ಕನ್ನಡಿಗರ ಕರ್ಮ ಕಥೆ/ರಾಜರಾಜನ ಹೊಸವಿಚಾರ
೨೨ನೆಯ ಪ್ರಕರಣ
ರಾಮರಾಜನ ಹೊಸವಿಚಾರ
ರಣಮಸ್ತಖಾನನು ಕರೀಮಬಕ್ಷನ ಸಂಗಡ ತನ್ನ ತಾಯಿಗೆ (ಮಾಸಾಹೇಬರಿಗೆ) ಹಾಗೆ ಸ್ಪಷ್ಟವಾಗಿ ಹೇಳಿಕಳಿಸಿದ್ದನ್ನು ನೋಡಿ ರಾಮರಾಜನಿಗೆ ಪರಮಾನಂದವಾಯಿತು. ರಣಮಸ್ತಖಾನನು ತನ್ನನ್ನು ಕೂಡಿಕೊಂಡದ್ದರಲ್ಲಿ ಮೋಸವೇನೂ ಇಲ್ಲೆಂಬ ನಂಬಿಗೆಯು ಆತನಿಗಾಯಿತು. ತಾನು ದೊಡ್ಡದೊಂದು ವ್ಯೂಹವನ್ನು ರಚಿಸಿ, ಮಹಾಕಾರ್ಯವನ್ನು ಸಾಧಿಸಿದೆನೆಂದು ಆತನು ಆನಂದಪಡಹತ್ತಿದನು. ಅತನು ವ್ಯೂಹರಚನೆಯಲ್ಲಿ ಮಹಾ ಸಮರ್ಥನಿದ್ದು. ತನ್ನ ಆ ಸಾಮರ್ಥ್ಯದ ಬಲದಿಂದ ಆತನು ಈವರೆಗೆ ಹಲವು ಕಾರ್ಯಗಳನ್ನು ಸಾಧಿಸುತ್ತ ಬಂದಿದ್ದನು. ಆ ಕಾರ್ಯಗಳಲ್ಲೆಲ್ಲ ರಣಮಸ್ತಖಾನನನ್ನು ತನ್ನ ಕಡೆಗೆ ಎಳಕೊಂಡದ್ದು ಹೆಚ್ಚಿನದೆಂದು ಆತನು ಭಾವಿಸಹತ್ತಿದನು. ಬಹಮನಿ ಬಾದಶಹರಲ್ಲಿ ಪರಸ್ಪರ ವೈಮನಸ್ಯವೂ, ಮಾತ್ಸರ್ಯವೂ ಇರುವವರೆಗೆ ತನ್ನ ರಾಜ್ಯಕ್ಕೆ ಭಯವಿಲ್ಲೆಂದು ರಾಮರಾಜನು ತಿಳಿದುಕೊಂಡದ್ದು ಆ ವೈಮನಸ್ಯ, ಮಾತ್ಸರ್ಯವೂ ಯಾವಾಗಲೂ ಇರುವಂತೆ ರಾಮರಾಜನು ತಂತ್ರವನ್ನು ಒಡ್ಡುತ್ತ ಬಂದಿದ್ದನು; ಆದರೆ, ಮೂವರು ಬಹಮನೀ ಬಾದಶಹರು ಒಂದಾದರೆ ಹ್ಯಾಗೆ ಮಾಡಬೇಕೆಂಬ ಭಯದಿಂದ ಮುಕ್ತನಾಗಲಿಕ್ಕೆ ಆತನು ಈಗ ಹವಣಿಸಹತ್ತಿದನು. ಮೂವರು ಬಾದಶಹರು ಒಟ್ಟಾಗಿ ಬಂದರೂ ಅವರ ಮಗ್ಗಲು ಮುರಿಯುವಷ್ಟು ಸಾಮರ್ಥ್ಯವನ್ನು ತಾನು ಪಡೆದು, ಒಮ್ಮೆ ಮುಸಲ್ಮಾನ ಬಾದಶಹರಿಗೆ ಚೆನ್ನಾಗಿ ಕೈತೋರಿಸಿದರೆ, ತಾನು ನಿರ್ಭಯನಾಗಿ ಎಲ್ಲರ ಮೇಲೆ ವರ್ಚಸ್ಸು ಕೂಡಿಸಬಹುದೆಂದು ಆತನು ಎಣಿಕೆ ಹಾಕಿದ್ದನು. ಈ ಎಣಿಕೆಯು ಕೈಗೂಡಲಿಕ್ಕೆ ಮುಸಲ್ಮಾನ ಬಾದಶಹರ ಮರ್ಮಸ್ಥಾನಗಳೂ, ಮುಸಲ್ಮಾನ ಸೈನ್ಯದ ಯುದ್ಧ ಮಾಡುವ ರೀತಿಯೂ ಗೊತ್ತಿದ್ದ ಒಬ್ಬ ಮುಸಲ್ಮಾನ ಸರದಾರನು ತನ್ನ ಕಡೆಗೆ ಒಡೆದು ಬರುವ ಅವಶ್ಯವಿತ್ತು, ಈವರೆಗೆ ವಿಜನಗರದ ಅರಸರು ತಮ್ಮ ದಂಡಿನಲ್ಲಿ ಪಠಾಣ, ಅರಬ ಮೊದಲಾದ ಜಾತಿಯ ಮುಸಲ್ಮಾನ ದಂಡಾಳುಗಳನ್ನು ಚಾಕರಿಗೆ ಇಟ್ಟುಕೊಳ್ಳುತ್ತ ಬಂದಿದ್ದರು. ಆಗಿನ ಕಾಲದಲ್ಲಿ ಮುಸಲ್ಮಾನರು ಮುಸಲ್ಮಾನರ ಮೇಲೆ, ಹಿಂದುಗಳು ಹಿಂದೂಗಳ ಮೇಲೆ ಶಸ್ತ್ರ ಹಿಡಿದು ಕಾದಲಿಕ್ಕೆ ಹಿಂದುಮುಂದು ನೋಡುತ್ತಿದ್ದಿಲ್ಲ. ಹೊಟ್ಟೆ ತುಂಬ ಅನ್ನ ಹಾಕಿದವರ ನೌಕರರಾಗಿ ಬೇಕಾದವರು ಬೇಕಾದವರ ಸಂಗಡ ಯುದ್ಧ ಮಾಡುತ್ತಿದ್ದರು. ಆದ್ದರಿಂದ ಮುಸಲ್ಮಾನ ಬಾದಶಹರ ದಂಡಿನಲ್ಲಿ ಹಿಂದೂಜನರೂ, ಹಿಂದೂ ಅರಸರ ದಂಡಿನಲ್ಲಿ ಮುಸಲ್ಮಾನರೂ ಚಾಕರಿಗೆ ನಿಂತುಕೊಂಡು ತಮ್ಮ ತಮ್ಮ ಒಡೆಯರ ಪಕ್ಷದಿಂದ ಯುದ್ಧ ಮಾಡುತ್ತಿದ್ದರು. ರಾಮರಾಜನಿಗೆ ತನ್ನ ಹಿಂದೂ ದಂಡಾಳುಗಳ ಸಂಬಂಧದಿಂದಂತು ಪೂರ್ಣ ಅಭಿಮಾನವಿದ್ದೇ ಇತ್ತು; ಆದರೆ ಇತ್ತಿತ್ತ ಹಿಂದೂ ದಂಡಾಳುಗಳೂ ಡೌಲಿಗೆ ಬಿದ್ದು, ಸಾಹಸದ ಕಾರ್ಯಗಳಲ್ಲಿ ಸ್ವಲ್ಪ ಮುಗ್ಗರಿಸುತ್ತಿರುವರೆಂಬುದು ಆತನ ಮನಸ್ಸಿನಲ್ಲಿ ಕಟಿಯುತ್ತಿತ್ತು ; ಆದ್ದರಿಂದಲೇ ಆತನು ತನ್ನಲ್ಲಿದ್ದ ಅರಬ ಪಠಾಣ ಜನರ ದಂಡನ್ನು ಇನ್ನಿಷ್ಟು ಹೆಚ್ಚಿಸಿ ತನ್ನ ಸೈನದ ಸಾಮರ್ಥ್ಯವನ್ನು ಒಳಿತಾಗಿ ಹೆಚ್ಚಿಸಬೇಕೆಂದು ಆತುರ ಪಡಹತ್ತಿದನು.
ಈ ಪಠಾಣರ ಹಾಗು ಅರಬರ ಪರಾಕ್ರಮವು ವಿಜಯನಗರದ ರಾಜ್ಯದ ಉತ್ಕರ್ಷಕ್ಕೆ ಬಹುಮಟ್ಟಿಗೆ ಕಾರಣವಾದ್ದರಿಂದ ಈವರೆಗೆ ವಿಜಯನಗರದ ಅರಸರು ಮುಸಲ್ಮಾನ ದಂಡಾಳುಗಳ ಅನುವರ್ತನ ಮಾಡುತ್ತ ಬಂದಿದ್ದರೆಂದು ಹೇಳಬಹುದು. ಇದರಿಂದ ಮುಸಲ್ಮಾನರು ಒಂದೊಂದು ಪ್ರಸಂಗದಲ್ಲಿ ವಿಜಯನಗರದ ಅರಸರಿಗೂ ತಲೆಭಾರವಾಗುತ್ತಿದ್ದರು. ಮುಸಲ್ಮಾನ ದಂಡಾಳುಗಳಿಗಾಗಿ ವಿಜಯನಗರದ ಅರಸರು ತಮ್ಮ ರಾಜ್ಯದಲ್ಲಿ ಮಸೀದೆಗಳನ್ನು ಕಟ್ಟಿಸಿಕೊಟ್ಟಿದ್ದರು. ಮುಸಲ್ಮಾನರು ಹಿಂದೂ ಅರಸರಿಗೂ, ಅವರ ಸಿಂಹಾಸನಕ್ಕೂ ಕುರ್ನಿಪಾತ (ವಿಶೇಷ ಪ್ರಕಾರದ ನಮಸ್ಕಾರ) ಮಾಡಲಿಕ್ಕಿಲ್ಲೆಂದು ಹಟಹಿಡಿಯಲು, ವಿಜಯನಗರದ ರಾಯರು ಅಷ್ಟಕ್ಕಾಗಿ ಮುಸಲ್ಮಾನ ದಂಡಾಳುಗಳನ್ನು ಹೊರಗೆ ಹಾಕಲಿಲ್ಲ. ದರ್ಬಾರದಲ್ಲಿ ಸಿಂಹಾಸನದ ಮೇಲೆ ಕುರಾನ್ ಇಡುವ ಪದ್ಧತಿಯನ್ನು ಪ್ರಚಾರದಲ್ಲಿ ತಂದಿದ್ದರು. ಯಾರಾದರೂ ಈ ಸಂಬಂಧದಿಂದ ಮುಸಲ್ಮಾನರನ್ನು ಸಿಟ್ಟಿಗೆ ಎಬ್ಬಿಸಿದರೆ, ಅವರು-ನಾವು ಹಿಂದೂ ಅರಸರಿಗೆ, ಅಥವಾ ಅವರ ಸಿಂಹಾಸನಕ್ಕೆ ಕುರ್ನಿಸಾತವನ್ನು ಮಾಡದೆ, ಕುರಾನಕ್ಕೆ ಮಾಡುತ್ತೇವೆಂದು ಸ್ಪಷ್ಟವಾಗಿ ಹೇಳುತ್ತಿದ್ದರು. ತಾತ್ಪರ್ಯವೇನೆಂದರೆ ವಿಜಯನಗರದ ಅರಸರು ಮುಸಲ್ಮಾನ ದಂಡಾಳುಗಳ ಹಟವನ್ನು ನಡಿಸಿಯಾದರೂ ಅವರನ್ನು ಇಟ್ಟುಕೊಳ್ಳುತ್ತಿದ್ದರು. ರಾಮರಾಜನು ತನ್ನ ಆಳಿಕೆಯಲ್ಲಿ ಹಿಂದೂ ಸೈನ್ಯದೊಡನೆ ಮುಸಲ್ಮಾನ ಸೈನ್ಯವನ್ನೂ ಹೆಚ್ಚಿಸಿ, ತಾನು ಅತ್ಯಂತ ಬಲಾಡ್ಯನಾದ ಮುಸಲ್ಮಾನ ಸೈನ್ಯವನ್ನೂ ಹೆಚ್ಚಿಸಿ, ತಾನು ಅತ್ಯಂತ ಬಲಾಡ್ಯನಾದ ಮುಸಲ್ಮಾನ ಬಾದಶಹರ ಮಗ್ಗಲು ಮುರಿಯಬೇಕೆಂದು ಹವಣಿಸುತ್ತಿದ್ದನು. ಇಂಥ ಪ್ರಸಂಗದಲ್ಲಿ ರಣಮಸ್ತಖಾನನಂಥ ತರುಣ ವೀರನು ತನ್ನ ಪಕ್ಷವನ್ನು ಸ್ವೀಕರಿಸಿದ್ದು ಆ ಮಹತ್ವಾಕಾಂಕ್ಷಿಯಾದ ಹಿಂದೂ ರಾಜನ ಪರಮಾನಂದಕ್ಕೆ ಕಾರಣವಾಯಿತು.
