ವಿಷಯಕ್ಕೆ ಹೋಗು

ಕನ್ನಡಿಗರ ಕರ್ಮ ಕಥೆ/ಸಂಭಾಷಣ

ವಿಕಿಸೋರ್ಸ್ದಿಂದ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, pages ೧೧೬–೧೨೫

೧೩ನೆಯ ಪ್ರಕರಣ

ಸಂಭಾಷಣ

ಇಷ್ಟು ಶಬ್ದಗಳನ್ನು ಆ ತರುಣಿಯು ಅಚ್ಚ ಪಾರಸೀ ಭಾಷೆಯಲ್ಲಿ ತನ್ನ ಸ್ವಾಭಾವಿಕವಾದ ಮಂಜುಲಸ್ವರದಿಂದ, ಆದರೆ ಸಂತಾಪದ ಮೂಲಕ ಅತ್ಯಂತ ತೀವ್ರಸ್ವರದಿಂದ ನುಡಿಯಲು ಅವು ಎಲ್ಲರ ಹೃದಯದಲ್ಲಿ ವಿಷಲಿಪ್ತ ಬಾಣಗಳಂತೆ ನೆಟ್ಟವು. ಎಲ್ಲರು ಬೆರಗಾಗಿ ಭಯದಿಂದ ಆಕೆಯನ್ನು ನೋಡಹತ್ತಿದರು. ರಣಮಸ್ತಖಾನನ ಕಣ್ಣುಗಳಂತು ಪೂರ್ಣವಾಗಿ ಆಕೆಯ ಮುಖ ಮುದ್ರೆಯಲ್ಲಿ ನೆಟ್ಟುಹೋದವು. ಆಕೆಯು ಅತ್ಯಂತ ರೂಪವತಿಯಾಗಿದ್ದಳು. ರಾಮರಾಜನಾದರೂ ಆಕೆಯನ್ನು ಎವೆಯಿಕ್ಕದೆ ನೋಡಹತ್ತಿದನು. ಆ ಸಂತಪ್ತಳಾದ ಸುಂದರಿಯು ಸುಮ್ಮನಾದಕೂಡಲೆ ಆಕೆಯ ವಿಶಾಲವಾದ ನೇತ್ರಗಳಿಂದ ಒಂದೇ ಸಮನೆ ಅಶ್ರುಗಳೂ ಸುರಿಯಹತ್ತಲು, ಅವುಗಳನ್ನು ನೋಡಿ ಜನರ ಮನಸ್ಸಿನ ಸ್ಥಿತಿಯು ಬಹು ಚಮತ್ಕಾರವಾಯಿತು. ರಾಮರಾಜನ ಮನಸ್ಸಿನ ಸ್ಥಿತಿಯಂತು ವಿಲಕ್ಷಣವಾಯಿತು. ಮುಂದೆ ಏನು ಮಾಡಬೇಕೆಂಬುದು ಆತನಿಗೆ ತೋಚಲೊಲ್ಲದು. ಆ ಸ್ತ್ರೀಯು ಕೊಟ್ಟ ಶಾಪವು ತನಗೆ ತಟ್ಟಬಹುದೋ ಎಂಬ ಸಂಶಯವು ಆತನನ್ನು ಬಾಧಿಸಹತ್ತಿತು. ಆಕೆಯು ಶಾಪವನ್ನೇ ಕೊಟ್ಟಳೆಂದು ಆತನು ತಿಳಕೊಂಡನು. ದರ್ಬಾರದೊಳಗಿನ ಬಹು ಜನರು ಹಾಗೆಯೇ ತಿಳಕೊಂಡರು; ಆದರೆ ಈ ಪ್ರಸಂಗದಿಂದ ಹ್ಯಾಗಾದರೂ ಪಾರಾಗಬೇಕೆಂದು ತಿಳಿದು ರಾಮರಾಜನು ರಣಮಸ್ತಖಾನನಿಗೆ- “ಇನ್ನು ನೀವು ಈ ಜನರನ್ನು ನಿಮ್ಮ ಬಿಡಾರಕ್ಕೆ ಕರಕೊಂಡು ಹೋಗಿ, ಇವರನ್ನು ಮುಂದಕ್ಕೆ ಕಳಿಸುವ ವ್ಯವಸ್ಥೆ ಮಾಡಿರಿ. ಸಾಮೋಪಚಾರದಿಂದ ಎಲ್ಲ ಮಾತಿನ ವಿಚಾರಮಾಡಿದ್ದರೆ, ಈ ಮನೆಗೆ ಬರುತ್ತಿದ್ದಿಲ್ಲ.” ಎಂದು ನುಡಿದು, ಆ ತರುಣಿಯನ್ನು ಕುರಿತು, ಆದರೆ ಆಕೆಯ ಕಡೆಗೆ ನೋಡದೆ- “ಇನ್ನು ನೀವು ನಿಮ್ಮ ಬುರುಕಿಯನ್ನು ಹಾಕಿಕೊಂಡು ಇವರ ಸಂಗಡ ಹೋಗಿರಿ. ಇವರು ನಿಮ್ಮನ್ನು ನಿಮ್ಮ ಊರಿಗೆ ಕಳಿಸುವ ವ್ಯವಸ್ಥೆ ಮಾಡುವರು” ಎಂದು ಹೇಳಿದನು. ಆಮೇಲೆ ಅಲ್ಲಿ ಕುಳಿತಿರುವ ಜನರಿಗೆ ಹೊರಟುಹೋಗಲು ಸಂಜ್ಞೆಮಾಡಿ, ತಾನು ಕುಳಿತ ಸ್ಥಳದಿಂದ ಎದ್ದು, ಮತ್ತೆ ರಣಮಸ್ತಖಾನನಿಗೆ ನೀವು ನನ್ನ ಮಾತು ಕೇಳುವಹಾಗಿದ್ದರೆ, ಇವರನ್ನು ನಮ್ಮ ರಮ್ಯೋದ್ಯಾನಕ್ಕೆ ಕರಕೊಂಡು ಹೋಗಿ, ಅಲ್ಲಿ ಉಪಾಹಾರ ಮಾಡಿರಿ. ವಿಶ್ರಾಂತಿಯನ್ನು ಹೊಂದಿದಬಳಿಕ, ಇವರನ್ನು ಕುಂಜವನಕ್ಕೆ ಕರಕೊಂಡು ಹೋಗಿರಿ. ಇವರಿಗೆ ಬೇಕಾಗುವ ಮೇಣೆ ಮೊದಲಾದವುಗಳ ವ್ಯವಸ್ತೆಯನ್ನು ನಾನು ಮಾಡಿಸುತ್ತೇನೆ, ಅನ್ನಲು ಅದನ್ನು ಕೇಳಿ, ಆ ತರುಣಿಯು ಮತ್ತೊಮ್ಮೆ ಸಂತಾಪದಿಂದ- “ಇನ್ನು ನಾನು ನಿಮ್ಮ ಗಡಿಯಲ್ಲಿ ಅನ್ನೋದಕ ಗ್ರಹಣ ಮಾಡುವದಂತು ಇರಲಿ, ಉಗುಳು ಸಹ ಗುಟಕರಿಸುವ ಹಾಗಿಲ್ಲ. ಇನ್ನು