ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇನ್ನಷ್ಟು ಕತೆಗಳು / ಒ೦ದು ಗಿಡ, ಒಂದು ಬಾವಿ ೫೧೭

ಸುಂದರವಾಗಿದ್ದವು. ಆಗೆಲ್ಲ ಈ ಪರಿಸರ ಎಷ್ಟು ಪ್ರಶಾಂತವಾಗಿತ್ತು. ಹಗಲು

ಹೊತ್ತಿನಲ್ಲಿ ಕಾಲೇಜಿಗೆ ಹೋಗಿ ಬರುವ ಹುಡುಗರು ಮೆಲುದನಿಯಲ್ಲಿ ಮಾತಾಡುತ್ತ,

ಕಾವ್ಯದ ಬಗ್ಗೆಯೋ ಗಣಿತದ ಸಮಸ್ಯೆಗಳ ಬಗ್ಗೆಯೋ ಚರ್ಚಿಸುತ್ತ ನಡೆದು

ಹೋಗುತ್ತಿದ್ದರು. ಸುತ್ತಲಿನ ಮನೆಗಳ ಹೆಣ್ಣುಮಕ್ಕಳು ತಾಮ್ರದ ಕೊಡಗಳನ್ನು

ಹೊತ್ತು ನನ್ನ ಕಟ್ಟೆಗೆ ಬರುತ್ತಿದ್ದರು. ಹಗ್ಗ ಬಿಟ್ಟು ನೀರು ಸೇದಿಕೊಂಡು ಸುಖ-ದುಃಖದ

ಮಾತಾಡುತ್ತ ಹೋಗುತ್ತಿದ್ದರು. ಶನಿವಾರದಂದು ಊರಲ್ಲಿನ ಜನರೂ ಈ

ದಾರಿಯಾಗಿ ಬಂದು. ಸಪ್ತಾಪುರದ ಹನುಮಂತದೇವರ ಗುಡಿಗೆ ಹೋಗುತ್ತಿದ್ದರು.

ಸಂಜೆಗಳಲ್ಲಿ ಕೆಲವು ಪ್ರೇಮಿಗಳ ಜೋಡಿಗಳೂ ವಾಕಿಂಗ್‌ ಬರುತ್ತಿದ್ದವು. ಹೊತ್ತು

ಮುಳುಗಿದ ಬಳಿಕ ಮಾತ್ರ ಎಲ್ಲ ಕಡೆ ಶಾಂತ, ಸ್ತಬ್ಧ ವಾತಾವರಣ. ಆಗ ಅಷ್ಟು ಬೀದಿ

ದೀಪಗಳೂ ಇರಲಿಲ್ಲ. ಜನರೂ ಹೊತ್ತಾದ ನಂತರ ಹೊರಗಡೆ ತಿರುಗಾಡುತ್ತಿರಲಿಲ್ಲ.

ಕತ್ತಲಲ್ಲಿ, ಬೆಳದಿಂಗಳಲ್ಲಿ ನಾನು ಮತ್ತು ನೀನು ಇಬ್ಬರೇ. ರಸ್ತೆಯ ಈಚೆ ಬದಿ

ನಾನು, ಆಚೆ ಬದಿ ನೀನು.

ನೀನು ದಿನದಿನಕ್ಕೆ ಎಷ್ಟು ಚೆನ್ನಾಗಿ ಬೆಳೆಯುತ್ತ ಹೋದೆ. ನಾನು ಅಚ್ಚರಿಯಿಂದ

ನೋಡನೋಡುತ್ತಿದ್ದಂತೆ ನೀನು ಮೈದುಂಬಿಕೊಂಡು ಚಿಗುರುತ್ತ, ಪಲ್ಲವಿಸುತ್ತ,

ಅರಳುತ್ತ ಸಾಗಿದೆ. ನಿನ್ನನ್ನು ನೋಡುತ್ತಿರುವುದೇ ನನ್ನ ಕಣ್ಣುಗಳಿಗೊಂದು

ಹಬ್ಬವಾಗಿತ್ತು. ಅನೇಕ ರಾತ್ರಿಗಳನ್ನು ನಾವಿಬ್ಬರೂ ಪ್ರೀತಿಯ ಮಾತುಗಳನ್ನಾಡುತ್ತ

ಒಬ್ಬರನ್ನೊಬ್ಬರು ಕಣ್ಣಿ ನಲ್ಲೇ ಆರಾಧಿಸುತ್ತ ಕಳೆದೆವು. ಆ ಶಾಂತಿ, ಆ ಹಸಿರು, ಆ

ತಂಗಾಳಿ, ಆ ನೀರವತೆ, ಆ ಏಕಾಂತ, ಆ ಸಂಗಸುಖ ಇವುಗಳಿಗೆಲ್ಲಾ ಎಂದೂ

ಕೊನೆಯೆಂಬುದೇ ಇಲ್ಲ ವೆಂದು ನಂಬಿ ಸುಖಿಸಿದೆವು.

ಯಾಕೋ ನನ್ನ ಆರೋಗ್ಯ ಅಷ್ಟು ಸರಿಯಿರಲಿಲ್ಲ. ಒಂದು ಕಾಲಕ್ಕೆ ಈ ಭಾಗದ

ನಾಗರಿಕರಿಗೆಲ್ಲ ನೀರುಣಿಸುತ್ತಿದ್ದ ನಾನು ಬರಬರುತ್ತ ಖಿನ್ನಮನಸ್ಕನಾಗತೊಡಗಿದೆ.

ಸದಾ ಮೈ ಭಾರ, ಮನಸ್ಸು ಭಾರ. ಅಲ್ಲ. ಎಂತಹ ನಾಗರಿಕರಿವರು, ಏನೇನನ್ನೆಲ್ಲ

ತಂದು ನನ್ನಲ್ಲಿ ಚೆಲ್ಲಿಬಿಡುವ ಅನಾಗರಿಕರು. ಈಗೀಗ ಮನೆಮನೆಗೆಲ್ಲ ನಲ್ಲಿಗಳಲ್ಲಿ

ನೀರು ಬರಲಾರಂಭಿಸಿದ್ದರಿಂದ ಮುಂಚಿನಂತೆ ಹೆಣ್ಣುಮಕ್ಕಳು ಕೊಡ ಹೊತ್ತು ನನ್ನ

ಕಟ್ಟೆಗೆ ಬರುತ್ತಿರಲಿಲ್ಲ. ಖಾಲಿಯಾದ ಕಟ್ಟೆಯನ್ನು ರಿಟಾಯರ್‌ ಆಗಿದ್ದ ಮುದುಕರು

ಆಕ್ರಮಿಸಿದರು. ದಿನಾ ಸಂಜೆ ಬಂದು ತಾಸುಗಟ್ಟಲೆ ಕೂತು ಮಾತಾಡುವರು. ಅವರು

ನೌಕರಿಯಲ್ಲಿದ್ದಾ ಗ ದೇಶದಲ್ಲಿ ಸುಭಿಕ್ಷೆ ಇತ್ತು, ಈಗ ಕಾಲ ಬದಲಾಗಿದೆ. ಜನ