ಕರೀಮಬಕ್ಷನನ್ನು ಕುಂಜವನಕ್ಕೆ ಕಳಿಸಿದ ಬಳಿಕ ರಾಮರಾಜನೂ, ರಣಮಸ್ತಖಾನನೂ ಏಕಾಂತದಲ್ಲಿ ಬಹಳಹೊತ್ತು ಮಾತಾಡಿದರು. ಇನ್ನು ಎಲ್ಲ ಮಾತಿನ ನಿರ್ಣಯವಾದ ಮೇಲೆ ಬಾದಶಹನ ಮುಂದೆಯಾದರೂ ಮುಸುಕು ಯಾಕೆಯೆಂದು ರಣಮಸ್ತಖಾನನು ವಿಜಾಪುರದ ಬಾದಶಹನಿಗೊಂದು ಪತ್ರವನ್ನು ಬರೆದು ಅದನ್ನು ಬೇಕಾದ ಒಬ್ಬ ಸೇವಕನ ಸಂಗಡ ಕಳಿಸಿಕೊಡಬೇಕೆಂದು ರಾಮರಾಜನಿಗೆ ಹೇಳಿದನು. ಆ ಪತ್ರದಲ್ಲಿ ರಣಮಸ್ತಖಾನನು ಬಾದಶಹನಿಗೆ ನಾನು ಈಗ ಹಿಂದೂ ರಾಜನ ನೌಕರನಾಗಿರುವೆನು. ನಾನು ಕುಂಜವನವನ್ನು ಬಿಟ್ಟು ವಿಜಯನಗರದಲ್ಲಿ ಈಗ ಇರಹತ್ತಿದ್ದೇನೆ. ಈ ಹೊತ್ತಿನಿಂದ ನಾನು ನಿಮ್ಮ ನೌಕರನಲ್ಲ, ತಮ್ಮ ಶತ್ರುವಿನ ನೌಕರನು. ಎಂದು ಸ್ಪಷ್ಟವಾಗಿ ಬರೆದಿದ್ದನು. ಇದನ್ನು ನೋಡಿಯಂತು ರಾಮರಾಜನಿಗೆ ಬಹಳ ಸಮಾಧಾನವಾಯಿತು. ನಾನು ಸಂಪೂರ್ಣವಾಗಿ ಗೆದ್ದೆನೆಂದು ಆತನು ಸಂತೋಷಪಡಹತ್ತಿದನು. ರಣಮಸ್ತಖಾನನು ಹೀಗೆ ಪ್ರಸಿದ್ಧ ರೀತಿಯಿಂದ ತನ್ನನ್ನ ಕೂಡುವದಕ್ಕಿಂತ ಗುಪ್ತರೀತಿಯಿಂದ ತನಗೆ ಸಹಾಯ ಮಾಡುವದು ನೆಟ್ಟಗಾಗಬಹುದೆಂದು ಒಮ್ಮೆ ರಾಮರಾಜನು ಯೋಚಿಸಿದನು; ಆದರೆ ಗೌಪ್ಯವು ಬಹುದಿವಸ ಉಳಿಯಲಾರದೆಂತಲೂ, ರಣಮಸ್ತಖಾನನ ಸಹಾಯದಿಂದ ತನ್ನ ಸೈನ್ಯವನ್ನು ತಿದ್ದಬೇಕಾಗಿದ್ದಾಗ ಗೌಪ್ಯವು ಕೆಲಸದಲ್ಲವೆಂತಲೂ ಆತನು ತಿಳಿದು, ರಣಮಸ್ತಖಾನನ ಪತ್ರವನ್ನು ವಿಜಾಪುರದ ಬಾದಶಹನ ಕಡೆಗೆ ಕಳಿಸಿಬಿಟ್ಟನು. ಇನ್ನು ಮೇಲೆ ವಿಜಾಪುರ, ಗೋವಳಗೊಂಡ, ಅಹಮ್ಮದನಗರ ಈ ಮೂವರು ಬಾದಶಹರನ್ನು ಪೀಡಿಸಿ, ಅವರೆಲ್ಲ ಒಟ್ಟಾಗುವಂತೆ ಮಾಡಿ, ಒಟ್ಟಾಗಿ ತನ್ನ ಮೇಲೆ ಸಾಗಿಬಂದ ಅವರನ್ನು ಬಗ್ಗುಬಡಿಯಬೇಕೆಂದು ರಾಮರಾಜನು ನಿಶ್ಚಯಿಸಿದನು. ಹೀಗೆ ಮಾಡದಿದ್ರೆ ಮಸಲ್ಮಾನ ಬಾದಶಹರ ಸೊಕ್ಕು ಇಳಿಯದೆಂತಲೂ, ಅವರ ಸೊಕ್ಕು ಇಳಿಸುವ ಕಾರ್ಯದ ಅಸ್ತಿವಾರವನ್ನು ತಾನು ಬಹಳ ಚೆನ್ನಾಗಿ ಹಾಕಿದನೆಂತಲೂ ಆತನು ಆನಂದ ಪಡಹತ್ತಿದನು.
