ಮುಡಿ
ಇದು ತಪ್ಪೆಂದೂ ಹೇಳುವಂತಿಲ್ಲ. ಔಚಿತ್ಯಕ್ಕೂ ಕಲಾತ್ಮಕತೆಗೂ ಅದು ಹೊಂದಬೇಕು.
ನಮ್ಮ ಕಾಣುವಿಕೆಯೆಂಬುದಾಗಲಿ, ವೈಚಾರಿಕತೆಯೋ, ಸೃಜನಶೀಲತೆಯೋ ಏನೇ ಹೇಳೋಣ-
ಅದನ್ನು ಹೊರುವ ಸಾಮರ್ಥ್ಯ ಕೃತಿಗೆ, ಪ್ರಸಂಗಕ್ಕಿರಬೇಕು. ಇದು ಪ್ರಾಯಃ ವಿವರಣೆಗಿಂತಲೂ,
ಅನುಭವಕ್ಕೆ ದಕ್ಕುವ, ನಮ್ಮ ನಮ್ಮ ಕಲಾದೃಷ್ಟಿಯ ಮೌಲ್ಯದ ಪ್ರಶ್ನೆ. ಕಲಾ ಪ್ರಾಮಾಣಿಕತೆಯ
ಪ್ರಶ್ನೆಯೂ ಹೌದು.
ಅರ್ಥವು ಪ್ರದರ್ಶನಕ್ಕೆ ನಿಲ್ಲುವುದಿಲ್ಲ. ಅದರಾಚೆ ಹೋಗುತ್ತದೆ. ರಸಿಕ
ಶೋತೃವಿನಲ್ಲಿ ಅದು ಅರ್ಥಗಳನ್ನು ಪ್ರೇರಿಸುತ್ತದೆ, ನಿರ್ಮಿಸುತ್ತದೆ. ಆದುದರಿಂದಲೇ -
ಒಂದು ಪ್ರದರ್ಶನದ ಕುರಿತು, ಪ್ರೇಕ್ಷಕ ಮಿಮರ್ಶಕರಲ್ಲಿ ವಿಭಿನ್ನ ದೃಷ್ಟಿ ಕೋನಗಳ ಚರ್ಚೆ
ನಡೆಯುತ್ತದೆ. ಈ ಚರ್ಚೆ ಕೂಡ ಒಂದು ಅರ್ಥ.
ಯಾರ ಅರ್ಥ ಯಾವುದು ?
ಪ್ರಸಂಗದ ಪದಕ್ಕೂ, ಶಬ್ದಕ್ಕೂ, ಪಾತ್ರಕ್ಕೂ ಒಟ್ಟು ಪ್ರಸಂಗಕ್ಕೂ ಅರ್ಥಕಲ್ಪನೆಗಳನ್ನು
ಆ ಆ ಪದ್ಯದ ಪಾತ್ರಧಾರಿ ಮಾತ್ರ ಮಾಡುವುದಲ್ಲ. ಸಂಪ್ರದಾಯ ಮಾಡಿಟ್ಟ ಅರ್ಥವೊಂದುಂಟು.
ಉದಾ- ಬಲರಾಮನೆಂದರೆ ಮುಗ್ಧ, ಶರಸೇತು ಬಂಧನವೆಂಬ ಕಥಾನಕದ ಆಶಯವು ಅರ್ಜುನ
ಗರ್ವಭಂಗ ಇತ್ಯಾದಿ. ಇದು ಸರಿ ಆಗಬಹುದು. ಆದರೆ, ಹಾಗೇ ಆಗಬೇಕೆಂದಿಲ್ಲ ಅಷ್ಟೆ.
ಜೊತೆಗೆ ಭಾಗವತ, ಸಹ ಪಾತ್ರಧಾರಿ ಮೊದಲಾದವರು ಅರ್ಥಕಲ್ಪನೆ ಮಾಡುತ್ತ, ಸೃಜಿಸುತ್ತ
ಹೋಗುತ್ತಾರೆ. ಹಾಗಾಗಿಯೇ ಸಂವಾದಗಳಿಂದಾಗಿ, ಅರ್ಥಗಾರಿಕೆಯು ಚಿತ್ರ ವಿಚಿತ್ರವಾದ
ದಿಕ್ಕುಗಳನ್ನೂ, ವಿವರ, ವಿನ್ಯಾಸಗಳನ್ನೂ ಪಡೆಯುತ್ತ ಹೋಗುತ್ತದೆ. ಇದೂ ಅರ್ಥಸ್ವಾರಸ್ಯ.
ಯಾರ ಅರ್ಥ, ಯಾವುದು? ಎಂಬ ಪ್ರಶ್ನೆ ಪ್ರಸ್ತುತವಾಗುತ್ತದೆ.
ಆಕರದ ಬಳಕೆ
ಯಕ್ಷಗಾನ ಅರ್ಥಗಾರಿಕೆಗೆ ಸಂಬಂಧಿಸಿದ ಚರ್ಚೆಗಳಲ್ಲಿ ಬಹುಮುಖ್ಯವಾಗಿ
ಪ್ರಸ್ತಾವಿತವಾಗುವ ಒಂದು ಸಂಗತಿ ಎಂದರೆ-ಆಕರದ ಬಳಕೆ ಮತ್ತು ಅದರ ಅರ್ಥವನ್ನು
ಪಾತ್ರವು ಪರಿಭಾವಿಸುವ ರೀತಿಗೆ ಸಂಬಂಧಿಸಿದ್ದು. ಈ ಪಾತ್ರ ಹೀಗೆ ಹೇಳಬಹುದೆ? ಈ
ವಿಷಯವನ್ನು ಅಲ್ಲಿ ತರಬಹುದೆ?ಇತ್ಯಾದಿಯಾಗಿ ಒಂದು ಸಮಸ್ಯೆಯಾಗಿ ಇದು
ಚರ್ಚೆಗೊಳ್ಳುತ್ತ ಇರುತ್ತದೆ. ಇಂತಹ ಜಿಜ್ಞಾಸೆಗಳ ಸಾಧ್ಯತೆಗಳು ಹಲವು ಇವೆ. ಇದರಲ್ಲಿ
ಗೊಂದಲಗಳೂ ಉಂಟು. ಇಲ್ಲಿ ಗಮನಿಸಬೇಕಾದ ಮರ್ಮವೆಂದರೆ ಒಟ್ಟು ಅಂದ, ಪರಿಣಾಮ
ಮತ್ತು ಸಮಗ್ರವಾದ ಪ್ರದರ್ಶನದ ರೂಪಕ್ಕೆ ಯಾವುದೇ ಒಂದು ಪ್ರಶ್ನೆ, ಉತ್ತರ, ಅಥವಾ
ಒಂದು ವಿಷಯ ಹೊಂದುತ್ತದೆಯೆ ಎಂಬ ವಿಚಾರವೆ ಮುಖ್ಯ.