ವಿಷಯಕ್ಕೆ ಹೋಗು

ಹಳ್ಳಿಯ ಚಿತ್ರಗಳು/ನಮ್ಮ ಹೊಳೆಯ ಒಂದು ಅನುಭವ

ವಿಕಿಸೋರ್ಸ್ದಿಂದ
93934ಹಳ್ಳಿಯ ಚಿತ್ರಗಳು
— ನಮ್ಮ ಹೊಳೆಯ ಒಂದು ಅನುಭವ
ಗೊರೂರು ರಾಮಸ್ವಾಮಿ ಐಯಂಗಾರ್

ನಮ್ಮ ಹೊಳೆಯ ಒಂದು ಅನುಭವ


ನಮ್ಮ ಹಳ್ಳಿಗೆ ಈಗ ಸೇತುವೆ ಆಗಿಬಿಟ್ಟಿರುವುದರಿಂದ, ಹೊಳೆಯ ಪ್ರವಾಹದ ಅವಾಂತರ ಈಗಿನವರಿಗೆ ಸ್ವಲ್ಪವೂ ಗೊತ್ತಾಗುವುದೇ ಇಲ್ಲ. ಆದರೆ ನಮ್ಮ ಹೊಳೆಯ ಕ್ರೌರ್‍ಯಕ್ಕೆ ಸಿಕ್ಕಿ ಕಷ್ಟಪಟ್ಟವರಲ್ಲಿ, ನಮ್ಮ ಊರು ನಿಂಗ ಒಬ್ಬ, ಅವನಿಗೆ ಉಂಟಾದ ಅನುಭವದಲ್ಲಿ ವಿನೋದವೂ ಭಯವೂ ತುಂಬಿಕೊಂಡಿವೆ. ಅವನಿಂದಲೂ, ಅವನ ಅವಸ್ಥೆಯನ್ನು ಕಂಡ ಇತರರಿಂದಲೂ, ಕೇಳಿದುದನ್ನು ನಾನು ನಿಮಗೆ ಹೇಳುತ್ತೇನೆ.

ನಮ್ಮ ಹಳ್ಳಿಗೆ ಎರಡು ಮೈಲಿ ದೂರದಲ್ಲಿ ಪಶ್ಚಿಮದಿಕ್ಕಿನಲ್ಲಿ ಹೇಮಾವತಿ ಮತ್ತು ಯಗಚಿ ನದಿಗಳೆರಡೂ ಸಂಗಮವಾಗುತ್ತವೆ. ಆ ಸ್ಥಳವು ಪುರಾಣ ಪ್ರಸಿದ್ಧವೂ ಪುನೀತವೂ ಆದುದು. ಸಂಗಮಸ್ಥಳದಲ್ಲಿ ವಿಶಾಲವಾದ ಒಂದು ತೋಪಿದೆ. ಅಲ್ಲಿರುವ ಮರಗಳು ಗಗನ ಚುಂಬಿಗಳಾಗಿ, ಶೀತಳವಾದ ನೆರಳನ್ನು ನೆಲದಮೇಲೆ ಪ್ರಸರಿಸುತ್ತವೆ. ಅಲ್ಲೊಂದು ಈಶ್ವರ ದೇವಾಲಯವಿದೆ. ಆ ತೋಪು ಶಾಂತಿಗೆ ನೆಲೆಮನೆಯಾಗಿ, ಅಲ್ಲಿ ಕುಳಿತುಕೊಳ್ಳುವರ ಮನಸ್ಸಿಗೆ ಇಂಪಾದ ಸಮಾಧಾನವನ್ನುಂಟುಮಾಡುತ್ತದೆ. ಮನಸ್ಸಿಗೆ ಬೇಸರಿಕೆಯಾದಾಗ ಆ ತೋಪಿನಲ್ಲಿ ಹೋಗಿ ಎರಡು ಗಳಿಗೆ ಕುಳಿತರೆ ಸಾಕು. ಬಾಹ್ಯ ಪ್ರಕೃತಿಯ ನಿಶ್ಯಬ್ದತೆಯೂ ಶಾಂತಿಯೂ ನಮ್ಮ ಹೃದಯವನ್ನು ಮುಟ್ಟದೆ ಬಿಡುವುದಿಲ್ಲ. ರಮಣೀಯವಾದ ನದಿಯ ತೀರ, ತೀರದ ಉದ್ದಕ್ಕೂ ತೋರಣಗಳನ್ನು ಕಟ್ಟಿರುವಂತೆ ಬಾಗಿರುವ ಮರದ ಹಸುರಾದ ಕೊಂಬೆಗಳು, ಆ ಕೊಂಬೆಗಳಿಂದ ನೀರಿನ ಮೇಲೆ ಉದುರುವ ಅರಳಿದ ಹೂವು, ಹೂವಿನ ಕಂಪನ್ನು ಹೊತ್ತುಕೊಂಡು ಪ್ರಕೃತಿಯ ದೇವಾಲಯದಲ್ಲಿ ಭಕ್ತನಂತೆ ಸಂಚರಿಸುವ ಮಂದ ಮಾರುತ, ಕಲ್ಲುಗಳ ಮೇಲೆ ಜಾರುತ್ತ, ಬಂಡೆಗಳ ಮೇಲೆ ಉರುಳುತ್ತಾ, ಜುಳು ಜುಳು ರವದಿಂದ ಹರಿಯುತ್ತಿರುವ ನದಿ, ತೋಪಿನ ನಿಶ್ಯಬ್ದತೆಗೆ ಆನಂದದಿಂದ ಇಂಪಾದ ಗಾನವನ್ನು ಎಸೆಯುತ್ತಿರುವ ಹಕ್ಕಿಗಳು, ನದಿಯ ಎರಡು ತೀರದ ಉದ್ದಕ್ಕೂ ಹಸುರಾಗಿ ಬೆಳೆದು ನಿಂತಿರುವ ಪೈರಿನ ಬಯಲು, ಎರಡು ನದಿಗಳೂ ಒಂದಾಗಿ ಸೇರಿ ವಿಸ್ತಾರವಾದ ಪಾತ್ರ, ಇವುಗಳೆಲ್ಲಾ ಅಲ್ಲಿ ಒಂದಾಗಿ ಪ್ರಕೃತಿಯ ಕಲಾನಿಪುಣತೆಯ ಚಿತ್ರದ ಪರಮಾವಧಿಯ ದೃಶ್ಯವೊಂದು ಅಲ್ಲಿ ಕಣ್ಣಿಗೆ ಬೀಳುತ್ತದೆ.

