ವಿಷಯಕ್ಕೆ ಹೋಗು

ಪುಟ:Mahakhshatriya.pdf/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧.ಭಾರ್ಗವೋಪದೇಶ

ಚ್ಯವನಮಹರ್ಷಿಯ ಅಪಾರ ಶಾಸ್ತ್ರಜ್ಞಾನವನ್ನೂ ಅನುಭವವನ್ನೂ ಕೇಳಿ ಎಲ್ಲರೂ ಮುಗ್ಧರಾಗಿದ್ದಾರೆ. ಜ್ಞಾನವಿಜ್ಞಾನಸಂಪನ್ನರಾದ ಆತನನ್ನು ಎಲ್ಲರೂ ‘ಭಗವಾನರು’ ಎಂದು ಗೌರವದಿಂದ ಸಂಬೋಧಿಸುತ್ತಾರೆ. ರಾಜಪುರೋಹಿತನಾದಿಯಾಗಿ ಅರಮನೆಯ ವಿದ್ವದ್ಗಣವೆಲ್ಲ ದಿನವು ಬಂದು ಆತನ ಧರ್ಮಬ್ರಹ್ಮಪ್ರವಚನವನ್ನು ಕೇಳಿ ಆಶ್ಚರ್ಯಮಗ್ನರಾಗಿರುತ್ತಾರೆ. ಆತನ ವಾಚೋವೈಖರಿಯಿರಲಿ, ಆ ಪ್ರವಚನವನ್ನು ಆಲಿಸುವವರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಗಳು, ಮುಂಗಾರುಮಳೆಯಲ್ಲಿ ನೆನೆದು ನೆಲದಿಂದ ಎದ್ದ ಬಿಸಿಯು ಅದೇ ಮಳೆಯಿಂದ ಇಂಗುವಂತೆ, ಹುಟ್ಟುಹುಟ್ಟುತ್ತಿದ್ದ ಹಾಗೆಯೇ ಅಲ್ಲಿಯೇ ಸಮಾಧಾನವನ್ನು ಹೊಂದುತ್ತವೆ.

ಆರ್ಯಾವರ್ತದ ಋಷೀಂದ್ರರೆಲ್ಲರೂ ಪ್ರತಿಷ್ಠಾನ ನಗರಕ್ಕೆ ಭಗವಾನರ ದರ್ಶನಕ್ಕೆ ಬರುತ್ತಿದ್ದಾರೆ. ಚಕ್ರವರ್ತಿಗೆ ಅದೇ ಒಂದು ಸಂತೋಷ. ನಾನು ಸರ್ವಸ್ವವನ್ನು ಕೊಡುತ್ತೇನೆಂದರೂ ಯಾರು ನಗರಪ್ರವೇಶ ಮಾಡಲೂ ಹಿಂದೆಗೆಯವರೋ ಅವರೆಲ್ಲಾ ಇಂದು ಭಗವಾನರ ದರ್ಶನಕ್ಕೆಂದು ಬಂದು ಒಂದೆರೆಡು ದಿನ ನಿಂತಿದ್ದು, ಅವರ ದರ್ಶನಸಲ್ಲಾಪಾದಿಗಳಿಂದಲೂ, ಅರಸನ ಆತಿಥ್ಯದಿಂದಲೂ ತೃಪ್ತರಾಗಿ ಅರಸನನ್ನು ಆಶೀರ್ವಾದ ಮಾಡಿ ಹೋಗುತ್ತಿದ್ದಾರೆ.

ಭಗವಾನರಿಗಾಗಿ ಅರಮನೆಯ ನಂದನೋದ್ಯಾನದಲ್ಲಿ ಒಂದು ವಿಶಾಲವಾದ ಪರ್ಣಕುಟಿಯು ಸಿದ್ಧವಾಗಿದೆ. ಅದರ ಮಗ್ಗುಲಲ್ಲಿಯೇ ಅತಿಥಿಗೃಹ. ಭಗವಾನರು ಬೆಳಗಿನ ಹೊತ್ತು, ಋಷೀಂದ್ರರು, ತಪೋಧನರು, ವಿದ್ವಾಂಸರು ಇವರಿಗೆ ದರ್ಶನ ಕೊಡುತ್ತಾರೆ. ಮಧ್ಯಾಹ್ನದ ಇಳಿಹೊತ್ತಿನಲ್ಲಿ ಚಕ್ರವರ್ತಿಯು ಬಂದು ಒಂದು ಝಾವದ ಹೊತ್ತು ಧರ್ಮಬ್ರಹ್ಮವಿಚಾರಗಳಲ್ಲಿ ಮಗ್ನನಾಗಿದ್ದು ಬೆಳಗಿನಿಂದ ರಾಜಕಾರ್ಯಗಳಲ್ಲಿದ್ದು ಪಟ್ಟಿದ್ದ ಆಯಾಸವನ್ನೆಲ್ಲಾ ಪರಿಹಾರ ಮಾಡಿಕೊಳ್ಳುತ್ತಾನೆ. ಅರಸನಿಗೆ ಭಗವಾನರಲ್ಲಿ ಎರಡು ಮೂರು ವಿಚಾರಗಳನ್ನು ಕೇಳಬೇಕೆಂದು ಬಲು ಆಸೆ. ಆದರೆ ಆತನು ಬರುವ ವೇಳೆಗೆ ಭಗವಾನರೇ ಸ್ವಯಂ ಯಾವುದಾದರೂ ಒಂದು ವಿಚಾರ ಆರಂಭಿಸುತ್ತಾರೆ. ಅದನ್ನು ಕೇಳುಕೇಳುತ್ತ