ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪ / ಕುಕ್ಕಿಲ ಸಂಪುಟ

ಕೂರ್ಪಾಸಕ್ಕೆ 'ದಗಲೆ' ಎಂದೂ 'ಚಲನ'ಕ್ಕೆ ಚಣವೆಂದೂ ನಮ್ಮಲ್ಲಿ ಹೇಳುತ್ತಾರೆ. ಮೊಣಕಾಲಿಂದ ಕೆಳಭಾಗಕ್ಕೆ ವಸ್ತ್ರವನ್ನು ಸುತ್ತಿ ಗೆಜ್ಜೆ ಕಟ್ಟಿರುವ ಚರ್ಮದ ಪಟ್ಟಿಯನ್ನು ಕಾಲಿಗೆ ಕಟ್ಟುವುದೂ ಸರಿಯಷ್ಟೆ?
ದೃಶ್ಯ ಪ್ರಯೋಗದಲ್ಲಿ ಆಹಾರ್ಯಕ್ಕೆ ವಿಶೇಷ ಗಮನಕೊಡಬೇಕೆಂದೂ, ಅದರಿಂದ ತಾನಾಗಿಯೇ ಭಾವಾಭಾವಾಭಿವ್ಯಕ್ತಿಯು ಸುಲಭಸಾಧ್ಯವಾಗುವುದೆಂದೂ ಹೇಳುತ್ತಾನೆ:

ನಾನಾವಸ್ಥಾ: ಪ್ರಕೃತಯಃ ಪೂರ್ವನೇಪಥ್ಯ ಸಾಧಿತಾಃ |
ಅಂಗಾದಿಭಿರಭಿವ್ಯಕ್ತಿ ಮುಪಗಚ್ಛಂತ್ಯಯತ್ನತಃ ǁ
ತತ್ರಕಾರ್ಯ: ಪ್ರಯತ್ನಸ್ತು ನಾಟ್ಯಸ್ಯ ಶುಭಮಿಚ್ಛತಾ ǁ
ತಸ್ಮಿನ್ ಯತ್ನಸ್ತು ಕರ್ತವ್ಯೂ ನೇಪಥ್ಯ ಶುಭಮಿಚ್ಛತಾ ǁ

'ಸಮಸ್ತಾಭಿನಯ ವಿಚಿತ್ರ ಪ್ರಯೋಗಸ್ಯ ಭಿತ್ತಿಸ್ಥಾನ ಮಾಹಾರ್ಯಂ' ಎಂದು ಅಭಿನವಗುಪ್ತನೂ ಹೇಳುತ್ತಾನೆ.

ನಮ್ಮ ಆಟದ ವೇಷಭೂಷಣಗಳಲ್ಲಿ ಶಾಸ್ರೋಕ್ತವಲ್ಲದ ದೇಶೀಯವಾದ ಪ್ರಾಚೀನ ಸಂಪ್ರದಾಯದವೂ ಕೆಲವಿವೆ. ಮುಖ್ಯವಾಗಿ ಭುಜಕೀರ್ತಿ (ದಂಬೆ) ಕೊರಳಾರ'ವೆಂಬ ಹೆಸರಿನ ಎದೆಯನ್ನು ಮುಚ್ಚುವ ಅರ್ಧ ವೃತ್ತಾಕಾರದ ಆಭರಣ ವಿಶೇಷ. ಮೌಲಿ (ಪೂಂಬೆ ಕಿರೀಟ)ಯ ಎರಡು ಬದಿಗಳಲ್ಲಿ ಗಿಳಿಯಾಕಾರದಂತಿರುವ ಎರಡು ರೆಕ್ಕೆಗಳು, ಕೆಲವೊಂದು ಚೌಕಾಕಾರದ ಬಿಂಕದ ಪಟ್ಟಿಗಳನ್ನು ಉದ್ದಕ್ಕೆ ಜೋಡಿಸಿ ನಡುವಿನಿಂದ ಇಳಿಬಿಡುವ 'ಮಾರ್ಮಾಲೆ'ಗಳು ಇತ್ಯಾದಿ. ಯಾವ ಶಿಲ್ಪ ಚಿತ್ರಗಳಲ್ಲಿಯೂ ಕಾಣದಿರುವ ಯಾವ ಕಾವ್ಯ ಶಾಸ್ತ್ರಗಳಲ್ಲಿಯೂ ವರ್ಣಿಸಲ್ಪಡದ ಈ ಆಭರಣ ವಿಶೇಷಗಳು ಯಾವ ಮೂಲದಿಂದ ಪರಂಪರಾಗತವಾದುವು ಎಂಬುದಕ್ಕೂ ನ್ಯಾಯವಾದ ಚಾರಿತ್ರಿಕ ಆಧಾರ ವಿಲ್ಲವೆಂದಿಲ್ಲ. ವಿಸ್ತಾರ ಭಯದಿಂದ ಆ ಕುರಿತು ಪ್ರಕೃತ ವಿಮರ್ಶಿಸುವುದಿಲ್ಲ. ಅನ್ಯತ್ರ ಯಥಾವಕಾಶ ವಿಚಾರಿಸೋಣ.