ಈ ಜಗತ್ತಿನಲ್ಲಿ ನನ್ನದೇನು ಆಗಬೇಕಾಗಿದೆ ? ನನ್ನ ತಂದೆಯು......” ಎಂದು ನುಡಿಯುತ್ತಿರಲು, ಮುಂದಿನ ಶಬ್ದಗಳು ಆಕೆಯ ಮುಖದಿಂದ ಹೊರಡದಾದವು. ಆಕೆಯ ಕಣ್ಣುಗಳೊಳಗಿಂದ ಒಂದೇಸಮನೆ ನೀರುಗಳು ಸುರಿಯಹತ್ತಿದವು. ಅದನ್ನು ನೋಡಿ ರಾಮರಾಜನು ಮತ್ತೊಮ್ಮೆ ರಣಮಸ್ತಖಾನನಿಗೆ- “ನಾನು ಇನ್ನು ವಿಶೇಷ ಹೇಳುವದಿಲ್ಲ. ಈ ನಮ್ಮ ಮನುಷ್ಯನನ್ನು ನಿಮ್ಮ ವಶಕ್ಕೆ ಕೊಟ್ಟಿರುತ್ತೇನೆ. ಆತನು ನಿಮಗೆ ಬೇಕಾದ ಅನುಕೂಲತೆಯನ್ನು ಮಾಡಿಕೊಡುವನು” ಎಂದು ಹೇಳಿ ಅಲ್ಲಿಂದ ಹೊರಟುಹೋದನು. ರಾಮರಾಜನು ಹೊರಟು ಹೋದ ಬಳಿಕ ರಣಮಸ್ತಖಾನನ ಮೈಮೇಲೆ ಎಚ್ಚರ ಬಂದಂತಾಯಿತು. ಆಮೇಲೆ ಆತನು ಆ ಸುಂದರಿಯ ಕಡೆಗೆ ಹೊರಳಿ- “ಈ ಹದ್ದಿನಲ್ಲಿ ನೀರು ಸಹ ಕುಡಿಯಲಿಕ್ಕಿಲ್ಲೆಂದು ನೀವು ಹೇಳಿದ್ದು ಯೋಗ್ಯವೇ ಸರಿ, ಆದರೆ ಕುಂಜವನವು ಇಲ್ಲಿಂದ ದೂರವಿರುವದರಿಂದ ಸ್ವಲ್ಪ ಉಪಾಹಾರ ಮಾಡುವದು ನೆಟ್ಟಗೆ ಕಾಣುತ್ತದೆ, ಸುಮ್ಮನೆ ಉಪವಾಸ ಬಿದ್ದರೆ ಪ್ರಯೋಜನವಾಗದು” ಎಂದು ಹೇಳಲು, ಆ ತರುಣಿಯು ಅದಕ್ಕೆ ಒಪ್ಪಲಿಲ್ಲ. ಆಮೇಲೆ ರಣಮಸ್ತಖಾನನು, ಆಗ್ರಹಮಾಡದೆ ರಾಮರಾಜನ ಸೇವಕನಿಗೆ ಹೇಳಿ ತನಗೆ ಬೇಕಾದ ಅನುಕೂಲತೆಯನ್ನು ಮಾಡಿಸಿಕೊಂಡು ಆ ಸ್ತ್ರೀಯರೊಡನೆ ಬೇಗನೆ ಕುಂಜವನದ ಕಡೆಗೆ ಸಾಗಿದನು.

ಈ ಮೊದಲೆ ಕುಂಜವನದಿಂದ ವಿಜಯನಗರಕ್ಕೆ ಬರುವಾಗ ರಣಮಸ್ತಖಾನನು ತನ್ನ ಕುದುರೆಯನ್ನು ವೇಗದಿಂದ ಬಿಟ್ಟಂತೆ ಈಗ ಬಿಡುವಹಾಗಿದ್ದಿಲ್ಲ; ಯಾಕೆಂದರೆ, ಆ ಸ್ತ್ರೀಯರ ಮೇಣೆ-ಡೋಲಿಗಳನ್ನು ಸರಿಸಿ ಆತನು ಈಗ ಹೋಗಬೇಕಾಗಿತ್ತು. ಹೀಗೆ ಸಾವಕಾಶವಾಗಿ ಹೋಗುವಾಗ ಆತನ ಮನಸಿನಲ್ಲಿ ಹಲವು ವಿಚಾರಗಳು ಉತ್ಪನ್ನವಾದವು. ಆ ತರುಣಿಯ ರೂಪಕ್ಕೆ ರಣಮಸ್ತಖಾನನು ಮೋಹಿತನಾಗಿದ್ದನು. ರಾಮರಾಜನು ಈ ತರುಣಿಯ ಬುರುಕಿಯನ್ನು ತೆಗೆಸಿ ಅನ್ಯಾಯ ಮಾಡಿದರೂ, ಅದೊಂದು ತನ್ನ ಮೇಲೆ ದೊಡ್ಡ ಉಪಕಾರವೇ ಆದಂತಾಯಿತೆಂದು ಖಾನನು ತಿಳಿದನು. ರಾಮರಾಜನು ಹಾಗೆ ಮಾಡದಿದ್ದರೆ. ಆ ಸುಂದರಿಯ ರೂಪವು ರಣಸ್ತಖಾನನು ದುರಾಚಾರಕ್ಕೆ ಮನಸ್ಸು ಮಾಡುವಂಥ ಕ್ಷುದ್ರನಿದ್ದನೆಂದಾಗಲಿ, ರಾಮರಾಜನ ಮೇಲಿನ ಯಾವತ್ತು ಸಿಟ್ಟನ್ನು ಆ ತರುಣ ಮುಸಲ್ಮಾನನು ಬಿಟ್ಟುಬಿಟ್ಟನೆಂದಾಗಲಿ ವಾಚಕರು ಭಾವಿಸಬಾರದು. ಆದರೆ ಮನುಷ್ಯ ಸ್ವಭಾವಕ್ಕನುಸರಿಸಿ, ಆ ತರುಣನ ಮನಸ್ಸು ಆ ತರುಣಿಯ ಸೌಂದರ್ಯದಿಂದ ಆಕರ್ಷಿತವಾಗಲು, ಆ ಗೊಂದಲದಲ್ಲಿ ಆತನ ಮನಸ್ಸು ಅನ್ಯ ವಿಚಾರಗಳನ್ನು ಬಿಟ್ಟು, ಆ ಸುಂದರಿಯ ವಿಷಯದ ವಿಚಾರದಲ್ಲಿಯೇ ತೊಡಗಿತೆಂದು ತಿಳಿಯಬೇಕು. ಹಾದಿಯಲ್ಲಿ ಹೋಗು ಹೋಗುತ್ತ ಇದೊಂದೇ ವಿಚಾರಕ್ಕೆ ಆತನಿಗೆ ಆಸ್ಪದ ದೊರೆತದ್ದರಿಂದ ಆತನು ವಿಚಾರ ಮಾಡುತ್ತ ಮಾಡುತ್ತ ಬಹು ದೂರದ ವಿಚಾರಕ್ಕೆ ಹೋಗಹತ್ತಿದನು. ಈ ಸುಂದರಿಯು ಜನ್ಮದ ಸಂಗಾತಿಯು ತನಗಾದರೆ ಧನ್ಯನಾದೇನಲ್ಲ, ಎಂತಲೂ ಆತನು ಭಾವಿಸಹತ್ತಿದನು. ನಮ್ಮಿಬ್ಬರ ಸಂಘಟನದ ಯೋಗವಿರುವದರಿಂದಲೇ ಆ ಆಕಸ್ಮಿಕ ಪ್ರಸಂಗವು ಒದಗಿತೆಂದು ಅತನು ತಿಳಕೊಂಡನು. ಆದರೆ ಈ ಮಾತು ಹ್ಯಾಗೆ ಕೂಡಿಬರಬೇಕೆಂಬ ಸಂಶಯದಿಂದ ಆತನು ನಡುನಡುವೆ ಸ್ವಲ್ಪ ಉದಾಸೀನನಾದನು. ಆಕೆಯು ದೊಡ್ಡ ಸರದಾರನ ಮಗಳಾದದ್ದರಿಂದ ನನ್ನ ಕೈ ಹಿಡಿಯುವ ಸಂಭವವಿಲ್ಲೆಂಬ ನಿರಾಸೆಯು ಆತನನ್ನು ಬಾಧಿಸಹತ್ತಿತು ; ಆದರೂ ಈಕೆಯನ್ನು ವಿಜಾಪುರಕ್ಕೆ ಈಕೆಯ ಅಬಚಿಯ ಮನೆಗೆ ಕಳಿಸುವದರೊಳಗ ಈಕೆಯ ಮನಸ್ಸಿನೊಳಗಿದ್ದದ್ದನ್ನು ತಿಳಕೊಳ್ಳಬೇಕೆಂದು ಆತನು ನಿಶ್ಚಯಿಸಿದನು. ರಾಮರಾಜನಿಂದ ನಮ್ಮಿಬ್ಬರಿಗೂ ಆದ ಅಪಮಾನದ ಸೇಡು ತೀರಬೇಕಾದರೆ, ನಮ್ಮಿಬ್ಬರ ವಿವಾಹವಾಗುವದೇ ಅನುಕೂಲವೆಂದು ಆತನು ತಿಳಿದನು. ಹಾದಿಯಲ್ಲಿ ನಡೆಯುವಾಗೆಲ್ಲ ಇವೇ ವಿಚಾರಗಳು ರಣಮಸ್ತಖಾನನ ಮನಸ್ಸಿನಲ್ಲಿ ನಡೆದಿದ್ದವು. ಆ ಸುಂದರಿಯ ಮನಸ್ಸಿನೊಳಗಿದ್ದದ್ದನ್ನು ಆಕೆಯು ದಾಸಿಯ ಮುಖಾಂತರವಾಗಿ ಇಲ್ಲವೆ ತನ್ನ ತಾಯಿಯ ವೃದ್ದ ದಾಸಿಯ ಮುಖಾಂತರವಾಗಿ ತಿಳಕೊಳ್ಳಬೇಕೆಂದು ಆತನು ಗೊತ್ತುಮಾಡಿದನು. ಮುಂದೆ ಕೆಲವು ಹೊತ್ತಿನ ಮೇಲೆ ಅವರೆಲ್ಲರು ಕುಂಜವನವನ್ನು ಮುಟ್ಟಿದರು. ರಣಮಸ್ತಖಾನನು ಆ ತರುಣಿಯನ್ನು ತನ್ನ ತಾಯಿಯ ಬಳಿಗೆ ಕಳಿಸಿ, ಆಕೆಯ ಯಾವತ್ತು ಯೋಗಕ್ಷೇಮದ ಬಗ್ಗೆ ಅನುಕೂಲ ಮಾಡಿಕೊಟ್ಟನು. ಆಮೇಲೆ ರಣಮಸ್ತಖಾನನ ಊಟವಾಯಿತು, ಬಂದ ಜನರೂ ಉಂಡರು.

ಇತ್ತ ರಾಮರಾಜನು ಬಹಳ ಪಶ್ಚಾತ್ತಾಪಕ್ಕೆ ಒಳಗಾಗಿದ್ದನು. ಆತನ ಮನಸ್ಸಿಗೆ ಬಹಳ ಚಡಪಡಿಕೆಯಾಗಿತ್ತು. ಆತನು ಈವರೆಗೆ ಎಷ್ಟೋ ನ್ಯಾಯಾ ನ್ಯಾಯದ ಕೆಲಸಗಳನ್ನು ಮಾಡಿದ್ದನು ಆದರೆ ಅವುಗಳಲ್ಲಿ ಒಂದಾದರೂ ಇಂದಿನ ಪ್ರಸಂಗದಷ್ಟು ಆತನ ಮನಸ್ಸಿಗೆ ಹತ್ತಿದ್ದಿಲ್ಲ. “ನಾನು ಒಂದು ಒಬ್ಬ ಕುಲಸ್ತ್ರೀಯ ಅಪಮಾನವನ್ನಷ್ಟೇ ಅಲ್ಲ, ಲಜ್ಜಾಹರಣವನ್ನೂ ಮಾಡಿದೆನಲ್ಲ ! ಹೀಗೆ ಮಾಡಲಿಕ್ಕೆ ಕಾರಣವೇನೂ ಇದ್ದಿಲ್ಲ. ಗಂಡಸರು ಬುರುಕಿಯ ನೆವದಿಂದ ಹೆಂಗಸರಂತೆ ನಟಿಸುತ್ತಾರೆಂಬ ಸಂಶಯ ಬಂದಿದ್ದರೆ, ಅವರ ಪರೀಕ್ಷೆಯನ್ನು ನಮ್ಮ ಸ್ತ್ರೀಯರ ಮುಖಾಂತರ ಮಾಡಬಹುದಾಗಿತ್ತು. ಕೂಡಿದ ದರ್ಬಾರದಲ್ಲಿ ಹೆಂಗಸರ ಬುರುಕೆಯನ್ನು ತೆಗೆಸಿದ್ದು ಅನ್ಯಾಯವಾಯಿತು” ಎಂಬ ವಿಚಾರದಿಂದ ಆತನ ಮನಸ್ಸು ಅಸಮಾಧಾನಪಡುತ್ತಿರುವಾಗ, ದುಷ್ಪರಿಣಾಮವಾದದ್ದು ನೆನಪಾಗಿ, ಆತನ ಮನಸ್ಸು ಮತ್ತಿಷ್ಟು ಉದ್ವಿಗ್ನವಾಯಿತು. “ಇಂದಿನ ಈ ನಿನ್ನ ಕೃತ್ಯದ ಪರಿಣಾಮವು ಘೋರವಾಗುವದು ಬಹು ಘೋರವಾಗುವದು” ಎಂದು ಆ ಸ್ತ್ರೀಯು ಸಂತಾಪದಿಂದ ನುಡಿದದ್ದು ಅತನ ಕಿವಿಯಲ್ಲಿ ಬಾಧಿಸಹತ್ತಿತು. ತನಗೆ ಆ ಶಬ್ದದ ಸ್ಮರಣವಾಗಬಾರದೆಂದು ಆತನು ಬಹಳ ಪ್ರಯತ್ನ ಮಾಡಿದನು; ಆದರೆ ಅದೆಲ್ಲ ವ್ಯರ್ಥವಾಯಿತು. ತನ್ನ ಕೆಲಸಗಳನ್ನೆಲ್ಲ ತೀರಿಸಿಕೊಂಡು ಆತನು ಶಯ್ಯಾಗೃಹದಲ್ಲಿ ಹೋಗಿ ಮಲಗಿಕೊಂಡನು. ಆದರೆ ಆ ತರುಣಿಯು ಉಚ್ಚರಿಸಿದ ಶಬ್ದಗಳು ಆತನಿಗೆ ಕೇಳಿಸದೆಯಿರಲೊಲ್ಲವು ; ಮತ್ತು ಆ ತರುಣ ಸ್ತ್ರೀಯ ಉಗ್ರಮೂರ್‍ತಿಯು ಆತನ ಕಣ್ಣಿಗೆ ಕಟ್ಟಿದ್ದು ಮರೆಯಾಗಲೊಲ್ಲದು. ಇಂಥ ಸಣ್ಣಮಾತಿಗಾಗಿ ಇಷ್ಟು ಅಸಮಾಧಾನವಾದ ಬಳಿಕ ಮುಂದಿನ ದೊಡ್ಡ ಕಾರ್ಯಗಳು ನನ್ನಿಂದ ಹ್ಯಾಗಾದಾವು! ನಾನು ಯೋಗ್ಯವಾದುದನ್ನೇ ಮಾಡಿದ್ದೇನೆ, ಹೆಂಗಸರ ಕೆಲಸ, ಕೂಡಿದ ದರ್ಬಾರದಲ್ಲಿ ಬುರುಕೆ ತೆಗೆದದ್ದರಿಂದ ಸಂತಾಪವಾಗಿ ನಾಲ್ಕು ಬಿರಿನುಡಿಗಳನ್ನು ಆಡಿರಬಹುದು. ಇದರಲ್ಲಿ ಶಾಪ ಕೊಟ್ಟಹಾಗೇನಾಯಿತು ! ಮುಸಲ್ಮಾನರೆಲ್ಲರು ಒಕ್ಕಟ್ಟಾಗುವಂತೆ ಈಗ ಒಳಸಂಚು ನಡೆದಿರುವದರಿಂದ, ನಾನು ಹೀಗೆ ಶೋಧಿಸಿದ್ದರಲ್ಲಿ ಅನ್ಯಾಯವಾದರೂ ಏನಿರುತ್ತದೆ ? ನಾನೇನು ಅವರ ರೂಪವನ್ನು ನೋಡಬೇಕೆಂದು ಅವರ ಬುರುಕೆಗಳನ್ನು ತೆಗೆಸಿರುವದಿಲ್ಲ. ಇನ್ನೂ ತೆಗೆಸುತ್ತಿದ್ದಿಲ್ಲ; ಆದರೆ ನಾನಾಗಿ ನನ್ನ ರಾಜ್ಯದಲ್ಲಿ ಇಟ್ಟುಕೊಂಡಿದ್ದ ಆ ತರುಣ ವಕೀಲನು ಸೊಕ್ಕಿನಿಂದ ನಡೆದನು. ಅವನ ಸೊಕ್ಕಿನ ನಡತೆಯನ್ನು ನಡೆಯಗೊಡುವದು ನನಗೆ ಅಪಮಾನಕರವಲ್ಲವೇ ? ಎಂಬಿವೇ ಮೊದಲಾದ ವಿಚಾರಗಳಿಂದ ಅವನು ತನ್ನ ಮನಸ್ಸಿನ ಸಮಾಧಾನ ಮಾಡಿಕೊಳ್ಳ ಹೋದನು; ಆದರೆ- “ನೀನು ದುರ್ಬುದ್ಧಿಯಿಂದಲೇ ಈ ಕಾರ್ಯ ಮಾಡಿದೆಯೆಂದು” ಆತನ ಮನಸ್ಸು ಕಟಿಯಹತ್ತಿತು. ಆತನು ಅಂದಿನ ಪ್ರಸಂಗವನ್ನು ಮೊದಲಿನಿಂದ ಕಡೆಯವರೆಗೆ ಮತ್ತೊಮ್ಮೆ ನೆನಪು ಮಾಡಿಕೊಂಡನು. ಅಂದು ಅವನ ಮನಸ್ಸು ಪಶ್ಚಾತ್ತಾಪದಿಂದ ಶುದ್ದವಾದಂತೆ ಆಗಿತ್ತು. ಈ ಸ್ಥಿತಿಯಲ್ಲಿ, ಆತನು ಬಹು ದಿವಸದಿಂದ ಮರೆತುಬಿಟ್ಟಂತೆ ಆಗಿದ್ದ ಮೆಹೆರ್ಜಾನಳ ಸುಂದರ ಪ್ರತಿಮೆಯು ಆತನ ಮನಃಪಟಲದ ಮೇಲೆ ಮೂಡಿತು. ಕೂಡಲೆ ಆಕೆಯ ಅತ್ಯಂತ ಸುಂದರರೂಪದ ಹಾಗು ಅತ್ಯಂತ ಪ್ರೇಮ ಸ್ವಭಾವದ ಸ್ಮರಣವಾಗಿ ರಾಮರಾಜನು ಬಹು ದುಃಖಿತನಾದನು. ಆತನು ಹಾಸಿಗೆಯ ಮೇಲೆ ಮಲಗಿಕೊಳ್ಳಲಾರದೆ, ಚಿಟ್ಟನೆ ಮೇಲಕ್ಕೆದ್ದು ಹುಚ್ಚನ ಹಾಗೆ ಅತ್ತಿತ್ತ ನೋಡಹತ್ತಿದನು. ಆತನಿಗೆ ಮೆಹೆರ್ಜಾನಳ ವೃತ್ತಾಂತವೆಲ್ಲ ನೆನಪಾಯಿತು. ಇದು ಆತನ ತಾರುಣ್ಯದೊಳಗಿನ ಅತ್ಯಂತ ರಮಣೀಯವಾದ್ದೊಂದು ಪ್ರಸಂಗವಾಗಿತ್ತು. “ತಾನು ಆಡಿದಂತೆ ಆಕೆಯನ್ನು ಪಟ್ಟರಾಣಿಯಾಗಿ ಮಾಡಿಕೊಳ್ಳುವದರೊಳಗೇ ಆ ಮೆಹೆರ್ಜಾನಳು ತನ್ನ ಮೇಲೆ ತಪ್ಪು ಹೊರಿಸಿ. ಅವಸರದಿಂದ ಹೊರಟುಹೋದಳು” ಎಂದು ಆತನು ಸಮಾಧಾನ ಮಾಡಿಕೊಳ್ಳಹತ್ತಿದನು. ಆದರೆ ಅದರಿಂದ ಪ್ರಯೋಜನವೇನೂ ಆಗದೆ, ಈಗಲೇ ಕುಂಜವನಕ್ಕೆ ಹೋಗಿ ಬರಬೇಕೆಂಬ ಇಚ್ಛೆಯು ಮಾತ್ರ ಆತನಿಗೆ ಉತ್ಪನ್ನವಾಯಿತು. ಆಗ ಮಧ್ಯರಾತ್ರಿಯಾಗುತ್ತ ಬಂದಿತ್ತು. ಅಂಥ ಹೊತ್ತಿನಲ್ಲಿ ಒಬ್ಬನೇ ಕುಂಜವನಕ್ಕೆ ಹೋಗುವದು ಸರಿಯಲ್ಲೆಂಬದು ಆತನ ಮನಸ್ಸಿನಲ್ಲಿ ಬರಲಿಲ್ಲ. ಇದಲ್ಲದೆ ಕುಂಜವನವು ಈಗ ವಿಜಾಪುರದ ವಕೀಲ ಕೈಯೊಳಗಿರುತ್ತದೆಂಬದನ್ನು ಆತನು ಮರೆತಿದ್ದನೋ ಏನೋ ಯಾರಿಗೆ ಗೊತ್ತು ! ಆತನು ಒಮ್ಮೆಲೆ ತನ್ನ ಸೇವಕನನ್ನು ಕರೆದು, ತನ್ನ ಕುದುರೆಗೆ ಜೀನುಹಾಕಿಕೊಂಡು ಬಾರೆಂದು ಆಜ್ಞಾಪಿಸಿದನು. ಈ ಅಪ್ಪಣೆಯನ್ನು ಕೇಳಿ ಸೇವಕನಿಗೆ ಬಹಳ ಆಶ್ಚರ್ಯವಾಯಿತು. ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿರಬಹುದೆಂದು ಆ ಸೇವಕನು ಅಲೋಚಿಸತೊಡಗಿದನು; ಆದರೆ ಬಾಯಿಬಿಟ್ಟು ಹಾಗೆ ರಾಮರಾಜನನ್ನು ಕೇಳುವ ಧೈರ್‍ಯವು ಆತನಿಗಾಗಲಿಲ್ಲ. ಆದರೂ ಆತನು ತನ್ನ ಒಡೆಯನಿಗೆ- “ಸಂಗಡ ಯಾರು ಬರುವರು ?” ಎಂದು ಕೇಳಲು, ರಾಮರಾಜನು ಒಮ್ಮೆಲೆ ಅವನ ಮೈಮೇಲೆ ಕವಕ್ಕನೆ ಹೋಗಿ ಯಾರೆಂದರೆ ? ಧನಮಲ್ಲನು ! ಎಲ್ಲಿ ಹೋದನವನು ?” ಒಂದು ಪ್ರಶ್ನೆ ಮಾಡಿದನು. ಈ ಪ್ರಶ್ನೆಯನ್ನು ಕೇಳಿಯಂತು ಆ ಸೇವಕನು ಬೆರಗಾದನು. ಬಹಳ ದಿನಗಳ ಹಿಂದೆ ಧನಮಲ್ಲನೆಂಬ ಒಬ್ಬ ಸೇವಕನು ಇದ್ದನೆಂಬದು ಆ ಹೊಸ ಸೇವಕನಿಗೆ ಕೇಳಿ ಮಾತ್ರ ಗೊತ್ತಿತ್ತು. ಧನಮಲ್ಲನು ಒಮ್ಮಿಂದೊಮ್ಮೆ ಇಲ್ಲದ ಹಾಗೆ ಆದನೆಂಬದನ್ನೂ ಜನರ ಮುಖದಿಂದ ಆ ಸೇವಕನು ಕೇಳಿದ್ದನು. ಅಂಥವನ ನೆನಪು ಈಗ ಮಹಾರಾಜನಿಗೆ ಒಮ್ಮಿಂದೊಮ್ಮೆ ಯಾಕೆ ಆಗಿರಬಹುದು? ನೆನಪು ಆದರೂ ಆಗಲಿ, ಅವನೇ ಈಗ ಚಾಕರಿಯ ಮೇಲೆ ಇರುವನೋ ಅನ್ನುವಂತೆ ಮಹಾರಾಜರು ಈಗ ಯಾಕೆ ಮಾತಾಡಿರಬಹುದು? ಎಂಬ ಪ್ರಶ್ನೆಗಳು ಉತ್ಪನ್ನವಾಗಿ, ಆ ಸೇವಕನಿಗೆ ಆಶ್ಚರ್ಯವಾಯಿತು. ಆದರೆ ಹಾಗೆ ಆಶ್ಚರ್ಯಪಡುತ್ತ ನಿಂತುಕೊಳ್ಳಲಿಕ್ಕೆ ಅದು ಸಮಯವಾಗಿದ್ದಿಲ್ಲ. ಧನಮಲ್ಲನು ಈಗೆಲ್ಲಿ ಇದ್ದಾನೆ ? ಎಂದು ರಾಮರಾಜನನ್ನು ಕೇಳಲಿಕ್ಕೂ ಆತನಿಗೆ ಧೈರ್‍ಯವಾಗಲೊಲ್ಲದು. ಆತನು ಸುಮ್ಮನೆ ಅಲ್ಲಿಂದ ಹೊರಟು ಅಶ್ವಶಾಲೆಗೆ ಹೋದನು ತನ್ನ ಒಡೆಯನಿಗೆ ಏನೋ ಭ್ರಾಂತಿಯಾದಂತೆ ಆಗಿರುವದರಿಂದ, ಈ ಸ್ಥಿತಿಯಲ್ಲಿ ಆತನನ್ನು ಒಬ್ಬನನ್ನೇ ಹೋಗಗೊಡುವದು ಯೋಗ್ಯವಲ್ಲೆಂದೆ ಆತನು ಆಲೋಚಿಸುತ್ತ, ಕುದುರೆಗೆ ಜೀನು ಹಾಕಿ ತಂದು ನಿಲ್ಲಿಸಿದನು. ಪ್ರಸಂಗಬಂದರೆ ತಾನೂ ಸಂಗಡ ಹೋಗಬೇಕೆಂದು ತಿಳಿದು, ಆತನು ತನ್ನ ಕುದುರೆಯನ್ನೂ ಜೀನುಹಾಕಿಸಿ ಮತ್ತೊಬ್ಬ ಸೇವಕನಿಂದ ತರಿಸಿ ನಿಲ್ಲಿಸಿದ್ದನು. ಅಷ್ಟರಲ್ಲಿ ರಾಮರಾಜನು ಪೋಷಾಕು ಹಾಕಿಕೊಂಡು, ಸೇವಕನು ತನ್ನ ಕುದುರೆಯನ್ನು ಚಟ್ಟನೆ ಹತ್ತಿದನು. ಆಗ ಸೇವಕನು-ನಾನು ಸಂಗಡ ಬರಲಷ್ಟೆ ? ಎಂದು ಕೇಳಲು, ರಾಮರಾಜನು ಬರಿಯ ತಲೆಯಲ್ಲಾಡಿಸಿ ಬರಬಹುದೆಂದು ಸೂಚಿಸಿದನು. ಕೂಡಲೇ ಆ ಸೇವಕನು ಸಿದ್ಧವಾಗಿ ನಿಂತಿದ್ದ ತನ್ನ ಕುದುರೆಯನ್ನು ಹತ್ತಿ, ಒಡೆಯನನ್ನು ಹಿಂಬಾಲಿಸಿ ಭರದಿಂದ ಸಾಗಿದನು. ಉಳಿದ ಸೇವಕರು-ಇಷ್ಟು ರಾತ್ರಿಯಲ್ಲಿ ಮಹಾರಾಜರು ಎಲ್ಲಿ ಹೋಗುತ್ತಿರಬಹುದು, ಎಂದು ತಮ್ಮ ತಮ್ಮೊಳಗೆ ಪ್ರಶ್ನೆಮಾಡುತ್ತಿದ್ದರು, ಆದರೆ ಯಾರಿಗಾದರೂ ಗೊತ್ತಿದ್ದರಷ್ಟೇ ಅವರ ಪ್ರಶ್ನಕ್ಕೆ ಉತ್ತರವನ್ನು ಹೇಳುವರು.

