ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
65

ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬರುವದು. ಹರನು ಒಲಿದರೆ ಕೊರಡು ಕೊನರುವದು, ಬರಡು ಹಯನಹುದು, ವಿಷವು ಅಮೃತವಾಗುವದು, ಸಕಲ ಪಡಿಪದಾರ್ಥಗಳು ದೊರೆಯುವವು. ಅದೇ ಮೇರೆಗೆ -

ದಯವಿಲ್ಲದ ಧರ್ಮವಾವುದಯ್ಯಾ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿ
ದಯವೇ ಧರ್ಮದ ಮೂಲವಯ್ಯಾ !
ಇವು ಬಸವಣ್ಣನವರು ಮೇಲಿಂದಮೇಲೆ ಪ್ರಚುರಗೊಳಿಸಿದ ಕೆಲವು ಮೂಲಭೂತ ತತ್ತ್ವಗಳು, ಇವುಗಳ ಭದ್ರವಾದ ತಳಹದಿಯ ಮೇಲೆಯೇ ಅವರ ಕಲ್ಯಾಣಮಂದಿರವು ನಿಂತಿರುವದು. ಏಕೆಂದರೆ ಅದರಲ್ಲಿಯೇ ಜನರ ಶಾಶ್ವತ ಕಲ್ಯಾಣವು ನೆಲೆಸಿರುವದು.
ಮೇಲ್ಕಾಣಿಸಿದ ಭಕ್ತಿಯ ಸಂದೇಶದೊಡನೆ ಅವರು ತಮ್ಮ ನೀತಿಯ ಸಂದೇಶವನ್ನೂ ಜನರಿಗೆ ಸಲ್ಲಿಸಿದರು. ಅವರ ನೀತಿಯಲ್ಲಿ ಸಮತೆ, ಸತ್ಯ, ಸಂಯಮ, ಹಾಗೂ ಕಾಯಕಗಳಿಗೆ ತುಂಬ ಪ್ರಾಧಾನ್ಯವಿದ್ದಿತು. ಬಸವಣ್ಣನವರು ಒಂದು ಬಗೆಯ ಸಮತೆಯನ್ನು ತುಂಬ ಪ್ರೋತ್ಸಾಹಿಸಿದರು. ಎಲ್ಲರೂ ದೇವರ ಮಕ್ಕಳು. ದೇವರ ದೃಷ್ಟಿಯಲ್ಲಿ ಎಲ್ಲರೂ ಬಂಧುಗಳು, ಸಮಾನರು, ಭಗವಂತನ ಸಾಮ್ರಾಜ್ಯದಲ್ಲಿ ಮೇಲು-ಕೀಳುಗಳು ಇರಲರಿಯವು. ಸಕಲ ಜೀವಾತ್ಮರಿಗೆ ಲೇಸ ಬಯಸುವವರೇ ಹಿರಿಯರ, ಶರಣರು, ಎಂಬ ಸಮತೆಯ ಸಂದೇಶವನ್ನು ಸಾರಿ, ಅವರು ಸಮಾಜದಲ್ಲಿಯ ಅಶಾಂತಿಯ ಮೂಲವನ್ನೇ ಅಳಿಸಲು ಯತ್ನಿಸಿದರು. ತಮ್ಮಲ್ಲಿ ಬೆಳೆದ ಸಮತಾಭಾವದ ನಂಬಿಗೆಯನ್ನು ಅವರು ಪರಮಾತ್ಮನಿಗೆ ಈ ರೀತಿ ಅರುಹಿದರು :
ದೇವದೇವಾ ! ಎನ್ನ ಬಿನ್ನ ಪವನವಧಾರು !
ವಿಪ್ರ ಮೊದಲು ಅಂತ್ಯದ ಕಡೆಯಾಗಿ
ಶಿವಭಕ್ತರೆಲ್ಲರನು ಒಂದೆ ಎಂಬೆ .