ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ತುಳು ಚಳವಳಿ ಸಾಹಿತ್ಯ

ಈ ಜಿಲ್ಲೆಯ ಮುಖ್ಯ ಭಾಷೆಯಾದ ತುಳುವು ಆಡುನುಡುಯಾಗಿಯೇ ಇದ್ದು ಆಡಳಿತಕ್ಕೂ, ಸಾಹಿತ್ಯಕ್ಕೂ ಕನ್ನಡವೇ ಒಪ್ಪಿಕೊಂಡ ಸ್ಥಿತಿ ಇತ್ತು. ಆದರೆ 19ನೆಯ ಶತಮಾನದ ಕ್ರಿಶ್ಚಿಯನ್ ಮಿಶನರಿಗಳಿಂದ ಪ್ರಾರಂಭಗೊಂಡ ತುಳು ಸಾಹಿತ್ಯ ಚಳವಳಿ (ಉದಾ—ರೆ. ಮ್ಯಾನರನ ತುಳು ಶಬ್ದಕೊಶ) ಈ ಶತಮಾನದಲ್ಲಿ ಮುಂದುವರಿಯಿತು. 1920-30 ದಶಕಗಳಲ್ಲಿ ಸತ್ಯಮಿತ್ರ ಬಂಗೇರ ಎಸ್.ಯು. ಪಣಿಯಾಡಿ, ಪೊಳಲಿ ಶೀನಪ್ಪ ಹೆಗ್ಡೆ, ಬಡಕ ಬೈಲು ಪರಮೇಶ್ವರಯ್ಯನವರು ಈ ಕಾಲದ ಗಣ್ಯ ಲೇಖಕರು. ಇದೀಗ ವಿದ್ವಾನ್ ವೆಂಕಟರಾಜ ಪುಣಿಂಚತ್ತಾಯ ಗುರುತಿಸಿದ ತುಳು ಕಾವ್ಯಗಳು 'ಕಾವೇರಿ' 'ಭಾಗವತೊ' ಮತ್ತು 'ಭಾರತ' (ಇದು ಪ್ರಾಯ: 15-16ನೆಯ ಶತಮಾನದ್ದು) ತುಳು ಸಾಹಿತ್ಯದ ಚರಿತ್ರೆಗೆ ಪ್ರಾಚೀನತೆ ಒದಿಗಿಸಿವೆ. ದಿ। ಮಂದಾರ ಕೇಶವ ಭಟ್ಟರು ಬರೆದ 'ಮಂದಾರ ರಾಮಾಯಣ'ವು ತುಳುವಿನ ಆಧುನಿಕ ಯುಗದ ಮಹಾಕಾವ್ಯ, ಡಾ।ಯು.ಪಿ. ಉಪಾಧ್ಯಾಯರು ಸಂಪಾದಿಸಿದ ಆರು ಸಂಪುಟಗಳ ತುಳು, ತುಳು ಸಾಹಿತ್ಯ ಕ್ಷೇತ್ರದ ಇನ್ನೊಂದು ದೊಡ್ಡ ಸಾಧನೆ. ಡಾ। ಬಿ.ಎ. ವಿವೇಕ ರೈಗಳ ನೇತೃತ್ವದ ತುಳುಸಾಹಿತ್ಯ ಅಕಾಡೆಮಿ ತುಳು ಸಾಹಿತ್ಯ ಸಂಸ್ಕೃತಿಗಳ ಕುರಿತು ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ. ಅನೇಕ ತುಳು ಬರಹಗಾರರು ಸಾಹಿತ್ಯ ರಚನೆ ಮಾಡುತ್ತಿದ್ದು, ತುಳು ಸಂಘಟನೆಗಳು ಸಕ್ರಿಯವಾಗಿವೆ. 1940ರಿಂದ ರೂಪುಗೊಂಡ ತುಳು ಭಾಷಾ ಯಕ್ಷಗಾನ ಪ್ರಯೋಗಗಳು ಪ್ರಸಂಗ ರಚನೆ ರಂಗ ಪ್ರದರ್ಶನಗಳಲ್ಲಿ ದೊಡ್ಡ ಕೆಲಸ ಮಾಡಿವೆ. ಇವೆಲ್ಲವೂ ತುಳು ಭಾಷೆ- ಸಂಸ್ಕೃತಿಗಳು ತಮ್ಮ ಅಸ್ತಿತ್ವವನ್ನು ಕಂಡು ಕೊಂಡ ಸಾಂಸ್ಕೃತಿಕ ಅಸ್ಮಿತೆ ಮತ್ತು ವಿಕೇಂದ್ರಿಕರಣದ ಸಂಕೇತಗಳು ಫಲಗಳು.

ತುಳುವಿನಲ್ಲಿ ಮೌಖಿಕ ಪರಂಪರೆಯಲ್ಲಿರುವ 'ಕಬಿತ'ವೆಂಬ ಕವನಗಳು, ಪಾಡ್ಡನಗಳೆಂಬ ಮಹಾಕಾವ್ಯ ಖಂಡಕಾವ್ಯಗಳೂ ಸಾಕಷ್ಟಿದ್ದು ಇವುಗಳ ಸಂಶೋಧನೆ, ಪ್ರಕಾಶನದ ಕಾರ್ಯ ಆರಂಭವಾಗಿದೆ. ಈ ಕಾವ್ಯಗಳ ಪ್ರಕಾಶನವು ಸಂಸ್ಕೃತಿಯ ಚರಿತ್ರೆಯಲ್ಲಿ ಹೊಸ ಅಧ್ಯಾಯವೆನಿಸಲಿದೆ.

51