ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೨ / ವಾಗರ್ಥ

  • ಲಭ್ಯ ಕಲಾವಿದರು, ಅವರಲ್ಲಿರುವ ತಜ್ಞತೆ
  • ಸೇರಿಸಿದ ಕಿಸೆ ಪದ್ಯಗಳು

ಹೀಗೆ ಪ್ರದರ್ಶನಕ್ಕಾಗಿ ಆರಿಸಿದ ಪಾಠಗಳೂ 'ಚರ'ವಾಗಿರುತ್ತವೆ. ಇದು ಪಾಠದ ಒಂದು ಹಂತ.

ಪ್ರಸಂಗದ ಮುನ್ನೆಲೆಯಲ್ಲಿ ಎರಡು ಹಂತದ ಪಠ್ಯಗಳಿವೆ. ಒಂದು, ಸಂಗೀತ ಪಠ್ಯ, ಇನ್ನೊಂದು ಅರ್ಥದ ಪಠ್ಯ. ರಾಗ ತಾಳಗಳ ಹಾಡುಗಬ್ಬ ವಾಗಿ ಬರೆಯಲ್ಪಡುವ ಪ್ರಸಂಗಗಳ ರಚನೆಗೂ, ಹಾಡುವಿಕೆಗೂ, ಸಂಪ್ರದಾಯವೆಂಬುದು ಸ್ಥೂಲವಾಗಿ ಇದೆ. ಹಾಗಾಗಿ ಸಂಗೀತ ಪಠ್ಯಕ್ಕೆ ಒಂದು ಸ್ಥೂಲ ರೂಪವು ಇದೆ. ಆದರೆ ಸಾಂದರ್ಭಿಕ ಮತ್ತು ವೈಯಕ್ತಿಕ ಮಟ್ಟದಲ್ಲಿ ವ್ಯತ್ಯಾಸಗಳೂ ಇವೆ. ಅಲ್ಲದೆ, ಸಾಹಿತ್ಯ ರೂಪದಲ್ಲಿರುವ ಪ್ರಸಂಗವು ಹಾಡಿನ ರೂಪದಲ್ಲಿ ಪ್ರದರ್ಶಿತವಾದಾಗ ಅದೊಂದು ಬೇರೆಯೆ ಪಠ್ಯವಾಗುತ್ತದೆ. ರಾಗ, ತಾಳ, ಹಿಮ್ಮೇಳ, ಭಾವ ಮತ್ತು ಹಾಡುಗಾರನ ವ್ಯಕ್ತಿ ವೈಶಿಷ್ಟ್ಯಗಳು ಸೇರಿ ಅದು ಒಂದು ಬೇರೆಯಾದ, ಸಂಗೀತ ಪಠ್ಯವಾಗಿ ಹೊರಬರುತ್ತದೆ. ಇಲ್ಲೂ ಹಲವಾರು ಸಾಧ್ಯತೆ ಗಳಿವೆ.

ಇನ್ನೊಂದು ಹಂತದಲ್ಲಿ ಅರ್ಥದಾರಿಯು (ಅಂತೆಯೇ ವೇಷ ಧಾರಿಯು) ಪ್ರಸಂಗವನ್ನು ಆಧರಿಸಿ ನಿರ್ಮಿಸುವ ನಾಟಕ, ಪಠ್ಯ, ರಂಗಕ್ರಿಯೆ, ಚಲನೆ ಮೊದಲಾದವುಗಳು ನಿರ್ಮಿಸುವ ಕಲಾಕೃತಿ ಇದೆ.

ಅರ್ಥಗಾರಿಕೆಯು ಒಂದು ಅನುವಾದವಲ್ಲ. ಅದು ಅರ್ಥವನ್ನು ನಿರ್ವಹಿಸುವಿಕೆ. ಇಲ್ಲಿ 'ಅರ್ಥ'ವೆಂಬ ಪದವೇ ಅರ್ಥಪೂರ್ಣ. ಪಾತ್ರ ಧಾರಿಯು ಹೇಳುವ (ತಾನೇ ರಚಿಸಿ ಮಾತನಾಡುವ) ಮಾತು ಅಥವಾ ಅರ್ಥವೆಂಬುದು, ಪ್ರಸಂಗದಲ್ಲಿರುವ ಅರ್ಥ ಎಂಬುದಕ್ಕಿಂತಲೂ, ಅದು ಆತನಿಗೆ ಹೊಳೆಯುವ ಅರ್ಥ ಅಥವಾ ಅವನಿಗೆ ಆಗುವ ಅರ್ಥ. ಇದು ಅವರವರ ಓದುವಿಕೆಯ ಫಲ. ಒಬ್ಬೊಬ್ಬ ಕಲಾವಿದನೂ ನಿರ್ಮಿಸುವ ಅರ್ಥ ಪಠ್ಯ ಒಂದೊಂದು. ಮಾತ್ರವಲ್ಲ ಒಬ್ಬನೇ ಕಲಾವಿದನು, ಒಂದೇ ಪ್ರಸಂಗದ, ಅದೇ ಪಾತ್ರವನ್ನು ನಿರ್ವಹಿಸಿದಾಗಲೂ ಅದುವೇ ಅರ್ಥದ ಪಠ್ಯ ಬೇರೆ ಬೇರೆ. ಪುನಃ ಕಲಾವಿದರ ತಂಡ ಅಥವಾ ಸಂಯೋಜನೆ ಬದಲಾದಾಗ ಪಠ್ಯವು ಬದಲಾಗುತ್ತದೆ. ಕಾರಣ, ಅರ್ಥಗಾರಿಕೆಯು ಹಲವರು ಸೇರಿ ನಿರ್ಮಿಸುವ ನಾಟಕವಿದ್ದಂತೆ.