ಇನ್ನು ನಮ್ಮ ಕುಣಿತದ ಶಾಸ್ತ್ರೀಯತೆಯನ್ನು ಸ್ವಲ್ಪಮಟ್ಟಿಗೆ ನೋಡೋಣ. ನಮ್ಮಲ್ಲಿಯ ಆಟದ ವೇಷಗಳ ಕುಣಿತವು ನಾನಾ ವಿಧವಾಗಿದೆ. ಪ್ರತಿಯೊಂದು ಪಾತ್ರಕ್ಕೂ ಆಯಾಪಾತ್ರ ಸ್ವಭಾವಕ್ಕನುಗುಣವಾಗಿ ಪ್ರತ್ಯೇಕವಾದ ನೃತ್ಯವಿದೆ. ಎಲ್ಲ ಪುರುಷವೇಷ ಗಳೂ ನೃತ್ತಾರಂಭದಲ್ಲಿ ರಂಗಸ್ಥಳದಲ್ಲಿ ಸುತ್ತಿ ಸುಳಿದು ಮತ್ತೆ ನಾನಾ ವಿಧದಲ್ಲಿ ಲಾಗ ಹಾಕುತ್ತವೆ. ದೊಡ್ಡ ಲಾಗ, ಗುತ್ತಿನಲಾಗ, ತಿರುಗು ಲಾಗ, ಅಂತರಲಾಗ, ಅಡ್ಡಲಾಗ ಹೀಗೆ ಲಾಗನೃತ್ತಗಳು ಹಲವು ವಿಧ, ನಿಂತಲ್ಲಿ ಬೊಗರಿಯಂತೆ ಗರಗರ ಚಕ್ರಸುತ್ತು ತಿರುಗುತ್ತವೆ. ಎಡಕ್ಕೂ ಬಲಕ್ಕೂ ಎರಡು ವಿಧವಾಗಿ ತಿರುಗುತ್ತವೆ. ತಿರುಗು ಲಾಗದಲ್ಲಿಯ ರಂಗಸ್ಥಳಕ್ಕೆ ಸುತ್ತುತ್ತವೆ. ಆ ತಿರುಗು ಸುತ್ತಿನಲ್ಲಿ ನಾಲ್ಕು ದಿಕ್ಕುಗಳಲ್ಲಿ ಕ್ಷಣಾರ್ಧ ನಿತ್ತು ಮತ್ತೆ ಗಾತ್ರವನ್ನು ಆಕುಂಚಿಸಿ ಪುನಃ ಜಿಗಿಜಿಗಿದು ಲಾಗಹಾಕುತ್ತವೆ. ರಂಗಮಧ್ಯದ ಕೇಂದ್ರದಿಂದ ರಂಗದ ಪರಿಧಿಯ ವರೆಗೆ 'ಓರ್ಮಲಾಗ'ದಿಂದ ಮುಂದಕ್ಕೆ ಜಿಗಿದು ಪುನಃ ಅದೇ ಗತಿಯಲ್ಲಿ ಹಿಂದಕ್ಕೆ ಹಾರಿ ಕೇಂದ್ರದಲ್ಲಿ ಹೆಜ್ಜೆಯಿಟ್ಟು ಅಷ್ಟದಿಕ್ಕಿಗೂ ಚಕ್ರದ ಅರಗಳನ್ನು ಹೋಲುವಂತೆ ಪುನಃ ಪುನಃ ಅದೇ ಗತಿಯನ್ನು ಆವರ್ತಿಸಿಸುತ್ತಾರೆ. ಪ್ರತಿಯೊಂದು ಲಾಗದ ಗತಿಯೂ ಚೆಂಡೆಮದ್ದಳೆಗಳ ವಿಶಿಷ್ಟ ಗತ್ತುಗಳನ್ನು ಅನುಸರಿಸಿ ಕೊಂಡೇ ಸಾಗುತ್ತದೆ. ನಿಲ್ಲುವಾಗ ಕಾಲುಗಳನ್ನು ಅಗಲಿಸಿ ನಿಲ್ಲುವುದು ನಮ್ಮ ವೇಷಗಳ ಕ್ರಮ. ಹೀಗೆ ಅಗಲಿಸುವ ಅಂತರವು ಬೇರೆ ಬೇರೆ ವೇಷಗಳಿಗೆ ಭಿನ್ನ ಪ್ರಮಾಣದಲ್ಲಿರು