ವಿಷಯಕ್ಕೆ ಹೋಗು

ಹೊಸ ಬೆಳಕು ಮತ್ತು ಇತರ ಕಥೆಗಳು/ವೈರಾಗ್ಯ-ವೈಯ್ಯಾರ

ವಿಕಿಸೋರ್ಸ್ದಿಂದ

ಹೊಸ ಬೆಳಕು ಮತ್ತು ಇತರ ಕಥೆಗಳು (೧೯೫೨)
by ಶ್ರೀ ವೆ. ಮುಂ. ಜೋಶಿ
90948ಹೊಸ ಬೆಳಕು ಮತ್ತು ಇತರ ಕಥೆಗಳು — ವೈರಾಗ್ಯ-ವೈಯ್ಯಾರ೧೯೫೨ಶ್ರೀ ವೆ. ಮುಂ. ಜೋಶಿ

ವೈರಾಗ್ಯ-ವೈಯ್ಯಾರ.

ಅದೊಂದು ಚಿಕ್ಕ ಹಳ್ಳಿ. ಆ ಹಳ್ಳಿಯ ಹೆಸರು ಅಷ್ಟೊಂದು ಪ್ರಸಿದ್ಧಿ ಪಡೆಯದಿದ್ದರೂ, ಅಲ್ಲಿ ಕಂಡ ಒಂದು ವ್ಯಕ್ತಿ ಚಿತ್ರ ನನ್ನ ಕಣ್ಣ ಮುಂದೆ ಕಟ್ಟಿಬಿಟ್ಟಿದೆ. ಅದನ್ನು ಅಳುಕಿಸಲೆತ್ನಿಸಿದಷ್ಟೂ ಅದು ನಿಚ್ಚಳವಾಗಹತ್ತಿದೆ.

––ಚಂದನದ ಕಟ್ಟಿಗೆಯ ಮೇಲೆ ಕೊರೆದ ಚಿತ್ರವನ್ನು ಹಲವಾರು ಸಲ ಅರಿವೆಯಿಂದ ತಿಕ್ಕಿದರೆ? ಹೊಸ ಮೆರುಗು ಬಂದು, ಮೈ ನುಣುಪುಗೊಂಡು ನಿಚ್ಚಳವಾಗಿ ಕಾಣಿಸತೊಡಗುತ್ತದಲ್ಲವೇ?

ನಮ್ಮ ತಂದೆಯವರು ಕನ್ನಡ ಸಾಲೆಯ ಮಾಸ್ತರರು. ಆ ಹಳ್ಳಿಗೆ ಅಕಸ್ಮಾತ್ತಾಗಿ ವರ್ಗವಾಯಿತು. ನಮಗೆ ಇಂಥದೇ ಊರಿರಲಿಲ್ಲ. ವರ್ಗವಾಗಿ ಹೋದ ಊರನ್ನೇ ನಮ್ಮದೆಂದು ಭಾವಿಸಿ ಆ ಊರವರೇ ಆಗಿ ಬಿಡುತ್ತಿದ್ದೆವು. ಆ ಹಳ್ಳಿಗೆ ಹೋದಾಗ ನಾನು ೧೫ ವರುಷದ ಬುದ್ಧಿ ಬಲಿಯದ ಹುಡುಗನಾಗಿದ್ದೆ. ನಾನು ಆಗ ಕಲಿಯುತ್ತಿದ್ದುದು ಕನ್ನಡ ೭ನೇ ಇಯತ್ತೆಯಲ್ಲಿ. ಸಮಾಜದಲ್ಲಿ ಸೂಕ್ಷ್ಮವಾಗಿ ಏಳುತ್ತಿರುವ ಜ್ವಾಲಾಮುಖಿಗಳ ಜಳಕ್ಕೆ ನನ್ನ ತಲೆ ಕೊಂಚ ಕಾಯುತ್ತಿದ್ದರೂ ಅದರ ಬಗ್ಗೆ ನಾಲ್ಕು ಮಾತುಗಳನ್ನಾಡುವ ಅಧಿಕಾರ ನನಗಿರಲಿಲ್ಲ. ನನ್ನದು ಮರವೆಯ ಸ್ವಭಾವವಾಗಿದ್ದರೆ, ಅಂದು ನಡೆದದ್ದರ ಬಗ್ಗೆ ಪುನಃರ್ವಿಮರ್ಶಕೆಯ ಪ್ರಸ್ತಾಪ ನನ್ನ ಮನದಲ್ಲಿ ಈಗ ಏಳುತ್ತಿರಲಿಲ್ಲ.

ನಾವಿದ್ದ ಆ ಹಳ್ಳಿಯ ಹೊರಗೆ, 2-3 ಫರ್ಲಾಂಗುಗಳ ಮೇಲೆ ದೊಡ್ಡ ಹಳ್ಳ ಹರಿಯುತ್ತಿದೆ. ಹನ್ನೆರಡು ತಿಂಗಳ ಕಾಲ ನೀರಿಗೆ ಕೊರತೆ ಇಲ್ಲ. ಆ ಹಳ್ಳ ದಾಟಿದರೆ ಮತ್ತೊಂದು ಹಳ್ಳಿ. ಅದು ಬೆಳಗಾವಿ ಜಿಲ್ಲೆಗೆ ಸೇರಿದ್ದು. ಹಳ್ಳದ ಈ ಬದಿಗೆ ಧಾರವಾಡ ಜಿಲ್ಲೆ. ಆ ಹಳ್ಳವೇ ಒಂದು ಗಡಿಯಾಗಿತ್ತು. ಅಣ್ಣ ತಮ್ಮಂದಿರಲ್ಲಿಯ ಸಖ್ಯವೇ ಈ ಎರಡೂ ಹಳ್ಳಿಗಳ ಲ್ಲಿತ್ತು. ಅಭಿಮಾನದ ಮಟ್ಟ ಮೇಲೇರಿದಾಗ ಹ್ಯಾಂವಕ್ಕೆ ಹ್ಯಾಂವ ಹತ್ತಿ ಬಡಿದಾಟವಾಗಿ ಅಘಟಿತ ಘಟನೆಗಳು ಕಾಣಿಸಿಕೊಳ್ಳುತ್ತಿದ್ದವು. ಕೆಲವು ಸಲ ಅಂಥ ಘಟನೆಗಳನ್ನು ಮರೆತು ಕೈಯಲ್ಲಿ ಕೈಯಿಕ್ಕಿ ಕೂಡಿ ಕೆಲಸ ಮಾಡಿದ ಸಂದರ್ಭಗಳೂ ನನ್ನ ಜ್ಞಾಪಕದಲ್ಲಿದೆ. ಅಂಥ ವೇಳೆಯಲ್ಲಿ ಕೆಲ ಸ್ವಾರ್ಥಸಾಧಕರು "ಎಷ್ಟs ಅಂದರೂ ಅಣ್ಣ ತಮ್ಮಂದಿರು ಕರಳು ಒಂದಂs. ನಾವೇನು ಹೊರಗಿನಿಂದ ಬಂದವರು" ಎಂದು ಮೂಗುಮುರಿಯುತ್ತ ಉಸುರುವ ಹೆಂಗಳೆಯರಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಉದಾಸೀನರಾಗುತ್ತಿದ್ದರು ಅವರ ಉದಾಸೀನತೆಗೆ ಕಾರಣವೆಂದರೆ, ಇಬ್ಬರ ಜಗಳದಲ್ಲಿ ತಮ್ಮ ಬೇಳೆ ಬೇಯದಿರುವದು.

ನಾನೀಗ ಹೇಳ ಹೊರಟಿದ್ದು ಒಂದು ದೊಡ್ಡ ವ್ಯಕ್ತಿಯ ಕಥೆಯಲ್ಲ. ಪುಂಡರ ಪರಿಚಯವಲ್ಲ ಕಳ್ಳರ ಕಲಹವನ್ನಲ್ಲ ಸಾಮಾನ್ಯ ಜೀವಿಯೊಬ್ಬನ ಸ್ವಾರ್ಥರಹಿತ ಜೀವನ ನಡೆಸಿದ ಅಗಸರ ಗುಡದಪ್ಪನೇ ಆ ವ್ಯಕ್ತಿ. ಆ ಊರಿಗೆ ನಾವು ಹೊಸದಾಗಿ ಹೋದ ಮೊದಲನೇ ದಿನವೇ ನಮ್ಮ ಮನೆಯವರೆಗೆ ಬಂದು ಸ್ವ-ಪರಿಚಯ ಕೋರಿದವನೆಂದರೆ ಅಗಸರ ಗುಡದಪ್ಪನೇ.

"ಯಾವ ಮಾಸ್ತರ ಬಂದರೂ ನಾನು ಅವರ ಅರಬಿ ಒಗ್ಯಾಂವಾ. ಮೊದಲಿನ ಮಾಸ್ತರರು ತಿಂಗಳಾ ಎಂಟಾಣೆ ಕೊಡತಿದ್ರು. ನಿಮಗೆ ತಿಳಿದಟ ನೀವು ಕೊಡ್ರಿ" ಎಂದು ಹೇಳಿ, ಕೂಡಲು ಹೇಳದಿದ್ದರೂ ನಮ್ಮ ಮನೆ ಮುಂದಿನ ಕಟ್ಟೆಯಲ್ಲಿ ಗುಡದಪ್ಪ ಕುಳಿತುಬಿಟ್ಟನು.

ನಮ್ಮ ತಂದೆಯವರು ಮಾತನ್ನು ನಿಶ್ಚಯಿಸುವದಕ್ಕಾಗಿ ಅವನೊಡನೆ ಮಾತಿಗೆ ಮೊದಲು ಮಾಡಿದರು.

"ನೋಡು, ಮನ್ಯಾಗ ೫-೬ ಮಂದಿ ನಾವು. ಅವರೆಲ್ಲರ ಅರಿವಿನೂ ಒಗೀಬೇಕಾಗತೈತಿ, ಕಡಿಗೆ ತಕರಾರು ಮಾಡಬಾರದು ಮತ್ತ."

ಅದಕ್ಕೆ ಗುಡದಪ್ಪ ವಿನಂತಿಸುವ ಸ್ವರದಲ್ಲಿಯೇ "ಊರಾಗ ಒಗ್ಯಾಕಹತ್ತಿ ೮ ವರ್ಷ ಆತರಿ, ತಕರಾರು ಗಿಕರಾರು ಮಾತs ಕೇಳಬಾಡ್ರಿ” ಎಂದು ಹೇಳಿ ಮಾತು ಮುಗಿಸಿ ನಡೆದುಬಿಟ್ಟ.