ಆದರೆ ಸಂಸಾರದಲ್ಲಿ ಪರಿಶುದ್ಧಾನಂದವು ಮನುಷ್ಯನಿಗೆ ದೊರೆಯುವದು ದುರ್ಲಭವೆಂತಲೇ ಹೇಳಬೇಕಾಗುವದು. ಆನಂದದ ಭರವು ಕುಗ್ಗಿದ ಮೇಲೆ ಆ ಆನಂದದಲ್ಲಿ ಚಿಂತೆ, ಶಂಕೆ ಮೊದಲಾದ ದುಃಖ ಬೀಜಗಳ ಮೊಳಕೆಯೊಡೆದದ್ದು ಅನುಭವಕ್ಕೆ ಬಾರದೆ ಹೋಗುವದಿಲ್ಲ. ರಾಮರಾಜನ ಸ್ಥಿತಿಯಾದರೂ ಹೀಗೆಯೇ ಆಯಿತು. ರಾಮರಾಜನ ಸ್ವಭಾವವು ಮಹತ್ವಾಕಾಂಕ್ಷಿಯಾಗಿದ್ದಂತೆ ಶಂಕಾಮಯವೂ ಆಗಿತ್ತು. ಮೊದಮೊದಲಿಗೆ ಎಲ್ಲ ಕೆಲಸವು ಅತ್ಯುತ್ತಮ ರೀತಿಯಿಂದ ಸಾಧಿಸಿತೆಂದು ಆತನಿಗೆ ತೋರಿ ಪರಮಾನಂದವಾಯಿತು; ಆದರೆ ಮುಂದೆ ಒಂದೆರಡು ದಿನಗಳಲ್ಲಿ ಆತನನ್ನು ಎರಡು ಮೂರು ಶಂಕೆಗಳು ಬಾಧಿಸಹತ್ತಿದವು. ಈಗ ನಡದದ್ದರಲ್ಲಿ ಮೋಸವಿರಲಿಕ್ಕಿಲ್ಲವಷ್ಟೆ ? ಈ ರಣಮಸ್ತಖಾನನು ತನಗೆ ಮಂಕುಬೂದಿಯನ್ನು ಹಚ್ಚುತ್ತಿರಲಿಕ್ಕಿಲ್ಲವಷ್ಟೆ ? ಎಂಬ ಶಂಖೆಯು ಒಂದನೆಯದು, ಈತನ ತಾಯಿಯು ಏನಾದರೂ ಬೋಧಿಸಿ ಈತನ ಮನಸ್ಸನ್ನು ತಿರುಗಿಸಲಿಕ್ಕಿಲ್ಲವ ? ಎಂಬ ಶಂಕೆಯು ಎರಡನೆಯದು, ತಾನು ತರ್ಕಿಸಿದಂತೆ ಈತನು ನನ್ನಿಂದ ಮೆಹೆರ್ಜಾನಳಲ್ಲಿ ಹುಟ್ಟಿದ್ದೇ ನಿಜವಾಗಿದ್ದ ಪಕ್ಷದಲ್ಲಿ, ಈತನು ತನ್ನ ನಿಜವಾದ ಕುಲವೃತ್ತಾಂತವನ್ನರಿತ ಬಳಿಕ ನನ್ನನ್ನು ಘಾತಿಸಲಿಕ್ಕಿಲ್ಲವಷ್ಟೆ ? ಎಂಬ ಶಂಕೆಯು ಮೂರನೆಯದು. ಈ ಮೂರು ಶಂಕೆಗಳ ನಿವಾರಣಕ್ಕಾಗಿ ಆತನು ಮೂರು ಉಪಾಯಗಳನ್ನು ಯೋಚಿಸಿದನು. ರಣಮಸ್ತಖಾನನ ನಡತೆಯನ್ನು ಶೋಧಿಸುವದಕ್ಕಾಗಿ ಗುಪ್ತಚಾರರನ್ನಿಡಬೇಕೆಂದು ಮಾಡಿದನು. ತಾಯಿ-ಮಕ್ಕಳ ದರ್ಶನವಾಗದಂತೆ ವ್ಯವಸ್ಥೆಯನ್ನಿಡಬೇಕೆಂದು ನಿಶ್ಚಯಿಸಿದನು ಆತನ ಕುಲ ವೃತ್ತಾಂತವು ಆತನಿಗೆ ತಿಳಿಯದಂತೆ ಜಾಗರೂಕವಾಗಿರಬೇಕೆಂದು ಗೊತ್ತುಮಾಡಿಕೊಂಡನು. ಈ ಮೂರು ಉಪಾಯಗಳು ಚೆನ್ನಾಗಿ ಸಾಧಿಸಬೇಕಾದರೆ, ರಣಮಸ್ತಖಾನನನ್ನು ತನ್ನ ಅಂಗ ರಕ್ಷಕನನ್ನಾಗಿ ನಿಯಮಿಸಿಕೊಳ್ಳಬೇಕೆಂದು ಯೋಚಿಸಿದನು. ಅಂಗರಕ್ಷಕನಾದ ಬಳಿಕ ಯಾವಾಗಲೂ ತನ್ನನ್ನನುಸರಿಸಿಯೇ ಇರಬೇಕಾದದ್ದರಿಂದ, ತಾನು ಒಂದು ಬಗೆಯಿಂದ ರಣಮಸ್ತಖಾನನ ಮೇಲೆ ಕಣ್ಣು ಇಟ್ಟಹಾಗಾಗುತ್ತದೆಂದು ರಾಮರಾಜನು ತಿಳಿದನು. ಇವೆಲ್ಲ ವಿಚಾರಗಳು ಮೊದಲನೆಯ ದಿವಸದ ರಾತ್ರಿಯಲ್ಲಿಯೇ ರಾಮರಾಜನ ಮನಸ್ಸಿನಲ್ಲಿ ಬಂದುಹೋದವು.
