೩
ನೆನ್ನೆಯ ದಿನದ ಆಯಾಸವೆಲ್ಲಾ ಇಂದು ಎಷ್ಟೋ ಪರಿಹಾರವಾದಂತಾಗಿ ಮಹಾದೇವಿಯಲ್ಲಿ ಹೊಸ ಉತ್ಸಾಹ ಮೂಡಿತ್ತು. ಒಂದೇ ಸಮನೆ ನಡೆಯತೊಡಗಿದಳು. ಅವಳ ಮನಸ್ಸು ತನ್ನ ಜೀವನದ ಘಟನೆಗಳನ್ನು ಅಂತರಂಗದ ಸಾಕ್ಷಿಮಂದಿರದಲ್ಲಿಟ್ಟು ನೋಡುತ್ತಿತ್ತು.
`ಒಂದೇ ದಿನದಲ್ಲಿ ಎಂತಹ ಬದಲಾವಣೆ ನನ್ನ ಜೀವನದಲ್ಲಿ' ಎಂದುಕೊಳ್ಳುವಳು. `ನೆನ್ನೆಯ ದಿನ ಬಹುಶಃ ಇದೇ ಸಮಯದಲ್ಲಿ ಕೌಶಿಕನ ಅರಮನೆಯಲ್ಲಿ ಪೂಜೆಗೆ ತೊಡಗಿದ್ದೆನೋ ಏನೋ. ಆದರೆ... ಇಂದು ! ಹೂಂ! ಇದೂ ಒಂದು ಪೂಜೆಯೇ ! ಇದನ್ನು ಸುಗಮವಾಗಿ ನೆರವೇರಿಸುವುದು ಆತನಿಗೇ ಸೇರಿದುದು ಎಂದು ಚೆನ್ನಮಲ್ಲಿಕಾರ್ಜುನನನ್ನು ಪ್ರಾರ್ಥಿಸಿತು ಅವಳ ಮನಸ್ಸು.
ಶಿವಯ್ಯನವರ ಸಂಸಾರದಂತಹ ಸಾತ್ವಿಕಗೃಹಗಳು ಇರುವವರೆಗೂ ತನ್ನ ಸಾಧನೆಯ ತಪೋಯಾತ್ರೆಯ ಕಷ್ಟವನ್ನು ನೆನೆದು ಅಂಜಬೇಕಾಗಿಲ್ಲವೆಂದು ಧೈರ್ಯಗೊಂಡಳು. ಶಿವಮ್ಮ ಅಪರ್ಣೆಯರ ನಿರ್ವ್ಯಾಜವಾತ್ಸಲ್ಯ ಮತ್ತೊಮ್ಮೆ ಅವಳ ಮನಸ್ಸನ್ನು ತುಂಬಿತು. ಅವರ ಪ್ರೇಮದ ಉಪಚಾರ ಮನಸ್ಸಿಗೆಂತೋ ಅಂತೆಯೇ ದೇಹಕ್ಕೂ ನೆಮ್ಮದಿಯನ್ನೂ ಕೊಟ್ಟಿತ್ತು.
ಬೆಳಗಿನ ಹಿತಕರವಾದ ಬಿಸಿಲಿನಲ್ಲಿ ದಾರಿ ಚೆನ್ನಾಗಿ ಸಾಗುತ್ತಿತ್ತು. ಸೂರ್ಯನ ಕಿರಣಗಳು ಕ್ರಮೇಣ ತಮ್ಮ ಶಾಖವನ್ನು ಹೆಚ್ಚಿಸಿಕೊಳ್ಳತೊಡಗಿದ್ದುವು. ಈ ವೇಳೆಗಾಗಲೇ ಮಹಾದೇವಿ ಒಂದೆರಡು ಹರದಾರಿಗಳಷ್ಟು ದೂರ ಬಂದಿದ್ದಳು. ಅಷ್ಟರಲ್ಲಿ ಮಹಾದೇವಿಯನ್ನು ಎದುರುಗೊಂಡಳು ವರದೆ.
ತನ್ನ ಕಿರಿದಾದ ದೇಹವನ್ನು ಜಲಜಲನೆ ಉಕ್ಕಿಸುತ್ತಾ ಹರಿಯುತ್ತಿದ್ದ ಆ ವರದಾ ನದಿಯನ್ನು ದಾಟಿ, ಅವಳ ಪ್ರಯಾಣ ಮುಂದುವರಿಯಬೇಕಾಗಿತ್ತು. ದಡವನ್ನು ಇಳಿದು ನದಿಯನ್ನು ಸಮೀಪಿಸತೊಡಗಿದಳು. ಅಲ್ಲಿ ಅವಳ ಗಮನವನ್ನು ಸೆಳೆದುದೆಂದರೆ ನದಿಯ ಮಧ್ಯದಲ್ಲಿ ಒಂದು ಚಿಕ್ಕ ಮಂಟಪ ; ಅದರಲ್ಲಿದ್ದ ಒಂದು ಶಿವಲಿಂಗ. ರುದ್ರಮುನಿ ಹೇಳಿದ ಹೊಳೆಲಿಂಗೇಶ್ವರ ಇದೇ ಇರಬೇಕೆಂದು ಊಹಿಸಿದಳು.
ಹಿಂದಿನ ರಾತ್ರಿ ಮಾತನಾಡುತ್ತಿರುವಾಗ ತನ್ನ ಪ್ರಯಾಣದ ಗುರಿ ಕಲ್ಯಾಣವೆಂದು ಹೇಳಿದ ಮಹಾದೇವಿ, ಬನವಾಸಿಗೆ ಹೋಗಿ ಮುಂದೆ ಮಾರ್ಗವನ್ನು ಹುಡುಕುವುದಾಗಿ ಹೇಳಿದ್ದಳು. ಅದನ್ನು ಕೇಳಿದ ರುದ್ರಮುನಿ :