಾರ್ ಹಚ್ಚಿದ್ದ ಬೊಕ್ಕ ತಲೆಯವ
ನೊಬ್ಬ. ಭಾರತ ದರ್ಶನಕ್ಕೆಂದು ಹೊರಟಿದ್ದ ಅಮೇರಿಕನ್ ದಂಪತಿ
ಗಳಿಬ್ಬರು. ಒಂಟಿಯಾಗಿಯೇ ಪ್ರವಾಸ ಬೆಳಸುತ್ತಿದ್ದ ವಿದ್ಯಾರ್ಥಿನಿ ಒಬ್ಬಾಕೆ.
ಆಗ್ರಾ ಗ್ವಾಲಿಯರ್ ವರೆಗಿನ ಪ್ರಯಾಣಿಕರು ಕೆಲವರು. ತಲೆಯಲ್ಲಿ ಪುಟ್ಟ
ಚಂಡಿಕೆ ಇರಿಸಿ ಸೂಟು ಧರಿಸಿದವನೊಬ್ಬ.
ಕೊನೆಯ ಆ ಮನುಷ್ಯ, ಕೈತುಪಾಕಿಯ ಗುಂಡುಗಳಂತೆ ವಟವಟ
ಮಾತು ನಡಸಿದ್ದ:
" ಏರ್ ಸರ್ವೀಸಿನ ಹಾಗೆ. ಈ ಗಾಡೀಲಿ ರಾತ್ರಿ ಕೂತೇ ಇರೋದು
ಬಹಳ ಕಷ್ಟ. ಮಂತ್ರಿಯವರನ್ನು ಭೇಟಿ ಮಾಡಿ ನಾನು ಮಾತಾಡ್ಬೇಕು."
. . . ದೀಪಗಳು ಹತ್ತಿಕೊಂಡುವು. ಹೊರಗಿನ ಮಬ್ಬುಗತ್ತಲೆಯನ್ನೇ
ದಿಟ್ಟಿಸುತ್ತ ರಾಮನ್ ನಿಂತ. ಆತನ ಕೆಲಸವಿನ್ನೂ ಖಾಯಂ ಆಗಿರಲಿಲ್ಲ.
ಊರಿನಿಂದ ಕಾಗದ ಬಂದಿತ್ತು : ' ವರ್ಷಕ್ಕೊಮ್ಮೆಯಾದರೂ ಬಂದು
ಹೋಗಬಾರದೇನು? ನಿನ್ನ ತಾಯಿಗೆ ಕಾಹಿಲೆ, ತಂಗಿಗೆ ಮದುವೆ ಗೊತ್ತಾಗಿ
ರಜಾ ಪಡೆದು ಇದ್ದಷ್ಟು ಹಣ ತಗೊಂಡು ಬಾ. . .' ರಜಾ ಸಿಗುವಂತಿರ
ಲಿಲ್ಲ. ಹಣವನ್ನೇನ್ನೋ ಕಳಿಸಬೇಕು; ಈ ತಿಂಗಳ ವೇತನ ಕೈಗೆ ಬಿದ್ದೊಡನೆ
ಆದಷ್ಟನ್ನು ಕಳಿಸಬೇಕು. . .
ಯಾರೋ ಬಂದು ಕುಳಿತು ಕೆಮ್ಮಿದಂತಾಯಿತು. ತನ್ನ ಗಮನ ಸೆಳೆದ
ಒಣ ಕೆಮ್ಮು. ಮುಗುಳುನಗೆ ಜತೆಗೆ.
"ಊಟ ತಯಾರಿದೆಯೇನು?"
ಇಂಗ್ಲಿಷಿನಲ್ಲಿ ಬಂದ ಪ್ರಶ್ನೆಗೆ ಇಂಗ್ಲಿಷಿನಲ್ಲೇ ಹೌದೆಂದು ಉತ್ತರ .
