ವಿಷಯಕ್ಕೆ ಹೋಗು

ಪುಟ:Mahakhshatriya.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಏಕೆ ಮರೆತೆ? ನಾವು ಭೋಗದ ಪರಾಕಾಷ್ಠತೆಯನ್ನು ಅನುಭವಿಸಿದೆವು. ಮನುಷ್ಯದೇಹದಲ್ಲಿ ದಿವ್ಯ ಮನಸ್ಸನ್ನು ಧಾರಣಮಾಡಿ ಮಾನುಷಾನಂದಕ್ಕಿಂತ ಕೋಟಿ ಕೋಟಿ ಹೆಚ್ಚಾದ ಆನಂದವನ್ನು ಅನುಭವಿಸಿದೆವು. ಈಗ ನಮಗೆ ಹೇಗಿರುವುದು ಬಲ್ಲೆಯಾ? ಬೃಹಸ್ಪತಿಯ ಆನಂದವು ಇಂದ್ರಾನಂದಕ್ಕಿಂತ ನೂರು ಮಡಿಯಂತೆ. ಅದು ನಿಜವೆಂದು ಯಮವರುಣರುಪದೇಶಿಸಿದ ಬ್ರಹ್ಮವಿದ್ಯಾನುಭವದಿಂದ ತಿಳಿದಿರಲು ಮತ್ತೆ ನಾನೇಕೆ ಈ ಪದವಿಗೆ ಅಂಟಿಕೊಳ್ಳಲಿ? ಅದರಿಂದ ನಾನು ಅರ್ಥಾತ್ ನಾವು ಮುಂದಿನ ಪಯಣಕ್ಕೆ ಸಿದ್ಧರಾಗಿರುವೆವು. ಈಗ ನಿಮ್ಮಿಂದ ನಮಗೆ ಆಗಬೇಕಾದ ಉಪಕಾರವೊಂದಿದೆ, ಅದು ದ್ವಿಮುಖವಾದುದು. ಅದನ್ನು ಮಾಡಿಕೊಟ್ಟರೆ ಸಾಕು.”

ಶಚೀಂದ್ರರಿಬ್ಬರೂ “ಅಪ್ಪಣೆ ಮಾಡು, ಏನು ಬೇಕಾದರೂ ನಾವು ಮಾಡುತ್ತೇವೆ, ಸಿದ್ಧವಾಗಿದ್ದೇವೆ” ಎಂದರು.

ನಹುಷನು ನಗುತ್ತಾ ಹೇಳಿದನು : “ಶಿಬಿಕೋತ್ಸವವು ಮುಗಿಯುತ್ತಲೂ ಈ ಇಂದ್ರಾಧಿಕಾರವನ್ನು ವಹಿಸಿಕೊಳ್ಳುವುದೊಂದು; ಹಾಗೆಯೇ ನಿನಗೆ ಪ್ರಜಾಪತಿಯು ಕೊಟ್ಟಿರುವ ಬ್ರಹ್ಮವಿದ್ಯೆಯನ್ನು ನನಗೆ ಅನುಗ್ರಹಿಸಿ ಬ್ರಹ್ಮವಿದ್ಯಾ ಸ್ವರೂಪಿಣಿಯಾದ ಉಮಾದೇವಿಯನ್ನು ಪ್ರತ್ಯಕ್ಷಮಾಡಿಕೊಡುವುದೊಂದು, ಈ ಎರಡು ಅಂಗಗಳ ಉಪಕಾರವನ್ನು ಮಾಡಿಕೊಡು.”

ಇಂದ್ರನು ನಗುತ್ತ ಹೇಳಿದನು : “ನಿನಗೆ ಇಂದ್ರಪದವಿಯು ಬಂದಾಗ ಇದೆಲ್ಲವೂ ಬಂದೇ ಇದೆ. ಅದರಿಂದ ಗುರುವಾಗಿ ಅಲ್ಲ. ಸಖನಾಗಿ ಮಿತ್ರನಿಗೆ ಮಿತ್ರನು ಕೊಡುವಂತೆ ಅಥವಾ ಉಪಕೃತನು ತನ್ನ ಉಪಕಾರಸ್ಮರಣದಿಂದ ಕೃತಜ್ಞತೆಯಿಂದ ಒಪ್ಪಿಸುವ ಕಾಣಿಕೆಯಂತೆ ನಿನ್ನಲ್ಲಿರುವುದನ್ನು ನಿನಗೆ ಗುರುತು ಮಾಡಿಕೊಡುವೆನು. ಅದು ಮೊದಲಾಗಲಿ. ಆಮೇಲೆ ಮತ್ತೊಂದನ್ನು ಕುರಿತು ಯೋಚಿಸೋಣ.”

“ಆಗಬಹುದು”

ಇಂದ್ರನು ಹೇಳಿದನು : “ಜಾಗ್ರತ್ ಸ್ವಪ್ನ ಸುಷುಪ್ತಿಗಳು ವೃತ್ತಿಗಳು. ದೇಹವಿರುವವರೆಗೂ ವೃತ್ತಿಗಳುಂಟು. ಆ ವೃತ್ತಿಗಳನ್ನು ಮೀರಿ ನಿರ್ವೃತ್ತಿಯಾಗಿರುವುದೇ ಬ್ರಹ್ಮ. ಅದನ್ನು ತಿಳಿಯುವುದೇ ಬ್ರಹ್ಮವಿದ್ಯೆ. ವೃತ್ತಿಗೆ ಮೀರಿದವನಿಗೂ ವೃತ್ತಿಗಳುಂಟು. ಸೂರ್ಯನನ್ನು ಕಂಡವನಿಗೆ ಸೂರ್ಯನ ಕಿರಣಗಳಲ್ಲೆಲ್ಲಾ ಸೂರ್ಯನೇ ಕಾಣುವಂತೆ ವೃತ್ತಿಸಾಕ್ಷಿಯನ್ನು ಅರಿತವನ ವೃತ್ತಿಗಳು ತಾವು ಹೋದೆಡೆಯಲ್ಲೆಲ್ಲಾ ಆ ಸಾಕ್ಷಿಯನ್ನು ತೋರಿಸುವುದು.ಆಗ