ಎತ್ತರವಾದ ಶಿಲಾಪೀಠದ ಮೇಲೆ ಕುಳಿತಿದ್ದಳು ಮಹಾದೇವಿ. ಎಲ್ಲರೂ ಬಂದು ಅವಳಿಗೆ ನಮಸ್ಕಾರಮಾಡಿ ಹೋಗುತ್ತಿದ್ದರು. ತದೇಕಚಿತ್ತಳಾಗಿ ಕುಳಿತು ಎಲ್ಲರನ್ನೂ ನೋಡುತ್ತಿದ್ದಳು.
ಜನರಿಂದ ತುಂಬಿ ಮೆರೆಯುತ್ತಿದ್ದ ಶ್ರೀಶೈಲ, ಮಧ್ಯಾಹ್ನದ ವೇಳೆಗೆ ನಿರ್ಜನವಾದಂತೆ ತೋರಿತು. ಮೌನದ ಮಹಾಸಾಮ್ರಾಜ್ಯ, ಶ್ರೀಶೈಲವನ್ನಾಳ ತೊಡಗಿತು. ಅಧ್ಯಾತ್ಮ ಸಾಮ್ರಾಜ್ಯದ ಮಹಾಚಕ್ರವರ್ತಿನಿಯೆಂಬಂತೆ ಕಂಗೊಳಿಸುತ್ತಿದ್ದ ಮಹಾದೇವಿ ಮೇಲೆದ್ದು ನಿಧಾನವಾಗಿ ಮಲ್ಲಿಕಾರ್ಜುನನ ದೇವಾಲಯದತ್ತ ನಡೆಯತೊಡಗಿದಳು.
೮
ಮಹಾದೇವಿಗೆ ಈಗ ಇಡೀ ಶ್ರೀಶೈಲಪರ್ವತವೇ ತನ್ನ ಪತಿಯ ಏಕಾಂತ ಮಂದಿರದಂತೆ ತೋರುತ್ತಿತ್ತು. ಜನರ ಕೋಲಾಹಲವೆಲ್ಲಾ ಅಡಗಿ ಗಂಭೀರತೆಯೇ ಮೈವೆತ್ತು ನಿಂತಿತ್ತು. ನಿಧಾನವಾಗಿ ನಡೆಯುತ್ತಾ ಬಂದು ಮಹಾದೇವಿ ದೇವಾಲಯವನ್ನು ಪ್ರವೇಶಿಸಿದಳು.
ದೇವಾಲಯದ ಆವರಣದ ಒಳಭಾಗದಲ್ಲಿ ನಾಲ್ಕಾರು ಜನ ಕುಳಿತಿದ್ದರು. ಮಲ್ಲಿಕಾರ್ಜುನನ ಪೂಜಾವರ್ಗಕ್ಕೆ ಸೇರಿದವರು ಅವರು. ಅವರಿಂದ ಸ್ವಲ್ಪ ದೂರದಲ್ಲಿ, ಸ್ಥಳನಿವಾಸಿಗಳಾದ ಕೆಲವರು ಚುಂಚರು ವಿನಯದಿಂದ ಕೈಕಟ್ಟಿ ನಿಂತಿದ್ದರು. ಮೈಮೇಲೆ ಹರಕು ಚಿಂದಿಯ ಬಟ್ಟೆ, ಕುರುಚಲು ಗಿಡದಂತೆ ಕೆದರಿದ ಕೂದಲು, ಕೈಯಲ್ಲಿ ಬಿಲ್ಲುಬಾಣಗಳು.
ಮಹಾದೇವಿಯನ್ನು ಕಂಡೊಡನೆಯೇ ಆಶ್ಚರ್ಯಗೊಂಡ ಅರ್ಚಕವೃಂದ ಮೇಲೆದ್ದು ಸ್ವಾಗತಿಸಿತು. ಅವರಲ್ಲಿ ಪ್ರಮುಖನಾದ ಅರ್ಚಕ ಮುಂದೆ ಬರುತ್ತಾ ಕೇಳಿದ:
“ಏಕೆ ತಾಯಿ ? ತಾವು ಪರಿಷೆಯ ಜೊತೆಗೆ ಹೋಗಲಿಲ್ಲವೇ?” ಇವರೊಡನೆ ಮಾತನಾಡಬೇಕೆಂದು, ತಾನು ಇದುವರೆಗೆ ಕಲಿತ ಹರಕು ಮುರುಕು ತೆಲುಗನ್ನು ಜ್ಞಾಪಿಸಿಕೊಳ್ಳುತ್ತಿದ್ದ ಮಹಾದೇವಿಗೆ ಅರ್ಚಕನ ಸ್ಪಷ್ಟವಾದ ತಿರುಳುಗನ್ನಡವನ್ನು ಕೇಳಿ ಆಶ್ಚರ್ಯವಾಯಿತು. ಅದನ್ನು ಅರಿತ ಅರಿತ ಅರ್ಚಕ, ಆಕೆ ಮಾತನಾಡುವುದಕ್ಕೆ ಮೊದಲೇ ಹೇಳಿದ :