ಮತ್ತೆ ಮುಂದೆ—ತಾನೇ—
" ಮಾಂಸಾಹಾರವೋ? ಶಾಕಾಹಾರವೋ?"
ಉತ್ತರದ ಜತೆ—
". . . ಚಪಾತಿ ಮತ್ತು ಅನ್ನ".
. . . ಆತ ಉಣ್ಣುತ್ತಿದ್ದುದನ್ನು ರಾಮನ್ ನೋಡುತ್ತ ನಿಂತ. ಹಿಂದೆ
ಎಲ್ಲಿ ಕಂಡಿದ್ದೆ ಇವನನ್ನು? —ಎಲ್ಲಿ ? ಓ ! ರೈಲು ದೆಹಲಿ ನಿಲ್ದಾಣ ಬಿಟ್ಟ
ಮೇಲೆ ಓಡಿ ಬಂದು ಹತ್ತಿದವನು ಈತನೇ. ನಸುಹಳದಿಯ ಪ್ಯಾಂಟು,
ಬಿಳಿಯ ಬುಶ್ ಶರಟು, ಕನ್ನಡಕ. ಆಹ ಈತನೇ—
ಕೊಲೆಗಡಕನೂ ಅಲ್ಲ, ಕಳ್ಳನೂ ಅಲ್ಲ. ಯಾವುದಾದರೊಂದು ಅವ
ಸರದ ಕೆಲಸದ ಮೇಲೆ ಹೊರಟಿರಬಹುದು. ಉತ್ತರ ಭಾರತೀಯನೆ? ಇರ
ಲಾರದು. ತಮಿಳನಂತೂ ಅಲ್ಲ. ತನ್ನ ನಾಡಿನವನು ? ಕಲ್ಪನೆಯೇನೋ
ಮಧುರವಾದುದು. ಆದರೆ ಊಹೆಗೆ ಯಾವ ಆಧಾರವೂ ಇರಲಿಲ್ಲ.
ತೆಲುಗನೂ ಇದ್ದಂತಿಲ್ಲ.
ತಮಿಳಿನಲ್ಲಿ ರಾಮನ್ ಕೇಳಿದ:
" ಮದರಾಸಿಗೆ ಹೋಗ್ತಿದೀರೇನು?"
" ಮತ್ತೂ ಮುಂದೆ. ಬೆಂಗಳೂರಿಗೆ."
—ಇಂಗ್ಲಿಷಿನಲ್ಲಿ ಬಂದ ಉತ್ತರ.
['ಕನ್ನಡಿಗ ಹಾಗಾದರೆ.']
ಊಟ ಮುಗಿದಾಗ ಆ ಮನುಷ್ಯ ಕೇಳಿದ:
"ಬಿಲ್ ಎಷ್ಟಾಯ್ತು ? ಈಗಲೇ ಕೊಡಲಾ ?"
"ಹೇಗೆ ಬೇಕೋ ಹಾಗೆ. ಮದರಾಸಿನಲ್ಲೇ ಕೊಟ್ಟೀರಂತೆ."
"ಆಗಲಿ," ಎಂದ ಆತ ಸಿಗರೇಟು ಹಚ್ಚುತ್ತ.
ಮಾತು ತನ್ನ ಬಾಯಿಯಿಂದ ಹೊರಬಿದ್ದ ಬಳಿಕ ರಾಮನ್ ಚಡ
ಪಡಿಸಿದ. ಛೆ ! ಏನು ಮಾಡಿದೆ ತಾನು? ಬಿಲ್ಲಿನ ಹಣ ಎಲ್ಲಾದರೂ
ಸಿಗದೇ ಹೋದರೆ ? ಈ ತಿಂಗಳ ವೇತನಕ್ಕೇ ಸಂಚಕಾರ. ಈಗ ಏನೂ
ಮಾಡುವಂತಿರಲಿಲ್ಲ. ಆ ಹೆಂಗಸಿಗಾದರೆ ನಕಾರದ ಉತ್ತರವಿತ್ತಿದ್ದ, ಬಲು
ಸುಲಭವಾಗಿ. ಇಲ್ಲಿ ಯಾಕೆ ಹೀಗಾಯಿತು? ಯಾಕೆ?
