ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೇಸರವಾದವು,ಅವಳ ತಂದೆ ಆರ್ಧಾಂಗ ವಾಯುವಿನಿಂದ ಹಾಸಿಗೆ ಹಿಡಿದಿದ್ದರು.ಹಿರಿಯ ಅಣ್ಣ ತಂದೆಯ ಕಡೆ ಕೊಡಬೇಕಾದಷ್ಟು ಗಮನ ಕೊಡುತ್ತಿಲ್ಲ:ಅದಕ್ಕೆ ಅವನ ಹೆಂಡತಿಯೇ ಕಾರಣ ಅಂತ ತಾಯಿ ಮೂರೂ ಹೊತ್ತೊ ಅಳುತ್ತಿದ್ದಳು.ಗಳಿಸುವವ ತನ್ನ ಗಂಡ ಒಬ್ಬನೇ,ಕೂತು ತಿನ್ನುವವರು ನೂರು ಜನ,ಅಂತ ಅತ್ತಿಗೆ ಗೊಣಗುತ್ತಿದ್ದಳು .ಶಾಂತಿಗೆ ತಲೆ ಚಿಟ್ಟು ಹಿಡಿದುಹೋಗಿ ರಜೆ ಮುಗಿಯುವ ಮೊದಲೇ,ಆಕೆ ಮುಂಬೈಗೆ ಹೊರಟು ಬಂದಳು. ಇಲ್ಲಿ ಬಂದ ನಂತರ ಆಕೆಗೆ ಅನಿಸಿತು,ತಾನು ಯಾಕೋ ಇತ್ತಿತ್ತಲಾಗಿ ಭಾವನೆಗಳ ಕೋಮಲತೆಯನ್ನು ಕಳೆದು ಕೊಳ್ಳುತ್ತಿದ್ದೇನೆ.ಅಲ್ಲೇ ಇದ್ದು ತಾಯಿಯನ್ನು ಸಂತಯಿಸಬೇಕಾಗಿತ್ತು.ತಂದೆಯ ಸೇವೆ ಮಾಡಬೇಕಾಗಿತ್ತು.ಅವರನ್ನು ಬಿಟ್ಟರೆ ತನ್ನ ಕಷ್ಟ―ಸುಖ ವಿಚಾರಿಸುವವರು ಯಾರಿದ್ದಾರೆ?ಯಾಕೋ ಮುಂಬೈಯ ಯಾಂತ್ರಕತೆ ತನ್ನ ನರನರಗಳಲ್ಲೆಲ್ಲಾ ಹೊಕ್ಕಂತಿದೆ.... ―ಸಮುದ್ರ ದಂಡೆಯ ಮರಳಲ್ಲಿ ಒಬ್ಬಳೇ ಕೂತು ಆಕೆ ವಿಚಾರ ಮಾಡಿದಳು.ತನ್ನದು ತಪ್ಪಾಯಿತು ಅನಿಸಿತು.―ಮುಂಬೈಯಲ್ಲಿ ಒಳ್ಳೊಳ್ಳೆಯ ಡಾಕ್ಟರುಗಳಿದ್ದಾರೆ,ಮಾಂಶಿಯ ಮನೆಯೂ ಅನುಕೂಲ,ತಂದೆಯವರನ್ನು ಇಲ್ಲೇ ಕರಕೊಂಡು ಬಾ,ನಾನೇ ಎಲ್ಲ ವ್ಯವಸ್ಥೆ ಮಾಡುತ್ತೇನೆ,ನೀನು ಕಾಳಜಿ ಮಾಡಬೇಡ,ತಂದೆಯವರಿಗೆ ನೆಟ್ಟಗಾಗುತ್ತದೆ.... ಬಸ್ ಹಿಡಿದು ಆಕೆ ಸಂಜೆ ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ.ಸರ್ಕಸ್ ನೋಡಲೆಂದು ದಾದರಕ್ಕೆ ಹೋಗಿದ್ದರು.ಆಕೆ ಕೈಕಾಲು ತೊಳಕೊಂಡು ಚಹಾಕ್ಕೆ ಎಸರಿಟ್ಟು ಪಡಸಾಲೆಗೆ ಬಂದಾಗ ಕೆಲಸದ ಹುಡುಗಿ ಬನೂ ಕೆಲವು ಪತ್ರ ತಂದುಕೊಟ್ಟಳು.“ಒಂದು ಸಂಜೀ ಪೋಸ್ಟ್ ನ್ಯಾಗ ಬಂತು,ಒಂದನ್ನು ನಿಮ್ಮ ಆಫೀಸ್ ಸಿಪಾಯಿ ತಂದುಕೊಟ್ಟು.ಇನ್ನೊಂದು ತಾರ,ಕೆಳಗಿನ ಮನೀ ಬಹನ್ ಜಿ ಸೈನ್ ಮಾಡಿ ತಗೊಂಡು ಕೊಟ್ಟರು". ತನ್ನ ಹೆಸರಿಗೆ ಇದ್ದ ಮೂರು ಕಾಗದಗಳನ್ನು ಆಕೆ ಬನೂ ಅವುಗಳ ಬಗ್ಗೆ ವಿವರಣೆ ಕೊಟ್ಟ ಕ್ರಮದಲ್ಲೇ ಒಂದೊಂದಾಗಿ ಬಿಡಿಸಿದಳು.ಸಾತಾರೆಯಿಂದ ಬಂದಿದ್ದ ಪತ್ರ,ಪತ್ರವಲ್ಲ,ಲಗ್ನದ ಆಮಂತ್ರಣ ಪತ್ರಿಕೆ.ಶಂಕರನ ಲಗ್ನ.ಜೊತೆಗೊಂದು ಕಿರು ಪತ್ರ.ಲಗ್ನದ ನಂತರ ತಾವಿಬ್ಬರೂ ಅಮೇರಿಕಾಕ್ಕೆ ಹೋಗುತ್ತಿದ್ದೇವೆ,ತಮ್ಮನ್ನು ಹರಸಬೇಕು, ಅಂತ ಶಂಕರನ ಕೈ ಬರಹ. ತನಗೇನನಿಸುತ್ತಿದೆಯೆಂದು ಶಾಂತಿ ಯೋಚಿಸಿ ತಿಳಿಯಲು ಪ್ರಯತ್ನಿಸಿದಳು.