ಇವೆಲ್ಲ ವಿಚಾರಗಳು ಬಂದುಹೋದ ಮೇಲೆ ಆಕಸ್ಮಿಕವಾಗಿ ಒಂದು ವಿಚಾರವು ರಾಮರಾಜನ ಮನಸ್ಸಿನಲ್ಲಿ ಉತ್ಪನ್ನವಾಯಿತು. ತಾನು ಕುಂಜವನಕ್ಕೆ ಹೋಗಿ ಮೆಹರ್ಜಾನಳನ್ನು ಕಾಣಬೇಕೆಂಬ ಇಚ್ಛೆಯು ಆತನಲ್ಲಿ ಉತ್ಪನ್ನವಾಯಿತು. ರಣಮಸ್ತಖಾನನ ರೂಪವು ತನ್ನ ರೂಪವನ್ನು ಅಚ್ಚಳಿಯದೆ ಹೋಲುತ್ತಿರುವದನ್ನು ನೋಡಿ, ಈತನು ತನ್ನ ಮಗನಾಗಿರಬಹುದೆಂಬ ಸಂಶಯವು ರಾಮರಾಜನ ಮನಸ್ಸಿನಲ್ಲಿ ಉತ್ಪನ್ನವಾಗಿತ್ತು. ಈ ಸಂಶಯದಿಂದ ರಾಮರಾಜನು ಒಮ್ಮೆ ಕುಂಜವನಕ್ಕೆ ಹೋಗಿರುವಾಗ ಪ್ರತ್ಯಕ್ಷ ಮೆಹರ್ಜಾನಳೇ ಸುಳಿದಾಡಿದ ಹಾಗಾದದ್ದನ್ನು ನೋಡಿದಾಗ ಆತನ ಆ ಸಂಶಯವು ಮತ್ತಷ್ಟು ದೃಢವಾಯಿತು. ಮುಂದೆ ತನ್ನ ಸೇವಕರ ಸಹಾಯದಿಂದ ಧನಮಲ್ಲನನ್ನು ಹಿಡತರಿಸಿ ವಿಚಾರಿಸಿದಾಗ ಆತನ ಸಂಶಯವು ನಿವಾರಣವಾಗಿ, ಮಾಸಾಹೇಬರೆನಿಸಿಕೊಳ್ಳುವವರು ತನ್ನ ಪ್ರಿಯ ಮೆಹರ್ಜಾನಳೇ ಎಂತಲೂ, ಲೈಲಿಯೆನಿಸಿ ಕೊಳ್ಳುವವಳು ಆಕೆಯ ದಾಸಿಯಾದ ಮಾರ್ಜಿನೆಯೆಂತಲೂ ಆತನು ನಿಶ್ಚಯಿಸಿದನು. ಆದರೆ ರಣಸಮಖಾನನು ಕುಂಜವನದಲ್ಲಿರುವವರೆಗೆ ಮೆಹೆರ್ಜಾನಳನ್ನು ಕಾಣಲಿಕ್ಕೆ ರಾಮರಾಜನಿಗೆ ಧೈರ್ಯವಾಗಿದ್ದಿಲ್ಲ. ಈ ದಿನ ರಣಮಸ್ತಖಾನನು ತನ್ನ ಕೈಯಲ್ಲಿ ಪೂರ್ಣವಾಗಿ ಸಿಕ್ಕು ಹೋಗಿರುವದರಿಂದ ಒಬ್ಬನೇ ಕುಂಜವನದಲ್ಲಿರುವ ಮೆಹರ್ಜಾನಳನ್ನು ಕಾಣುವದು ಸುಲಭವೆಂದು ಭಾವಿಸಿ, ಆತನು ಕುಂಜವನಕ್ಕೆ ಹೋಗಬೇಕೆಂದು ನಿಶ್ಚಯಿಸಿದನು. ಮೆಹರ್ಜಾನಳನ್ನು ತಾನು ಕಂಡರೆ, ಆಕೆಯು ತನ್ನನ್ನು ಪ್ರೀತಿಸಬಹುದೊ, ನಿರಾಕರಿಸಬಹುದೋ ಎಂಬದು ರಾಮರಾಜನಿಗೆ ತಿಳಿಯದಾಯಿತು. ಮೆಹರ್ಜಾನಳಿಗೆ ತನ್ನ ಮೇಲೆ ಪ್ರೀತಿಯೇ ಇಲ್ಲದಿದ್ದರೆ ಆಕೆಯು ಇಷ್ಟು ವರ್ಷಗಳ ಮೇಲೆ ಮಗನನ್ನು ಕಟ್ಟಿಕೊಂಡು ಬಂದು ತಾನು ಮೊದಲು ಇರುತ್ತಿದ್ದ ಕುಂಜವನದಲ್ಲಿಯೇ ಬಂದು ಇರುತ್ತಿದ್ದಿಲ್ಲೆಂದು ಭಾವಿಸಿ, ಮೆಹರ್ಜಾನಳ ಪ್ರೇಮವು ತನ್ನ ಮೇಲೆ ಇರುವದೆಂದು ಆತನು ಕಲ್ಪಿಸಿದನು. ಹಾಗೆ ಪ್ರೇಮವಿದ್ದ ಪಕ್ಷದಲ್ಲಿ ಆಕೆಯು ಇಷ್ಟು ದಿವಸ ಯಾವದೊಂದು ನೆವದಿಂದ ಯಾಕೆ ತನ್ನನ್ನು ಕಂಡಿರಲಿಕ್ಕಿಲ್ಲೆಂದು ಶಂಕಿಸಿ, ತನ್ನ ಮೇಲೆ ಆಕೆಯ ಪ್ರೇಮವಿರುವದೋ ಇಲ್ಲವೋ ಎಂದು ಆತನು ಆತಂಕಪಟ್ಟನು. ತನ್ನ ಮಗನ ಮುಂದೆ ತನ್ನ ಚರಿತ್ರವನ್ನು ಹೇಳಲಿಕ್ಕೆ ಹೆದರಿ ಹೀಗೆ ಸುಮ್ಮನಿರಬಹುದಾದ್ದರಿಂದ, ಹೀಗೆ ತಾನು ಆಕೆಯ ಮಗನಿಲ್ಲದಾಗ ಹೋಗಿ ಮಾತಾಡಿಸಿ ಹೇಳಿಕೊಂಡರೆ, ಆಕೆಯು ಪ್ರಸನ್ನಳಾದರೂ ಆಗಬಹುದೆಂದು ಆತನು ಆಸೆಪಟ್ಟನು ಹೀಗೆ ವಿಚಾರ ಮಾಡುತ್ತಿರುವಾಗ ರಾಮರಾಜನಿಗೆ ಅಂದಿನ ರಾತ್ರಿ ನಿದ್ರೆಯು ಹತ್ತಿತು, ಮರುದಿನ ಬೆಳಗಾಗಲು ಅದೇ ವಿಚಾರಗಳು ಆತನ ಮನಸ್ಸಿನಲ್ಲಿ ಹುಟ್ಟಿ ಬಾಧಿಸಹತ್ತಿದವು. ಅಂದಿನ ರಾತ್ರಿ ಆತನು ಕುಂಜವನಕ್ಕೆ ಹೋಗಬೇಕೆಂದು ನಿಶ್ಚಯಿಸಿದನು. ಸಂಗಡ ಯಾರನ್ನು ಕರಕೊಂಡು ಹೋಗಬೇಕೆಂದು ಆತನು ಆಲೋಚಿಸುತ್ತಿರಲು, ರಣಮಸ್ತಖಾನನು ಬಂದನೆಂದು ಸೇವಕನು ಅರಿಕೆ ಮಾಡಿಕೊಂಡನು. ಕೂಡಲೇ ರಾಮರಾಜನು ಆತನನ್ನು ಬರಮಾಡಿಕೊಳ್ಳಲು, ಅವರಿಬ್ಬರ ನಡುವೆ ಹಿತಗೋಷ್ಟಿ ಆರಂಭವಾಯಿತು.