ಬಾಗಿಲಲ್ಲಿ ಆ ಹೆಣ್ಣುಮಗಳು ಕಾಣಿಸಿಕೊಂಡಳು.
ಮ್ಯಾನೇಜರು, ಪಕ್ಕದಲ್ಲಿದ್ದ ತನ್ನ ಅಚ್ಚುಮೆಚ್ಚಿನ ಕೆಲಸಗಾರ
ನೊಡನೆ ನಗುತ್ತ ಅಂದ:
" ಡಿ ಲಕ್ಸ್ ಬರ್ತಿದೆ, ನೋಡು!"
ಕನ್ನಡಕದ ಯುವಕ ಇತರರಂತೆ, ಕಬಳಿಸುವ ನೋಟದಿಂದ ಆಕೆ
ಯನ್ನು ನೋಡಲಿಲ್ಲ. ಎದ್ದು, ತನ್ನ ಡಬ್ಬಿಗೆ ಹಿಂತಿರುಗಿದ.
'ಇವನು ಮೋಸ ಮಾಡಲಾರ,' ಎಂದುಕೊಂಡ ರಾಮನ್.
. . . ಝಾನ್ಸಿ ದಾಟಿದ ಬಳಿಕ, ಮೇಜುಗಳನ್ನು ಸರಿಸಿ ಅಲ್ಲೇ
ಶಯನ. ನಿದ್ದೆ ಬರುವುದಕ್ಕೆ ಮುನ್ನ ಯೋಚನೆ ಕಾಡಿತು:
ಬೆಳಗಿನ ಜಾವವೇ ಭೋಪಾಲದಲ್ಲೋ ಇತಾರ್ಸಿಯಲ್ಲೋ ಆತ
ಇಳಿದು ಹೋದರೆ?
ಬೆಳಗಾಯಿತು.
ಒರಗು ಆಸನಗಳಲ್ಲಿ ಕುಳಿತೇ ನಿದ್ದೆಹೋಗಿದ್ದ ಜನ ಎದ್ದು ಬಂದರು,-
ಕಾಫಿಗೆಂದು, ಚಹಾಕ್ಕೆಂದು.
ತನ್ನ ಮೇಜಿನ ತನ್ನ ಮೂಲೆಗೆ ಸಾಗಿದ, ಆ ಯುವಕ ಕೂಡಾ.
ಮಧ್ಯಾಹ್ನಕ್ಕೆ ನಾಗಪುರ. ಸಂಜೆಗೆ ಕಾಜೀಪೇಟೆ. ನಡುವಿರುಳಿಗೆ
ಬೆಜವಾಡಾ.
ಮೂರನೆಯ ಪ್ರಾತಃಕಾಲ. . .
ಹತ್ತು ಹೊಡೆಯುವ ಹೊತ್ತಿಗೆ ಮದರಾಸು ಸೇರಬೇಕು. ಗುಡ್ಡ
ಗಳನ್ನು ಕೊರೆದು, ನದಿಗಳನ್ನು ದಾಟಿ, ಕಣಿವೆಗಳನ್ನು ಬಳಸಿ, ಬಣ್ಣ
ಬಣ್ಣದ ಕನ್ನಡಿ ಹಾವಾಗಿ, ಎರಡು ಇರುಳು ಒಂದು ಹಗಲು ಕಳೆದ
ಬಳಿಕ, ಗಾಡಿಗೆ ವಿಶ್ರಾಂತಿ. ರಾಮನ್ ಗೂ ವಿಶ್ರಾಂತಿ, ಒಂದು ದಿನದ
ಮಟ್ಟಿಗೆ. ಆದರೆ ಈಗ ಬಿಲ್ ಸಿದ್ಧಗೊಳಿಸಬೇಕು. ಗೂಡೂರು ದಾಟಿತಲ್ಲ?