ಈ ಮೇರೆಗೆ ಸ್ವಚ್ಛಂಧವಾಗಿ ಹೊರಟಿದ್ದ ರಾಮರಾಜನು ಕುದುರೆಯನ್ನು ಭರದಿಂದ ಸಾಗಿಸಿಕೊಂಡು ಹೋಗಿ ತಾಸು ಹೊತ್ತು ಏರಿರುವಾಗ ಕುಂಜವನವನ್ನು ಮುಟ್ಟಿದನು ಆಗ ಕುಂಜವನವು ರಣಮಸ್ತಖಾನನ ಸ್ವಾಧೀನದಲ್ಲಿದ್ದದ್ದರಿಂದ, ರಾಮರಾಜನು ಅದನ್ನು ಒಮ್ಮೆಲೆ ಪ್ರವೇಶಿಸುವಂತೆ ಇದ್ದಿಲ್ಲ. ಆತನು ಮೊದಲು ಒಂದು ಸಾರೆ ಕುಂಜವನವನ್ನು ಸುತ್ತುವರಿದು ಬಂದು ಅದರ ದ್ವಾರಕ್ಷಕರಿಗೆ, ತಾನು ಬಂದಿರುವೆನೆಂದು ರಣಮಸ್ತಖಾನನಿಗೆ ಸುದ್ದಿಯನ್ನು ಹೇಳಲು ಆಜ್ಞಾಪಿಸಿದನು. ದ್ವಾರರಕ್ಷಕರು ಹೋಗಹೋಗುತ್ತ ಹಾದಿಯಲ್ಲಿ ಈ ಸುದ್ದಿಯನ್ನು ತಮ್ಮ ಜನರಿಗೆ ಹೇಳಲು, ಅವರು ಪರಮಾಶ್ಚರ್ಯಪಟ್ಟರು ಅದರೊಳಗೆ, ನಿನ್ನಿನ ದರ್ಬಾರದಲ್ಲಿ ಅನರ್ಥಪ್ರಸಂಗ ಒದಗಿರಲು, ಇಂದು ಬೆಳಗಾಗುವದರೊಳಗೆ ರಾಮರಾಜನು ಒಬ್ಬರೇ ಯಾಕೆ ಬಂದಿರಬಹುದೆಂದು ಅವರಿಗೆ ತಿಳಿಯದಾಯಿತು. ಇಲ್ಲಿಯವರೆಗೆ ರಾಮರಾಜನು ಮುಂಗಡ ಸೂಚನೆಯನ್ನು ಕಳಿಸದೆ ಎಂದೂ ಬಂದಿದ್ದಿಲ್ಲ. ನಿಜವಾಗಿ ನೋಡಿದರೆ, ಆಗಿನ ಕಾಲದಲ್ಲಿ ಶತ್ರುಗಳ ಬಿಡಾರವನ್ನು ರಾಮರಾಜನಂಥವರು, ಸಂಗಡ ಒಬ್ಬ ಸೇವಕನನ್ನು ಕರಕೊಂಡು ಹೋಗುವದು ಪರಮಸಾಹಸದ ಕಾರ್ಯವೆಂದು ಹೇಳಬಹುದಾಗಿತ್ತು. ಮುಸಲ್ಮಾನ ವಕೀಲನ ಭಾವಣಿಯಲ್ಲಿಯೇ ಆಗಲೊಲ್ಲದೇಕೆ, ತನ್ನ ಜೀವನವನ್ನು ತನ್ನ ಶತ್ರುವಿನ ಕೈಯಲ್ಲಿ ಒಪ್ಪಿಸುವದು ಚಮತ್ಕಾರದ ಸಂಗತಿಯೇ ಸರಿ; ಅದರಲ್ಲಿ ನಿನ್ನಿನ ದರ್ಬಾರದಲ್ಲಿ ವಿಲಕ್ಷಣ ಪ್ರಸಂಗ ಒದಗಿತ್ತು. ಆದರೆ, ರಾಮರಾಜನ ಮನಸ್ಸಿನಲ್ಲಿ ಯಾವ ವಿಚಾರವು ಉತ್ಪನ್ನವಾಯಿತೋ, ಆತನು ಇಂಥ ಸಾಹಸವನ್ನು ಯಾಕೆ ಮಾಡಿದನೋ ದೇವರಿಗೇ ಗೊತ್ತು, ಬಂದವನು ರಾಮರಾಜನೇ ಎಂಬ ನಂಬಿಗೆಯು ಸೇವಕನಿಗಿದ್ದದ್ದರಿಂದ ಆತನು ನೆಟ್ಟಗೆ ಹೋಗಿ ರಣಮಸ್ತಖಾನನಿಗೆ ಸುದ್ದಿಯನ್ನು ಹೇಳಿದನು. ಅದನ್ನು ಕೇಳಿ ರಣಮಸ್ತಖಾನನಿಗೂ ಪರಮಾಶ್ಚರ್ಯವಾಯಿತು. ಆತನು ಸ್ವಲ್ಪ ಹೊತ್ತಿನ ಮೇಲೆ ತನ್ನ ಮನಸ್ಸಿನಲ್ಲಿ-ತಂದು, ತನ್ನಿಂದಾದ ಉದ್ದಟತನಕ್ಕೆ ಭಯಪಟ್ಟು ನನಗೆ ಹೇಳಿಕೊಳ್ಳಲಿಕ್ಕೆ ಬಂದಿರಬಹುದೆಂದು ಕಾಣುತ್ತದೆ. ಆ ಮಾತಿನ ಸಲುವಾಗಿ ಪಶ್ಚಾತ್ತಾಪವಾಗಿರಲು, ಆ ಪಶ್ಚಾತ್ತಾಪದ ಭರದಲ್ಲಿ ಸವಾರಿಯು ಹೊರಟುಬಂದಿರಬಹುದು, ಎಂದು ಕಲ್ಪಿಸಿ, ಆತನು ಮನಸ್ಸಿನಲ್ಲಿ ಉಬ್ಬಿದನು. ಹ್ಯಾಗೇ ಇರಲಿ, ಈಗ ತಾನು ಆತನನ್ನು ಕಾಣಲಿಕ್ಕೆ ಬೇಕೆಂದು ತಿಳಿದು, ರಣಮಸ್ತಖಾನನ ಸೇವಕನಿಗೆ- “ಹೋಗು ನಾನು ಎದುರಿಗೆ ಬರುವೆನು ನೀನು ಅವರನ್ನು ಒಳಗೆ ಬರಗೊಡು,” ಎಂದು ಹೇಳಿ, ತಾನು ಪೋಷಾಕು ಹಾಕಿಕೊಂಡು ಹೊರಡಲನುವಾದನು. ಇತ್ತ ರಾಮರಾಜನು ಸೇವಕನ ವಿಜ್ಞಾಪನೆಯಂತೆ ಕುಂಜವನವನ್ನು ಪ್ರವೇಶಿಸಿದನು. ಆತನು ಕೆಲವು ಹಂತವನ್ನು ಕ್ರಮಿಸಿ ಹೋಗುತ್ತಿರಲು, ಅಲ್ಲಿ ಆತನ ಧನಮಲ್ಲನು ರಣಮಸ್ತಖಾನನ ಸೇವಕರಿಂದ ಸುತ್ತುಗಟ್ಟಲ್ಪಟ್ಟವನಾಗಿ ಅಕಸ್ಮಾತ್ ಅವನ ಕಣ್ಣಿಗೆ ಬಿದ್ದನು. ಈಗ ೩೦ ವರ್ಷಗಳ ಮೇಲೆ ಹೀಗೆ ಅಕಸ್ಮಾತ್ ಧನಮಲ್ಲನು ಕಣ್ಣಿಗೆ ಬಿದ್ದದ್ದನ್ನು ನೋಡಿ ರಾಮರಾಜನು ಆಶ್ಚರ್ಯಪಟ್ಟನು. ಆತನು ತನ್ನ ಕುದುರೆಯ ಕಡಿವಾಣವನ್ನು ಬಿಗಿಹಿಡಿದು ನಿಲ್ಲಿಸಲು, ಆ ಸ್ವಾಮಿ ಸೇವಕರು ಪರಸ್ಪರ ಒಬ್ಬರನ್ನೊಬ್ಬರು ನೋಡಿದರು. ಧನಮಲ್ಲನು ಆಶ್ಚರ್ಯಚಕಿತನಾಗಿ ಎದ್ದು ನಿಂತನು. ರಣಮಸ್ತಖಾನನ ಸೇವಕರು ಇವರೆಲ್ಲರನ್ನು ನೋಡುತ್ತ ಸುಮ್ಮನೆ ನಿಂತುಕೊಂಡರು. ಐದು ಪಳವಾಯಿತು, ಹತ್ತು ಪಳವಾಯಿತು, ಗಳಿಗೆಯಾಯಿತು; ಆದರೂ ಅವರಿಬ್ಬರು ಸುಮ್ಮನೆ ಒಬ್ಬರನ್ನೊಬ್ಬರು ನೋಡುತ್ತ ನಿಂತುಕೊಂಡರು. ರಣಮಸ್ತಖಾನನ ಸೇವಕರು, ಧನಮಲ್ಲನನ್ನು ರಾಮರಾಜನ ಗುಪ್ತಚಾರನೆಂದು ಭಾವಿಸಿದನು. ತನ್ನ ಗುಪ್ತಚಾರನು ವೈರಿಗಳ ಕೈಯಲ್ಲಿ ಸಿಕ್ಕಿದ್ದರಿಂದ ತನ್ನ ಗುಟ್ಟು ಹೊರಬೀಳುವದೆಂದು ತಿಳಿದು ರಾಮರಾಜನು ಹೀಗೆ ಆಶ್ಚರ್ಯದಿಂದ ನೋಡುವನೆಂದು ಅವರು ತಿಳಿದರು. ಹೀಗೆ ತಾನು ನಿಲ್ಲುವದು ಸಂಶಯಕ್ಕೆ ಕಾರಣವೆಂದು ತಿಳಿದು ಏನೋ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿ, ರಾಮರಾಜನು ತನ್ನ ಕುದುರೆಯನ್ನು ಮುಂದಕ್ಕೆ ನೂಕಿದನು. ಇತ್ತ ರಣಮಸ್ತಖಾನನ ಸೇವಕರು ಧನಮಲ್ಲನನ್ನು ಕರಕೊಂಡು ಎರಡನೆಯ ಕಡೆಗೆ ನಡೆದರು. ಧನಮಲ್ಲನು ಎಲ್ಲಿಂದಲೋ ಕುಂಜವನಕ್ಕೆ ಅದೇ ಬಂದಿದ್ದನು.

ರಾಮರಾಜನು ಮಂದಿರದ ಸನಿಹಕ್ಕೆ ಬರುತ್ತಿರಲು, ರಣಮಸ್ತಖಾನನು ತನ್ನ ಕೆಲ ಜನರೊಡನೆ ಆತನ ಎದುರಿಗೆ ಹೋದನು. ಆಗ ರಾಮರಾಜನು ಕುದುರೆಯಿಂದ ಇಳಿದು ರಣಮಸ್ತಖಾನನ ಕೈಯನ್ನು ಹಿಡಕೊಂಡು ಮಂದಿರದ ಕಡೆಗೆ ನಡೆದನು. ಕುಂಜವನವು ಈ ಮೊದಲೆ ರಾಮರಾಜನು ಮಹೆರ್ಜಾನಳೊಡನೆ ರಮಿಸಿದ ಸ್ಥಳವಾದ್ದರಿಂದ ಆತನಿಗೆ ಅಲ್ಲಿಯ ಯಾವ ಪ್ರದೇಶವೂ ಅಪರಿಚಿತವಾದದ್ದಿದ್ದಿಲ್ಲ. ಕುಶಲ ಪ್ರಶ್ನೆಗಳನ್ನು ಕೇಳುತ್ತ, ಸಮಯೋಚಿತ ಮಾತುಗಳನ್ನಾಡುತ ಅವರೆಲ್ಲರು ಬಂಗಲೆಯ ಕಡೆಗೆ ನಡೆದರು. ಬಂಗಲೆಯೊಳಗಿನ ದರ್ಬಾರಖಾನೆಯಲ್ಲಿ ಹೋದಕೂಡಲೆ ರಣಮಸ್ತಖಾನನು ರಾಮರಾಜನನ್ನು ಮಧ್ಯಸ್ಥಾನದ ಉಚ್ಚಾಸನದಲ್ಲಿ ಕುಳ್ಳಿರಿಸಿ- “ಇಷ್ಟು ಅಕಸ್ಮಿಕವಾಗಿ, ಅದರಲ್ಲಿಯೂ ಮೊದಲು ಸುದ್ದಿಯನ್ನು ಹೇಳಿಕಳಿಸದೆ ಬರಲಿಕ್ಕೆ ಕಾರಣವೇನೆಂದು” ರಾಮರಾಜನ್ನು ಕೇಳಿದನು. ಅದಕ್ಕೆ ರಾಮರಾಜನು- “ಏನೂ ಇಲ್ಲ, ಸಹಜವಾಗಿ ಬಂದೆನು. ಈ ಕುಂಜವನದಲ್ಲಿ ನಾನು ಎಷ್ಟೋ ಸುಖದ ದಿವಸಗಳನ್ನು ಕಳೆದಿದ್ದೆನು ; ಆದ್ದರಿಂದ ಯಾವಾಗಾದರೊಮ್ಮೆ ಇದನ್ನು ನೋಡಬೇಕೆಂಬ ಉತ್ಕಟೇಚ್ಛೆಯು ನನಗೆ ಆಗುತ್ತದೆ. ಅದರಂತೆ ನಿನ್ನೆ ರಾತ್ರಿ ಇಚ್ಛೆಯಾಗಲು, ಕೂಡಲೆ ಹೊರಟು ಬಂದೆನು” ಎಂದು ಹೇಳಿದನು. ಆದನ್ನು ಕೇಳಿ ರಣಮಸ್ತಖಾನನಾದರೂ ಅತ್ಯಂತ ಆದರದಿಂದ ರಾಮರಾಜನಿಗೆ- “ಕುಂಜವನವು ತಮ್ಮದೇ ಇರುವದರಿಂದ ತಾವು ಯಾವಾಗ ಬಂದರೂ ನಾವು ತಮ್ಮ ಆದರ ಸತ್ಕಾರವನ್ನು ಮಾಡಲಿಕ್ಕೆ ಸಿದ್ಧರೇ ಇರುತ್ತೇವೆ; ಆದರೆ ಮೊದಲು ಸೂಚನೆಯಾದರೆ ಮಾನಮರ್ಯಾದೆಗೆ ತಕ್ಕಂತೆ ಎಲ್ಲ ವ್ಯವಸ್ಥೆ ಮಾಡಲಿಕ್ಕೆ ಅನುಕೂಲವಾಗುವದು. ಆಕಸ್ಮಿಕವಾಗಿ ಬರುವದರಿಂದ ನಮ್ಮಿಂದಲ್ಲದಿದ್ದರೂ, ನಮ್ಮ ಸೇವಕರಿಂದ ತಪ್ಪುಗಳಾಗುವ ಸಂಭವವಿರುತ್ತದೆ; ಇದಕ್ಕಾಗಿಯೇ ಸೂಚಿಸಿದೆನಲ್ಲದೆ ಬೇರೆ ಏನೂ ಇಲ್ಲ. ನಾವು ಬೇಕಾದಾಗ ಬರಬಹುದು. ನಿನ್ನಿನ ಪ್ರಸಂಗವನ್ನೆಲ್ಲ ಮರೆತು ಇಂದು ತಾವು ಬಂದದ್ದಕ್ಕಾಗಿ ನಮಗೆ ಬಹಳ ಆನಂದವಾಗಿದೆ. ಏನಾದರೂ ವಿಶೇಷತರದ ಅಪ್ಪಣೆಯಿದ್ದರೆ ತಿಳಿಸುವ ಕೃಪೆಯಾಗಬೇಕು. ಮನಸ್ಸಿನಲ್ಲಿ ಯಾವ ಪ್ರಕಾರದ ಸಂಕೋಚವನ್ನೂ ತಂದುಕೊಳ್ಳಬಾರದು, ಎಂದು ಹೇಳಿದನು. ರಣಮಸ್ತಖಾನನ ಈ ಮಾನಮರ್ಯಾದೆಯ ಹಾಗು ವಿನಯದ ಮಾತುಗಳನ್ನು ಕೇಳಿ ರಾಮರಾಜನು ಅವನನ್ನು ಕುರಿತು-” “ನೀವು ನಹಳ ಸುಜ್ಞರಿರುತ್ತೀರಿ. ತರುಣರಿದ್ದು ಬಹಳ ವಿವೇಕಿಗಳಿರುತ್ತೀರಿ, ನಿಮ್ಮನ್ನು ನೋಡಿ ನನಗೆ ಬಹಳ ಸಂತೋಷವಾಗಿರುತ್ತದೆ. ನಿನ್ನಿನ ಪ್ರಸಂಗದ ವಿಷಯವಾಗಿ ನಾನು ಮನಸ್ಸಿನಲ್ಲಿ ಏನೂ ಹಿಡಿದಿರುವದಿಲ್ಲ. ನಿಮ್ಮ ಸ್ಥಿತಿಯಲ್ಲಿ ನಾನು ಇರುತ್ತಿದ್ದರೆ, ನೀವು ಮಾಡಿದಂತೆಯೇ ನಾನು ಮಾಡುತ್ತಿದ್ದನು. ಆದ್ದರಿಂದ ನಿನ್ನಿ ನಡತೆಯ ವಿಷಯವಾಗಿ ನನ್ನಲ್ಲಿ ಸ್ವಲ್ಪವಾದರೂ ಕುಭಾವನೆಯಿರುವದಿಲ್ಲ. ತಿರುಗು ಕೇಳಿದರೆ, ನಿಮ್ಮ ತೇಜಸ್ವಿತೆಗಾಗಿ ತಾನು ನಿಮ್ಮ ಅಭಿನಂದನವನ್ನೇ ಮಾಡೇನು” ಎಂದು ನುಡಿದು, ರಾಮರಾಜನು ಕೆಲವು ವೇಳೆಯವರೆಗೆ ಸುಮ್ಮನೆ ಕುಳಿತುಕೊಂಡನು. ಆಮೇಲೆ ರಣಮಸ್ತಖಾನನನ್ನು ಕುರಿತು- “ನಾನು ನಿಮ್ಮ ಸಂಗಡ ಕೆಲವು ಏಕಾಂತದ ಮಾತುಗಳನ್ನು ಆಡಬೇಕಾಗಿದೆ, ಆದ್ದರಿಂದ ಈ ಸ್ಥಳವನ್ನಾದರೂ ನಿರ್‍ಜನವಾಗಿಮಾಡಿರಿ; ಅಥವಾ ನಾವೇ ಬೇರೆ ನಿರ್‍ಜನ ಪ್ರದೇಶಕ್ಕೆ ಹೋಗೋಣ” ಎಂದು ನುಡಿಯಲು ರಣಮಸ್ತಖಾನನು ಸ್ವಲ್ಪಹೊತ್ತು ವಿಚಾರಮಾಡಿ ತನ್ನ ಜನರ ಕಡೆಗೆ ತಿರುಗಿ- “ನೀವು ಎಲ್ಲರೂ ಇಲ್ಲಿಂದ ಹೊರಟುಹೋಗಿರಿ, ಒಬ್ಬರೂ ನನ್ನ ಹತ್ತಿರ ಇರಲಾಗದು” ಎಂದು ಆಜ್ಞಾಪಿಸಿದನು.

ರಣಮಸ್ತಖಾನನು ಹೀಗೆ ಆಜ್ಞಾಪಿಸಿದ ಕೂಡಲೆ ಎಲ್ಲ ಜನರು ಹೊರಟು ಹೋಗಹತ್ತಿದರು. ಅವರಲ್ಲಿ ಒಬ್ಬಿಬ್ಬರು ಸಂಶಯದ ಸ್ವಭಾವದರಾಗಿದ್ದರು. ಅವರ ಮನಸ್ಸಿಗೆ ಏನು ತಿಳಿಯಿತೋ ಏನೋ, ಅವರು ತಮ್ಮ ಶಸ್ತ್ರಗಳ ಮೇಲೆ ಕೈಯಿಟ್ಟುಕೊಂಡು ರಣಮಸ್ತಖಾನನನ್ನೂ, ರಾಮರಾಜನನ್ನೂ ನೋಡುತ್ತ ನಿಂತುಕೊಂಡರು. ರಾಮರಾಜನು ಇದನ್ನು ನೋಡಿ ನಗುತ್ತ ಅವರಿಗೆ-ಹೋಗಿರಿ ಹೋಗಿರಿ, ನಿಮ್ಮ ಯಜಮಾನನ ಜೀವ ಚಿಂತೆಯನ್ನು ನೀವು ಸ್ವಲ್ಪವೂ ಮಾಡಬೇಡಿರಿ. ನಾನು ಅಂಥ ದುರಾಲೋಚನೆಯಿಂದ ಇಲ್ಲಿಗೆ ಬಂದವನಲ್ಲ. ಮೇಲಾಗಿ ತಮ್ಮ ಸಂರಕ್ಷಣವನ್ನು ಮಾಡಿಕೊಳ್ಳಲಿಕ್ಕೆ ನಿಮ್ಮ ಯಜಮಾನರು ಸ್ವತಃ ಸಮರ್ಥರೇ ಇದ್ದಾರೆ, ಎಂದು ಹೇಳಿದನು. ಅದನ್ನು ಕೇಳಿ ರಣಮಸ್ತಖಾನನೂ ನಗುತ್ತ- ಎಂಥಾ ಹುಚ್ಚರಿರುವಿರೋ ನೀವು ? ಹೋಗಿರಿ ಹೋಗಿರಿ; ಏನೂ ಚಿಂತೆ ಮಾಡಬೇಡಿರಿ, ಎಂದು ಹೇಳಲು ಆ ಸೇವಕರು ಹೊರಟಹೋದರು. ಆಗ ರಣಮಸ್ತಖಾನನು ರಾಮರಾಜನಿಗೆ-ಏನು ಮಾತಾಡುವದನ್ನು ಇನ್ನು ನಿಶ್ಯಂಕೆಯಿಂದ ಮಾತಾಡಬೇಕು ಎಂದು ಸೂಚಿಸಿದನು.

****