ಲತ್ತೆಯ ಪೆಟ್ಟುಗಳನ್ನು ಸಹಿಸಬಹುದು; ಲೇಖನಿಯ ಒದೆಗಳನ್ನು ಸಹಿಸುವುದು ಕಷ್ಟ. ಅದರಲ್ಲಿಯೂ ಅವನ ಲೇಖನಿಯಿಂದ ಬರೆಯಲ್ಪಟ್ಟ ಮಾತುಗಳನ್ನು ಓದುವಾಗ ನನ್ನ ಕಲ್ಲಿನಂಥ ಹೃದಯವೂ ಕರಗಿಹೋಗುತ್ತಿದೆ. ಮದುವೆಯ ದಿನ ನಾನು ಮನಸ್ಸಿನಲ್ಲಿ ಮಾಡಿಕೊಂಡ ದೃಢ ಪ್ರತಿಜ್ಞೆಯ ಅವನ ಕಾಗದವನ್ನು ಓದಿದೊಡನೆ ಓಡಲು ಯತ್ನಿಸುತ್ತಿದೆಯೇಕೆ ? 'ನೀನೆಂಥ ಕ್ರೂರಿ ಸರಸಿ, ನನ್ನ ಕಾಗದಗಳೊಂದಕ್ಕೂ ಪ್ರತ್ಯುತ್ತರವನ್ನೇ ಬರೆಯುತ್ತಿಲ್ಲವೇಕೆ?' ಎಂದು ಬರೆದಿರುವನು. ಹೌದು, ನಾನು ಕ್ರೂರಿ..ಅಣ್ಣನು ನನ್ನ ಮೇಲೆ ನಡೆಸಿದ ಕ್ರೂರತನದ ಪ್ರತಿಫಲವಾಗಿ ನಾನವನಿಗೆ ಕ್ರೂರಿ. . ಇದೀಗ ಇಂದಿನ ನ್ಯಾಯ. ಏನು ಮಾಡಲಿ ? ಏನೆಂದು ಬರೆಯಲಿ? ಬರೆಯದೆ ಇರಲೆ ? ಅವನೇನೆಂದು ತಿಳಿದುಕೊಳ್ಳುವನು? ಈ ತರದ ಸಂಕಟವನ್ನು ಅನುಭವಿಸುವುದಕ್ಕೆ ನನ್ನ ಜನ್ಮವಾಯಿತೇನು? ನಾನೇಕೆ ಸಾಯುವುದಿಲ್ಲ ? ಬಾವಿಗೆ ಹಾರಲೇ? ಹಾರಲಾರೆ.. ನನ್ನನ್ನು ತನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಅಕ್ಕನಿರುವಳು-ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ನೋಡುವ ಪತಿ ಇರುವರು. ಅವರ ಅಷ್ಟೊಂದು ಪ್ರೀತಿಯ ಪ್ರತಿಫಲವಾಗಿ ಕೊಡಲು ನನ್ನಲ್ಲೇನಿದೆ ?.... ಇದ್ದುದನ್ನೆಲ್ಲಾ ಅವನಿಗೆ ಬಲು ದಿನಗಳಹಿಂದೆಯೇ ಅರ್ಪಿಸಿಬಿಟ್ಟಿರುವೆನು.. ಇನ್ನಿರುವುದೇನು ? ಅವರಿಗಾಗಿ ಭಕ್ತಿಯಿಂದ ಚಿಕ್ಕ ದೊಡ್ಡ ಕೆಲಸಗಳನ್ನು ಜಾಗರೂಕತೆಯಿಂದ ಮಾಡುವೆನು. ಆದರೆ ಯಾವುದು ಮುಖ್ಯವೋ ಅದು ಮಾತ್ರ ನನ್ನೆಡೆಯಲ್ಲಿಲ್ಲ-ಏನು ಮಾಡಲಿ?..ಸಾಯಲಾರೆ..ಬದುಕಲಾರೆ...ಏನು ಮಾಡಲಿ ?... ಏನು ಮಾಡಲಿ....ಕೇಳುವುದು ಯಾರೊಡನೆ..
೧೮-೧೧-೩೧
ನಾಳೆ ಅವನಿಗೆ ಮದವೆಯಂತೆ! ಆಗಲಿ...ನನಗೇನು? ನಾನೇಕೆ 'ಅಯ್ಯೋ' ಅನ್ನಬೇಕು ? ಮೂರು ವರುಷಗಳಿಂದ 'ಅವನಿಗೆ ಬೇಗ
14