ಆದರ್ಶ ಇಲ್ಲಿ ಜ್ವಲಂತವಾಗಿ ಮೂಡಿದೆಯೆಂದೆನಿಸಿತು. ಬಸವಣ್ಣ ಈ ವಚನದಲ್ಲಿ ಏನನ್ನು ಹೇಳಿದ್ದಾನೆಯೋ ಆ ಮಾತಿಗೆ ತನ್ನ ಜೀವನದ ಸಾಧನೆಗಳಿಂದ
ಆತ ಜೀವಂತ ಭಾಷ್ಯವನ್ನು ಬರೆಯುತ್ತಿರುವಂತೆ ಭಾಸವಾಯಿತು. ಆತ
ತನ್ನ ಉದ್ಧಾರಕ್ಕಾಗಿ ಭಕ್ತಿ ಭಂಡಾರಿಯಾಗಿದ್ದರೆ, ಜಗತ್ತಿನ ಉದ್ಧಾರಕ್ಕಾಗಿ ಕರ್ಮಯೋಗಿಯಾಗಿದ್ದಾನೆಂಬುದನ್ನು ಕಲ್ಯಾಣದ ಹತ್ತಿರ ಹತ್ತಿರಕ್ಕೆ ಬಂದಂತೆ ಕಂಡುಕೊಳ್ಳತೊಡಗಿದಳು.
ಆ ರಾತ್ರಿಯನ್ನು ಅಲ್ಲಿ ಅಲ್ಲಿ ಕಳೆದರು. ಬೆಳಗ್ಗೆ ಹೊರಡಲು ಉದ್ಯುಕ್ತಳಾದಳು ಮಹಾದೇವಿ. ಅಷ್ಟರಲ್ಲಿ ಸಂಗಮದೇವರಿಂದ ಅನಿರೀಕ್ಷಿತವಾದ ನಿರ್ಧಾರವನ್ನು ಕೇಳಬೇಕಾಯಿತು :
``ಇನ್ನು ನೀನು ಕಲ್ಯಾಣದ ಕಡೆಗೆ ನಡೆಯಮ್ಮ. ಬಸವಣ್ಣನ ರಕ್ಷಣೆಯ ವ್ಯವಸ್ಥೆ ನಿನ್ನ ಹಿಂದಿದೆ. ಇನ್ನು ನಾನು ನನ್ನ ಮಾರ್ಗವನ್ನು ಹಿಡಿಯುತ್ತೇನೆ.
ಅವರ ಈ ಮಾತಿನಿಂದ ಮಹಾದೇವಿಗೆ ಏನು ಮಾಡಬೇಕೆಂಬುದೇ ತಿಳಿಯದಂತಾಯಿತು.
``ಏಕೆ ಗುರುಗಳೇ, ನೀವು ಕಲ್ಯಾಣಕ್ಕೆ ಬರುವುದಿಲ್ಲವೇ ? ಇಷ್ಟು ದೂರ ಬಂದವರು ಅಣ್ಣನ ದರ್ಶನ ಪಡೆಯುವುದಿಲ್ಲವೆ ? - ಕೇಳಿದಳು ಮಹಾದೇವಿ.
``ಇಲ್ಲವಮ್ಮ ; ಅಣ್ಣನಿಂದ ತೆಗೆದುಕೊಂಡು ಬಂದ ಸಂದೇಶವನ್ನು ಆತನು ನಿರೀಕ್ಷಿಸಿದ ಮಟ್ಟದಲ್ಲಿ ನಾನಿನ್ನೂ ಜನತೆಗೆ ಮುಟ್ಟಿಸಿಲ್ಲ. ಕರ್ನಾಟಕದ ದಕ್ಷಿಣದ ಕೊನೆಯವರೆಗೂ ಹೋಗಿ ಬರಬೇಕೆಂಬುದು ಅಣ್ಣನ ಆದೇಶವಾಗಿತ್ತು. ಆದರೆ...
ಅಷ್ಟರಲ್ಲಿ ಮಹಾದೇವಿ ಕೇಳಿದಳು :
``ಅದಕ್ಕೆ ನನ್ನಿಂದ ವಿಘ್ನವುಂಟಾಯಿತು.
``ಇಲ್ಲ... ಇಲ್ಲ... ಇದೂ ಒಂದು ದೊಡ್ಡ ಭಾಗ್ಯವೆಂದೇ ಭಾವಿಸಿದ್ದೇನೆ. ಊರ್ಧ್ವಮುಖವಾಗುವ ಚೇತನ ಒಂದಕ್ಕೆ ಸಹಾಯಕನಾಗುವ ಅವಕಾಶ ಲಭಿಸಿತು. ನನ್ನ ಸಹಾಯವಿಲ್ಲದಿದ್ದರೂ ನಿನ್ನ ಸಾಧನೆಯ ಈ ಮಹಾಯಾತ್ರೆ ನಿನ್ನ ನಿಷ್ಠೆಯಿಂದಲೇ ನಿರ್ವಿಘ್ನವಾಗಿ ನೆರವೇರುತ್ತಿತ್ತು. ಆದರೆ ನೆಪಮಾತ್ರಕ್ಕಾದರೂ ನೆರವಾಗುವ ಅವಕಾಶ ಬಂದುದು ನನ್ನ ಪುಣ್ಯ.
``ತಾವು ಹೀಗೆ ಹೇಳಬಾರದು, ಗುರುಗಳೇ. ತಾವು ಹಿರಿಯರು, ಹರಸಬೇಕು. ನನ್ನ ಗುರುಗಳಾದ ಗುರುಲಿಂಗದೇವರ ಆಶೀರ್ವಾದ ಮತ್ತು ತಮ್ಮ ಕೃಪೆ ನನ್ನನ್ನು ಉದ್ಧರಿಸಿದುವು. ಇನ್ನು ಮುಂದೆಯೂ ಅವು ನನಗೆ ಬೆಂಬಲವಾಗಿ ನಿಲ್ಲಬೇಕು. ಈಗ ತಾವು ಹಿಂದಕ್ಕೆ ತಿರುಗಿಹೋಗುತ್ತೀರ, ಗುರುಗಳೇ ?