ಯಗಚಿ ಹೊಳೆಗೆ ಕಳ್ಳ ಹೊಳೆಯೆಂದು ಹೆಸರು ಬಂದಿದೆ. ಭಗವಂತನ 'ಕ್ರಿಮಿನಲ್ ಕೋರ್ಟು' ಅಪರಾಧಿಗಳ ಪೈಕಿ ಇದೂ ಸೇರಿದೆಯೋ ಏನೋ? ಇಬ್ಬನಿಯು ಬಂದರೆ ತುಂಬಿಹೋಗುತ್ತದೆ; ಬೆಳದಿಂಗಳಿಗೆ ಆರಿಹೋಗುತ್ತದೆ. ನಮ್ಮ ನಿಂಗನೂ, ಅವನ ಸ್ನೇಹಿತನಾದ ಬೋರನೂ, ಮುತ್ತುಗದೆಲೆ ತರುವುದಕ್ಕಾಗಿ ಸಂಗಮದ ಹತ್ತಿರ ಹೋಗಿ ಹೊಳೆಯನ್ನು ದಾಟಿ ಆಚೆ ದಡವನ್ನು ಸೇರಿದರು. ನದಿಯಲ್ಲಿ ನೀರು ಮಂಡಿಯುದ್ದ ಬರುತ್ತಿತ್ತು. ಆಗ ಬೆಳಿಗ್ಗೆ ೬ ಗಂಟೆಯಿದ್ದಿರಬಹುದು. ಸ್ವಲ್ಪ ಹೊತ್ತಿನೊಳಗಾಗಿ ಮಳೆ ಬರಲು ಪ್ರಾರಂಭವಾಯಿತು. ಅವರಿಬ್ಬರೂ ಅಲ್ಲಿಯೇ ಇದ್ದ ಈಶ್ವರ ದೇವಾಲಯವನ್ನು ಹೊಕ್ಕರು. ಮಳೆ ಬಿಡಲಿಲ್ಲ. ಮಲೆನಾಡಿನ ಸೋನೆಯಾಗಿ ಪ್ರಾರಂಭಿಸಿದುದು, ಕಲ್ಲು ಮಳೆಯಾಗಿ ಸುರಿಯಲು ಮೊದಲಾಯಿತು. ಮಧ್ಯಾಹ್ನ ೧೨ ಗಂಟೆಯಾದರೂ ಮಳೆ ಸುರಿಯುತ್ತಲೇ ಇದ್ದಿತು. ಸಾಯಂಕಾಲದೊಳಗೆ ಬಿಡಬಹುದೆಂಬ ಸೂಚನೆ ತೋರಲಿಲ್ಲ. ಅಷ್ಟು ಹೊತ್ತಿಗೆ ಮೇಲೆ ಎಲ್ಲೋ ಜೋರಾಗಿ ಮಳೆಯಾಗಿ, ನೂರಾರು ಸಿಂಹಗಳು ಘರ್ಜಿಸಿದಂತೆ ಶಬ್ದ ಮಾಡುತ್ತಾ ಪ್ರವಾಹವು ಬಂದೇಬಿಟ್ಟಿತು. ಮಧ್ಯಾಹ್ನ ಸುಮಾರು ಮೂರು ಗಂಟೆಯ ಹೊತ್ತಿಗೆ ಮಳೆಯು ಸ್ವಲ್ಪ ಕಡಮೆಯಾಯಿತು. ಪ್ರವಾಹವು ಮಾತ್ರ ಮೊದಲಿನಂತೆ ಬರುತ್ತಲೇ ಇದ್ದಿತು.

ಬೋರನಿಗೆ ಚೆನ್ನಾಗಿ ಈಜು ಬರುತ್ತಿತ್ತು. ಆದರೆ ನಿಂಗನಿಗೆ ಈಜಿನ ಗಂಧವೇ ತಿಳಿಯದು. ಹೊಳೆಯ ತೀರದಲ್ಲಿ ಒಂದು ಹಳೆಯ ಹರಿಗೋಲು ಬಿದ್ದಿದ್ದಿತು. ಆ ಕಡುವಿನಲ್ಲಿ ಈಗ ಹರಿಗೋಲನ್ನು ಉಪಯೋಗಿಸುತ್ತಿರಲಿಲ್ಲ. ೪-೫ ವರುಷಗಳ ಹಿಂದೆ ಉಪಯೋಗಿಸುತ್ತಿದ್ದ ಹಳೆಯ ಹರಿಗೋಲದು. ಅದನ್ನು ಇಬ್ಬರೂ ಸೇರಿ ಕಷ್ಟ ಪಟ್ಟು ನದಿಯ ತೀರಕ್ಕೆ ಎಳೆದು ತಂದರು. ನೀರಿಗೆ ಹರಿಗೋಲನ್ನು ಹಾಕಿದ ಕೂಡಲೆ ೨-೩ ಸ್ಥಳಗಳಿಂದ ಒಳಕ್ಕೆ ನೀರು ನುಗ್ಗಲು ಪ್ರಾರಂಭವಾಯಿತು. ಬೋರನು ಕೆಲವು ಬೇರುಗಳನ್ನೂ ಸೊಪ್ಪುಗಳನ್ನೂ ತಂದು ಆ ತೂತುಗಳಿಗೆಲ್ಲಾ ತುರುಕಿದನು. ನೀರು ಒಳಕ್ಕೆ ನುಗ್ಗುವುದು ಸ್ವಲ್ಪ ಕಡಮೆಯಾದರೂ ಇನ್ನೂ ನುಗ್ಗುತ್ತಲೇ ಇದ್ದಿತು. ಬೋರನು “ಪರವಾಯಿಲ್ಲ-ಬಾರೊ. ಹೊಳೆ ತಮಟೆ ಅಗಲ ಇದೆ. ಈ ಕಡೆ ಹರಿಗೋಲ್ನ ನೂಕಿ ಕೂತ್ಕಂಡ್ರೆ ಆ ಕಡೆಗೆ ಹೋಗಿ ಸೇರ್ತೇವೆ. ಹೊಳೆ ಇರೋ ಆಳ ಅಷ್ಟರಲ್ಲೇ ಇದೆ” ಎಂದ. ನಿಂಗನಿಗೆ ಇಷ್ಟವಿರಲಿಲ್ಲ. ಬೇಡ ಅಂದರೆ ಗೆಳೆಯ ಎಲ್ಲಿ ತನ್ನನ್ನು ಹೇಡಿ ಎಂದು ಹಾಸ್ಯ ಮಾಡುತ್ತಾನೋ ಎಂಬ ಭಯ. ಹೂ ಅಂದ. ಹರಿಗೋಲಿನಲ್ಲಿ ಕುಳಿತುಕೊಳ್ಳುವಾಗ ಅವನ ಮುಖವು ಮರಣ ದಂಡನೆಗೆ ಗುರಿಮಾಡಲ್ಪಟ್ಟವನ ಮುಖದಂತೆ ತೋರಿತು.