ಆ ಊರಿಗೆ ಬಂದು ಒಂದು ಯುಗಾದಿ ಕಳೆದು ಹೋಯಿತು. ಗುಡದಪ್ಪ ಈಗ ನಮ್ಮ ಮನೆಯವರಿಗೆಲ್ಲ ತೀರ ಪರಿಚಿತನಾಗಿ ಬಿಟ್ಟಿದ್ದಾನೆ. ಹರವಾದ ಹಣೆಯಮೇಲೆ ೭ ಮೊಳದ ಪಾವುಡ ಸುತ್ತಿಕೊಳ್ಳುವದು ಅವನ ರೂಢಿ. ಆದರೆ ಬೆನ್ನು ಸ್ವಲ್ಪ ಬಾಗಿಹೋಗಿತ್ತು. ಊರ ಹೊಸ ಬಟ್ಟೆಗಳನ್ನು ಹಸನು ಮಾಡಿಕೊಟ್ಟುದರ ಪರಿಣಾಮವಾಗಿ ಬೆನ್ನು ಅರೆಬಾಗಿ ಹೋಗಿತ್ತು. ವಯಸ್ಸು ಬರೀ ಮೂವತ್ತೈದಾದರೂ, ಅವನ ಮುಖದ ಮೇಲೆ, ನೇಸರು ಪಡುವಣಕಿಳಿಯುವ ಕಾಂತಿ ಪಸರಿಸಿತ್ತು. ಗುಡದಪ್ಪ ಬರೀ ಅಗಸನಾಗಿರಲಿಲ್ಲ. ಓದುಗನಾಗಿದ್ದ. ಅಧ್ಯಾತ್ಮಿಕ ಕಥೆಗಳನ್ನು ಹೇಳುವದಕ್ಕೂ ಕೇಳುವದಕ್ಕೂ ತುಂಬಾ ಆಸಕ್ತಿ ಅವನಿಗೆ. ಅವನ ಪ್ರತಿ ಮಾತಿನಲ್ಲಿ ವೈರಾಗ್ಯರಸ ತುಂಬಿ ತುಳುಕುತ್ತಿತ್ತು. ಸಾಯಂಕಾಲ ಬಟ್ಟೆಗಳನ್ನು ಒಣಗಿಸಿ ಅವರವರ ಬಟ್ಟೆಗಳನ್ನು ಮನೆಗೆ ಮುಟ್ಟಿಸಿ ನೇರವಾಗಿ ನಮ್ಮ ಮನೆಗೆ ಬಂದು ಬಿಡುತ್ತಿದ್ದ. ನಮ್ಮ ಮನೆಗೆ ಬರುವುದಕ್ಕೆ ಮುಖ್ಯ ಕಾರಣವೆಂದರೆ, ಅಲ್ಲಿ ನಮ್ಮ ತಂದೆಯವರು ತರಿಸಿದ ವರ್ತಮಾನ ಪತ್ರಗಳನ್ನು ಓದುವದಕ್ಕೆ. ನಮ್ಮ ಮನೆಗೆ ಬಂದನಂತರ ನಾವು ಕೊಟ್ಟ ಚಹದ ಗುಟಕನ್ನು ಗುಟುಕರಿಸಿ, ಪೇಪರುಗಳನ್ನು ಓದಿ ಆಧ್ಯಾತ್ಮಿಕ ಕಥೆಗಳಿಗೆ ಸುರು ಮಾಡಿ ಬಿಡುತ್ತಿದ್ದ. ಅವನು ಸದಾ ಹೇಳುವ ಮಾತುಗಳೆಂದರೆ "ಇಲ್ಲೇನೈತಿ, ಮೂರು ದಿನದ ಜಾತ್ರಿ. ಎಲ್ಲಾ ಮಾಡಿಸಾಂವಾ ಅಲ್ಲಿ ಕೂತಾನು. ಅದು ನಂದು, ಇದು ನಂದು ಎಂದು ಬಡಿದಾಡೋ ಬಂಟಗ ಅದನ್ನ ಒಯ್ಲಾಕ ಆಗತೈತೇನು? ಮಾರಿ ಮಣ್ಣಾಗ ಅಡಗಿದ ಮ್ಯಾಗ ಅವಂದೇನೈತಿ, ಹಿಡಿಮಣ್ಣು”

ವಾಕ್ಯದ ಕೊನೆಗೊಂದು, ದೀರ್ಘ ಶ್ವಾಸ ಬಿಡುತ್ತಿದ್ದನು.

ನಮ್ಮ ಮನೆಯಲ್ಲಿ ನಾನೊಬ್ಬ ಅವನ ನಿಕಟ ಪರಿಚಯದ ಗೆಳೆಯನಾಗಿಬಿಟ್ಟಿದ್ದೆ. ನನಗಾಗ ಕತೆಗಳನ್ನು ಕೇಳುವದರಲ್ಲಿ ಬಲು ಹುರುಪು. ಚಿಕ್ಕವಯಸ್ಸಿನಲ್ಲಿ ಹೀಗಾಗುವದು ಸ್ವಾಭಾವಿಕವಲ್ಲವೇ ? ಸಾಯಂಕಾಲ ಒಳಅಂಗಳದಲ್ಲಿ ಅವನನ್ನೆಳೆದುಕೊಂಡು ಹೋಗಿ ಕತೆ ಹೇಳುವದಕ್ಕಾಗಿ ಕೂಡಿಸಿಕೊಳ್ಳುತ್ತಿದ್ದೆ. ಅವನು ಕತೆ ಹೇಳುತ್ತಿರಬೇಕು, ನಾನು ಕೇಳುತ್ತಿರಬೇಕು. ಕತ್ತಲೆ ಮುಸುಕಿದರ ಪರಿವೆ ಇಬ್ಬರಿಗೂ ಆಗುತ್ತಿರಲಿಲ್ಲ. ಆಗ ಒಂದು ಹಣ್ಣು ಮುದುಕಿ ಬಂದು ಒಟಗುಡುತ್ತ ಗುಡದಪ್ಪನನ್ನು ಕರೆದುಕೊಂಡು ಹೋಗಿಬಿಡುತ್ತಿದ್ದಳು. ಇದು ದಿನದ ರೂಢಿಯಾಗಿ ಹೋಗಿತ್ತು. ಅವನು ಹೇಳುತ್ತಿರುವ ವೈರಾಗ್ಯದ ಕತೆಗಳನ್ನು ಕೇಳಿ ನಾನು ಒಂದು ಸಲ--

"ನಿಂದು ಮದಿವಿ ಆಗೈತೇನು ಗುಡದಪ್ಪ" ಎಂದು ಕೇಳಿದ್ದೆ. ಅದಕ್ಕೆ ಪ್ರತಿಯಾಗಿ ಗುಡದಪ್ಪ "ನಮ್ದೇನೈತ್ರಿ" ಎಂದು ಉದಾಸೀನತೆಯಿಂದ ಹೇಳಿಬಿಟ್ಟಿದ್ದ.