ಊಹೂಂ. ಡಬ್ಬಿಗೇ ಒಯ್ದುಕೊಡುವುದು ಚೆನ್ನಲ್ಲ. ಕೊನೆಯ
ಘಳಿಗೆಯವರೆಗೂ ಅವನು ಈ ಕಡೆಗೆ ಬರದೇ ಇದ್ದರೆ ಅತ್ತ ಹೋದ
ರಾಯಿತು.
ಜುಕು ಜುಕು ಜೂ, ಜುಕು ಜುಕು ಜೂ. . .
[ಇತರ ಗಾಡಿಗಳಿಗಿಂತ ಕಡಮೆ ಸಪ್ಪಳ.]
ಅಗೋ ಸಿಗ್ನಲ್! ಮದರಾಸಿನ ಕಲರವ. ರಣ ರಣ ಬಿಸಿಲು
ಆ ಪೂರ್ವಾಹ್ನದಲ್ಲೇ. . .ಹತ್ತಾರು ಗಾಡಿಗಳು ನಿಂತ ನಿಲ್ದಾಣದ ಗಲಭೆ.
ತಮಿಳೋ ತಮಿಳು. ಇಳಿಯುವವರ ಅವಸರ.
ಎಲ್ಲಿ, ಎಲ್ಲಿ ಆತ?
ಕೊ೦ಕುನಗೆಯೊಡನೆ ಮ್ಯಾನೇಜರು ಕರ್ಕಶ ಧ್ವನಿಯಲ್ಲಿ ಅ೦ದ:
"ರಾಮನ್, ಎ೦ಗೆ ಪಣ೦ ?"
ಪಣ೦ - ಹದಿಮೂರುವರೆ ರೂಪಾಯಿ. ಎಲ್ಲಿ ಹೋದ ಆತ?
ಗಾಡಿ ಆಗಲೇ ನಿ೦ತಿತ್ತು. ಯುವಕ ಡಬ್ಬಿಯಲ್ಲಿರಲಿಲ್ಲ. ಪ್ಲಾಟ್ ಫಾರ್ಮಿನ
ಮೇಲೆ ? ಮೋಸಮಾಡಿಯೇ ಬಿಟ್ಟನೆ ? ಅಯ್ಯೊ ! ಹದಿಮೂರೂವರೆ
ರೂಪಾಯಿ! ಹದಿಮೂರೂವರೆ ರೂಪಾಯಿ !. . .
ರಾಮನ್ ಹುಚ್ಚನ೦ತೆ ಕೆಳಕ್ಕೆ ಧುಮುಕಿ ಗಾಡಿಯುದ್ದಕ್ಕೂ ಓಡಿದ.
ಗೇಟಿನ ಕಡೆಗೆ ಧಾನಿಸಿದ. ಸಿಕ್ಕಿದ, ಸಿಕ್ಕಿ ಬಿದ್ದ—ಎ೦ದು ಭ್ರಮಿಸಿದ.
ಎಷ್ಟು ಕ್ರೂರವಾಗಿದ್ದುವು ಆ ನಿಮಿಷಗಳು !
ದೆಹಲಿಯಲ್ಲಿ ಅವಸರದಲ್ಲೆ ಗಾಡಿಹತ್ತಿದವನು ಇಲ್ಲಿ ಅವಸರದಲ್ಲೆ
ಫರಾರಿ. ಕೊಲೆಗಡಕ—ಕಳ್ಳ!
ಎ೦ಥ ಪೆದ್ದು ತಾನು..!
...ಬೆವರು ಸುರಿಸುತ್ತ, ಭಾರವದ ಹೆಜ್ಜೆಗಳನ್ನಿಡುತ್ತ, ರಾಮನ್
ಭೋಜನದ ಡಬ್ಬಿಯ ಕಡೆಗೆ ಮರಳಿದ.