ತೋಪಿನಲ್ಲಿ ಬೇಕಾದಂತೆ ಸುವಾಸನೆಯುಳ್ಳ ಕೆಂಡಸಂಪಿಗೆಯ ಹೂವಿದ್ದಿತು. ನಿಂಗನು ಒಂದು ಚಿಕ್ಕ ಬುಟ್ಟಿಯ ತುಂಬ ಆ ಹೂವುಗಳನ್ನು ಕುಯಿದು ತುಂಬಿದ್ದನು. ಇಬ್ಬರೂ ಕುಯ್ಲಿದ್ದ ೨ ಮುತ್ತುಗದ ಎಲೆಯ ಪಿಂಡಿಗಳನ್ನೂ ಹರಿಗೋಲಿನೊಳಗೆ ಇಟ್ಟುದಾಯಿತು. ಗಣೆಗಾಗಿ ಚಿಕ್ಕದಾದ ಒಂದು ಕೊಂಬೆಯನ್ನು ಮುರಿದು, ಅದರ ಎಲೆಗಳನ್ನೆಲ್ಲಾ ನೆಲದ ಮೇಲೆ ಬಡಿದು ಉದುರಿಸಿದರು. ಇಬ್ಬರೂ ಹರಿಗೋಲಿನಲ್ಲಿ ಕುಳಿತು ಕೊಂಡು ಗಣೆಯಿಂದ ಒಂದು ಸಲ ಮೀಟಿದ ಕೂಡಲೆ ಅದು ಬಹಳ ವೇಗವಾಗಿ ಹೊರಟಿತು. ಪ್ರವಾಹವು ಅತಿ ವೇಗವಾಗಿ ಹೋಗುತ್ತಿದ್ದುದರಿಂದ, ಗಣೆಯನ್ನು ನೆಲಕ್ಕೆ ಅಮುಕಿ ಮೀಟಲು ಅವಕಾಶವೇ ಆಗಲಿಲ್ಲ. ಹರಿಗೋಲು ಪ್ರವಾಹದ ಜೊತೆಯಲ್ಲಿ ಗಂಟೆಗೆ ನೂರು ಮೈಲು ವೇಗದಲ್ಲಿ ಹೋಗುತ್ತಿದ್ದಿತು. ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಒಂದು 'ಫರ್ಲಾಂಗು' ಕೆಳಕ್ಕೆ ಬಂದುಬಿಟ್ಟಿತು. ಆದರೆ ೨೦ ಮಾರು ಮಾತ್ರ ವಿಸ್ತಾರವಾಗಿದ್ದ ಪಾತ್ರವನ್ನು ದಾಟಿ ಎದುರು ದಡವನ್ನು ಸೇರಲಿಲ್ಲ.

