ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೬
ನಡೆದದ್ದೇ ದಾರಿ

ಇಲ್ಲ...ಈ ರೀತಿಯಲ್ಲಿ ಇದು ಕೊನೆಗೊಳ್ಳುವುದೆಂದು ಅನಿಸಿರಲಿಲ್ಲ. ಈ
ಅಗಲುವ ಗಳಿಗೆಯನ್ನು ನೀನು ನಿರ್ಧರಿಸಿದ್ದರಿಂದಲೋ ಏನೋ ನನಗಿಷ್ಟು
ಸಂಕಟವಾಗುತ್ತಿರುವುದು! ನಾನೇ ಇದನ್ನು ನಿರ್ಧರಿಸಿದ್ದರೆ ಈ ವೇದನೆ ಬಹುಶಃ
ಇರುತ್ತಿರಲಿಲ್ಲವೇನೋ!'ದೂರ ಹೋಗು'ಎನ್ನಿಸಿಕೊಂಡ ಹೋಗುವುದಕ್ಕೂ,'ದೂರ
ಹೋಗುವೆ'ಎಂದು ಹೇಳಿ ಹೋಗುವುದಕ್ಕೂ ಬಹಳ ವ್ಯತ್ಯಾಸ ಇದೆಯಲ್ಲವೆ? ಇಲ್ಲಿ
ಬಂತು ಮತ್ತೆ-ಪೊಳ್ಳು ಅಭಿಮಾನದ,false prestigeದ ಪ್ರಶ್ನೆ.
ಕಿಡಿಕಿಯ ಹೊರಗೆ ಕಾಣುತ್ತಿರುವ ಆಕಾಶ ಕ್ರಮೇಣ ತಿಳಿಯಾಗತೊಡಗಿದೆ.
ಕತ್ತಲು ಕರಗತೊಡಗಿದೆ.ಬೆಳ್ಳಿಚಿಕ್ಕೆ ಕಾಣಬಹುದೇ ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ?
ಕಾರ್ತೀಕ ಮಾಸದಲ್ಲಿ ಈ ಬೆಳ್ಳಿಚಿಕ್ಕೆ ನೋಡಿ ಸ್ನಾನ ಮಾಡಿದರೆ ಬಹಳ ಪುಣ್ಯವೆಂದು
ಅಜ್ಜಿ ಹೇಳುತ್ತಿದ್ದುದು ನೆನಪಾಗಿ ಶಶಿಗೆ ನಗು ಬಂದಿತು.'ಪಾಪಪುಣ್ಯ'ಗಳು,'ಸರಿ'
'ತಪ್ಪು'ಗಳು ತನ್ನ ಬಾಳಿನಲ್ಲಿ ಅರ್ಥ ಕಳೆದುಕೊಂಡು ಬಹಳ ಕಾಲವಾಯಿತು.
ನಿಜವಾಗಿಯೂ ಇವುಗಳಿಗೆ ಅರ್ಥವೊಂದೆಂಬುದಿದೆಯೇ? ಬೇಕಾದವರು ತಮಗೆ
ಬೇಕಾದ ಅರ್ಥವನ್ನು ಅವುಗಳಿಗೆ ಕೊಟ್ಟು ಹದಗೆಡಿಸುತ್ತಾರೆ ಅಷ್ಟೆ-ತಮ್ಮ
ವರ್ತನೆಯನ್ನು ಸಮರ್ಥನೆ ಮಾಡಿಕೊಳ್ಳಬೇಕಾದಾಗ,ಉಳಿದವರ ಮಾತಿರಲಿ, ಈ
ಯಾವುದಕ್ಕೂ ಪರಿವೆ ಮಾಡದ ಅತೀತ ತಾನೆಂದು ಹೇಳಿಕೊಳ್ಳುವ ಈ No.IVನೇ
(ಅವನಿಗಿನ್ನೂ ಈ ನಂಬರು ಸಿಗದೇ ಇದ್ದಾಗ) ಒಮ್ಮೆ ತನಗೆ ಹೇಳಿರಲಿಲ್ಲವೆ-"ಶಶಿ,
ನಾನು ಮಾತಾಡುವುದು- ನಾನು ವಿಚಾರ ಮಾಡುವುದು-ನಾನು ಬರೆಯುವುದು
ಎಲ್ಲಾ ತಪ್ಪು-ತಪ್ಪು ಎಂದು ಒಮ್ಮೊಮ್ಮೆ ಪ್ರಾಮಾಣಿಕವಾಗಿ ಅನಿಸುವುದು; ನನ್ನ
ವಾಸ್ತವಿಕತೆಯ ಬಗೆಗಿನ ಹುಚ್ಚು-ಪ್ರೀತಿ ಎಲ್ಲಾ ಬರೇ ಕಲ್ಪನೆ-ಭ್ರಮೆ
ಅನಿಸುವುದು"-ಎಂದು? ಅವನಿಗೆ ಸ್ವತಃದ ಬಗೆಗೇ ನಂಬಿಕೆ-ತಿಳುವಳಿಕೆ
ಇರಲಿಲ್ಲ ವೆನ್ನುವುದಕ್ಕೆ ಇಷ್ಟು ಪುರಾವೆ ಸಾಕಾಗಿತ್ತಲ್ಲವೆ".....ಈಗ ತಿಳಿಯುತ್ತಿದೆ
ಸ್ವಲ್ಪ-ಸ್ವಲ್ಪವಾಗಿ.ಈ ತಿಳುವಳಿಕೆ- ಪ್ರಜ್ಞೆ ಮಾತ್ರ ಈ ಚಳಿಗಾಲದ ರಾತ್ರಿಯಲ್ಲೂ
ಮೈಯನ್ನೆಲ್ಲ ಬೆಚ್ಚಗೆ ಮಾಡುತ್ತದೆ,ವಿದ್ಯುತ್ ಕರೆಂಟು ಹರಿದಾಡಿದ ಹಾಗೆ,ನರಗಳೆಲ್ಲ
ನಿರ್ಜೀವವಾದ ಹಾಗೆ.
ಎಲ್ಲ ಮುಗಿದು ಹೋಯಿತು. ಆದರೂ ಏಕೆ ಅಸಮಾಧಾನ?
ಹೀಗಾಗುವುದೆಂದು,No.IVನೊಂದಿಗಿನ ಸಂಬಂಧ ಒಮ್ಮೆ ಕೊನೆಗೂಳ್ಳುವುದೆಂದು
ಮೊದಲೇ ಗೊತ್ತಿದ್ದೂ ಏಕೆ ಈ ಅತೃಪ್ತಿ? ಈ ಕೊನೆ ನಿರೀಕ್ಷಿತವಾಗಿದ್ದುದೇ.ಆದರೆ
ಅದರ means-ತಾನು ಕಲ್ಪಿಸಿದ್ದ ಬಗೆ ಇದಲ್ಲ.ಅದಕ್ಕೆ ಬೇರೆಯದೇ ರೂಮ್ಯಾಂಟಿಕ್
ಸ್ವರೂಪವೊಂದಿತ್ತು.ಅದೀಗ ನಿನ್ನೆ ಸಂಜ್ಜೆ ಹಾಳಾಯಿತು.ಪರಿಣಾಮ-ಈ ನಿರಾಸೆ,