ನಿಜವಾದ ವಿರಕ್ತ ವೇದಾಂತಿ ಎಂದು ಮನದಲ್ಲಿಯೇ ಅಂದುಕೊಂಡು ಅವನನ್ನು ಬೀಳ್ಕೊಟ್ಟೆ. ಆಗ ಗುಡುದಪ್ಪನ ಕಣ್ಣಲ್ಲಿ ಎರಡು ಹನಿಗಳು ಮೂಡಿದ್ದು ನನಗೆ ಕಂಡಿತ್ತು. ಈ ಮದುವೆಯ ಮಾತು ಕೇಳಿದ ಮುದುಕಿ ಅವನ ತಾಯಿ ನಿರಾಶೆಯ ಧ್ವನಿಯಲ್ಲಿ ಉತ್ತರಿಸಿದ್ದಳು.

"ಅಂವ ಏನು ಮನಿ ಮಾಡಾಕ ಹುಟ್ಟ್ಯಾನೇನ್ರಿ? ಸನ್ಯಾಸಿ ಆಗಿ ಸಾಯಲಾಕ ಹುಟ್ಟೈತಿ ಬೇಬರ್ಸಿ."



ಒಮ್ಮೆ ಆ ಊರಲ್ಲಿ ಪ್ಲೇಗು ಹಾವಳಿ ಹಬ್ಬುವದರಲ್ಲಿತ್ತು. ಆಗ ಊರಲ್ಲಿ ಪ್ಲೇಗ ವ್ಯಾಕ್ಸಿನೇಟರು ಬಂದಿದ್ದರು. ಸಾಲೆಯ ಹುಡುಗರಿಗೆ ಅಂದು ಜಾತ್ರೆಯಾದಂತೇ ಆಗಿತ್ತು. ಪ್ಲೇಗಿನ ಇಂಜೆಕ್ಷನ್ ಚುಚ್ಚಿಸಿಕೊಳ್ಳುವದಕ್ಕೆ ನಮಗೆಲ್ಲರಿಗೂ ಚಾವಡಿಗೆ ಹೋಗಬೇಕಾಯಿತು. ನಾನಾಗ ಬಲು ಅಂಜುಬುರುಕ. ಎಲ್ಲರೂ ಚುಚ್ಚಿಸಿಕೊಳ್ಳುವವರೆಗೆ ವ್ಯಾಕ್ಸಿನೇಟರರ ಕಣ್ಣ ಮರೆಯಾಗಿಯೇ ಉಳಿದೆ. ಆದರೇನು ನನ್ನ ಸರತಿ ಬರುವ ಹಾಗೆ ಬಂದೂಬಿಟ್ಟಿತು. ವ್ಯಾಕ್ಸಿನೇಟರರ ಕೈಯಲ್ಲಿ ಕೈಗೊಟ್ಟು, ಕಣ್ಣು ಮುಚ್ಚಿ ನಿಂತುಬಿಟ್ಟೆ. ನಿಮಿಷದಲ್ಲಿ ಚುಚ್ಚುವದೂ ಮುಗಿಯಿತು. ಹುಡುಗರೆಲ್ಲರ ಸರತಿ ಮುಗಿದ ನಂತರ, ಊರ ಹೆಂಗಸರೆಲ್ಲ ವ್ಯಾಕ್ಸಿನೇಶನ್ನಿಗಾಗಿ ಬಂದರು. ಅವರು ಒಬ್ಬೊಬ್ಬರಾಗಿಯೇ ಬಂದಿರಲಿಲ್ಲ, ಚಿಕ್ಕ ಮಕ್ಕಳೂ ಅವರನ್ನು ಹಿಂಬಾಲಿಸಿದ್ದವು. ವ್ಯಾಕ್ಸಿನೇಟರರು ಒಬ್ಬೊಬ್ಬರಿಗೆ ಮದ್ದನ್ನು ಚುಚ್ಚಿ, ಅವರ ಹೆಸರನ್ನೂ ಅವರ ಗಂಡಂದಿರ ಹೆಸರನ್ನೂ ಪದ್ಧತಿಯಂತೆ ರಜಿಸ್ಟರದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದರು. ಕೊನೆಯವನಾಗಿ ಬಂದ ತಪ್ಪಿಗೇನೋ ಅವರು ಬರೆಯುವ ಕೆಲಸವನ್ನು ನನ ಗೊಪ್ಪಿಸಿದರು. ಬರೆಯುವ ಕೆಲಸದಿಂದ ಬೇಸರ ಬರುತ್ತಿದ್ದರೂ ಅಲ್ಲಿಯ ದೃಶ್ಯದಿಂದ ನನ್ನ ಮನರಂಜನೆ ಮಾತ್ರ ಆಗುತ್ತಿತ್ತು. ಸಾಲುಸಾಲಾಗಿ ನಿಂತ ಹೆಣ್ಣು ಮಕ್ಕಳು ಒಬ್ಬೊಬ್ಬರಾಗಿ ಬಂದು ಚುಚ್ಚಿಸಿಕೊಂಡ ತರುವಾಯ ವ್ಯಾಕ್ಸಿನೇಟರರು ಕೇಳುತ್ತಿದ್ದರು ––

"ನಿನ್ನ ಹೆಸರು, ನಿನ್ನ ಗಂಡನ ಹೆಸರು ಹೇಳಿ ಬರೆಸಿ ಹೋಗು."

