ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತಾಳಮದ್ದಳೆಯ ಕ್ರಿಯಾತ್ಮಕತೆ / ೪೯

ಇಲ್ಲೂ ಇವೆ. ರಂಗಕ್ರಿಯೆ (action) ಮತ್ತು ಸರಳವಾದ ತಂತ್ರವೂ ಇದೆ. ಯುದ್ಧ, ಪ್ರಯಾಣಗಳಿಗೆ ಹಿಮ್ಮೇಳದ ಚಿಕ್ಕ ಬಿಡ್ತಿಗೆಗಳು, ಮಾತಿನ ಭಾರಕ್ಕೆ, ಭಾವಕ್ಕೆ ಪೂರಕವಾಗಿ ಹಿಮ್ಮೇಳದ ನುಡಿತದ ಗತ್ತುಗಳೂ ಇವೆ. ಇದು ಕ್ರಿಯೆಗೆ ಸಹಕಾರಿ. ಕಲಾವಿದನ ಪ್ರತಿಭೆ, ತಾಳಮದ್ದಳೆಯ ಚೌಕಟ್ಟು, ನಿರ್ವಹಣಾ ತಂತ್ರ, ಪ್ರೇಕ್ಷಕ ವರ್ಗ ಇವೆಲ್ಲ ಸಮತೋಲದ ಹದದಲ್ಲಿದ್ದಾಗ ತಾಳಮದ್ದಳೆ ಸಫಲವಾಗುತ್ತದೆ.

೧೦

ತಾಳಮದ್ದಳೆಯ ವಸ್ತುವಿನ ಒಟ್ಟು ನಿರ್ವಹಣೆಯು ಎರಡು ಬಗೆಯ ಒತ್ತಡಗಳನ್ನು (tensions) ಎದುರಿಸುತ್ತ ಇರುತ್ತದೆ. ಈ ಒತ್ತಡಗಳ ಮಧ್ಯೆಯೇ ಒಳ್ಳೆಯ ಕಲೆಗಾರಿಕೆ ರೂಪುಗೊಳ್ಳುವುದು. ಕಥೆ ಮತ್ತು ಪ್ರಸಂಗ ಇಲ್ಲಿ ಆಧಾರವಷ್ಟೆ, ನಿರ್ವಹಣೆಯಲ್ಲಿ ಕಲಾವಿದನು ಕೇವಲ ಕಥಾನಿರೂಪಣೆಗಿಂತ ಭಿನ್ನವಾಗಿರಲು, ಹೊಸತನಕ್ಕಾಗಿ ತುಡಿಯು ತ್ತಿರುತ್ತಾನೆ. ಜತೆಗೆ ಕತೆಯ ಜತೆ ಸಾಗುತ್ತಲೂ ಇರುತ್ತಾನೆ. ಇದನ್ನೆ 'ಪ್ರತಿಮುಖ ಒತ್ತಡ' ಮತ್ತು 'ಅಭಿಮುಖ ಒತ್ತಡ' ಎನ್ನಬಹುದು. ಇದೊಂದು ಸತತ ಶೃಂಖಲಾಕ್ರಿಯೆಯಂತೆ ಇರುತ್ತದೆ. ಇದನ್ನು ವಾಣಿಜ್ಯ ಶಾಸ್ತ್ರದ ಪರಿಕಲ್ಪನೆಯೊಂದಕ್ಕೆ ಹೋಲಿಸಬಹುದು :

ವಾಣಿಜ್ಯದಲ್ಲಿ ಬೆಲೆಗಳಿಗೆ ಸಂಬಂಧಿಸಿ, ಸಹಜ ಬೆಲೆ (normal price) ಮತ್ತು ಮಾರುಕಟ್ಟೆ ಬೆಲೆ (market price) ಎಂಬ ಕಲ್ಪನೆ ಗಳಿವೆ. ವಸ್ತುವಿನ ಬೆಲೆ ಯಾವಾಗಲೂ 'ಸಹಜ'ವಾಗಿರಲು ಯತ್ನಿಸು ತ್ತದೆ. ಆದರೆ ಅದನ್ನು ಬೇರೆ ಬೇರೆ ಆರ್ಥಿಕ, ರಾಜಕೀಯ, ಸಾಮಾಜಿಕ ಒತ್ತಡಗಳು, ಆಚೀಚೆ ಎಳೆಯುತ್ತ ಇರುತ್ತವೆ. ಒಂದು ಚೆಂಡು ಮಲ್ಲಿಗೆ ಹೂವಿಗೆ ಸಹಜ ಬೆಲೆ ನಾಲ್ಕು ರೂಪಾಯಿ ಎಂದಿಟ್ಟುಕೊಂಡರೆ, ಅದು ನಾಲ್ಕು ರೂ. ಆಗಿರುವುದು ವಿರಳ. ಕೆಲವೊಮ್ಮೆ ಎರಡು, ಕೆಲವೊಮ್ಮೆ ಇಪ್ಪತ್ತೈದು ಆಗುತ್ತದೆ. ಇದಕ್ಕೆ ಹಲವು ಕಾರಣಗಳಿರುತ್ತವೆ. ಹೀಗೆ ಬೆಲೆ ಸಹಜದಿಂದ, ಮಾರುಕಟ್ಟೆಯ ವಾಸ್ತವಕ್ಕೂ, ಅಲ್ಲಿಂದ ಅದರ ನೈಜ ಬೆಲೆಗೂ ತೊನೆಯುತ್ತ ಇರುತ್ತದೆ. ಹಾಗೆಯೇ ಯಕ್ಷಗಾನದ ಮಾತುಗಾರಿಕ ಮೂಲಕ್ಕೂ, ಕಲ್ಪನಾತ್ಮಕ ರಚನೆಗೂ ಜಿಗಿಯುತ್ತ ಇರುತ್ತದೆ. ಆದರೆ ಅದರ ಅಂತಃಸ್ರೋತ ಮೂಲ ಕಥಾನಕವೇ ತಾನೆ? ಹೀಗೆ ಒತ್ತಡಗಳ ಪ್ರಕ್ರಿಯೆಯೇ ಪ್ರವೃತ್ತಿ (trend)ಗಳ ಸೃಷ್ಟಿಗೆ ಕಾರಣ.