ಈ ಹೊತ್ತಿನವರೆಗೆ ಇವರಿಬ್ಬರ ಭೆಟ್ಟಿಯು ಹಲವು ಸಾರೆ ಆಗಿತ್ತು ; ಆದರೆ ಇಂದಿನ ಭೆಟ್ಟಿಯಲ್ಲಿ ರಣಮಸ್ತಖಾನನನ್ನು ನೋಡಿ ರಾಮರಾಜನ ಅಂತಃಕರಣವು ವಾತ್ಸಲ್ಯ ಪೂರ್ಣವಾದಂತೆ, ಬೇರೆ ಯಾವ ಕಾಲದಲ್ಲಿಯೂ ಆಗಿದ್ದಿಲ್ಲ, ರಾಮರಾಜನು ರಣಮಸ್ತಖಾನನನ್ನು ಬಿಗಯಾಗಿ ಅಪ್ಪಿಕೊಳ್ಳಬೇಕೆಂದು ಮಾಡಿದನು. ಆತನು ವಾತ್ಸಲ್ಯಪೂರ್ಣ ದೃಷ್ಟಿಗಳಿಂದ ರಣಮಸ್ತಖಾನನನ್ನು ಎವೆಯಿಕ್ಕದೆ ನೋಡಹತ್ತಿದನು. ಇದನ್ನು ನೋಡಿ ರಣಮಸ್ತಖಾನನ ಮನಸ್ಸಿಗೆ ಹ್ಯಾಗೆ ಹ್ಯಾಗೋ ಆಯಿತು. ನಾನು ತನ್ನನ್ನು ಬಂದು ಕೂಡಿದ್ದರಿಂದಲೇ ರಾಮರಾಜನಿಗೆ ಇಷ್ಟು ಸಂತೋಷವಾಗಿರುವದೆಂದು ರಣಮಸ್ತಖಾನನು ತರ್ಕಿಸಿದನು. ಅದರ ಹೊರತು ಬೇರೆ ಕಾರಣವು ರಣಮಸ್ತಖಾನನಿಗೆ ತೋಚಲಿಲ್ಲ. ರಾಮರಾಜನು ಈಪರಿ ತನ್ನನ್ನು ಪ್ರೀತಿಸುವದನ್ನು ನೋಡಿ ರಣಮಸ್ತಖಾನನು ಬಹಳ ಸಂತೋಷಪಟ್ಟನು. ರಾಮರಾಜನು ತನ್ನನ್ನು ಪ್ರೀತಿಸಿದಷ್ಟು ಹಿತವೆಂದು ತಿಳಿದು ಆತನು ರಾಮರಾಜನನ್ನ ಕುರಿತು-ತಾವು ಈ ಪರಿ ನನ್ನನ್ನು ಪ್ರೀತಿಸುವದನ್ನು ನೋಡಿ ನನಗೆ ಆಗಾಗ್ಗೆ ಬಹು ಚಮತ್ಕಾರವಾಗುತ್ತದೆ ನಿಜವಾಗಿ ನೋಡಿದರೆ ತನ್ನ ಒಡೆಯನ ಮೇಲೆ ತಿರುಗಿಬಿದ್ದವ, ಶತ್ರುಪಕ್ಷದ ಚಾಕರಿಗೆ ನಿಂತವನ ಸಂಗಡ ಬಹು ಎಚ್ಚರದಿಂದ ನಡೆಯಬೇಕಾಗುವದು ; ಯಾಕೆಂದರೆ ತನ್ನ ಒಡೆಯನ ಮೇಲೆ ತಿರುಗಿಬಿದ್ದವ ಪ್ರಸಂಗದಲ್ಲಿ ತನ್ನ ಮೇಲೆಯೂ ಯಾಕೆ ತಿರುಗಿ ಬೀಳಲಿಕ್ಕಿಲ್ಲೆಂಬದನ್ನು ಆಲೋಚಿಸಬೇಕಾಗುವುದು; ಆದ್ದರಿಂದ ಅಂಥ ಪಿತೂರಿಯ ಮನುಷ್ಯನನ್ನು ಹೇಳಿ ಕೇಳಿ ನಾಲ್ಕು ಮೊಳ ದೂರದಲ್ಲಿಯೇ ಇಡಬೇಕಾಗುತ್ತದೆ. ಹೀಗಿದ್ದು ನೀವು ನನ್ನನ್ನು...... ಎಂದು ನುಡಿಯುತ್ತಿರಲು, ರಾಮರಾಜನು ನಡುವೆ ಬಾಯಿ ಹಾಕಿ ಛೇ, ಛೇ! ಖಾನಸಾಹೇಬ, ನೀವು ಇಂಥ ವಿಚಾರವನ್ನು ಮನಸ್ಸಿನಲಿ ತರಕೂಡದು. ನಾನಂತು ನಿಮ್ಮನ್ನು ನನ್ನ ಅಂಗರಕ್ಷರನ್ನಾಗಿ ನಿಯಮಿಸಬೇಕೆಂದು ಮಾಡಿದ್ದೇನೆ. ಅದು ತಮ್ಮ ಮನಸ್ಸಿಗೆ ಬಂದರೆ ಬಹಳ ನೆಟ್ಟಗಾಗುವದು ತಾವು ಯಾವಾಗಲೂ ನನ್ನ ಬಳಿಯಲ್ಲಿ ಬೇಕೆಂತಲೇ ನಾನು ಇಚ್ಚಿಸುವೆನು. ನೀವು ಒಪ್ಪಿಕೊಳ್ಳುವದೊಂದೇ ತಡ, ನಮ್ಮ ಅಂಗರಕ್ಷಕರಾದಿರೆಂದು