ವಿಷಯಕ್ಕೆ ಹೋಗು

ಪುಟ:ಉತ್ತರ ಕರ್ನಾಟಕದ ಜಾನಪದ ಕಥೆಗಳು.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅತಿಮಾನುಷ ಕಥೆಗಳು
೭೯

"ಆಚೆಮನೆ ಅಜ್ಜಮ್ಮ ಗೆಜ್ಜೆ ಕಾಲ ಮೊಮ್ಮಗ ಬಂದ
ಗಿಲ್‌ಗಿಲ್‌ ನುಡಿಸ್ತನಿಂದ, ಓ ಅಜ್ಜಿ ಎದ್ದು ಬಾರೆ.”

ಆಚೆಮನೆಯ ಅಜ್ಜಿ ಎಚ್ಚರಾಗಲು ಎದ್ದು ಬಂದು ಆಕೆ ಬಿಂಬಾಲಿಯನ್ನು ನೋಡಿದಳು. “ದೇವರೇ, ಬಿಂಬಾಲಿ ತವರು ಮನೆಯ ಹಂಬಲದಿಂದ ಬಂದಿದ್ದಾಳೆ. ಒಬ್ಬರಿಗೂ ಎಚ್ಚರಿಲ್ಲ” ಎಂದು ಬಾಗಿಲುದೂಡಿ ಒಳಗೆ ಹೋದಳು. ಹೆಪ್ಪು ಹಾಕಿದ ಮೊಸರನ್ನೇ ತಂದು ಬಿಂಬಾಲಿಗೆ ಕುಡಿಯಲು ಕೊಟ್ಟಳು. ಮಗುವನ್ನೆಕ್ತಿಕೊಂಡು ಅವನ ಕೈಯಲ್ಲಿ ದುಡ್ಡು ಕೊಟ್ಟು ಅವನನ್ನು ಕಟ್ಟಾಡಿಸಿದಳು. ಬಿಂಬಾಲಿ ತನ್ನ ಕಥೆಯನ್ನೆಲ್ಲ ಅಜ್ಜಿಗೆ ಹೇಳಿ ತಂದೆ-ತಾಯಿ-ಅಣ್ಣಂದಿರನ್ನು ನೋಡಿಕೊಂಡು ಮರಳಿದಳು.

ನೂಲಿನೇಣಿ ಮತ್ತೆ ಇಳಿದು ಬಂದಿತು. ಬಿಂಬಾಲಿ ಮುಗನ ಕಾಲಗೆಜ್ಜೆಗಳೆರಡನ್ನೂ ತೆಗೆದು ಬಾಗಿಲ ಬಳಿ ಇಟ್ಟು - “ಅಜ್ಜೀ ನಾನಿನ್ನು ಬರುತ್ತೇನೆ” ಎಂದವಳೇ ಏಣಿ ಹತ್ತಿ ಸೂರ್ಯಲೋಕಕ್ಕೆ ಹೋದಳು.

ಬೆಳಗಾದ ಮೇಲೆ ಬಿಂಬಾಲಿಯ ತಾಯಿ-ತಂದೆ-ಅಣ್ಣಂದಿರಿಗೆ ಎಚ್ಚರಾಗಲು, ಬಾಗಿಲಲ್ಲಿ ಹುಡುಗರ ಎರಡು ಕಾಲುಗೆಚ್ಚೆಗಳನ್ನು ನೋಡಿದರು. ಒರಳಿನಲ್ಲಿ ನಾಣ್ಯ ರಾಸಿ ತುಂಬಿದ್ದನ್ನು ನೋಡಿ - “ಇವು ಇಲ್ಲಿ ಹೇಗೆ ಬಂದವು” ಎಂದು ಒಬ್ಬರನ್ನೊಬ್ಬರು ಕೇಳಿದರು. ಅಷ್ಟರಲ್ಲಿ ನೆರೆಮನೆಯ ಅಜ್ಜಿ ಬಂದು ಮಧ್ಯರಾತ್ರಿಯ ಸುಮಾರಿಗೆ ಬಿಂಬಾಲಿ ಮಗನೊಡನೆ ಸೂರ್‍ಯಲೋಕದಿಂದ ನೂಲೇಣಿಯಲ್ಲಿಳಿದು ಬಂದಿದ್ದಳು. ಎಷ್ಟು ಕರೆದರೂ ನಿಮಗೆಚ್ಚರಾಗಲಿಲ್ಲ. ಅವಳ ಮಗ ಗೆಜ್ಜೆ ಕಾಲ ಕುಣಿಸುವ ಶಬ್ದ ಕೇಳಲಿಲ್ಲ. ಅವಳು ನನ್ನನ್ನು ಕರೆಯಲು ನನಗೆಚ್ಚರವಾಯಿತು. ಓಡಿ ಬಂದು ಅವಳಿಗೆ ಹೆಪ್ಪು ಹಾಕಿದ ಹಾಲು ಕೊಟ್ಟೆನು. ಮೊಮ್ಮಗನನ್ನು ಎತ್ತಿಕೊಂಡು ಆಡಿಸಿದೆನು. ಚಿನ್ನದ ನಾಣ್ಯಗಳನ್ನು ಅವಳೇ ಒರಳಿನಲ್ಲಿ ಸುರುವಿದಳು. ಹುಡುಗನ ಕಾಲುಗೆಜ್ಜೆಗಳನ್ನು ತಾನು ಬಂದ ಗುರುತಿಗಾಗಿ ಬಿಂಬಾಲಿ ಬಿಟ್ಟು ಹೋಗಿದ್ದಾಳೆ - ಎಂದಳು.

ತಂದೆತಾಯಿಗಳು ತಮ್ಮ ಅದೃಷ್ಟವನ್ನು ನೆನೆದು ದುಃಖಿಸಿದರು. ಬಿಂಬಾಲಿಯು ಸೂರ್ಯಲೋಕಕ್ಕೆ ಹೋಗಿ ಅವನನ್ನು ಮದುವೆಯಾಗಿ, ಮಗನನ್ನು ಪಡೆದು ಸುಖವಾಗಿದ್ದಾಳೆ ಎನ್ನುವುದಾದರೂ ಅವಳಿಲ್ಲಿ ಬಂದು ಹೋದದ್ದರಿಂದ ತಿಳಿಯಿತು - ಎಂದು ಕಣ್ಣೀರು ಸುರಿಸಿದರು.

ಬೆಳಗು ಮುಂಜಾವಿನಲ್ಲಿ ಹಕ್ಕಿಗಳೆದ್ದು ಚೆಲಿಪಿಲಿಮಾಡುವಾಗ ಇಂದಿಗೂ ಬಿಂಬಾಲಿಯ ಮಗನ ಗೆಚ್ಜೆಕಾಲುಗಳ ಗಿಲಗಿಲ ಶಬ್ದವನ್ನು ನಾವು ಕೇಳಬಹುದು.