ಈ ಮಧ್ಯೆ ಪ್ರವಾಹದ ವೇಗದಿಂದ ಹರಿಗೋಲಿಗೆ ತುರುಕಿದ್ದ ಸೊಪ್ಪು ಬಳ್ಳಿ ಎಲ್ಲಾ ತೇಲಿಹೋಯಿತು. ಎರಡು ಮೂರು ಕಡೆ ನೀರು ಹರಿಗೋಲಿನೊಳಕ್ಕೆ ನುಗ್ಗಲು ಪ್ರಾರಂಭವಾಯಿತು. ಬೋರನು "ಏನ್ಮಾಡೋಣ" ಎಂದನು. ನಿಂಗನು “ಮಾಡೋದೇನು ನೀನು ಈಜ್ಕೊಂಡೋಗು, ನೀರಲ್ಲಿ ಸಾಯೋದು ನನ್ನ ಹಣೇಲಿ ಬರ್ದಿರೋಹಂಗೆ ತೋರುತ್ತೆ. ಹುಡುಗನಾಗಿದ್ದಾಗ ಈಜು ಕಲೀಲಿಲ್ಲ. ಅದಕ್ಕೆ ಬೆಲೆ ಕೊಡ್ತಿದ್ದೇನೆ. ಆದ್ರೆ ೫ ಗಂಡುಮಕ್ಕಳಿದ್ದಾರೆ, ಇನ್ನೂ ಎಲ್ಲಾ ಚಿಕ್ಕೋರು. ದೇವರು ಕಾಪಾಡ್ಬೇಕು” ಎಂದು ಕಣ್ಣೀರುಬಿಟ್ಟನು. ಬೋರನು “ಹಾಗೆ ಬೇಡ, ಬಾ, ನನ್ನ ಹೆಗಲಿನ ಮೇಲೆ ಭಾರವನ್ನೆಲ್ಲ ಬಿಟ್ಟು ಮಲಗಿಕೊ, ಇಬ್ಬರೂ ಒಟ್ಟಿಗೆ ಈಜಿ ಯಾವ್ದಾದ್ರೂ ಒಂದು ದಡ ಸೇರೋಣ. ಇಲ್ಲಿ ಇಬ್ಬರೂ ಸಾಯೋಣ, ಬದುಕಿರೋವಾಗ ಹೇಗೆ ಗೆಳೆಯರೊ, ಹಾಗೆ ಸಾಯೋವಾಗ ಗೆಳೆಯರಾಗಿ ಸಾಯೋಣ" ಎಂದನು. ನಿಂಗನು ಸ್ವಲ್ಪ ಯೋಚಿಸಿ "ಹಾಗಾದ್ರೆ ಒಂದ್ಕೆಲಸ ಮಾಡಿದ್ರೆ ಇಬ್ಬರೂ ಬದುಕ್ಬಹುದು. ಈ ಹರಿಗೋಲಿಗೆ ಅರ್ಧದವರೆಗೆ ನೀರು ತುಂಬಿಬಿಟ್ಟಿರೋದರಿಂದ ನಮ್ಮಿಬ್ಬರ ಭಾರಾನೂ ಇದು ತಡೀಲಾರದು. ನೀನು ಈಜೊಂಡು ಆಚೆ ದಡ ಸೇರಿಬಿಡು, ನಮ್ಮೂರು ಕಡುವಿಗೆ ಹೋಗೋವರಿಗೆ ಭಯವಿಲ್ಲ. ಅಲ್ಲಿ ಯಾರಾದ್ರೂ ಬೆಸ್ತರು ಹಿಡಿದೇ ಹಿಡೀತಾರೆ. ಆಯುಸ್ಸಿದ್ರೆ ಬದಿಕ್ಕೋತೇನೆ. ಇಲ್ದಿದ್ರೆ ಹೋಗಲಿ. ಹುಟ್ಟಿದ್ಮೇಲೆ ಸಾಯ್ಬೇಕು” ಎಂದನು. ಬೋರನು ಹಿಂದೆ ಮುಂದೆ ನೋಡಿದನು. ನೀರು ಪ್ರತಿ ನಿಮಿಷದಲ್ಲಿಯೂ ವೇಗವಾಗಿ ಹರಿಗೋಲಿನೊಳಕ್ಕೆ ನುಗ್ಗುತ್ತಿದ್ದಿತು. ಇನ್ನು ಸ್ವಲ್ಪದರಲ್ಲಿ ಹರಿಗೋಲು ಇಬ್ಬರ ಭಾರವನ್ನು ತಡೆಯಲಾರದೆ ಮುಳುಗಬಹುದೆಂದು ಅವನಿಗೆ ತೋರಿತು. ಹದಿನೈದು ಮಾರು ದೂರದೊಳಗೆ ಸಂಗಮ ಸ್ಥಳವು ಕಾಣುತ್ತಿತ್ತು. ಸಂಗಮದ ಬಳಿ ನದಿಯ ಪಾತ್ರವು ಉಳಿದ ಕಡೆಗಿಂತ ಮೂರರಷ್ಟು ಹೆಚ್ಚು ವಿಸ್ತಾರವಾಗಿದ್ದುದರಿಂದ, ಅಲ್ಲಿ ಈಜಬಹುದೆಂಬ ನಂಬಿಕೆ ಅವನಿಗೆ ಇರಲಿಲ್ಲ. ಮುಂದೆ ಸಂಗಮದಾಚೆ ಹೇಮಾವತಿಯಲ್ಲಿ ನೀರು ಹೆಚ್ಚಾಗಿದ್ದುದರಿಂದ ಅಲ್ಲಿ ಈಜುವುದೂ ಕೂಡ ಅಸಾಧ್ಯವೇ ಆಗಿದ್ದಿತು. ಹರಿಗೋಲಿನಲ್ಲಿಯೇ ಇದ್ದರೆ ಇಬ್ಬರೂ ಮುಳುಗುವ ಸಂಭವ. ಆದುದರಿಂದ ಕೊನೆಗೆ “ಆಗಲಿ ನಾನು ಈಜ್ತೇನೆ” ಎಂದನು. ಪಾಪ, ತನ್ನ ಭಾರ ಹರಿಗೋಲಿಗೆ ಕಡಮೆಯಾದರೆ, ಅದು ನಮ್ಮೂರಿನವರಿಗೆ ಮುಟ್ಟುವುದೇನೊ, ಅಲ್ಲಿ ಬೆಸ್ತರು ನಿಂಗನನ್ನು ಬದುಕಿಸುತ್ತಾರೇನೋ, ಎಂದು ಅವನಿಗೆ ಚಪಲ. ಹರಿಗೋಲಿನಲ್ಲಿ ಇಬ್ಬರೂ ಆಲಿಂಗಿಸಿಕೊಂಡರು. ಅವರಿಬ್ಬರ ಕಣ್ಣೀರೂ ನದಿಯ ನೀರಿನೊಂದಿಗೆ ಬೆರೆಯಿತು. ನಿಂಗನಿಗೆ ಭೂಮಿಯ ಮೇಲೆ ತಾನು ಮತ್ತೆ ಸ್ನೇಹಿತನ ಮುಖವನ್ನು ನೋಡುವ ಆಸೆ ಇರಲಿಲ್ಲ. ತಡಮಾಡಲು ಅವಕಾಶವನ್ನು ಕೊಡದೆ ಅವನು ಬಲಾತ್ಕಾರವಾಗಿ ಬೋರನನ್ನು ನದಿಗೆ ನೂಕಿಬಿಟ್ಟನು. ಬೋರನು ನದಿಯ ವೇಗದಲ್ಲಿ ನೂಕಲ್ಪಟ್ಟು, ಸಂಗಮದ ಸುಳಿಯಲ್ಲಿ ಸಿಲುಕಿ, ಮುಳುಗಿ, ಅರ್ಧ ಮೈಲು ಮುಂದೆ ದಡವನ್ನು ಸೇರಿದನು. ನೀರಿನ ಹೊಡೆತದಿಂದಲೂ ಶೈತ್ಯದಿಂದಲೂ ಅವನ ಮೈಯೆಲ್ಲಾ ಹಸುರಾಗಿಬಿಟ್ಟಿತ್ತು.

ಈ ಕಡೆ ನಿಂಗನ ವಿಚಾರ ಸ್ವಲ್ಪ ಕೇಳಿ. ಮೊದಲು ಅವನು ಎರಡು ಮುತ್ತಗದ ಪಿಂಡಿಯನ್ನೂ ಒಂದೊಂದಾಗಿ ನೀರಿನೊಳಕ್ಕೆ ಬಿಸಾಡಿದನು. ಸಂಗಮ ಸ್ಥಳಕ್ಕೆ ಅವನ ಹರಿಗೋಲು ಬಂದ ಕೂಡಲೆ ಸುಳಿಯಲ್ಲಿ ಬುಗರಿಯಂತೆ ಗಿರ್‍ರೆಂದು ಸುತ್ತಿತು. ಅದು ಕೂಡೆ ನಿಂಗನ ತಲೆಯ ಸುತ್ತಿತು. ಅಲ್ಲಿಂದ ಮುಂದೆ ಹರಿಗೋಲು ಒಂದು ದೊಡ್ಡ ಬಂಡೆಯನ್ನು ಹತ್ತಿ ಕೆಳಕ್ಕೆ ಉರುಳುವುದರಲ್ಲಿದ್ದಿತು. ಕಷ್ಟ ಪಟ್ಟು ಕೈಕಾಲು ಗಾಯಮಾಡಿಕೊಂಡು ದೇವರಿಗಾಗಿ ಕುಯ್ಲಿದ್ದ ಹೂವುಗಳನ್ನೆಲ್ಲಾ ನಿಂಗನು ನದಿಗೆ ಚೆಲ್ಲಿಬಿಟ್ಟನು. ಅನಂತರ ಆ ಹರಕು ಬುಟ್ಟಿಯಿಂದ ಹರಿಗೋಲಿನ ನೀರನ್ನು ಎತ್ತಿ ಹೊರಕ್ಕೆ ಸುರಿಯಲು ಪ್ರಾರಂಭಿಸಿದನು. “ಗೋವಿಂದೋ ಗೋವಿಂದ" ಎಂಬುದಾಗಿ ಒಂದು ಸಲ ಕೂಗುವುದು; ಒಂದು ಬುಟ್ಟಿ ನೀರನ್ನು ಹರಿಗೋಲಿನಿಂದ ಎತ್ತಿ ನದಿಗೆ ಸುರಿಯುವುದು. ದಡದಲ್ಲಿ ನೋಡುವವರಿಗೆ ಈ ಗೋವಿಂದ ಶಬ್ದವು ವಿನೋದಕರವಾಗಿಯೇ ಕಂಡಿರಬಹುದು. ಆದರೆ ನಿಂಗನಿಗೆ ಮಾತ್ರ ಆಗ ಪ್ರಾಣಸಂಕಟವುಂಟಾಗಿದ್ದಿತೆಂದು ನಾನು ಅವನ ಬಾಯಿಂದಲೇ ಕೇಳಿದ್ದೇನೆ. ಅಷ್ಟೇ ಅಲ್ಲ, ತಾನು ಆ ರೀತಿ ದೇವರ ಧ್ಯಾನದೊಂದಿಗೆ ನೀರನ್ನು ಮೇಲಕ್ಕೆ ಎತ್ತಿಹಾಕದೆ ಇದ್ದಿದ್ದರೆ, ಹರಿಗೋಲು ನಮ್ಮೂರ ಕಡುವನ್ನು ಮುಟ್ಟುತ್ತಲೇ ಇರಲಿಲ್ಲವೆಂದೂ, ತಾನು ನೀರಿನಿಂದ ಜೀವ ಸಹಿತ ಹೊರಕ್ಕೆ ಬರುತ್ತಲೇ ಇರಲಿಲ್ಲವೆಂದೂ ಹೇಳಿದ್ದಾನೆ.

ನಮ್ಮೂರ ನದಿಯ ತೀರದ ಗುಡಿಸಲಿನಲ್ಲಿ ಬೆಸ್ತರ ಹನುಮನು ಉಳಿದ ಬೆಸ್ತರೊಂದಿಗೆ ಮಾತನಾಡುತ್ತಾ ಬೀಡಿ ಸೇದುತ್ತಾ ಕುಳಿತಿದ್ದನು. ಬೆಸ್ತರ ಹನುಮನೆಂದರೆ ನಮ್ಮೂರ ಬೆಸ್ತರಿಗೆಲ್ಲಾ ಕಣ್ಣಾದವನು. ಈಜುವುದರಲ್ಲಿ ಅವನಿಗೆ ಸಮಾನರಾದವರನ್ನು ನಾನು ಕಂಡೇ ಇಲ್ಲ. ೫-೬ ಆಳುದ್ದ ನೀರಿನಲ್ಲಿ ಬೆಳ್ಳಿಯ ಚಿಕ್ಕ ಎರಡಾಣೆಯನ್ನು ಎಸೆದರೆ, ಒಂದು ಕ್ಷಣದೊಳಗೆ ಮುಳುಗಿ ಅದನ್ನು ತೆಗೆದುಕೊಂಡು ಬರುತ್ತಿದ್ದನು. ಈ ಚಿತ್ರದಲ್ಲಿ ಹೇಳಿರುವ ಸಂಗತಿ ನಡೆದಾಗ, ಅವನಿಗೆ ೬೦ ವಯಸ್ಸಿದ್ದಿರಬಹುದು. ಆದರೆ ಆಳು ಬಹಳ ಗಟ್ಟಿಮುಟ್ಟಾಗಿದ್ದನು. ಆಗಲೂ ಅವನು, ತುಂಬಿದ ನಮ್ಮೂರ ಹೊಳೆಯನ್ನು ಸರಾಗವಾಗಿ ಈಜಿಬಿಡುತ್ತಿದ್ದನು.