ತಿಳಿಯಿರಿ; ಅನ್ನಲು, ರಣಮಸ್ತಖಾನನು-ಸರಿ ಸರಿ ! ಇದೇನು ಕೇಳುವದು? ನಾನು ತಮ್ಮ ನೌಕರನಿರಲು, ತಮ್ಮ ಅಪ್ಪಣೆಗೆ ಹೊರಗಾಗುವೆನೆ? ತಾವು ಒಪ್ಪಿಸಿದ ಕೆಲಸವನ್ನು ಮಾಡಲಿಕ್ಕೆ ನಾನು ಸಿದ್ಧನಿದ್ದೇನೆ. ತಮ್ಮ ಅಪ್ಪಣೆಯಂತೆ ನಾನು ನಡಕೊಳ್ಳತಕ್ಕವನು. ನಾನು ತಮ್ಮವನು, ಅಂದಬಳಿಕ ಹೆಚ್ಚಿಗೆ ನಾನೇನು ಹೇಳಲಿ? ಎಂದು ಕೇಳಿದನು. ಅದಕ್ಕೆ ರಾಮರಾಜನು-ಛೇ, ಛೇ, ಛೇ! ನನ್ನ ನೌಕರನೆಂದು ಯಾಕೆ ಅನ್ನುತೀರಿ; ನೀವು ನನ್ನ ನೌಕರರಲ್ಲ, ತರುಣಮಿತ್ರರಿರುತ್ತೀರಿ. ಲೋಕೋಪಚಾರಾರ್ಥವಾಗಿ ನಿಮ್ಮ ಹೆಸರನ್ನು ಯಾವದಾದರೂ ಅಧಿಕಾರದಲ್ಲಿ ಯೋಜಿಸಬೇಕಾಗಿರುವದು; ಆದರೆ ನಿಮಗೆ ನನ್ನನ್ನು ಕೂಡಿದ ಬಗ್ಗೆ ಪಶ್ಚಾತ್ತಾಪವಾಗುತ್ತಿದ್ದರೆ, ಮತ್ತು ಈತನ ಸಂಗತಿಯಿಂದ ನಾನು ಕೆಟ್ಟೆನೆಂದು ನೀವು ಭಾವಿಸುತ್ತಿದ್ದರೆ, ನನಗೆ ನೀವು ಸ್ಪಷ್ಟವಾಗಿ ಹೇಳಿರಿ; ಸಂಕೋಚಪಡಬೇಡಿರಿ. ನಿಮಗೆ ನಾನು ಯಾವ ಬಗೆಯ ಉಪದ್ರವವನ್ನೂ ಕೊಡುವದಿಲ್ಲ. ನಿಮ್ಮ ಮನಸ್ಸಿನೊಳಗಿನ ಆ ವಿಚಾರಗಳು ನಷ್ಟವಾಗುವವರೆಗೆ ಸ್ವಸ್ಥವಾಗಿ ಇರಬೇಕೆಂದು ನಾನು ನಿಮಗೆ ಹೇಳತಕ್ಕವನು.
ಈ ಮೇರೆಗೆ ರಾಮರಾಜನ ಹಾಗೂ ರಣಮಸ್ತಖಾನನ ಸಂಭಾಷಣಗಳಾದ ಬಳಿಕ ಕೆಲವು ಹೊತ್ತಿನ ಮೇಲೆ ರಣಮಸ್ತಖಾನನು ರಾಮರಾಜನ ಅಂಗರಕ್ಷಕನಾಗಲು ಒಪ್ಪಿಕೊಂಡು, ಆತನು ರಾಮರಾಜನನ್ನು ಕುರಿತು-ಮಹಾರಾಜರೇ, ನೀವು ಈಗ ನನಗೊಪ್ಪಿಸಿದ ಚಾಕರಿಯು ನನಗೆ ಬಹಳ ಸೇರುತ್ತದೆ; ಯಾಕೆಂದರೆ, ನಾನು ಅಂಗರಕ್ಷಕನಾಗಿರುವಾಗ ನಾನು ಮಾಡುವ ಕೆಲಸವು ಮಹಾರಾಜರ ಕಣ್ಣಿಗೆ ಬಿದ್ದಂತೆ, ಬೇರೆ ಯಾವ ಪ್ರಸಂಗದಲ್ಲಿಯೂ ನನ್ನ ಕೆಲಸವು ಕಣ್ಣಿಗೆ ಬೀಳಲಾರದು; ಆದರೆ ನಾನು ತಮ್ಮ ಕಡೆಗೆ ಬಂದಕೂಡಲೇ ನನ್ನನ್ನು ಹೀಗೆ ಅಂಗರಕ್ಷಕನಾಗಿ ನಿಯಮಿಸಿದರೆ, ನಿಮ್ಮ ಜನರು ಏನಂದಾರೆಂಬುದನ್ನು ತಾವು ವಿಚಾರ ಮಾಡತಕ್ಕದ್ದು. ನಾನು ಆರಂಭದಿಂದಲೇ ಅವರ ಕಣ್ಣಲ್ಲಿ ಒತ್ತುವದು ಸರಿಯಲ್ಲ ಎಷ್ಟಾದರೂ ನಾನು ಪಿತೂರಿಯಾಗಿ ಬಂದವನು; ಅಂದಬಳಿಕ ಒಮ್ಮೆಲೆ ಎಲ್ಲರು ನನ್ನ ಮೇಲೆ ಹ್ಯಾಗೆ ವಿಶ್ವಾಸವಿಟ್ಟಾರು? ಆದ್ದರಿಂದ ಕ್ರಮಕ್ರಮವಾಗಿ ನನ್ನನ್ನು ಈ ಕೆಲಸದಲ್ಲಿ ಯೋಜಿಸಬೇಕೆಂದು ನಾನು ಹೇಳಿಕೊಳ್ಳುವೆನು. ಸದ್ಯಕ್ಕೆ ನಾನು ನಿಮ್ಮ ಸೈನ್ಯದೊಳಗಿನ ಪಠಾಣ ಜನರ ಗುರುತು ಪರಿಚಯ ಮಾಡಿಕೊಳ್ಳುವೆನು. ಸೈನ್ಯದಲ್ಲಿ ಪಠಾಣರ ಸಂಖ್ಯೆಯು ಎಷ್ಟು ಇರುವದು? ಅವರ ವ್ಯವಸ್ಥೆಯು ಹ್ಯಾಗಿರವದು? ಅವರ ಗೊಣಗುಟ್ಟುವಿಕೆಯೂ, ತಕರಾರುಗಳೂ ಏನಾದರೂ ಇರುವವೋ ಹ್ಯಾಗೆ? ಅವರು ಬಹುದಿವಸ ಕೆಲಸವಿಲ್ಲದೆ ಕುಳಿತುಕೊಂಡಿರುವದರಿಂದ ಅವರಲ್ಲಿ ಆಲಸ್ಯವೂ, ಕೂಳಬಾಕತನವೂ ಸೇರಿರುವವೋ ಹ್ಯಾಗೆ? ಇವನ್ನು ಮೊದಲು ನಾನು ಪರೀಕ್ಷಿಸುವೆನು. ಬೇರೆ ನೌಕರರಂತೆ ನಾನು ದಿನಾಲು ಮಾಡಿದ ಕೆಲಸವನ್ನು ಹೇಳಲಿಕ್ಕೆ ತಮ್ಮ ಬಳಿಗೆ ಬರುತ್ತ ಹೋಗುವೆನು. ಹೀಗೆ ನಾನು ಬರುತ್ತಿರುವಾಗ ಮೆಲ್ಲಮೆಲ್ಲನೆ ನನ್ನನ್ನು ಏರಿಸುತ್ತ ಕಡೆಗೆ ಈ ಕೆಲಸವನ್ನು ಕೊಟ್ಟರೆ ನೆಟ್ಟಗಾಗುವುದು, ಇದರ ಮೇಲೆ ತಮ್ಮ ಅಪ್ಪಣೆಯಂತೆ ನಾನು ನಡೆದುಕೊಳ್ಳಲು ಸಿದ್ಧನಾಗಿರುವೆಂದು ನಾನು ಆಡಿತೋರಿಸುವ ಕಾರಣವಿಲ್ಲ ಎಂದು ಹೇಳಿದನು. ರಾಮರಾಜನು ರಣಮಸ್ತಖಾನನ ಈ ಮಾತುಗಳನ್ನು ಕೇಳಿ ಕೌತುಕಪಟ್ಟನು. ಈತನು ತಾರುಣ್ಯದಲ್ಲಿಯಾದರೂ ಒಳ್ಳೆಯ ವಿಚಾರವಂತನಿರುವನೆಂದು ತಿಳಿದು ಸಮಾಧಾನ ಪಟ್ಟನು. ಆತನು ನಕ್ಕು ರಣಮಸ್ತಖಾನನನ್ನು ಕುರಿತು-ಸರಿ ಸರಿ! ನೀವು ಹೇಳುವ ಉಪಾಯವೂ ಸರಿಯಾಗಿರುತ್ತದೆ. ಅದರಂತೆಯೇ ಈಗ ಮಾಡೋಣ. ನಮ್ಮ ಯಾವತ್ತು ಸೈನ್ಯ ಆಧಿಪತ್ಯವು ನಮ್ಮ ಬಂಧುವಿನಕಡೆಗಿರುವದೆಂಬದನ್ನು ನೀವು ಬಲ್ಲಿರಿ. ನೀವು ಈಗ ಹೋಗಿ ಅವರನ್ನು ಕಂಡು ಬರ್‍ರಿ. ಈವೊತ್ತಿನವರೆಗೆ ಆದ ನಮ್ಮ ನಿಮ್ಮ ವ್ಯವಹಾರವೆಲ್ಲ ಅವರಿಗೆ ಗೊತ್ತೇ ಇರುತ್ತದೆ. ಅವರ ಒಪ್ಪಿಗೆಯಿಂದಲೇ ನಾನು ನಿಮ್ಮೊಡನೆ ಆಲೋಚಿಸಿರುವೆನೆಂಬದು ಅವರ ಭೆಟ್ಟಿಗೆ ಹೋದಾಗ ನಿಮಗೆ ಗೊತ್ತಾಗಬಹುದು. ಸೈನ್ಯದ ಸ್ಥಿತಿಗತಿಗಳೆಲ್ಲ ಅವರಿಗೆ ಗೊತ್ತಿರುವದರಿಂದ ನೀವು ಅವಶ್ಯವಾಗಿ ಅವರನ್ನು ಕಾಣತಕ್ಕದ್ದು. ಇನ್ನು ನೀವು ನಡುವೆ ಎಂದಾದರೂ ಒಂದು ದಿನ ನನ್ನನ್ನು ಕಾಣಲಿಕ್ಕೆ ಬಾರದಿದ್ದರೂ ನಡೆಯಬಹುದು. ನಾವು ಬೇರೊಂದು ಕೆಲಸದಲ್ಲಿ ತೊಡಗುವವರಿದ್ದೇವೆ. ಎಂದು ಹೇಳೀ ರಾಮರಾಜನು ಆತನಿಗೆ ಹೋಗಲಪ್ಪಣೆಕೊಟ್ಟನು.
****