ಅದಕ್ಕೆ ಆ ಹೆಣ್ಣು ಮಕ್ಕಳು ಹತ್ತು ನಿಮಿಷ ತೊದಲುತ್ತ, ನಾಚುತ್ತ, ಮುಖವನ್ನು ಸೆರಗಿನಿಂದ ಮುಚ್ಚಿಕೊಳ್ಳುತ್ತ ತಮ್ಮ ಗಂಡಂದಿರ ಹೆಸರನ್ನು ಹೇಳಿ, ಹುಲಿಯ ಕೈಯಿಂದ ಒಮ್ಮೆ ಪಾರಾದವರಂತೆ ಒಮ್ಮೆಲೆ ನುಸುಳಿ ಪಾರಾಗುತ್ತಿದ್ದರು. ಅವರು ತಮ್ಮ ಗಂಡಂದಿರ ಹೆಸರನ್ನು ಹೇಳುವ ದೃಶ್ಯ ನನಗೆ ಮದುವೆಯ ಸಂಭ್ರಮದ ನೆನಪನ್ನು ತಂದು ಕೊಡುತ್ತಿತ್ತು. ಹೀಗೆಯೇ ನನ್ನ ಕೈಗಳು ಬರೆಯುತ್ತಿರುವ ಕೆಲಸದಲ್ಲಿ ತೊಡಗಿದಾಗ-

"ನಡೀ ಮುಂದಕ ಎಲ್ಲವ್ವ, ಏಟ ನಾಚತಾಳ" ಎಂದು ಹೇಳುತ್ತಿರುವ ವಾಲೀಕಾರನ ಧ್ವನಿಯತ್ತ ನನ್ನ ದೃಷ್ಟಿ ಹೊರಳಿತು. ಹೊರಳಿದಲ್ಲಿಯೇ ನನ್ನ ದೃಷ್ಟಿ ನಟ್ಟು ಹೋಯಿತು. ಅದಕ್ಕೊಂದು ವಿಶಿಷ್ಟವಾದ ಕಾರಣವೂ ಇತ್ತು.

ಕುಲುಕುಲು ಮುಗುಳು ನಗೆ ತೋರುತ್ತ, ಜಾರಿದ ಸೆರಗನ್ನು ಸರಿಪಡಿಸಿಕೊಳ್ಳದೇ ಆ ಎಲ್ಲವ್ವ ವಾಲೀಕಾರನ ಜತೆಯಲ್ಲಿ ಸರಸಸಲ್ಲಾಪಕ್ಕೆ ತೊಡಗಿದ್ದಳು ಎಲ್ಲವ್ವನ ನಂಬರು ನಿಂತ ಸಾಲಿನಲ್ಲಿ ಹತ್ತನೇಯದಾಗಿತ್ತು. ವ್ಯಾಕ್ಸಿನೇಟರರ ಲಕ್ಷವೆಲ್ಲ ಮುಂದೆ ಬಂದ ವ್ಯಕ್ತಿಗಳು ಅಷ್ಟೇ ಇದ್ದಿತು. ಹತ್ತನೇ ನಂಬರಿನವರೆಗೆ ಅವರ ದೃಷ್ಟಿ ಮುಟ್ಟುತ್ತಿರಲಿಲ್ಲ. ನಾನು ಮಾತ್ರ ಕಳ್ಳಗಣ್ಣುಗಳಿಂದ ಕುತೂಹಲಿತನಾಗಿ ನೋಡುತ್ತಿದ್ದೆ.

ಆ ಎಲ್ಲವ್ವನ ಬೆಡಗು ಬಿನ್ನಾಣ ಆ ವೈಯ್ಯಾರ, ಅವಳು ವಾಲೀಕಾರನ ಜತೆಯಲ್ಲಿ ನಡೆಸಿದ ಕುಚೇಷ್ಟೆ, ಇವು ಹೆಚ್ಚಾದಂತೆ ನನ್ನ ಕುತೂಹಲ ಕೆರಳುತ್ತಿತ್ತು. ಅವರಿಬ್ಬರಲ್ಲಿಯೂ ಮಾತುಗಳು ನಡೆದಿದ್ದವು.

"ಊರಾಗ ಇದ್ದಾನೇನು ಮಾಂವ" ಎಂದು ವಾಲೀಕಾರ ಅವಳಿಗೆ ಕಣ್ಣು ಮಿಟುಕಿಸಿ ಗೇಲಿ ಮಾಡಿದ.

ಅದಕ್ಕೆ ಆ ಬಿನ್ನಾಣಗಿತ್ತಿ ಬೆಪ್ಪಾಗದೆ "ಮಾಂವ ಊರಾಗ ಇರ್ಲಿಕ್ಕರ ಏನಾತು ನೀ ಸತ್ತೀ ಏನು" ಎಂದು ಅರೆಗಣ್ಣ ಮುಚ್ಚಿ ಮೆಲ್ಲನೇ ಹೇಳಿ ಮುಂದೆ ಬಂದುಬಿಟ್ಟಳು.

ಅವಳ ಒಯ್ಯಾರ, ಆ ಸಂಭಾಷಣೆ ನನಗೊಂದೂ ಅರ್ಥವಾಗಲಿಲ್ಲ. ಆ ಬಗ್ಗೆ ಆಗ ಹೆಚ್ಚು ಪ್ರಸ್ತಾಪವೆತ್ತುವದೂ ನನ್ನ ಚಿಕ್ಕ ವಯಸ್ಸಿಗೆ ನಗೆಗೀಡು. ಮುಂದೆ ಎಲ್ಲರಂತೆ ವ್ಯಾಕ್ಸಿನೇಟರರು ಎಲ್ಲವ್ವನಿಗೂ ಅವಳನ್ನು ಹಿಂಬಾಲಿಸಿದ ೫ ಚಿಕ್ಕ ಮಕ್ಕಳಿಗೂ ಚುಚ್ಚಿ, "ನಿನ್ನ ಗಂಡನ ಹೆಸರನ್ನು ಬರಿಸು" ಎಂದು ಹೇಳಿ ನನ್ನ ಕಡೆಗೆ ಬಟ್ಟು ಮಾಡಿ ತೋರಿಸಿದರು

ಆಗ ಎಲ್ಲವ್ವ ತೋರಿದ ಲಜ್ಜೆ ಅದೇ ಹೊಸದಾಗಿ ಮನೆಗೆ ಬಂದ ಮದುವಣಗಿತ್ತಿಯನ್ನೂ ಮೀರಿಸುವಂತಹದಿತ್ತು. ಹೀಗೇ ಹತ್ತು ನಿಮಿಷಗಳು ಅವಳ ಲಜ್ಜೆಯಲ್ಲಿಯೇ ಕಳೆದುಹೋದವು.

"ಐದೈದು ಮಕ್ಕಳಾದವು, ಗಂಡನ ಹೆಸರು ಹೇಳಾಕ ಎಷ್ಟವೇ ನಾಚಿಕೆ" ಎಂದು ವ್ಯಾಕ್ಸಿನೇಟರರು ಗುಡುಗಿದರು. ಆದರೂ ನಿಷ್ಪಲವಾಯಿತು. ಕೊನೆಗೆ ಗತಿಗಾಣದ ವ್ಯಾಕ್ಸಿನೇಟರರು "ಏ ವಾಲಿಕಾರs, ನಿನಗೆ ಗೊತ್ತಿದ್ದರೆ ನೀನಾರು ಹೇಳೋ ಮಹರಾಯಾ" ಎಂದು ಒದರಿದಾಗ, ಆ ವಾಲೀಕಾರ ಮುಂದೆ ಬಂದು-

"ಅಗಸರ ಗುಡದಪ್ಪರಿ" ಎಂದು ಹೇಳಿದ.

ಕಾದ ಕೆಂಡದ ಮೇಲೆ ಕಾಲು ಬಿದ್ದಂತಾಯಿತು ನನಗೆ. ಮೊದಲು ಅವನ ಮಾತು ನಿಜವೆನಿಸಲಿಲ್ಲ. ಆದರೂ ವ್ಯಾಕ್ಸಿನೇಟರರು ಹೇಳಿದಂತೆ ನನಗೆ ಆ ಕಾಗದದಲ್ಲಿ ಬರೆಯಲೇ ಬೇಕಿತ್ತು. ನಡುಗುವ ಕೈಗಳಿ೦ದಲೇ ಬರೆದೆ.

"ಎಲ್ಲವ್ವ ಕೋಂ ಗುಡದಪ್ಪ ಅಗಸರ" ಅದರ ಮೇಲೆ ಒತ್ತಕರಡನ್ನು ಒತ್ತಿದೆ. ಪುನಃ ಬರೆದದ್ದರ ಕಡೆಗೊಮ್ಮೆ ನೋದಿದೆ.

ನನ್ನ ಒಳಗಣ್ಣುಗಳಿಗೆ ಅಲ್ಲಿ ಮಂಜುಮಂಜಾಗಿ ಕಾಣುತ್ತಿತ್ತು.

"ವೈಯ್ಯಾರ–ವೈರಾಗ್ಯ–-" –-ಒಂದು ಉತ್ತರ, ಇನ್ನೊಂದು ದಕ್ಷಿಣ. ಅವೆರಡರ ಸಂಗಮ ಸಾಧ್ಯವೇ?

ನಾನು ಎಚ್ಚರದಪ್ಪಿದವನಂತೆ ಆಗಿದ್ದೆ. ವ್ಯಾಕ್ಸಿನೇಟರರು ಅಲ್ಲಿಯ ಕೆಲಸ ಮುಗಿಸಿ ಎದ್ದು ಬಿಟ್ಟರು. ಕೊನೆಗೆ ನಾನು ಎಲ್ಲವ್ವನ ಬಗ್ಗೆ ಬರೆದದ್ದು ನಿಜವೇ ಎಂದು ವಾಲೀಕಾರನಿಗೆ ಕೇಳಿದೆ. ಅವನು "ಹೌದರೀ ರಾಯ್ರ, ಗಂಡನ ಹೆಸರು ಸುಳ್ಳು ಹೇಳತಾರೇನ್ರಿ" ಎಂದು ನಿಶ್ಚಯದ ಸ್ವರದಲ್ಲಿ ಹೇಳಿ ಹೊರಟಿಹೋದ.


ಅಂದಿನಿಂದ ನಾನು ಗುಡದಪ್ಪನ ಜತೆಯಲ್ಲಿ ಹೆಚ್ಚು ಮಾತನ್ನು ಬೆಳೆಸುತ್ತಿರಲಿಲ್ಲ. ಮನೆ ಮಾಡಿ ಮಠಪತಿಯ ಮೆರಗನ್ನು ಬಳಕೊಂಡು ಮೋಸಗೊಳಿಸುವ ಮನುಷ್ಯನ ಜತೆಯಲ್ಲಿ ಮಾತೇಕೆ ಎಂದು ಮೌನ ತಾಳಿ ಬಿಟ್ಟೆ. ಅದಕ್ಕೂ ಹೆಚ್ಚಿನ ಆಶ್ಚರ್ಯವೆಂದರೆ, ಹಗಲು ಹನ್ನೆರಡು ತಾಸು ವೇದಾಂತ ಕೊಚ್ಚುವ ಕಲಿಭೀಷ್ಮ, ೫ ಮಕ್ಕಳ ತಂದೆಯಾಗಿದ್ದಾನಲ್ಲ ಎಂಬುದು. ಅಂತೂ ಅಂದಿನಿಂದ ಗುಡದಪ್ಪನ ಬಗ್ಗೆಯ ನನ್ನಲ್ಲಿಯ ಆದರ ಮಣ್ಣು ಗೂಡಿ ಬಿಟ್ಟಿತು. ಆದರೆ ಗುಡದಪ್ಪನಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಿರಲಿಲ್ಲ.