ಆ ಮಹಿಳೆ ಸ೦ಸಾರ ಸಮೇತ ಅದೇ ತಾನೆ ಇಳಿಯುತ್ತಲಿದ್ದಳು. ಆ
ಪ್ರವಾಸದಲ್ಲಿ ಮೂರನೆಯ ಸಾರೆ ಬದಲಿಸಿದ್ದ ಸೀರೆ. ಬಳಲಿಕೆಯನ್ನು
ಮರೆಸಿದ್ದ ಶೃ೦ಗಾರ, ಒನಪು-ವೈಯಾರ.
"ಏಯ್ ಕೂಲಿ !"
—ದರ್ಪದ ನಿರ್ದೇಶ. ಈ ಬಾರಿ[ಇಲ್ಲಿ] ತಮಿಳಿನಲ್ಲಿ...
ಇವಳನ್ನಾದರೂ ನ೦ಬಬಹುದಾಗಿತ್ತು ತಾನು.
. . . ರಾಮನ್ ನೀಳವಾಗಿ ಉಸಿರುಬಿಟ್ಟು ತನ್ನ ಡಬ್ಬಿ ಹತ್ತಿದ.
ಕತ್ತಿನ ಸೆರೆಗಳು ಬಿಗಿದು ಬ೦ದು ಕ೦ಬನಿ ಹಣಿಕಿ ಹಾಕಿತು. ಉದ್ವೇಗ
ದಿ೦ದ ಮುಖ ಕೆ೦ಪಿಟ್ಟಿತು.
ಆತ ಒಳಬರುತ್ತಿದ್ದ೦ತೆ, ಸಹೋದ್ಯೋಗಿಗಳಲ್ಲೊಬ್ಬ ನಗುತ್ತ
ನುಡಿದ:
"ಹೋಗು, ಕಾದಿದೆ !"
ಕಾದಿರಬೇಕು ಬೈಗಳ ಸುರಿಮಳೆ. ಖಾಯ೦ ಆಗುವುದಿರಲಿ,
[ 'ತಂಗಿಯ ಮದುವೆಗೆ ಆದಷ್ಟು ಹಣ ಕಳಿಸಬೇಕೆಂದಿದ್ದೆ.']
...ಕಾಲುಗಳು ಕುಸಿದು, ತಾನು ಬೀಳುವಂತಾಯಿತು ರಾಮನ್ ಗೆ.
ದುರುಗುಟ್ಟಿ ನೋಡುತ್ತ ಮ್ಯಾನೇಜರು ಗುಡುಗಿದ:
" ಎಲ್ಲೋಗಿದ್ಯೋ ಪೋಲಿ ಆಲಕೊಂಡು ? ತಗೋ."
ಹತ್ತರದೊಂದು ಐದರದೊಂದು ನೋಟುಗಳಿದ್ದುವು. ಮೇಜಿನ
ಮೇಲೆ, ಬಿಲ್ಲಿನ ಜತೆ. ಚಿಲ್ಲರೆ ಒಂದೂವರೆಯನ್ನು ಮ್ಯಾನೇಜರು ರಾಮ
ನೆಡೆಗೆ ತಳ್ಳುತ್ತಿದ್ತ...
ಚಿಲ್ಲರೆ... ಬಿಲ್ಲು...
—ಡಿ ಲಕ್ಸ್ ಪ್ರಯಾಣಿಕ ತೆತ್ತು ಹೋಗಿದ್ದ ಹಣ.
ಹರ್ಷಾಶ್ರುವಾಗಿ ಮಾರ್ಪಟ್ಟು ಒಸರ ಬಯಸಿದ ತನ್ನ ಕಣ್ಣೊರತೆ
ಇತರರಿಗೆ ಕಾಣಿಸದಿರಲೆಂದು, ಗಾಜಿನ ಕಿಟಕಿಯ ಕಡೆಗೆ ರಾಮನ್ ಮುಖ
ಮಾಡಿದ.