ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಆಕರ-ಪಠ್ಯ - ನಿರ್ವಹಣೆ

ಇದನ್ನು ಇಟ್ಟುಕೊಂಡು ಅವಳು ಘೋರ ರೂಪದಲ್ಲಿ ಶೂರ್ಪನಖಿ, ಸುಂದರ ರೂಪದಲ್ಲಿ ಚಂದ್ರನಖಿ ಎಂದು ಸಮನ್ವಯಪಡಿಸಬಹುದು ಹೊರತು, ಅವಳು ಚಂದ್ರನಖಿಯೇ ಎಂದು ಹೇಳಲಾಗದಷ್ಟೇ?

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ, ಪ್ರಸಂಗವು ನೀಡುವ ಕಥಾಸರಣಿ (storyline), ಒಟ್ಟು ಪರಂಪರೆಯು ನೀಡುವ ಚೌಕಟ್ಟು ಹಂದರ (skeleton) ಮತ್ತು ವಿಶಿಷ್ಟ ಸಂದರ್ಭವು ನೀಡುವ ಚೌಕಟ್ಟು (frame) ಇವುಗಳ ಹೊಂದಾಣಿಕೆಯ ಔಚಿತ್ಯ ಮುಖ್ಯವಾದದ್ದು. ವಿವರಗಳನ್ನು ಬೇಕಾದಂತೆ ಉಚಿತವಾಗಿ ಅಳವಡಿಸಬಹುದು. ಹಂದರ ಕಥಾಸರಣಿ, ಚೌಕಟ್ಟು ಇವು ಒಂದೇ ಅಲ್ಲ ಎಂಬುದನ್ನು ನಾವು ಗಮನಿಸಬೇಕು. (ಈ ಪರಿಭಾಷೆಯಲ್ಲಿ, ಈ ವಿವೇಚನೆಯನ್ನು ನನಗೆ ಸೂಚಿಸಿದವರು ಡಾ| ಬಿ. ಎ. ವಿವೇಕ ರೈ ಅವರು). ಈ ತ್ರಿವಿಧವಾದ ಆಧಾರಭೂಮಿಗೆ, ವಿವರಗಳನ್ನು ತರುವಾಗ, ಕಲಾವಿದನ ಉದ್ದೇಶ, ಕಥೆಯ ಅರ್ಥೈಸುವಿಕ (interpretation) ಇವುಗಳಿಗೆ ಮಹತ್ವ. ಒಬ್ಬ ಅರ್ಥದಾರಿಯ ಮಾತಾಡುವ 'ಅರ್ಥ'ವು ಅನುವಾದವಲ್ಲ. ಅದು 'ಅರ್ಥ' ಅವನಿಗೆ ಆಗುವ 'ಅರ್ಥ', ಹಾಗಾಗಿ ಅದು ಆಕರ ನಿಷ್ಠುರ ವಾಗಿದ್ದೂ, ನವೀನವೇ, ಸೃಷ್ಟಿಶೀಲವೇ.

ಒಂದು ಪ್ರಸಂಗದ ಕಥೆ, ಅದರ ಪೂರ್ವಕಥೆಗಳಿಗೆ ಸಂಬಂಧಿಸಿದ ವಿಚಾರವನ್ನು ಈಗ ಪರಿಶೀಲಿಸಬಹುದು. ಹಿಂದಿನ ಕತೆಯನ್ನು, ಘಟನೆ ಯನ್ನು ಉಲ್ಲೇಖಿಸಿ ಮಾತಾಡುವಾಗ, ಯಾವ ಧೋರಣೆಯನ್ನು ಅನುಸರಿಸಬೇಕು? ಯಾವ್ಯಾವ ಪಾತ್ರಕ್ಕೆ ಹಿಂದಿನ ಕತೆ ಎಷ್ಟೆಷ್ಟು ತಿಳಿದಿದೆ? ಎಂದು ತಿಳಿಯಲು ಪ್ರಸಂಗದಲ್ಲಾಗಲಿ, ಕಾವ್ಯಗಳಲ್ಲಾಗಲಿ ಸ್ಪಷ್ಟವಾದ ನಿರ್ದೇಶನವಿಲ್ಲ. ಕಾವ್ಯರಚನೆಯಲ್ಲಿ ಅದು ಅಷ್ಟು ಪ್ರಧಾನವೂ ಇಲ್ಲ. ಅಲ್ಲಲ್ಲಿ ಸಾಂದರ್ಭಿಕವಾಗಿ, ಹಿಂದಣ ವಿಚಾರವನ್ನು ಪಾತ್ರಗಳು ಉಲ್ಲೇಖಿಸುತ್ತವೆ. ಆದರೆ, ಯಕ್ಷಗಾನದಲ್ಲಿ, ಸಾಮಾನ್ಯ ವಾಗಿ, ವಿಶಿಷ್ಟ ಸಂದರ್ಭಗಳನ್ನುಳಿದು- ಎಲ್ಲ ಪಾತ್ರಗಳಿಗೂ ಹಿಂದಣ ಕತೆ ಗೊತ್ತಿದೆ ಎಂದು ಭಾವಿಸಬೇಕಾದುದು, ಪರಂಪರೆ, ಅದು ಉಚಿತವೂ ಕೂಡ ಆಗಿದೆ.