ಅದೇ ಮಾತು, ಅದೇ ನಯ, ಅದೇ ನಗು, ಅದೇ ನಿರ್ವಿಕಾರ ಕಳೆ ಮುಖದ ಮೇಲೆ ಹೊಳೆಯುತ್ತಿತ್ತು.



ಕೆಲ ಮಾಸಗಳುರುಳಿದವು. ಊರ ಹೊರಗೆಲ್ಲ ಜೋಳ ಆರಡಿ ಎತ್ತರವಾಗಿ ಮೆರೆಯುತ್ತಿತ್ತು. ಊರ ಪುಂಡರಿಗೆ ಅದೊಂದು ಮರೆ ಮಾಡಿಕೊಳ್ಳುವ ಮನೆ. ಹಳ್ಳಿಗರಿಗೆ ಸುಗ್ಗಿ ಮುಂದೆ ಇದ್ದರೂ, ಕಳ್ಳರಿಗೆ ಇದುವೇ ಸುಗ್ಗಿ ಕಾಲ.

ಒಂದು ಸೋಮವಾರ ನಸುಕು ಹರಿಯುವವರಲ್ಲಿತ್ತು. ಊರ ಮೂಲೆಯಲ್ಲೊಂದು ಆರ್ತಸ್ವರ ಕೇಳಬಂತು. ಜನರೆಲ್ಲ ಆ ಬದಿಗೆ ತಂಡತಂಡವಾಗಿ ಹೋಗತೊಡಗಿತು. ನಾನೂ ಅವರಲ್ಲೊಬ್ಬನಾಗಿದ್ದೆ.

ಪತ್ತಾರ ನಾಗಪ್ಪನ ಮನೆಗೆ ಕನ್ನ ಬಿದ್ದಿತ್ತು. ಕಳ್ಳರು ಹೊಡೆದ ಪೆಟ್ಟಿಗೆ ನಾಗಪ್ಪ ಎಚ್ಚರದಪ್ಪಿ ನೆಲಕ್ಕುರುಳಿ ನರಳುತ್ತಿದ್ದ. ಕೆಲ ಚಿನ್ನದ ಆಭ ರಣಗಳು ಕಳುವಾಗಿದ್ದವು. ನಾಗಪ್ಪ ನರಳುತ್ತಿರುವಂತೆ ನಡುನಡುವೆ ಬಡಬಡಿಸುತ್ತಿದ್ದ.

"ಯಾರ ಒಯ್ದಾರ ನನಗೆ ಗೊತ್ತದು, ನಾ ಎಲ್ಲಾ ಗುರ್ತಾ ಹಿಡಿದೇನಿ."

ಅ೦ದೇ ಮಧ್ಯಾಹ್ನದ ಹೊತ್ತಿಗೆ ಧಾರವಾಡದಿಂದ ಫೌಜದಾರರು, ಪೋಲೀಸರು ಬಂದರು.

ಪತ್ತಾರ ನಾಗಪ್ಪ 'ಕಾಶೀಮ' ನ ಬಗ್ಗೆ ಸಂದೇಹ ವ್ಯಕ್ತಪಡಿಸಿದ. ಕಾಶೀಮನನ್ನು ಚಾವಡಿಗೆ ಕರೆತರಲಾಯಿತು. ಪಾಟೀಲರ ಪರಿಚಯ ನನಗಿದ್ದುದರಿಂದ ತನಿಖೆಗೆ ಪ್ರಾರಂಭವಾದಾಗ ನಾನು ಚಾವಡಿಯಲ್ಲಿಯೇ ಕುಳಿತುಕೊ೦ಡೆ.

ಕಾಶೀಮ ಕೆಳಗೆ ಮುಖ ಮಾಡಿ ನಿಂತುಕೊಂಡಿದ್ದ. ಫೌಜದಾರರು ಪಾಟೀಲರಿಗೆ ಕೇಳಹತ್ತಿದರು:

"ಹ್ಯಾಂಗರಿ ಮನುಷ್ಯ ಇವ?"
"ಊರಾಗ ಬಲು ಉಡಾಳರಿ."
"ಇವನ ಮನಿ, ಮಠ ಮಂದಿ ಯಾರಾದರೂ ಇದ್ದಾರೇನ್ರಿ?"
"ಎಲ್ಲಿದ ಬರಬೇಕ್ರಿ, ಆ ಅಗಸರ ಗಡದ್ಯಾನ ಹೆಂಡ್ತಿ ಎಲ್ಲಿsನ್ನ ಇಟಕೊಂಡನಾರಿ."
"ಅಗಸರ ಎಲ್ಲಿsನ್ನ, ಆಕ್ಯಾರು?"

