ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಕ್ಷ ಭಾಷಣ / ೧೬೯

ಪರಮ ಪುರುಷನಿಗೆ ವಿಷವೇರಿತೆಂಬ ಭ್ರಾಂತಿಯಿಂದ ವಿಷವಿಳಿಸಲು ತಲೆಗೆ ಸೊಪ್ಪಿಕ್ಕಿದರೆಂಬ ರಚನೆಯನ್ನು ನೋಡಿರಿ :

ಅಷ್ಟತಾಳ :

ಸೊಪ್ಪನಿಕ್ಕಿದರು ಗಾರುಡಿಗರು-ಶೇಷ |
ತಲ್ಪಗೆ ವಿಷ ತಲೆಗೇರಿತೆಂದೆನುತ || ಪಲ್ಲ ||
ಎಂಬತ್ನಾಲುಕುಲಕ್ಷ ಜೀವರಾಶಿಗಳೆಲ್ಲ |
ಬೊಂಬೆಯಮಾಡಿ ಕುಣಿಸುವಾತೆಗೆ |
ಡಂಭಕತನದಿ ಪೂರ್ಣೇಂದು ಬಾಲಗೆ ವಿಷ |
ದುಂಬಿ ರಾಕ್ಷಸಿ ರಾಹು ಸೋಕಿತೆ೦ದನುತ |
ವಿಷವ ಭುಂಜಿಸುವನ ಮೇಲೇರಿ ಬಪ್ಪಗೆ |
ವಿಷಕಂಧರನ ಮಿತ್ರ ಮಾಧವಗೆ |
ವಿಷದ ಮೊಲೆಯನುಂಡನೆನುತಲನಿಮಿಷರು |
ಬಿಸರುಹನಯನನ ಪಾದಸರೋಜಕ್ಕೆ ||
ಭೂತಪಂಚಕದೇಹ ತನ್ನಿ೦ದುದ್ಭವಿಸಿದ |
ಭೂತಳ ನಿರ್ಮಿಸಿದಾತನಿಗೆ |
ಪ್ರೇತಪಿಶಾಚಿಗಳಿಗೆ ಬಲಿಗಳ ನಾಡ |
ಭೂತಕ್ಕೆ ಹರಕೆ ತಂಬಿಲ ಕೋಲ ಕಟ್ಟುತ್ತ ||
ಕಣ್ಣುಕೈಕಾಲಾಡಿತಿನ್ನು ಯಶೋದೆಯ |
ಪುಣ್ಯದಿಂದುಳಿಯಿತು ಶಿಶುವೆನ್ನುತ |
ಕಣ್ವಪುರೀಶ ಶ್ರೀ ಗೋಪಾಲಕೃಷ್ಣನೆ |
ಚೆನ್ನಾಗಿ ಸುಖದಲಿ ಬಾಳುಬಾಳೆನುತ ||

ಆಮೇಲೆ ಗೋಪಿಯರು ಬಾಲಕೃಷ್ಣನನ್ನು ತೊಟ್ಟಿಲಲ್ಲಿಟ್ಟು ತೂಗುವ ಜೋಗುಳದ ಕೊನೆಯ ಪದ್ಯ ಹೀಗಿದೆ-

ಮಾಧವಯ್ಯನ ತೊಟ್ಟಿಲ ಮೇಲೆ |
ಮಾಣಿಕ ಗುಲಗುಂಜಿಯ ಚೆಂಡಮಾಡಿ |
ಮಾಣೋ ಮಾಣೆಂದು ಮದ್ದಳೆಹೊಯ್ದು |
ಮಾಧವ ಮಾಧವ ಶರಣೆಂದು ಗೋಪಿ||ಜೋ ಜೋ||

ಹೀಗೆ ಶೈಶವ ಕಳೆದು ಬಾಲ್ಯದಲ್ಲಿ ನಂದಗೋಪನ ಮನೆಯ ಮುಂದಣ ಬೀದಿಯಲ್ಲಿ ಓಡಾಡುತ್ತಿರುವ ಚಿಣ್ಣ ಕೃಷ್ಣನ ಆನಂದವನ್ನು ನೋಡುತ್ತ ಗೊಲ್ಲತಿಯರು ದಧಿಭಾಂಡ ವನ್ನು ಹೊತ್ತುಕೊಂಡು ಹೋಗುತ್ತಿರುತ್ತಾರೆ. ಆ ಮಂದಗಮನೆಯರನ್ನು ಕಂಡು ಬಾಲಕೃಷ್ಣನು ಬಂದು ಸುಂಕಗಾರನು ತಾ | ನೆಂದು ತಡೆದು ನಿಲ್ಲಿಸಿದ'ನಂತೆ. ಆ ಸುಂಕದ ವಿನೋದವನ್ನು ಇಲ್ಲಿ ನೋಡಿರಿ :

ಅಷ್ಟತಾಳ :

ಬಾಲಕೃಷ್ಣ : ಕೊಟ್ಟುಪೋಗಿರೆನ್ನ ಸುಂಕವ-ಕೊಡದೆ ಕಣ್ಣ |
  ಬಿಟ್ಟರಂಜುವನಲ್ಲ ದಿಟ್ಟೆ, ಹೆಂಗಳಿರ || ಪಲ್ಲ ||
  ಕುಂಭಿನಿಯೊಳಗೆ ಈ ನಂದಕೋಲದಲ್ಲಿ |