ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೬
ಹೂಬಿಸಿಲು

ಅವಳ ಮುಖದಿಂದ ಹೊರಹೊಮ್ಮುತ್ತಿದೆ. ಮೈತುಂಬ ತನ್ನ ದುಡಿತದ ಪ್ರತಿಫಲವೆಂದು ಗಳಿಸಿದ ಚಿನ್ನ ದಾಭರಣಗಳು-ಕೈಯಲ್ಲಿ ಬಂಗಾರಬಳೆ-ಗೋಟು-ಬಿಲ್ವರಗಳು, ಬೆರಳುಗಳಲ್ಲಿ ಅಷ್ಟ ಜೈಲು ಮೊಹರಿನುಂಗುರಗಳು, ಕೊರಳಲ್ಲಿ ಗಟ್ಟಿ ಮುಟ್ಟಿಯಾದ ಐವತ್ತು ಪುತ್ಥಳಿಗಳ ಸರವೊಂದು, ಗೆಜ್ಜೆ ಟೀಕೆ-ಸರಿಗೆ ಸರದಾಳಿಸಾಮಾನೊಂದ- ಚೇರಿನದು. ಉಡುವದು ಯಾವಾಗಲೂ ತೋಪುತೆನೆ ತಿರುವಿದ ಗದಗಿನ ಸೀರೆಯನ್ನೆ ! ತೊಡುವದು ಬೆಂಗಳೂರಂಚಿನ ಜರದ ಕುಪ್ಪಸಗಳನ್ನೇ ! ದುಡಿತದ ವ್ಯಾಯಾಮದಿಂದ ಪುಷ್ಟವಾಗಿ ಬೆಳೆದ ತೋಳುಗಳಲ್ಲಿ ಮೂರು ಸೇರಿನ ಬಂಗಾರದ ಒಂಕಿಗಳು ಒಪ್ಪುತ್ತಿವೆ. ನೀಟಾದ ಮೂಗು, ಮೂಗಿನಲ್ಲೊಂದು ಮೂಗುತಿ, ದುಂಡಾದ ಮುಖ. ಗುಲಾಬಿಯೆಂದರೆ ಭಾರೀ ಗುಲಾಬಿಯಾದ ಬಣ್ಣ. ಪರಸ್ಪೇಟಿಯಂಚಿನ ತೋಪುತನೆ ತಿರುವಿದ ಕರೇ ಕಸೂತಿಯ ಸೀರೆಯನ್ನುಟ್ಟು, ತೋಳುಗಳಲ್ಲಿ ನೆಟ್ಟು ನಿಂತ ಗುಲಾಬಿ ಅಥವಾ ಹಸಿರು ಬೆಂಗಳೂರು ಜರದ ಕುಪ್ಪಸ ತೊಟ್ಟು, ತಲೆಯ ಮೇಲೆ ಪೇರಲ-ಮಾವಿನ ಹೆಡಿಗೆಯನಾಗಲಿ, ಮುಸಂಬಿ ಕಿತ್ತಳೆಗಳ ಬುಟ್ಟಿಯನ್ನಾಗಲಿ, ಅಂದಚೆಂದ ಹೂವುಗಳ ತಟ್ಟೆಯನ್ನಾಗಲಿ ಹೊತ್ತುಕೊಂಡು, ನಗೆಮೊಗದಿಂದ ನಮ್ಮಂಗಳ ಕಟ್ಟೆಯನ್ನು ಮೆಟ್ಟುತ್ತ ಬಂದಳೆಂದರೆ, ನನಗಂತೂ ಆಕೆಯು ಚೆಂಗಳಿಕೆವ್ವನ ಹಾಗೆ ಕಾಣುವಳು.

ನಾನು ಹೇಳಲು ಹೊರಟಿದ್ದು ದ್ಯಾಂವಕ್ಕನ ಮಗನ ಸಣ್ಣ ಸುದ್ದಿಯೊಂದನ್ನು, ಆದರೆ ಅದು ಒತ್ತಟ್ಟಿಗೆ ಉಳಿದು ದ್ಯಾಂವಕನ ಚರಿತ್ರವೇ ನಡೆದುಬಂದಿತು. ಇದೂ ನಿಜ ಸಂಗತಿಯು ದ್ಯಾಂವಕ್ಕನ ಮಗ ಸಾದೇವನದಿದ್ದರೂ ಅದು ದ್ಯಾಂವಕ್ಕನಿಗೆ ಹೆಚ್ಚಾಗಿ ಗೌರವ ಕೊಡುವಂತಹದಾಗಿದೆ. ಅಲ್ಲದೆ ಗೋಡೆಯನ್ನು ಕಟ್ಟುವ ಮೊದಲು ತಳಹದಿಯು ಬೇಕಲ್ಲವೆ ? ಹಾಗಾದರೆ ಸಾದೇವನ ಚರಿತ್ರೆಗೆ ಇದು ತಳಹದಿಯಾಯಿತೆನ್ನಿರಿ.