"ಇದ್ದಾಳರೀ ಒಬ್ಬಾಕಿ, ಊರಾಗ ಹೆಸರು ಗಳಿಸಿದ್ದಾಕಿ, ಅಗಸರ ಗುಡದ್ಯಾ, ಪಾಪ ಸಜ್ಜನ ಮನಸ್ಯಾರಿ. ಇಂಥಾ ವೈಯ್ಯಾರಿ ಕೊಳ್ಳಾಗ ಬಿದ್ದಮ್ಯಾಗ, ಮದುವಿ ಆದ ಮೂರು ದಿನದಾಗ ಎಲ್ಲಿ ಗುಡದ್ಯಾನ್ನ ಬಿಟ್ಟಳು. ಅವನೂ ತನ್ನ ತಾಯಿನ್ನ ಕಟಕೊಂಡು ಬ್ಯಾರಿ ಅದಾನ್ರಿ, ಇದsಟು ನಡದಮ್ಯಾಗ ಎಲ್ಲೀಗೆ ಐದು ಮಕ್ಕಳಾದುವ್ರಿ. ಹೆಸರು ಹೇಳಲಿಕ್ಕೆ ಗಂಡ ಇದ್ದಮ್ಯಾಗ ಇನ್ನೂ ಹತ್ತು ಹುಟ್ಟುವಲ್ಲವು ಅಂತಾನ ಈ ಕಾಶೀಮ."

ಮಾತಿನ ಕೊನೆಯಾಗುತ್ತಲೂ ಫೌಜದಾರರ ಭರಮಪ್ಪ (ಬಾರುಕೋಲು) ಕಾಶೀಮನನ್ನು ಬಿಗಿದಪ್ಪಿತ್ತು.

ತನ್ನ––ಎಲ್ಲವ್ವನ ಸಂಬಂಧ ನಿಜವೆಂಬುದನ್ನು ಕಾಶೀಮ ಅರೆಕ್ಷಣದಲ್ಲಿ ಒಪ್ಪಿಬಿಟ್ಟನು. ಆದರೆ ಫೌಜದಾರರಿಗೆ ಸಂಬಂಧದ ಒಪ್ಪಿಗೆ ಬೇಕಿರಲಿಲ್ಲ. ಕಳುವಿನ ಮೇಲೆ ಬೆಳಕು ಬಿಡಬೇಕಾಗಿತ್ತು.

ಬಾರುಕೋಲು ತನ್ನ ಕೆಲಸ ನಡಿಸಿಯೇ ಇತ್ತು. ಆದರೆ ನನಗೆ ಬೇಕಾದ ಉತ್ತರ ಆಗಲೇ ಸಿಕ್ಕಿ ಹೋಗಿತ್ತು. ಹಾಗೇ ಚಾವಡಿಯಿಂದ ಹೊರಬಿದ್ದೆ. ವಿಚಾರಿಸುತ್ತಲೇ ಮನೆಯತ್ತ ಹೊರಟೆ.

"ವೈಯಾರ-ವೈರಾಗ್ಯ, ಸಂಗಮ ಅಸಾಧ್ಯ." ಗುಡದಪ್ಪನಲ್ಲಿ ವೈರಾಗ್ಯದ ಬೀಜ ಮೊಳಕೆಯೊಡೆದಾಗ ವೈಯಾರ ಅದಕೊಂದು ನಟ್ಟು. ಎರಡೂ ಕೂಡಿ ಇರಬಯಸುವದು ಅಸಾಧ್ಯ.

ನಾನು ಇಷ್ಟು ದಿನಗಳ ವರೆಗೆ ಅವನನ್ನು ತಿರಸ್ಕರಿಸತೊಡಗಿದ್ದೆ. ಅದಕ್ಕೆ ನಾನು ನನ್ನನ್ನೇ ನಿಂದಿಸಿದೆ. ಮನೆ ಮುಟ್ಟುವ ಮೊದಲೇ ಗುಡದಪ್ಪನ ತಾಯಿ ಆ ಹೆಣ್ಣು ಮುದುಕಿಯ ಸ್ಮಶಾನಯಾತ್ರೆ ಎದುರಾಯಿತು. ನಾನು ಆ ಜನಸಮೂಹವನ್ನೆಲ್ಲ ನೋಡಿದೆ. ಆದರೆ ಅಂಥ ಪ್ರಸಂಗದಲ್ಲಿರಬೇಕಾದ ಗುಡದಪ್ಪ ಅಲ್ಲಿರಲಿಲ್ಲ.

"ಗುಡದಪ್ಪನಲ್ಲಿ" ಎಂದು ನಾನು ಒಬ್ಬನನ್ನು ಕೇಳಿದೆ.
"ಊರಲ್ಲಿಲ್ಲ” ಎಂದು ನನಗೆ ಉತ್ತರ ದೊರೆಯಿತು.


ಆ ಮಾತಿಗೆ ಇಂದು ಒಂದು ತಪ ಕಳೆದು ಹೋಗಿದೆ. ಅಂದಿನಿಂದ ಊರವರಿಗೆ ಕಣ್ಣು ಮರೆಯಾದ ಗುಡದಪ್ಪ ಎಲ್ಲಿಯೋ ಯಾವದೋ ಸ್ವಾಮಿಗಳ ಸನ್ನಿಧಾನದಲ್ಲಿ ಶಿಷ್ಯನಾಗಿದ್ದಾನೆಂಬ ಸುದ್ದಿ.

ಅವನ ಜೀವನದ ಹೆಚ್ಚು ಪರಿಚಯವಿಲ್ಲದವರ ದೃಷ್ಟಿಯಲ್ಲಿ ಅವನು ಸಂಸಾರಿಯಾಗಿ ಸನ್ಯಾಸಿ. ನನ್ನ ದೃಷ್ಟಿಯಲ್ಲಿ ಮಾತ್ರ ಗುಡದಪ್ಪ ಮದುವೆಯ ಬಾಸಿಂಗದ ಜತೆಯಲ್ಲಿ ವೈರಾಗ್ಯದ ದೀಕ್ಷೆಯನ್ನು ಹೊಂದಿದ ಸನ್ಯಾಸಿ.