ಅವನ ವಿಷಯವಾಗಿ ಒಂದು ಸಂಗತಿಯನ್ನು ಹೇಳಬೇಕಾಗಿದೆ. ನಮ್ಮೂರ ಶ್ರೀನಿವಾಸಯ್ಯಂಗಾರರು ಒಂದುಸಲ ಎಲಿಯೂರಿಗೆ ಹೋಗಬೇಕಾಗಿತ್ತು. ಜೊತೆಗಾಗಿ ಹನುಮನನ್ನೂ ಕರೆದುಕೊಂಡರು. ಇಬ್ಬರೂ ನಡೆದುಕೊಂಡೇ ಹೊರಟರು. ಹಾಸನದಿಂದ ೩-೪ ಮೈಲು ಹೋದ ನಂತರ ಬಿಸಿಲು ಬಹಳ ತೀಕ್ಷ್ಯವಾಯಿತು. ಹೆಂಡವನ್ನು ಇಳಿಸಲು ಈಚಲ ಮರಗಳಿಗೆಲ್ಲಾ ಗಡಿಗೆಗಳನ್ನು ಕಟ್ಟಿದ್ದ ಒಂದು ಕಾಲುದಾರಿಗೆ ಇಬ್ಬರೂ ಬಂದರು. ಮರಕ್ಕೆ ಕಟ್ಟಿದ ಮಡಕೆಯನ್ನು ನೋಡಿ, ಹನುಮನಿಗೆ, ಹೆಂಡದ ಹುಚ್ಚು ಹಿಡಿಯಿತು. ತಡೆಯಲಾರದ ಬಾಯಾರಿಕೆ ಉಂಟಾಯಿತು. ಅವನು ಗೌರವದಿಂದ “ಬುದ್ಧಿ” ಎಂದನು. ಅಯ್ಯಂಗಾರು, "ಏನು" ಅಂದರು. ಹನುಮನು “ನೀವು ಸ್ವಲ್ಪ ಹೆಜ್ಜೆ ಹಾಕಿರಿ. ನಾನು ಹಿಂದೆಯೇ ಓಡ್ಬಂದೆ” ಎಂದನು. ಅಯ್ಯಂಗಾರಿಗೆ ಅವನ ಒಳಗುಟ್ಟು ತಿಳಿಯದೆ ಇರಲಿಲ್ಲ. ಅವರು ಮನಸ್ಸಿನಲ್ಲಿ "ಏನೋ ಪಾಪ ಬಿಸಲಿನಲ್ಲಿ ನಡೆದು ದಣಿದಿದ್ದಾನೆ. ಬಾಯಾರಿಕೆಯೋ ಏನೋ? ಅವನ ಜಾತಿಗೆ ಬಂದದ್ದನ್ನ ಬೇಡವೆಂದರೆ ಬಿಡ್ತಾನೆ? ನಾವು ಕಾಫಿ ಕುಡಿಯೋ ಹಾಗೆ” ಎಂದು ಯೋಚಿಸಿ “ನಾವು ಇನ್ನೂ ತುಂಬ ದೂರ ಹೋಗಬೇಕು, ಎಚ್ಚರಿಕೆ. ಬೇಗ ಬಾ" ಎಂಬುದಾಗಿ ಹೇಳಿದರು. ಹನುಮನು ಸ್ವಲ್ಪ ದೂರ ಹೋಗಿ ಕಣ್ಣಿಗೆ ಮರೆಯಾಗಿ ಹೆಂಡದಿಂದ ತುಂಬಿದ್ದ ಒಂದು ಮಡಕೆಯನ್ನು ತನ್ನ ಕೈಯಿನ ದೊಣ್ಣೆಯಿಂದ ಹೊಡೆದು ತೂತು ಕುಕ್ಕಿ ಅದಕ್ಕೆ ಬಾಯನ್ನು ಒಡ್ಡಿ, ಬಹಳ ಮದಕಾರಿಯಾದ ಹೆಂಡವನ್ನು ಕಂಠಪೂರ್ತಾ ಪಾನಮಾಡಿಬಿಟ್ಟನು.

