ಪುಟ:ಹಳ್ಳಿಯ ಚಿತ್ರಗಳು.djvu/೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೪

ಹಳ್ಳಿಯ ಚಿತ್ರಗಳು

೩. ವಿದ್ಯೆಯನ್ನು ಕಲಿತ ಅನುಭವ

ನಮ್ಮ ಜೋಡಿದಾರನ ವಿದ್ಯಾರ್ಜನೆಯ ಒಂದೇ ಒಂದು ಅನುಭವವನ್ನು ಹೇಳುತ್ತೇನೆ. ಮಗನೇನೋ ದಿಗ್ಧಂತಿಯಾಗಿಬಿಡುತ್ತಾನೆ ಎಂದು ಅವರ ತಂದೆಯವರು ಕನ್ನಡ ಲೋವರ್ ಸೆಕಂಡರೀ ಪರೀಕ್ಷೆಗೆ ಅವನಿಗೆ “ಪ್ರೈವೇಟ್ ಟ್ಯೂಷನ್" ಹೇಳಿಸಿದರು. ಪರೀಕ್ಷೆಗೆ ಹೋಗುವ ಕಾಲ ಬಂದಿತು. ಆಗ ನಮ್ಮೂರಿಗೆ ಪರೀಕ್ಷೆಯ ಕೇಂದ್ರವು ನರಸೀಪುರವಾಗಿತ್ತು. ಪರೀಕ್ಷೆಗೆ ಹೊರಡುವುದಕ್ಕೆ ೪-೫ ದಿವಸ ಮೊದಲಿನಿಂದಲೇ ದೊಡ್ಡ ಜೋಡಿದಾರರು ಮಗನಿಗೆ "ಪರೀಕ್ಷೆಯಲ್ಲಿ ಸಮಾಧಾನದಿಂದಿರು. ನಿನಗೆ ಯಾವಾಗಲೂ ಗಾಬರಿ ಹೆಚ್ಚು” ಎಂಬುದಾಗಿ ಒತ್ತಿ ಒತ್ತಿ ಮನಸ್ಸಿಗೆ ಹಿಡಿಯುವಂತೆ ಉಪನ್ಯಾಸ ಮಾಡಿದ್ದರು. ವಿದ್ಯಾರ್ಥಿಗಳೆಲ್ಲರೂ ಮುಂಜಾನೆ ನರಸೀಪುರಕ್ಕೆ ಹೊರಡಬೇಕೆಂದು ನಿಶ್ಚಿತವಾಯಿತು. ಹೊರಡುವ ಮೊದಲ ರಾತ್ರಿ ಜೋಡಿದಾರನ ತಾಯಿಯವರು ಮಗನೇನೋ ವಿದ್ವತ್ ಪರೀಕ್ಷೆ ಮಾಡಿಬಿಡುತ್ತಾನೆ ಎಂಬುದಾಗಿ ಸಂತೋಷಪಟ್ಟು, ಇವನಿಗೆ ಎರಡು ರಸಬಾಳೆಯ ಹಣ್ಣನ್ನೂ ಒಂದು ಚೂರು ಕೊಬ್ಬರಿಯನ್ನೂ ಕೊಟ್ಟು “ದಾರಿಯಲ್ಲಿ ಹಸಿವಾದರೆ ಇದನ್ನೂ ತಿನ್ನು” ಎಂದು ಹೇಳಿದರು. ಜೋಡಿದಾರನು ಅದನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಬೆಳಗಿನ ಜಾವ ಹೊರಡುವಾಗ ತೆಗೆದುಕೊಳ್ಳೋಣ ಎಂದು ತನ್ನ ಪೆಟ್ಟಿಗೆಯಲ್ಲಿ ಹಾಕಿಬಿಟ್ಟನು. ಮುಂಜಾನೆ ಉಳಿದ ವಿದ್ಯಾರ್ಥಿಗಳೆಲ್ಲರೂ ಗಾಡಿಯನ್ನೇರಿ ಇವನ ಮನೆಯ ಬಾಗಲಿಗೆ ಬಂದರು. ಇವನೂ ತಾಯಿತಂದೆಗಳಿಗೆ ನಮಸ್ಕಾರ ಮಾಡಿ ಗಾಡಿಯಲ್ಲಿ ಕುಳಿತುಕೊಂಡು ಹೊರಟನು.

ನದಿಯ ತೀರಕ್ಕೆ ಹೋದ ಕೂಡಲೆ ಇವನಿಗೆ ಬಾಳೆಯಹಣ್ಣು ಕೊಬ್ಬರಿಯ ಜ್ಞಾಪಕ ಬಂದಿತು. ತಾಯಿಯವರು ಹೊರಡುವಾಗ ಕೊಟ್ಟ ವಸ್ತುವೆಂಬ ಅಭಿಮಾನವೋ, ಅಥವಾ ಹಸಿವಾದರೆ ತಿನ್ನಬೇಕೆಂಬ ಚಪಲವೋ, ಅಂತೂ ಬಾಳೆಯಹಣ್ಣು ಕೊಬ್ಬರಿಯನ್ನು ತರಲೇಬೇಕೆಂದು ನಿಶ್ಚಯಿಸಿದನು. ಗಾಡಿಯು ಹೊಳೆಯ ಮರಳಿನಲ್ಲಿಯೂ ನೀರಿನಲ್ಲಿಯೂ ನಿಧಾನವಾಗಿ ಹೋಗುತ್ತಿದ್ದಿತು. ಅದು ಹೊಳೆ ದಾಟುವ ವೇಳೆಗೆ ಹಿಂದಿರುಗಬಹುದೆಂದು