ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದೊಡ್ಡಮ್ಮ ನೋಡಿದ ವರ

"ಸರೋಜಾ, ಮೊನ್ನೆ ನಿನ್ನ ನೋಡ್ಲಿಕ್ಕೆ ಬಂದಿದ್ದಿಲ್ವೇ, ಅವರದು ನಿನ್ನೆಯೆ? ಸಾಯಂಕಾಲ ಒಂದು ಕಾಗದ ಬಂದಿದೆ ನೋಡು. ಹುಡುಗನ ಫೋಟೋ ನಾಳೆ-ನಾಡಿದ್ದು ಇಷ್ಟರಲ್ಲಿಯೇ ಕಳಿಸಿಕೊಡತಾರಂತೆ.”

"ಹೋಗಮ್ಮಾ, ನನಗೀಗ ಸ್ಕೂಲಿಗೆ ಹೊತ್ತಾಗುತ್ತೆ, ಅದೆಲ್ಲ ನಿನ್ನ ರಗಳೆ ನಾನೆಲ್ಲಿ ಕೇಳುತ್ತ ಕೂಡಲಮ್ಮಾ?" ಎನ್ನುತ್ತ ಸರೋಜಳು ತನ್ನ ರೂಮಿನೊಳಕ್ಕೆ ಹೊಕ್ಕು ಪುಸ್ತಕಗಳನ್ನು ಕೈಯಲ್ಲಿ ತೆಗೆದುಕೊಂಡು ಹೊರಗೆ ಬಂದಳು.

"ರಗಳೆಯೆಂದ್ರೆ ಹ್ಯಾಗೆ ನಡೆದೀತಮ್ಮಾ? ಇನ್ನೇನು, ನೀನು ಐಶ್ವರ್ಯವಂತನ ಕೈಹಿಡಿಯುವಾಕೆ. ಅವರಲ್ಲಿ ಹೋದಮೇಲೆ ನೀನು ದೊಡ್ಡಮ್ಮನೆಂದು ನನ್ನ ನೆನಪನ್ನಾದರೂ ಮಾಡ್ತೀಯೋ ಇಲ್ಲವೊ? ಸರೋಜ, ಸರೋಜ, ಮಾತನ್ನೇಕೆ ಆಡುತ್ತಿಲ್ಲವೇ? ಕಳ್ಳೀ , ನಾಚಿಕೆಯಾಗುತ್ತೇನೋ, ಹೌದೇ ? ನಿಜ, ನನಗೆ ಕೂಡ ನಿನ್ನಷ್ಟಿರುವಾಗ ವಿಪರೀತ ನಾಚಿಕೆಯಾಗುತ್ತಿತ್ತಮ್ಮಾ.......” ಎನ್ನುತ್ತ ಸುಂದರಮ್ಮ ಸಗಣೆ ಕೈಯನ್ನು ಹಾಗೆಯೇ ಹಿಡಿದುಕೊಂಡು ಹೊರಗೆ ಬಂದರು; ನೊಡುತ್ತಾರೆ, ಸರೋಜನ ಕೋಣೆಗೆ ಬೀಗ ಹಾಕಿದ್ದಿತು;ಸರೋಜಳು ಯಾವಾಗಲೋ ಹೋಗಿರಬೇಕೆನ್ನಿಸಿತು.

ಬೇಗ ಬೇಗ ಕೆಲಸ ತೀರಿಸಿಕೊಂಡು ಮುಂಬಾಗಿಲು ಇಕ್ಕಿಕೊಂಡರು; ತಮ್ಮ ಟ್ರಂಕಿನೊಳಗಿಂದ ಪತ್ರವೊಂದನ್ನು ತೆಗೆದರು. ಅದು ಬಂದು ಈಗೆರಡು ದಿನಗಳಾಗಿದ್ದರೂ ಸುಂದರಮ್ಮನಿಗೆ ನಿರಾತಂಕವಾಗಿ ಓದಲಿಕ್ಕೆ ಅನುಕೂಲ ಸಮಯ ಸಿಗದ್ದರಿಂದ ಹಾಗೆ ಬಿಟ್ಟಿದ್ದರು. ಈಗವರು ಅದನ್ನು ಓದತೊಡಗಿದರು.