ಬಿಸಿಲಿನಿಂದ ಸೋತ ಅಯ್ಯಂಗಾರರು ಅವನು ಬರುವವರೆಗೆ ವಿಶ್ರಾಂತಿಯನ್ನು ತೆಗೆದುಕೊಳ್ಳೋಣವೆಂದು ಒಂದು ಮರದ ನೆರಳಿನಲ್ಲಿ ಕುಳಿತಿದ್ದರು. ಹನುಮನು ದೂರದಲ್ಲಿ ಬರುವುದನ್ನು ಕಂಡು ಅವರಿಗೆ ಬಹಳ ನಗು ಬಂದಿತು. ಅವನು ಆ ಕಡೆಯಿಂದ ಈ ಕಡೆಗೂ, ಈ ಕಡೆಯಿಂದ ಆ ಕಡೆಗೂ ಓಲಾಡುತ್ತಾ, ಆಭಾಸವಾದ ಪದಗಳನ್ನು ಹಾಡುತ್ತಾ, ಬರುತ್ತಿದ್ದನು. ಅವನ ಬಟ್ಟೆಗಳೆಲ್ಲ ಹೆಂಡದಿಂದ ನೆನೆದುಹೋಗಿದ್ದುವು. ಅವನಿಗೆ ದೇಹದ ಮೇಲೆ ಪ್ರಜ್ಞೆಯೇ ಇದ್ದಂತೆ ತೋರಲಿಲ್ಲ. ಅವನು ದೂರದಿಂದಲೇ ಅಯ್ಯಂಗಾರರನ್ನು ಕಂಡು "ಏನ್ಲಾ ಮೊಗಾ ಅಲ್ಲೆ ನಿಂತ್ಕೋ, ಒಂದು ಬೀಡಿ ಕೊಟ್ಟೆನಂತೆ" ಎಂದನು. ಅಯ್ಯಂಗಾರರಿಗೆ ಆಶ್ಚರ್ಯವಾಯಿತು. “ಬುದ್ದಿ" ಎಂದು ಗೌರವದಿಂದಲೂ ಭಯದಿಂದಲೂ ಮಾತನಾಡಿಸುತ್ತಿದ್ದವನು “ಏನ್ಲಾ” ಅಂದರೆ ಆಶ್ಚರ್ಯವಾಗಬೇಡವೆ? ಅವರು ಕುಳಿತ ಸ್ಥಳದಿಂದ ಎದ್ದರು. ಹನುಮನು “ನಿಂತ್ಕಳ್ಳಾ ಬೀಡಿ ಸೇದ್ಲಾ, ನಾನಿವ್ನಿ ಹೆದರ್ಬೇಡ" ಎಂದು ತೊದಲುತ್ತಾ ದೊಣ್ಣೆಯನ್ನು ತಿರುಗಿಸಿ ಕೊಂಡು ಅವರ ಕಡೆಗೆ ಸ್ವಲ್ಪ ವೇಗವಾಗಿ ಬರಲು ಪ್ರಾರಂಭಿಸಿದನು. ಅಯ್ಯಂಗಾರಿಗೆ ಜಂಘಾ ಬಲವು ತಪ್ಪಿಹೋಯಿತು. “ಎಲಾ ಪಾಪಿ! ಇವನು ಕಂಠಪೂರ್ತಿ ಕುಡಿದುಬಿಟ್ಟಿದ್ದಾನೆ. ಮೈಮೇಲೆ ಪ್ರಜ್ಞೆ ಇಲ್ಲ, ಇದೋ ಕಾಡು, ದೊಣ್ಣೆಯಿಂದ ನನಗೆ ನಾಲ್ಕು ಬಿಟ್ಟರೆ ಮಾಡೋದೇನು? ಈಗ ಪಲಾಯನವೇ ಸರಿಯಾದ ಉಪಾಯ. ಅಪಾಯಕ್ಕೆ ಸಿಕ್ಕಿಕೊಂಡಾಗ ನಮ್ಮ ಕಾಲೇ ನಮ್ಮನ್ನು ರಕ್ಷಿಸಬೇಕು. "ಕಾಲಾಯ ತಸ್ಮೈ ನಮಃ” ಅಯ್ಯಂಗಾರು ಸ್ವಲ್ಪ ವೇಗವಾಗಿ ಹೆಜ್ಜೆ ಹಾಕಿದರು. ಹನುಮನೂ "ನಿಂತ್ಕಳ್ಳಾ ಅಂದ್ರೆ” ಎಂಬುದಾಗಿ ತಾನೂ ವೇಗವಾಗಿ ನಡೆಯಲು ಪ್ರಾರಂಭಿಸಿದನು. ಈ ರೀತಿ ಅವರು ಮುಂದೆ, ಇವನು ಹಿಂದೆ. ಪಾಪ ಅಯ್ಯಂಗಾರರಿಗೆ ಒಳ್ಳೆ ಆಳೇ ದೊರಕಿದ. ಬಿಸಿಲಿನ ಬೇಗೆಯಲ್ಲಿ ಅವರಿಗೆ ಓಡಿ ಓಡಿ ಸಾಕಾಯಿತು. ಎದುರಿಗೆ ಒಂದು ಚಿಕ್ಕ ಕೊಳವು ಕಂಡಿತು. ಅಪಾಯವು ಸನ್ನಿಹಿತವಾದಾಗ ಉಪಾಯವು ತಾನಾಗಿಯೇ ತೋರುತ್ತದೆ. ಅಯ್ಯಂಗಾರರು ಏನೋ ಯೋಚಿಸಿಕೊಂಡು ಕೊಳದ ಮೆಟ್ಟಲಿನ ಮೇಲೆ ಕುಳಿತರು. ಹನುಮನೂ ಅಲ್ಲಿಗೆ ಬಂದನು. “ಅಲ್ಕಾಣ್ಲಾ ಸಟೇಗೆ ಮೆಳ್ಕೆ ನಡದಿದ್ರೆ ನಿನ್ಪ್ರಾಣ ಹೋಗ್ತಿತ್ತ?” ಎಂದನು. ಅಯ್ಯಂಗಾರರು ಯಾವ ಉತ್ತರವನ್ನೂ ಕೊಡದೆ ಅವನನ್ನು ಕೊಳದೊಳಕ್ಕೆ ನೂಕಿಬಿಟ್ಟರು. ಹನುಮನು ೪-೫ ಸಲ ಮುಳುಗಿ ನೀರು ಕುಡಿದನು. ಅನಂತರ ಮೇಲಕ್ಕೆ ಈಜಿಕೊಂಡು ಬಂದನು. ಬಂದವನೇ “ಬುದ್ದಿ” ಎಂದನು. ಮತ್ತೆ ನಾಗಾಲೋಟದಲ್ಲಿ ಓಡಲು ಸಿದ್ದರಾಗಿದ್ದ ಅಯ್ಯಂಗಾರರಿಗೆ, “ಬುದ್ದಿ" ಎಂದ ಕೂಡಲೆ ಸ್ವಲ್ಪ ಧೈರ್ಯ ಬಂದಿತು. ಹನುಮನು “ಬುದ್ದಿ, ನಾನೇನೂ ತುಂಬ ಕುಡೀಲಿಲ್ಲ. ಬಟ್ಟೆನೆಲ್ಲಾ ನೆನೆಸ್ಬಿಟ್ರಲ್ಲ" ಎಂದನು. ಅಯ್ಯಂಗಾರರು ಮದ್ಯಪಾನದ ಕೆಡಕುಗಳ ಮೇಲೆ ಅವನಿಗೆ ಉದ್ದಕ್ಕೂ ದೊಡ್ಡದಾದ ಉಪನ್ಯಾಸ ಮಾಡಿದರು.

