ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ವಿಮರ್ಶೆಯ ನೆಲೆಗಳು / ೧೦೯

ರಸಸಂವಾದ... ಇಲ್ಲಿ ಭಕ್ತಿ, ಆಧ್ಯಾತ್ಮಿಕತೆ, ಧರ್ಮ, ನೀತಿಗಳೂ ಹೊಸ ಆಶಯಗಳಾಗಿ ನೋಡಬಹುದು.
“ನೇಪಥ್ಯ (ಚೌಕಿ), ರಂಗವೇದಿಕೆ ಮತ್ತು ಬಯಲು (ಪ್ರೇಕ್ಷಾಗೃಹ) ಗಳ ತ್ರಿಕೂಟ ಸಾಮರಸ್ಯಗಳನ್ನು ಗುರುತಿಸುವುದು ವಿಮರ್ಶೆಯ ಮುಖ್ಯ ನೆಲೆ. ಹಾಗೆಯೇ ಹಿಮ್ಮೇಳ ಮುಮ್ಮೇಳಗಳ ಅನುರೂಪ್ಯವನ್ನು, ವಿಶಿಷ್ಟತೆ ಕೆಡದಂತೆ ಸಾಧಿಸುವ ಸಾಮರಸ್ಯದ ಅರಿವು ವಿಮರ್ಶೆ'. ಇಲ್ಲಿ ಚೌಕಿ, ಬಯಲು, ರಂಗ ಎಂಬವುಗಳನ್ನು ಈ ವಿಶಾಲಾರ್ಥದಲ್ಲಿ ಕಲೆಯ ಶೈಲಿ, ಹಿನ್ನೆಲೆ, ದ್ರವ್ಯ, ಪ್ರೇರಣೆ (ಚೌಕಿ), ಪ್ರದರ್ಶನ, ಅದರ ಸೂಕ್ಷ್ಮ ಗಳು (ವೇದಿಕೆ) ಮತ್ತು ಸಾಮಾಜಿಕರು (ಬಯಲು) ಎಂದು ತೆಗೆದು ಕೊಂಡಿದೆ.

ಪಂಥಾಹ್ವಾನ

ಇಂದು ಯಕ್ಷಗಾನವು ಬದಲಾವಣೆಯ ಹಂತದಲ್ಲಿ, ಒಂದು ಬಗೆಯಿಂದ ಸೂಕ್ತ ಮಾರ್ಗದರ್ಶನದ ಅಭಾವದಿಂದ ಗೊಂದಲದಲ್ಲಿದೆ. ಪ್ರತಿಭೆಯೂ, ಸಾಹಸವೂ, ವಿಸ್ತರಣಶೀಲತೆಯೂ ಈ ರಂಗದಲ್ಲಿ ಸಾಕಷ್ಟು ಇವೆ. ಅವುಗಳನ್ನು ಕೇಂದ್ರೀಕರಿಸಿ, ಶ್ರೀಮಂತವಾಗಿ ಬೆಳೆದು ನಿಂತಿರುವ ಅದರ ಸೌಂದರ್ಯವು ಕೆಡದಂತೆ ಬೆಳೆಸುವ ಕೆಲಸ ಆಗಬೇಕಾಗಿದೆ. ವಿಮರ್ಶಕನ ಕರ್ತವ್ಯ ಇಲ್ಲಿ ಬಹಳವಿದೆ.
ಯಕ್ಷಗಾನ ವಿಮರ್ಶೆಗೆ ಇಂದು ವೇದಿಕೆ ದೊರಕಿದೆ. ಪತ್ರಿಕೆಗಳು ಇದಕ್ಕೆ ಪ್ರಾಶಸ್ತ್ಯ ನೀಡಿವೆ. ಗೋಷ್ಠಿ, ಕಮ್ಮಟ, ಶಿಬಿರಗಳನ್ನು ಸಂಘಟಿಸುವವರಲ್ಲಿ ಈ ಕಲೆಯ ಒಳಿತಿನ ಸದಾಶಯವಿದೆ. ಈ ಅವಕಾಶ ಗಳನ್ನು ಬಳಸಿ ವಿಮರ್ಶೆ ಬೆಳೆಯಬೇಕು. ಕಲೆಯು ವ್ಯವಸ್ಥಿತ ಪ್ರಗತಿ ಯನ್ನು ಸಾಧಿಸಬೇಕು.




(ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ ಇವರು ಸಂಘಟಿಸಿದ ಯಕ್ಷಗಾನ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ. 88-09-0552. ಪ್ರಕಟನೆ: ಯಕ್ಷಸುಧಾ ೧೯೯೬)