ಇದೇ ಹನುಮನೇ ನಿಂಗನ ಹರಿಗೋಲನ್ನು ದೂರದಲ್ಲಿ ನೋಡಿದ. ಅರ್ಧ ಮುಳುಗಿಹೋಗಿದ್ದ ಹರಿಗೋಲು ನಮ್ಮೂರಿನವರೆಗೆ ಬರಲಾರದೆಂದೇ ಉಳಿದ ಬೆಸ್ತರು ಹೇಳಿದರು. ಹರಿಗೋಲು ಕಣ್ಣಿಗೆ ಕಾಣುವಂತೆ ನಿಧಾನವಾಗಿ ಒಂದೊಂದೇ ಅಂಗುಲ ಮುಳುಗುತ್ತಿದ್ದಿತು. ಕೆಲವು ಬೆಸ್ತರು “ಅಲ್ಲಿಗೇ ದೊಣಿಯನ್ನು ತೆಗೆದುಕೊಂಡು ಹೋಗೋಣ, ಇಲ್ಲದಿದ್ದರೆ ಈಜು ಬೀಳೋಣ” ಎಂದರು. ಹನುಮನು “ದೋಣಿ ತೆಗೆದುಕೊಂಡು ಪ್ರವಾಹಕ್ಕೆ ಎದುರಾಗಿ ಹೋಗೋಕೆ ಆಗೋದಿಲ್ಲ. ಈಜಿಬಿದ್ದು ಹರಿಗೋಲನ್ನು ಹಿಡಿಯೋದಕ್ಕೆ ಹೋದರೆ, ನಿಮ್ಮ ಕೈಗಳ ಅಲೆಗಳಿಂದ ಅದು ಮುಳಗಿ ಹೋಗ್ತದೆ" ಎಂದನು. ಉಳಿದ ಬೆಸ್ತರು ಅವನ ಮಾತಿಗೆ ಪ್ರತಿ ಹೇಳಲಿಲ್ಲ. ಹನುಮನು ವಿರಾಮವಾಗಿ ಬೀಡಿಯನ್ನು ಸೇದಿ ಎಲೆ ಅಡಿಕೆ ಅಗಿದನು. ಆ ವೇಳೆಗೆ ದೂರದಲ್ಲಿ ತೆರೆಗಳ ಸದ್ದನ್ನು ಭೇದಿಸಿಕೊಂಡು "ಗೋವಿಂದೋ ಗೋವಿಂದ” ಎಂಬ ಧ್ವನಿಯು ಅವರಿಗೆಲ್ಲಾ ಕೇಳಿಸಿತು. ಆವೇಳೆಗೆ ಹರಿಗೋಲು ಮುಕ್ಕಾಲುಪಾಲು ಮುಳುಗಿಹೋಗಿತ್ತು. ನಿಂಗನಿಗೆ ಸೊಂಟದವರೆಗೆ ಮತ್ಸ್ಯಾವತಾರವಾಗಿತ್ತು,

ಬದುಕಿದರೆ ಇಲ್ಲಿ ಬದುಕಬೇಕು, ಇಲ್ಲಿ ನೀರಿನ ಗೋರಿ, ಎಂದು ತಿಳಿದು ನಿಂಗನು ಮತ್ತೊಂದು ಸಲ ಗಟ್ಟಿಯಾಗಿ “ಗೋವಿಂದೋ ಗೋವಿಂದ” ಎಂದನು. ಹನುಮನು ದೋಣಿಯನ್ನು ಬಿಟ್ಟನು. ಈ ದೃಶ್ಯವನ್ನು ನೋಡುವುದಕ್ಕೆ ನದಿಯ ಎರಡು ತೀರಗಳಲ್ಲಿಯ ಜನರು ಇರುವೆಯ ಸಾಲಿನಂತೆ ನೆರೆದಿದ್ದರು, ಹನುಮನು ನಿಂಗನನ್ನು ಹೇಗೆ ಬದುಕಿಸುತ್ತಾನೆಂಬುದೇ ಎಲ್ಲರಿಗೂ ದೊಡ್ಡ ಸಮಸ್ಯೆಯಾಗಿತ್ತು. “ದೋಣಿಯು ಮುಂದಕ್ಕೆ ಹೋಗಿಬಿಟ್ಟರೊ? ಹರಿಗೋಲಿಗೆ ವೇಗವಾಗಿ ತಗಲಿ ಅದು ಮುಳುಗಿಹೋದರೊ? ಅದು ಮುಂದೆ ಇದು ಹಿಂದೆ ಆದರೆ?” ಎಂದು ಪ್ರೇಕ್ಷಕರೆಲ್ಲಾ ಯೋಚಿಸುತ್ತಿದ್ದರು. ನದಿಯು ತುಂಬಿ ಹರಿಯುತ್ತಿದ್ದುದರಿಂದ ಈಜಿ ನಿಂಗನನ್ನು ಸಂರಕ್ಷಿಸುವುದು ಹನುಮನಿಗೆ ಕೂಡ ಕಷ್ಟ ಸಾಧ್ಯವೇ ಆಗಿತ್ತು. ಆದರೆ ಹನುಮನಿಗೆ ಗಾಬರಿಯಿರಲಿಲ್ಲ. ತಾನು ಮಾಡುತ್ತಿದ್ದ ಕೆಲಸವೇನೆಂಬುದು ಅವನಿಗೆ ಗೊತ್ತಿದ್ದಿತು. ತನ್ನ ಶಕ್ತಿಯಲ್ಲಿ ಅವನಿಗೆ ನಂಬಿಕೆಯಿದ್ದಿತು. ನದಿಯ ಮಧ್ಯಭಾಗಕ್ಕೆ ಹರಿಗೋಲು ಬರುವ ವೇಳೆಗೆ ಸರಿಯಾಗಿ, ಬಿಲ್ಲಿನಿಂದೆಸೆದ ಅಂಬಿನಂತೆ ದೋಣಿಯು ಅಲ್ಲಿಗೆ ಬಂದಿತು. ಹನುಮನು ಎರಡು ಕೈಗಳನ್ನೂ ನೀಡಿ ನಿಂಗನನ್ನು ಎತ್ತಿ ದೋಣಿಯಲ್ಲಿ ಕುಳ್ಳಿರಿಸಿಬಿಟ್ಟನು. ಅದೇ ಕ್ಷಣದಲ್ಲಿಯೇ ಹರಿಗೋಲು ಮುಳುಗಿ ಹೋಯಿತು. ಪ್ರೇಕ್ಷಕರ ಭಲೆ ಭಲೆ ಶಬ್ದವು ಒಂದು ದಡದಿಂದ ಮತ್ತೊಂದು ದಡಕ್ಕೆ ಪ್ರತಿಧ್ವನಿತವಾಯಿತು.

ಈಗ ಹನುಮನು ಇಲ್ಲ; ಸೇತುವೆ ಇದೆ.